2020ರ ಪ್ರಕರಣದಲ್ಲಿ ನಟಿಗೆ ಜಾಮೀನು, ಆದರೂ ಜೈಲಿನಿಂದ ಇಲ್ಲ ಮುಕ್ತಿ!
ಮರಾಠಿ ನಟಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಕೇತಕಿ ಚಿತಾಲೆಗೆ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾಮೀನು ದೊರೆತಿದೆ. ಆದರೂ ಕೇತಕಿ ಜೈಲಿನಲ್ಲಿಯೇ ದಿನ ದೂಡಬೇಕಾದ ಪರಿಸ್ಥಿತಿ ಇದೆ.
2020ರಲ್ಲಿ ಮರಾಠಿ ನಟಿಯ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಾಗಿತ್ತು. ಕೊನೆಯ ವರ್ಷದ ಕಾನೂನು ವಿದ್ಯಾರ್ಥಿಯೊಬ್ಬರು ನಟಿಯ ಫೇಸ್‌ಬುಕ್ ಪೋಸ್ಟ್ ಆಧರಿಸಿ ಪೊಲೀಸರಿಗೆ ದೂರು ನೀಡಿದ್ದರು. ಆ ಪ್ರಕರಣದಲ್ಲಿ ನಟಿಗೆ ಈಗ ಜಾಮೀನು ದೊರೆತಿದೆ.
2020ರಲ್ಲಿ ನಟಿಯು ಬೌದ್ಧ ಧರ್ಮದ ಸೇರಿದಂತೆ ಇತರ ಧರ್ಮಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಅದರ ವಿರುದ್ಧ ದೂರು ದಾಖಲಾಗಿತ್ತು. ವಿಚಾರಣೆ ನಡೆಸಿದ ಥಾಣೆ ನ್ಯಾಯಾಲಯವು ನಟಿಗೆ ಜಾಮೀನು ಮಂಜೂರು ಮಾಡಿದ್ದು, 25,000 ರು ಭದ್ರತಾ ಹಣವನ್ನು ತೆರಲು ಸೂಚಿಸಿದೆ.
ಜಾಮೀನು ದೊರೆತರೂ ಸಹ ನಟಿ ಕೇತಕಿ ಚಿತಾಲೆ ಜೈಲಿನಲ್ಲಿಯೇ ಇರಬೇಕಾಗಿದೆ. ಏಕೆಂದರೆ ಕಳೆದ ತಿಂಗಳು (ಮೇ 14) ರಂದು ನಟಿಯನ್ನು ಮುಂಬೈ ಪೊಲೀಸರು ಪ್ರಕರಣ ಸಂಬಂಧ ಬಂದಿಸಿದ್ದು, ಆ ಪ್ರಕರಣದಲ್ಲಿ ನಟಿಗೆ ಜಾಮೀನು ದೊರೆತಿಲ್ಲ.

ತಿರುಚಲಾದ ಕವನ ಹಂಚಿಕೊಂಡಿದ್ದ ನಟಿ
ಕಳೆದ ತಿಂಗಳು ತಿರುಚಿದ ಕವನವೊಂದನ್ನು ಕೇತಕಿ ಚಿತಾಲೆ ಹಂಚಿಕೊಂಡಿದ್ದರು, ಕವನದಲ್ಲಿ ಮಹಾರಾಷ್ಟ್ರದ ಮಾಜಿ ಸಿಎಂ ಶರದ್ ಪವಾರ್ ಅನ್ನು ಅವಹೇಳನ ಮಾಡಲು ಸಂತ ತುಕಾರಾಮರ ಕವನವನ್ನು ತಿದ್ದು ಬಳಸಲಾಗಿತ್ತು. ಇದರ ವಿರುದ್ಧ ತುಕಾರಾಮರ ಸಮುದಾಯದವರು ಹಾಗೂ ಎನ್‌ಸಿಪಿ ಕಾರ್ಯಕರ್ತರು ದೂರು ನೀಡಿದ್ದರು.

