ವಿಶ್ವ ಸುಂದರಿ ಮಾನುಷಿ ಚಿಲ್ಲರ್‌ಗೆ ಸಿನಿಮಾ ಅವಕಾಶ ಸಿಗಲು ದೀಪಿಕಾ ಕಾರಣ!
ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಕೊನೆಗೂ ಚಿತ್ರರಂಗ ಪ್ರವೇಶಿಸಿದ್ದಾರೆ. 2017 ರಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾದ ಮಾನುಷಿ ಚಿಲ್ಲರ್ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ನಾಯಕಿಯಾಗಿ ನಟಿಸಿದ್ದಾರೆ.
'ಸಾಮ್ರಾಟ್ ಪೃಥ್ವಿರಾಜ್' ಮಾನುಷಿ ಚಿಲ್ಲರ್ ನಟಿಸಿದ ಮೊದಲ ಸಿನಿಮಾ ಆಗಿದ್ದು, ಮೊದಲ ಸಿನಿಮಾದಲ್ಲಿಯೇ ಯಶ್ ರಾಜ್ ಬ್ಯಾನರ್ಸ್ ಸಿನಿಮಾದಲ್ಲಿ ಅವಕಾಶ ದೊರೆತಿದೆ. ಅದೂ ಅಕ್ಷಯ್ ಕುಮಾರ್ ಅಂಥಹಾ ಹಿರಿಯ ನಟನೆದುರು ನಾಯಕಿಯಾಗಿದ್ದಾರೆ.
2017ರಲ್ಲಿ ವಿಶ್ವ ಸುಂದರಿ ಆಗಿ ಆಯ್ಕೆಯಾದ ಮಾನುಷಿ ಚಿಲ್ಲರ್ ಆಗಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಆತುರ ತೋರದ ಅವರು ಸೂಕ್ತ ಅವಕಾಶಕ್ಕಾಗಿ ಕಾದರು. ನಟನೆ ತರಬೇತಿ ಪಡೆದುಕೊಂಡರು. ಈಗ 'ಸಾಮ್ರಾಟ್ ಪೃಥ್ವಿರಾಜ್' ಮೂಲಕ ಗ್ರ್ಯಾಂಡ್ ಆಗಿ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಆದರೆ ಅವರಿಗೆ ತಮ್ಮ ಮೊದಲ ಸಿನಿಮಾದ ಅವಕಾಶ ಸಿಗಲು ಕಾರಣ ದೀಪಿಕಾ ಪಡುಕೋಣೆ ಅಂತೆ!
ನಟಿ ದೀಪಿಕಾ ಪಡುಕೋಣೆ, ಬಾಲಿವುಡ್‌ನ ನಂಬರ್ 1 ನಟಿ. ಬಾಲಿವುಡ್‌ನಲ್ಲಿ ಸಾಕಷ್ಟು ಪ್ರಭಾವವನ್ನೂ ದೀಪಿಕಾ ಹೊಂದಿದ್ದಾರೆ. ಹಾಗೆಂದು ಅವರು ಯಶ್‌ರಾಜ್ ಫಿಲಮ್ಸ್ ಮೇಲೆ ಪ್ರಭಾವ ಬೀರಿ ಮಾನುಷಿ ಚಿಲ್ಲರ್‌ಗೆ ಅವಕಾಶ ಕೊಡಿಸಿಲ್ಲ. ಆದರೂ ಮಾನುಷಿಗೆ ಅವಕಾಶ ಸಿಗಲು ಪರೋಕ್ಷವಾಗಿ ದೀಪಿಕಾ ಪಡುಕೋಣೆ ಕಾರಣರಾಗಿದ್ದಾರೆ!

ದೀಪಿಕಾ ಪಡುಕೋಣೆಯ ಸೀನ್
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಮಾನುಷಿ ಚಿಲ್ಲರ್, ''ಸಾಮ್ರಾಟ್ ಪೃಥ್ವಿರಾಜ್' ಸಿನಿಮಾದಲ್ಲಿ ನಟಿಸಿದ ಅನುಭವ ಬಹಳ ರೋಚಕ ಮತ್ತು ವಿಶೇಷ ಸಹ. ಸಿನಿಮಾದ ಆಡಿಷನ್ ಬಹಳ ಸವಾಲಿನದ್ದಾಗಿತ್ತು, ಏಕೆಂದರೆ ಆಡಿಷನ್‌ಗೆ ನನಗೆ ದೀಪಿಕಾ ಪಡುಕೋಣೆ, 'ಬಾಜಿರಾವ್ ಮಸ್ತಾನಿ' ಸಿನಿಮಾದಲ್ಲಿ ಮಾಡಿದ್ದ ಸೀನ್ ಅನ್ನು ನಟಿಸುವಂತೆ ನೀಡಲಾಗಿತ್ತು'' ಎಂದು ನೆನಪು ಮಾಡಿಕೊಂಡಿದ್ದಾರೆ ಮಾನುಷಿ.

