ಸೈಫ್ ಅಲಿಖಾನ್‌ಗೆ ಇರಿದಿದ್ದು ಯಾರು? ಅಷ್ಟು ಸುಲಭವಾಗಿ ಮನೆ ಪ್ರವೇಶಿಸಿದ್ದು ಹೇಗೆ?
ಗುರುವಾರ ಬೆಳಗಿನ ಜಾವ ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ಹಲ್ಲೆ ನಡೆದಿದೆ. ದುಷ್ಕರ್ಮಿಯೊಬ್ಬ ಮುಂಬೈನಲ್ಲಿರುವ ಸೈಫ್ ಮನೆಗೆ ನುಗ್ಗಿ ಕತ್ತಿಯಿಂದ ಇರಿದಿದ್ದಾರೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಸೈಫ್ ಮುಂಬೈ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ನಟ ಸೈಫ್ ಅಲಿಖಾನ್ ಮೇಲೆ ನಡೆದ ದಾಳಿ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಬಾಲಿವುಡ್ ಸೂಪರ್ ಸ್ಟಾರ್‌ಗೂ ರಕ್ಷಣೆ ಇಲ್ಲವೇ? ಅಪರಚಿತನೊಬ್ಬ ಅಷ್ಟು ಸುಲಭವಾಗಿ ಮನೆಯೊಳಗೆ ಹೋಗಿ ಕತ್ತಿಯಿಂದ ಚುಚ್ಚಿ ತಪ್ಪಿಸಿಕೊಳ್ಳಬಹುದಾ? ಎಂದು ಕೆಲವರು ಕೇಳುತ್ತಿದ್ದಾರೆ. ಸೈಫ್ ಅಲಿಖಾನ್‌ಗೆ ಅಷ್ಟೇನಾ ರಕ್ಷಣೆ ಇರುವುದು? ಮುಂಬೈ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಘಟನೆಗೆ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಸೈಫ್ ಅಲಿಖಾನ್ ಮನೆಗೆ ನುಗ್ಗಿ ಹಲ್ಲೆ ನಡೆಸಿದವನು ಕಳ್ಳನಾ? ಅಥವಾ ಅಪರಿಚಿತ ವ್ಯಕ್ತಿನಾ? ಎನ್ನುವ ಬಗ್ಗೆಯೂ ಸ್ಪಷ್ಟನೆ ಸಿಕ್ಕಿಲ್ಲ. ಮೇಲ್ನೋಟಕ್ಕೆ ಕಳ್ಳ ದರೋಡೆಗೆ ಯತ್ನಿಸಿದ. ಈ ವೇಳೆ ಸೈಫ್ ಅಲಿಖಾನ್ ತಡೆಯಲು ಹೋದಾಗ ಆತ ಹಲ್ಲೆ ನಡೆಸ ಓಡಿಹೋಗಿದ್ದಾನೆ ಎನ್ನಲಾಗ್ತಿದೆ.
ಗಂಭೀರವಾಗಿ ಗಾಯಗೊಂಡಿರುವ ನಟ ಸೈಫ್ ಅಲಿಖಾನ್‌ಗೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಸೈಫ್ ಅಲಿಖಾನ್ ಅಲ್ಲ, ಅನ್‌ಸೇಫ್ ಅಲಿಖಾನ್(Unsafe ali Khan) ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಇನ್ನು ಸೈಫ್ ಅಲಿಖಾನ್ ಮೇಲೆ ದುಷ್ಕರ್ಮಿ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕತ್ತಿ ಅಲ್ಲ, ಹರಿತವಾದ ಆಯುಧದಿಂದ(ಜಿಂಕೆಯ ಕೊಂಬಿನ ಮಾದರಿ) ಚುಚ್ಚಿದ್ದಾನೆ ಎನ್ನುವ ಮಾತುಗಳು ಕೇಳಿಬರ್ತಿದೆ.
ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಸೈಫ್ ಅಲಿಖಾನ್ ಮನೆಯೊಳಗೆ ಪ್ರವೇಶಿಸಿದ್ದ. ಮನೆ ಕೆಲಸದಾಕೆಯ ಜೊತೆ ಜಗಳ ಮಾಡುತ್ತಿದ್ದ. ಈ ವೇಳೆ ಗಲಾಟೆ ಕೇಳಿ ಸೈಫ್ ಅಲಿಖಾನ್ ತಮ್ಮ ರೂಮ್‌ನಿಂದ ಹೊರ ಬಂದಿದ್ದಾರೆ. ದುಷ್ಕರ್ಮಿ ಜೊತೆ ಸೈಫ್ ಅಲಿಖಾನ್ ಮಾತಿಗೆ ಮಾತು ಬೆಳೆಸಿದ್ದಾರೆ. ಈ ವೇಳೆ ತಳ್ಳಾಟ ನೂಕಾಟ ನಡೆದಿದ್ದು ಕೊನೆಗೆ ಆ ವ್ಯಕ್ತಿ ಹಲ್ಲೆ ಮಾಡಿದ್ದಾನೆ ಎಂದು ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ.
ಹೇಳಿಕೇಳಿ ಸೈಫ್ ಅಲಿಖಾನ್ ಬಾಲಿವುಡ್ ಜನಪ್ರಿಯ ನಟ. ಪಟೌಡಿ ರಾಜಮನೆತನದ ಕುಡಿ. ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರು. ಸಾವಿರಾರು ಕೋಟಿ ಆಸ್ತಿಯ ಒಡೆಯ. ಇಂತಿಪ್ಪ ಸೈಫ್ ಮನೆಗೆ ಕಳ್ಳ ನುಗ್ಗಲು ಸಾಧ್ಯವೇ ಇಲ್ಲ. ಆತ ಅಪರಿಚಿತ ವ್ಯಕ್ತಿ ಆಗಿರಬೇಕು, ಅಥವಾ ಮನೆಯಲ್ಲಿರುವ ಸಿಬ್ಬಂದಿಯ ಸಹಾಯದಿಂದಲೇ ಮನೆಯೊಳಗೆ ಹೋಗಿರಬಹುದು ಎಂದು ಕೆಲವರು ಚರ್ಚಿಸುತ್ತಿದ್ದಾರೆ.
ಹಲ್ಲೆ ಬಳಿಕ ತೀವ್ರ ರಸ್ತಸ್ರಾವದಿಂದ ಬಳಲುತ್ತಿದ್ದ ಸೈಫ್ ಅಲಿಖಾನ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ವೇಳೆ ಸೈಫ್ ಪತ್ನಿ ಕರೀನಾ ಕಪೂರ್ ಹಾಗೂ ಇಬ್ಬರೂ ಮಕ್ಕಳು ಹತ್ತಿರದಲ್ಲೇ ಇದ್ದರು ಎಂದು ಹೇಳಲಾಗುತ್ತಿದೆ. ಒಟ್ಟಾರೆ ಈ ಘಟನೆ ಬಾಲಿವುಡ್‌ಗೆ ಶಾಕ್ ತಂದಿದೆ. ಈ ಹಿಂದೆ ನಟ ಸಲ್ಮಾನ್ ಖಾನ್ ನಿವಾಸದ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿ ಆಗಿದ್ದರು.
ಕಳ್ಳತನ ಮಾಡಲು ಬಂದಾಗಲೇ ಸೈಫ್ ಅಲಿಖಾನ್ ಮೇಲೆ ಹಲ್ಲೆ ನಡೀತಾ? ಅಥವಾ ಬೇರೆ ಏನಾದರೂ ಕಾರಣ ಇದೆಯಾ? ಎನ್ನುವ ಕೋನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಟನ ಸ್ಪೈನಲ್ ಕಾರ್ಡ್ ಬಳಿ ಗಂಭೀರವಾಗಿ ಪೆಟ್ಟಾಗಿದೆಯಂತೆ. ಬೆಳಗ್ಗೆಯಿಂದ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ನೆಚ್ಚಿನ ನಟ ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಸೈಫ್ ಅಲಿಖಾನ್ ಮೂಲಗಳಿಂದ ಪ್ರತಿಕ್ರಿಯೆ ಸಿಕ್ಕಿದೆ. ಇದು ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿಚಾರ. ಹಾಗಾಗಿ ಅಭಿಮಾನಿಗಳು, ಮಾಧ್ಯಮದವರು ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ. ಇನ್ನು ಈ ಹಲ್ಲೆ ಪ್ರಕರಣ ಪಟೌಡಿ ಕುಟುಂಬಕ್ಕೆ ಆತಂಕ ತಂದಿದೆ.


Click it and Unblock the Notifications











