ಮದುವೆಯಾದ 9 ತಿಂಗಳಲ್ಲೇ ಕಿರಿಕ್, 1 ವರ್ಷದಿಂದ ಪ್ರತ್ಯೇಕ ವಾಸ ; ಕೇವಲ ಎರಡೇ ವರ್ಷಕ್ಕೆ ನಟಿಯ ದಾಂಪತ್ಯ ಅಂತ್ಯ
ಮದುವೆ ಎನ್ನುವುದು ಸಮರಸ ಜೀವನದ ಆರಂಭ. ಜೊತೆಗಾರ ಅಥವಾ ಜೊತೆಗಾರ್ತಿಯ ಆಯ್ಕೆಗೆ ಮದುವೆ ಎನ್ನುವುದು ಸಾಮಾಜಿಕ ಮನ್ನಣೆ ಪಡೆದಿರುವ ಅಡಿಪಾಯ. ಇನ್ನೂ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿ ಭೂಲೋಕದಲ್ಲಿ ನಡೆಯುವಂತಹದ್ದು ಎನ್ನುವುದು ಹಿರಿಯರ ನಂಬಿಕೆ. ಆದರೆ.. ಈಗೀಗ ಮದುವೆ ಕೇವಲ ಆಡಂಬರಕ್ಕೆ ಮಾತ್ರ ಸೀಮಿತವಾಗುತ್ತಿದೆ. ವೈಭವ ಮತ್ತು ಭವ್ಯತೆಗೆ ಮನಸೋತ ಅನೇಕರು ಮದುವೆಯ ಮಹತ್ವವನ್ನೇ ಮರೆಯುತ್ತಿದ್ದಾರೆ.
ಇನ್ನೂ.. ಬಣ್ಣದ ಲೋಕದಲ್ಲಿ ಈ ಮದುವೆ.. ಮನೆ.. ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಹಲವರು ಮಾಡುತ್ತಲೇ ಇರುತ್ತಾರೆ. ಚಿಕ್ಕ ಚಿಕ್ಕ ವಿಚಾರಕ್ಕೆ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಎರಡು ಮೂರು ವರ್ಷಗಳಲ್ಲಿ ಹಲವಾರು ತಾರೆಯರು ಈ ಮದುವೆಯ ಸಂಕೋಲೆಯಿಂದ ಮುಕ್ತರಾಗಿದ್ದಾರೆ.

ಈ ವರ್ಷ ಕೂಡ ಈ ವಿಚ್ಚೇದನದ ಕಾರ್ಯಕ್ರಮ ಬಣ್ಣದ ಪ್ರಪಂಚದಲ್ಲಿ ಮುಂದುವರೆದಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ವರ್ಷಾರಂಭದಲ್ಲಿಯೇ ಹಿಂದಿ ಕಿರುತೆರೆಯ ಚೆಲುವೆ ಮಹಿ ವಿಜ್ ಅವರ 15 ವರ್ಷದ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಮಲಯಾಳಂನ ನಟ ಮನು ವರ್ಮಾ ಅವರ 25 ವರ್ಷದ ಸಾಂಸಾರಿಕ ಜೀವನ ಕೂಡ ಮುಕ್ತಾಯವಾಗಿದೆ. ಈ ಸಾಲಿಗೆ ಈಗ ಈ ಸಾಲಿಗೆ ಈಗ ''ಮ್ಯಾಂಡಿ ಟಾಖರ್'' ಸೇರಿಕೊಂಡಿದ್ದಾರೆ.
ಹೌದು, ಮ್ಯಾಂಡಿ ಟಾಖರ್.. ಪಂಜಾಬ್ ಮೂಲದ ಬ್ರಿಟಿಷ್ ಚೆಲುವೆ. ಬ್ರಿಟನ್‌ನ ವುಲ್ವರ್‌ಹ್ಯಾಂಪ್ಟನ್ ನಗರದಲ್ಲಿ ಹುಟ್ಟಿ ಬೆಳೆದ ಮ್ಯಾಂಡಿ 2010ರಲ್ಲಿ ಪಂಜಾಬಿ ಗಾಯಕ ಬಾಬು ಮಾನ್ ಅವರ ''ಏಕಮ್ - ಸನ್ ಆಫ್ ಸಾಯಿಲ್'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು.
ಆ ನಂತರ ''ಮಿರ್ಜಾ-ದಿ ಅನ್‌ಟೋಲ್ಡ್ ಸ್ಟೋರಿ''.. ''ತೂ ಮೇರಾ 22 ಮೈ ತೇರಾ 22''.. ''ರಬ್ ದಾ ರೇಡಿಯೋ'' .. ''ಎನ್ನ ನೂ ರೆಹ್ನಾ ಸೆಹ್ನಾ ನಿ ಔಂದಾ'' ಚಿತ್ರಗಳಲ್ಲಿ ಅಭಿನಯಿಸಿದ ಮ್ಯಾಂಡಿ ತಮಿಳು ಚಿತ್ರರಂಗಕ್ಕೆ ಕೂಡ ವಲಸೆ ಬಂದಿದ್ದರು. ವೆಂಕಟ್ ಪ್ರಭು ನಿರ್ದೇಶನದ ಕಾರ್ತಿ ಅಭಿನಯದ ''ಬಿರಿಯಾನಿ'' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಇಂಥಾ ಮ್ಯಾಂಡಿ ಟಾಖರ್ ಎರಡು ವರ್ಷದ ಹಿಂದೆ ಅಂದರೆ ಫೆಬ್ರವರಿ 13, 2024 ರಂದು ಫಿಟ್ನೆಸ್ ಉದ್ಯಮಿ ಶೇಖರ್ ಕೌಶಾಲ್ ಅವರನ್ನು ಮದುವೆಯಾಗಿದ್ದರು. ಸಿಖ್ ಮತ್ತು ಹಿಂದೂ ಸಂಪ್ರದಾಯದಂತೆ ನಡೆದ ಈ ಅದ್ದೂರಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದವು.