ಸುಲಭವಾದ ಆಡಿಷನ್ ಆಗಿರಲಿಲ್ಲ: ಮಾನುಷಿ
''ನನಗೆ ಗೊತ್ತಿತ್ತು ಇದು ಸುಲಭವಾದ ಆಡಿಷನ್ ಅಲ್ಲ ಎಂದು. ಬಹಳ ಕಷ್ಟಪಟ್ಟು ಆಡಿಷನ್ ನೀಡಿದೆ. ಅದೊಂದು ರೋಚಕ ಪಯಣ. ನನಗೆ ಗೊತ್ತಿತ್ತು, ನಾನು ಅತ್ಯುತ್ತಮವಾಗಿ ನಟಿಸಿದರಷ್ಟೆ ಅವಕಾಶ ಸಿಕ್ಕಲು ಸಾಧ್ಯವೆಂದು. ಆಡಿಷನ್ ನೀಡಿ ಬಂದ ಹಲವು ದಿನಗಳ ಬಳಿಕ ನನಗೆ ಕರೆಬಂತು, ಸೆಲೆಕ್ಟ್ ಆಗಿದ್ದೀರೆಂದು. ನನಗೆ ಬಹಳ ಖುಷಿಯಾಗಿತ್ತು. ಸಿನಿಮಾ ರಂಗದಲ್ಲಿ ಬೆಳೆಯಬೇಕೆಂಬ ನನ್ನ ಕನಸಿಗೆ ಇದು ಮೊದಲ ಮೆಟ್ಟಿಲಾಗಿತ್ತು. ಆ ನಂತರವೂ ನನ್ನೊಳಗಿನ ನಟಿಯನ್ನು ಹೊರಗೆ ತರಲು ನಾನು ಬಹಳ ಕಷ್ಟಪಟ್ಟೆ. ಆಡಿಷನ್ ವಿಭಾಗದ ಆದಿ ಸರ್, ನಿರ್ದೇಶಕ ಚಂದ್ರಪ್ರಕಾಶ್ ಹಾಗೂ ಶಾನು ಶರ್ಮಾಗೆ ನಾನು ಧನ್ಯವಾದ ಹೇಳಬೇಕು'' ಎಂದಿದ್ದಾರೆ.

ಹೆಚ್ಚು ಸದ್ದು ಮಾಡುತ್ತಿಲ್ಲ 'ಸಾಮ್ರಾಟ್ ಪೃಥ್ವಿರಾಜ್'
ಆದರೆ ಮಾನುಷಿ ಚಿಲ್ಲರ್ ನಟಿಸಿರುವ ಮೊದಲ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡುತ್ತಿಲ್ಲ. ಭಾರಿ ಬಜೆಟ್‌ನ ಸಿನಿಮಾ ಆಗಿರವ 'ಸಾಮ್ರಾಟ್ ಪೃಥ್ವಿರಾಜ್' ತೀರ ಕಳಪೆ ಓಪನಿಂಗ್ ಪಡೆದುಕೊಂಡಿತ್ತು. ಮೊದಲ ದಿನ ಕೇವಲ 10.65 ಕೋಟಿ ಗಳಿಸಿದ್ದ 'ಸಾಮ್ರಾಟ್ ಪೃಥ್ವಿರಾಜ್' ಆ ವಾರಾಂತ್ಯದಲ್ಲಿ ಗಳಿಸಿದ್ದು ಕೇವಲ 28 ಕೋಟಿ. ನಂತರ ಸೋಮವಾರದ ವೇಳೆಗೆ ಕಲೆಕ್ಷನ್ ಪೂರಾ ಕುಸಿದು ಕೇವಲ 5 ಕೋಟಿ ಹಣ ಗಳಿಕೆ ಮಾಡಿದೆ. ಸಿನಿಮಾ ದೊಡ್ಡ ನಷ್ಟವನ್ನೇ ಚಿತ್ರಮಂದಿರದಲ್ಲಿ ಅನುಭವಿಸಿದೆ.

ಇನ್ನೊಂದು ಸಿನಿಮಾದಲ್ಲಿಯೂ ನಟನೆ
ಇನ್ನು ನಟಿ ಮಾನುಷಿ ಚಿಲ್ಲರ್, 'ಸಾಮ್ರಾಟ್ ಪೃಥ್ವಿರಾಜ್' ಬಳಿಕ 'ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ. 2017 ರಲ್ಲಿ ಮಾನುಷಿ ಚಿಲ್ಲರ್ ವಿಶ್ವ ಸುಂದರಿಯಾಗಿ ಹೊರಹೊಮ್ಮಿದರು. ಪ್ರಿಯಾಂಕಾ ಚೋಪ್ರಾ ಬಳಿಕ ಭಾರತಕ್ಕೆ ವಿಶ್ವ ಸುಂದರಿ ಪಟ್ಟ ತಂದುಕೊಟ್ಟವಾದರು ಮಾನುಷಿ ಚಿಲ್ಲರ್. ಚಿತ್ರರಂಗದಲ್ಲಿ ಮಿನುಗುವ ಆಸೆಹೊತ್ತು ಆ ನಿಟ್ಟಿನೆಡೆ ನಡೆಯುತ್ತಿದ್ದಾರೆ ಈ ಸುಂದರಿ.


Click it and Unblock the Notifications