ಅನುರಾಗದ ಅನುಬಂಧಕ್ಕೆ ಈಗ ಅರ್ಥ ಇಲ್ಲ, ನನ್ನ ಮೊಮ್ಮಗಳು ಮದುವೆಯಾಗುವುದು ನನಗೆ ಇಷ್ಟ ಇಲ್ಲ - ಜಯಾ ಬಚ್ಚನ್
ದೊಡ್ಡವರ ಹಾಗೂ ದುಡ್ಡಿದ್ದವರ ಕುಟುಂಬಗಳ 'ಮದುವೆ' ಮತ್ತು 'ಮನೆ' ಎರಡೂ ಈಗ ಗಂಟೆ ಗಟ್ಟಲೆ 'ಬ್ರೇಕಿಂಗ್ ನ್ಯೂಸ್' ಆಗುವ ಕಾಲ ಘಟ್ಟವಿದು. ಉಳ್ಳವರು ಮಾಡುವ ಅದ್ಧೂರಿ ಮದುವೆಯ ಕಣ್ಣು ಕೋರೈಸುವಂತಹ ಆಚರಣೆಗಳು ಬಡ-ಮಧ್ಯಮ ವರ್ಗದ ಕುಟುಂಬಗಳ ಸಾವಿರಾರು ಹೆಣ್ಣು ಮಕ್ಕಳ ಮದುವೆಯ ಸನ್ನಿವೇಶ ನರಕಗೊಳಿಸುವುದಲ್ಲದೆ, ಮದುವೆಯ ನಂತರವೂ ಅವರ ಬದುಕಿನಲ್ಲಿ ಕತ್ತಲು ಕವಿಯುವಂತೆ ಮಾಡುತ್ತವೆ.
ಆದರೆ ಅದೇ ಮತ್ತೊಂದು ಕಡೆ ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ ಎನ್ನುವುದು ಗೊತ್ತಿದ್ದರೂ ಕೂಡ ಅದ್ಧೂರಿಯಾಗಿ ಮದುವೆಯಾದ ಶ್ರೀಮಂತರ ವೈವಾಹಿಕ ಜೀವನ ಹಳಿ ತಪ್ಪಿರುತ್ತೆ.

ಒಂದರ್ಥದಲ್ಲಿ ಬದಲಾದ ಈ ಕಾಲದಲ್ಲಿ ಪ್ರೀತಿ ಎಂಬ ಎರಡಕ್ಷರಕ್ಕೂ ಬೆಲೆ ಇಲ್ಲ. ಮದುವೆ ಎಂಬ ಮೂರಕ್ಷರಕ್ಕೂ ಕಿಮ್ಮತ್ತು ಇಲ್ಲ. ಅದರಲ್ಲಿಯೂ ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿಯಂತೂ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೋನ್ಯತೆಯ ಕೊರತೆಯಿಂದ .. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ.
ಚಿತ್ರರಂಗದವರ ಈ ಧೋರಣೆಯಿಂದ ಸಾರ್ವತ್ರಿಕ ವಲಯದಲ್ಲಿ ಅಸಮಾಧಾನ ಇದೆ. ಮದುವೆ ಎಂದರೆ ಇವರಿಗೆಲ್ಲಾ ಮಕ್ಕಳಾಟ ಎಂಬ ಆಕ್ರೋಶ ಕೂಡ ಆಗಾಗ ವ್ಯಕ್ತವಾಗುತ್ತೆ. ಅವಿವಾಹಿತರಾಗಿ ಉಳಿಯುವುದು ತಪ್ಪಲ್ಲ. ಆದರೆ ವಿವಾಹವ್ಯವಸ್ಥೆಯನ್ನೇ ಅವಹೇಳನ ಮಾಡುವುದು ತಪ್ಪು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತೆ.
ಹೀಗಿರುವಾಗ ಭಾರತೀಯ ಚಿತ್ರರಂಗದ ಮಹಾನಾಯಕ ಅಮಿತಾಬ್ ಬಚ್ಚನ್ ಅವರ ಧರ್ಮ ಪತ್ನಿ ಮತ್ತು ನಟಿ ಕಂ ರಾಜಕಾರಣಿ ಜಯಾ ಬಚ್ಚನ್ ಮದುವೆಯ ಕುರಿತು ಹೇಳಿಕೆಯನ್ನು ನೀಡಿದ್ದಾರೆ. ನನ್ನ ಮೊಮ್ಮಗಳು ಮದುವೆಯಾಗುವುದೇ ಬೇಡ ಎಂದು ಹೇಳಿದ್ದಾರೆ.