ಆದರೆ, ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಇವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮದುವೆಯಾದ 8-9 ತಿಂಗಳಿನಲ್ಲಿಯೇ ಗಂಡನ ಮನೆಯಿಂದ ಹೊರ ಬಂದ ಮ್ಯಾಂಡಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಈಗ ಅಧಿಕೃತವಾಗಿ ದೂರ ಆಗಿದ್ದಾರೆ. ತಮ್ಮ ಪತಿ ಶೇಖರ್ ಕೌಶಾಲ್ ಅವರಿಂದ ವಿಚ್ಚೇದನ ಪಡೆದಿದ್ದಾರೆ.
ವೃತ್ತಿ ಬದುಕಿನ ಒತ್ತಡ ಮತ್ತು ಇಬ್ಬರ ವಿಭಿನ್ನವಾದ ಜೀವನ ಶೈಲಿಯೇ ಮದುವೆ ಮುರಿದು ಬೀಳಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆಯಾದರೂ ಮ್ಯಾಂಡಿ ಅವರ ಪರ ದೆಹಲಿಯ ಸಾಕೆಟ್ ನ್ಯಾಯಾಲಯದಲ್ಲಿ ಮ್ಯಾಂಡಿ ಪರ ವಾದ ಮಂಡಿಸಿದ ವಕೀಲ ಇಶಾನ್ ಮುಖರ್ಜಿ ಇಬ್ಬರು ಭಿನ್ನಾಭಿಪ್ರಾಯಗಳಿಂದ ದೂರವಾಗಿದ್ದಾರೆ ಎಂದು ಹೇಳಿದ್ದಾರೆ. ಆರೋಪ-ಪ್ರತ್ಯಾರೋಪಕ್ಕೆ ಅವಕಾಶ ನೀಡದೇ ಗೌರವಯುತವಾಗಿ ಮ್ಯಾಂಡಿ ಮತ್ತು ಶೇಖರ್ ತಮ್ಮ ಸಂಬಂಧಕ್ಕೆ ಇತಿಶ್ರೀ ಹಾಡಿದ್ದಾರೆ ಎಂದಿದ್ದಾರೆ. ಈ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಅಂದ್ಹಾಗೇ ಕಳೆದ ವರ್ಷ ಮ್ಯಾಂಡಿ ಟಾಖರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆ ಮತ್ತು ತಮ್ಮ ಪತಿಯ ಜೊತೆಗಿದ್ದ ಫೋಟೊಗಳನ್ನು ಡಿಲೀಟ್ ಮಾಡಿದ್ದರು. ಅಂದೇ ಹಲವರಲ್ಲಿ ಇಬ್ಬರ ಸಂಸಾರ ಹಳಿ ತಪ್ಪಿದೆ ಎಂಬ ಅನುಮಾನ ಬಂದಿತ್ತು. ಈಗ ಆ ಅನುಮಾನ ನಿಜಾ ಆಗಿದೆ. ಮ್ಯಾಂಡಿ ಮತ್ತು ಶೇಖರ್ ಕೌಶಾಲ್ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಸದ್ಯ ಮದುವೆಯ ನಂತರ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡಿದ್ದ ಮ್ಯಾಂಡಿ ಮತ್ತೆ ಮರಳಿ ಚಿತ್ರರಂಗಕ್ಕೆ ಬರುವ ಪ್ರಯತ್ನವನ್ನು ಮಾಡುತ್ತಿದ್ದಾರೆ.


Click it and Unblock the Notifications