ಬಂಧನವನ್ನು ಪ್ರಶ್ನಿಸಿರುವ ನಟಿ ಕೇತಕಿ
ಇದೀಗ ಅವಹೇಳನಕಾರಿ ಪೋಸ್ಟ್ ಸಂಬಂಧ ಮಾಡಲಾಗಿರುವ ತಮ್ಮ ಬಂಧನವನ್ನು ನಟಿ ಕೇತಕಿ ಚಿತಾಲೆ ಥಾಣೆ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ತಮ್ಮ ಬಂಧನ ಉದ್ದೇಶಪೂರ್ವಕ ಎಂದು ಹೇಳಿದ್ದಾರೆ. ಅಲ್ಲದೆ, ಪೊಲೀಸರು, ಎನ್‌ಸಿಪಿಯ ಗುಂಡಾಗಳು ನನ್ನ ಮೇಲೆ ಹಲ್ಲೆ ಮಾಡಲು ಅವಕಾಶ ಮಾಡಿಕೊಟ್ಟರು, ಎನ್‌ಸಿಪಿ ಪಕ್ಷದ ಗೂಂಡಾಗಳು ನನ್ನ ಬಳಿ ಅಸಭ್ಯವಾಗಿ ನಡೆದುಕೊಂಡರು ಎಂದು ಆರೋಪಿಸಿದ್ದಾರೆ. ನಟಿ ಕೇತಕಿ ವಿರುದ್ಧ ರಾಜ್ಯದ ಹಲವೆಡೆ ಸುಮಾರು 20ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿವೆ.

ಹಲವರು ನಟಿಯ ವಿರುದ್ಧ ದೂರು ನೀಡಿದ್ದಾರೆ
ನಟಿ ಕೇತಕಿ, ಎನ್‌ಸಿಪಿ ಮುಖಂಡ ಶರದ್ ಪವಾರ್ ವಿರುದ್ಧ ಮಾಡಿರುವ ಪೋಸ್ಟ್‌ನಲ್ಲಿ ಸಂತ ತುಕಾರಾಮ್ ಹೆಸರನ್ನು ಅವಹೇಳನಕಾರಿಯಾಗಿ ಬಳಸಿದ ಬಗ್ಗೆಯೂ ಪ್ರತ್ಯೇಕ ದೂರುಗಳು ದಾಖಲಾಗಿವೆ. ವರ್ಕರಿ ಸಮುದಾಯದ ನಿತಿನ್ ಮೋರೆ ಎಂಬುವರು ನಟಿ ಕೇತಕಿ ವಿರುದ್ಧ ದೂರು ನೀಡಿದ್ದಾರೆ. ಸಂತ ತುಕಾರಾಂ ದೇಹು ಸಂತಾನಂನ ಮುಖ್ಯಸ್ಥರೊಬ್ಬರು ಸಹ ನಟಿಯ ವಿರುದ್ಧ ದೂರು ಸಲ್ಲಿಸಿದ್ದಾರೆ.

'ತುಕಾ ಮಹಾನೆ' ಎಂದು ಬಳಸಿರುವ ನಟಿ
ಶರದ್ ಪವಾರ್ ಬಗ್ಗೆ ಬರೆದಿರುವ ಅವಹೇಳನಕಾರಿ ಕವಿತೆಯ ಕೊನೆಯಲ್ಲಿ 'ತುಕಾ ಮಹಾನೆ' ಎಂದು ಕೇತಕಿ ಬಳಸಿದ್ದಾರಂತೆ. ಸಂತ ತುಕಾರಾಮರು ತಮ್ಮ ದೋಹೆಗಳ ಕೊನೆಯಲ್ಲಿ ಹೀಗೆ ತುಕಾ ಮಹಾನೆ ಎಂದು ಬರೆದಿದ್ದಾರೆ. ಅವಹೇಳನಕಾರಿ ಕವಿತೆಗೆ ತುಕಾರಾಮರ ಸಾಲನ್ನು ಬಳಸಿದ್ದರ ಬಗ್ಗೆ ದೂರು ನೀಡಲಾಗಿದೆ. ಶರದ್ ಪವಾರ್, ಮಹರಾಷ್ಟ್ರದ ಹಿರಿಯ ರಾಜಕಾರಣಿ ಆಗಿದ್ದು ಮಹರಾಷ್ಟ್ರದ ಮಾಜಿ ಸಿಎಂ ಸಹ ಆಗಿದ್ದರು. ಜೊತೆಗೆ ಕೇಂದ್ರದಲ್ಲಿ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದಾರೆ. ಪ್ರಸ್ತುತ ಮಹರಾಷ್ಟ್ರ ರಾಜ್ಯ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.


Click it and Unblock the Notifications