ಹೌದು, ಜಯಾ ಬಚ್ಚನ್ ಇತ್ತೀಚೆಗೆ ಹಿರಿಯ ಪತ್ರಕರ್ತೆ ಬರ್ಕಾ ದತ್ತಾ ಅವರಿಗೆ ಸಂದರ್ಶನ ನೀಡಿದ್ದಾರೆ. ಅವರ ಯೂಟ್ಯೂಬ್ ಚಾನೆಲ್‌ನ ''ವೀ ದಿ ವುಮೆನ್'' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದೇ ಸಂದರ್ಶನದಲ್ಲಿ ಜಯಾ ಬಚ್ಚನ್ ಮದುವೆಯ ಪರಿಕಲ್ಪನೆ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಜಯಾ ಬಚ್ಚನ್, ಮದುವೆ ಎನ್ನುವ ಸಂಪ್ರದಾಯ ಈಗ ತೀರಾ ಹಳೆಯದ್ದಾಯ್ತು ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಮುಂದಿನ ವಾರ 28ನೇ ವಸಂತಕ್ಕೆ ಕಾಲಿಡುತ್ತಿರುವ ತಮ್ಮ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರ ಮದುವೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ಜಯಾ ಬಚ್ಚನ್ ಈಗಿನ ಹುಡುಗ-ಹುಡುಗಿಯರು ಅವರ ಅಜ್ಜ-ಅಜ್ಜಿಗಿಂತ ಹೆಚ್ಚು ಜಾಣರಾಗಿರುತ್ತಾರೆ ಎಂದು ಹೇಳಿದ್ದಾರೆ. ಮಕ್ಕಳನ್ನು ಹೇಗೆ ಬೆಳೆಸಬೇಕೆನ್ನುವ ಸಲಹೆಯನ್ನು ನಾವು ಅವರಿಗೆ ನೀಡಲು ಸಾಧ್ಯ ಇಲ್ಲ ಯಾಕೆಂದರೆ ನಾವು ಹಳೆಯ ಕಾಲದವರು ಎಂದು ಹೇಳಿದ್ದಾರೆ.
ಮುಂದುವರೆದು ಈಗೆಲ್ಲಾ ಬದುಕನ್ನು ಖುಷಿ ಖುಷಿಯಿಂದ ಕಳೆಯಲು ಎಲ್ಲರೂ ಬಯಸುತ್ತಾರೆ ಎಂದು ಹೇಳಿರುವ ಜಯಾ ಬಚ್ಚನ್, ಮದುವೆಯ ಮಹತ್ವದ ಕುರಿತು ಪ್ರಶ್ನೆ ಎದುರಾದಾಗ ''ಜಸ್ಟ್ ಎಂಜಾಯ್ ಯುವರ್ ಲೈಫ್'' ಎಂದು ಹೇಳಿದ್ದಾರೆ.
ಇನ್ನು ಮದುವೆಯಾದ ನಂತರ ನಿಮ್ಮ ಮೊಮ್ಮಗಳು ಅಂದರೆ ನವ್ಯಾ ನವೇಲಿ ನಂದಾ ತನ್ನ ಗಂಡನ ಮನೆಯವರ ಖುಷಿಗಾಗಿ ತನ್ನ ವೃತ್ತಿ ಬದುಕನ್ನು ಬಲಿ ಕೊಡಬೇಕಾ..? ಎಂದು ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ಜಯಾ ಬಚ್ಚನ್ ನನ್ನ ಮೊಮ್ಮಗಳು ನವ್ಯಾ ಮದುವೆಯಾಗುವುದು ನನಗೆ ಸುತಾರಾಂ ಇಷ್ಟ ಇಲ್ಲ ಎಂದು ಹೇಳಿದ್ದಾರೆ.
ತಮ್ಮ ಈ ಮಾತುಗಳನ್ನು ಸಮರ್ಥನೆ ಮಾಡಿಕೊಂಡಿರುವ ಜಯಾ ಬಚ್ಚನ್, ಇಂದಿನ ಮಕ್ಕಳು ತುಂಬಾ ಜಾಣರು ಎಂದು ಹೇಳಿದ್ದಾರೆ. ಮದುವೆಯನ್ನು ದೆಹಲಿಯಲ್ಲಿ ಸಿಗುವ ಸಿಹಿ ಉಂಡೆಗೆ ಹೋಲಿಸಿದ್ದಾರೆ.ಬಯಕೆ ತಡೆಯಲಾರದೇ ಸಿಹಿ ಉಂಡೆ ತಿಂದರೆ ನೀವು ತೊಂದರೆಗೆ ಸಿಲುಕುತ್ತೀರಾ ಆದರೆ ತಿನ್ನದೇ ಇದ್ದರೆ ಪಶ್ಚಾತಾಪವನ್ನು ಕೂಡ ಪಡುತ್ತೀರಾ ಎಂದು ನಗೆ ಚಟಾಕಿ ಹಾರಿಸಿದ್ದಾರೆ.
ನಮ್ಮ ಯವ್ವನದ ದಿನಗಳಲ್ಲಿ ನಮಗೆ ಇಷ್ಟು ಸ್ವಾತಂತ್ರ್ಯ ಇರಲಿಲ್ಲ ಎಂದು ಹೇಳಿರುವ ಜಯಾ ಬಚ್ಚನ್, ಮದುವೆ ಅಂದರೆ ಕೇವಲ ಭಾವನಾತ್ಮಕ ಹೊಂದಾಣಿಕೆಯಲ್ಲ ಮಾನಸಿಕ ಹೊಂದಾಣಿಕೆ ಕೂಡ ಮದುವೆಯಲ್ಲಿ ಅತ್ಯಗತ್ಯ ಎಂದು ಹೇಳಿದ್ದಾರೆ. ದೈಹಿಕ ಆಕರ್ಷಣೆ ಕೂಡ ಇರಬೇಕು, ನಾನು ಈಗ ಇದೆಲ್ಲ ಹೇಳಿದರೆ ನನ್ನ ಈ ಮಾತುಗಳನ್ನು ಹಲವರು ವಿರೋಧ ಮಾಡಬಹುದು ಎಂದು ಹೇಳಿರುವ ಜಯಾ ಬಚ್ಚನ್ ನಮ್ಮ ಕಾಲದಲ್ಲಿ ನಮಗೆ ಬೇರೆ ಬೇರೆ ಆಯ್ಕೆಗಳಿರಲಿಲ್ಲ.. ಪ್ರಯೋಗ ಮಾಡುವ ಸ್ವಾತಂತ್ರ್ಯ ಕೂಡ ಇರಲಿಲ್ಲ. ಆದರೆ ಇಂದಿನ ಯುವಸಮೂಹಕ್ಕೆ ಆ ಸ್ವಾತಂತ್ರ್ಯ ಇದೆ ಎಂದು ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಮದುವೆಯಾಗದೇ ಮಕ್ಕಳನ್ನು ಪಡೆಯುವ ಕುರಿತು ಎದುರಾದ ಪ್ರಶ್ನೆಗೆ ಉತ್ತರ ನೀಡಿರುವ ಜಯಾ ಬಚ್ಚನ್, ಸಂಬಂಧ ದೀರ್ಘಕಾಲ ಉಳಿಯಬೇಕು ಅಂದರೆ ಅದು ಅತ್ಯವಶ್ಯಕ ಎಂದು ಹೇಳಿದ್ದಾರೆ. ಬದುಕಿನಲ್ಲಿ ಪ್ರೀತಿ ನಿರಂತರವಾಗಿ ಹರಿಯುತ್ತಿರಬೇಕು ಅದು ಮುಖ್ಯ ಎಂದು ಹೇಳಿದ್ದಾರೆ. ಸದ್ಯ ಜಯಾ ಬಚ್ಚನ್ ಅವರ ಈ ಮಾತುಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಶುರುವಾಗಿದೆ.


Click it and Unblock the Notifications











