'ಮಟ್ಕಾ ಕಿಂಗ್'ಗೆ ಸಿಕ್ಕ ಹೊಸ ರಾಣಿ ? ತಮನ್ನಾ ಮರೆತು 'ಜವಾನ್' ಚೆಲುವೆಯ ಹಿಂದೆ ಬಿದ್ದ ವಿಜಯ್ ವರ್ಮಾ?
ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು.
ಯಾಕೆಂದರೆ.. ಚಿತ್ರರಂಗದ ಧ್ರುವತಾರೆಯರ... ಬದುಕಿನಲ್ಲಿ ಬ್ರೇಕಪ್ಪು.. ಲವ್ವು.. ಡವ್ವು.. ಕಡಿಮೆ ಇಲ್ಲ. ಒಬ್ಬರ ನಂತರ ಒಬ್ಬರನ್ನು ಪ್ರೀತಿಸುವುದು, ಮದುವೆಯಾಗುವುದು ಆ ನಂತರ ಅವರಿಗೂ ಕೂಡ ಗುಡ್ ಬೈ ಹೇಳಿ ಹೊರನಡೆಯುವುದು ಹೊಸದೇನೂ ಅಲ್ಲ. ಇಲ್ಲಿ ಹಲವರಿಗೆ ಎಲ್ಲವೂ ಬಟ್ಟೆ ಬದಲಿಸಿದಷ್ಟೇ ಸುಲಭ. ಹೀಗಾಗಿ ಇವರ ವ್ಯೆಯಕ್ತಿಕ ಬದುಕಿನ ಮೇಲೆ ಹಲವರ ಕಣ್ಣಿರುತ್ತೆ. ಹೀಗಾಗಿಯೇ ಯಾರಾದರೂ ಜೊತೆಯಾಗಿ ಕಾಣಿಸಿಕೊಂಡರೆ ಸಾಕು, ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಪುಕಾರು ಹಬ್ಬುತ್ತೆ. ಉದಾಹರಣೆಗೆ ವಿಜಯ್ ವರ್ಮಾ ಅವರ ವಿಚಾರವನ್ನೇ ತೆಗೆದುಕೊಳ್ಳಿ.

ಹೌದು, ವಿಜಯ್ ವರ್ಮಾ.. ಬಾಲಿವುಡ್‌ನ ಪ್ರತಿಭಾವಂತ. ಒಂದ್ಕಾಲದಲ್ಲಿ ಹಾಲು ಬಣ್ಣದ ಚೆಲುವೆ ತಮನ್ನಾ ಅವರ ಹೃದಯ ಗೆದ್ದ ಚೆಲುವ. ಇನ್ನೇನು ಇಬ್ಬರು ಮದುವೆಯಾಗಿಯೇ ಬಿಡುತ್ತಾರೆ ಎನ್ನುವಷ್ಟರ ಮಟ್ಟಿಗೆ ಇವರ ಸಂಬಂಧ ಭಾರತೀಯ ಚಿತ್ರರಂಗದಲ್ಲಿ ಚರ್ಚೆಗೀಡಾಗಿತ್ತು.
ಆದರೆ, ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಮದುವೆಯ ಬಂಧನಕ್ಕೊಳಗಾಗಬೇಕಿದ್ದ ಜೋಡಿ ದೂರ ಆಯ್ತು. ಇಬ್ಬರ ಸಂಬಂಧ ಮುರಿದು ಬಿದ್ದಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ಇವತ್ತು ಕೂಡ ಹಿಂದಿ ಚಿತ್ರ ಪಂಡಿತರಲ್ಲಿ ಇಲ್ಲ.
ತಮನ್ನಾ ಮತ್ತು ವಿಜಯ್ ಕೂಡ ಬಹಿರಂಗವಾಗಿ ಎಲ್ಲಿಯೂ ತಮ್ಮ ಬ್ರೇಕಪ್ ಕಥೆಯನ್ನು ಹೇಳಿಕೊಂಡಿಲ್ಲ. ಹೀಗಿರುವಾಗ ಇದೀಗ ವಿಜಯ್ ವರ್ಮಾ ಅವರ ಹೆಸರು ಆಲಿಯಾ ಖುರೇಶಿ ಜೊತೆ ತಳುಕು ಹಾಕಿಕೊಂಡಿದೆ.
ಹೌದು, ಅಸಲಿಗೆ ವಿಜಯ್ ವರ್ಮಾ ಅಭಿನಯದ ''ಮಟ್ಕಾ ಕಿಂಗ್'' ಸರಣಿ ಮೊನ್ನೆಯಿಂದ ಪ್ರಸಾರವಾಗುತ್ತಿದೆ. ನೋಡಿದವರು ಹಲವರು ವಿಜಯ್ ವರ್ಮಾ ಅಭಿನಯವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ.

ಆದರೆ ವಿಜಯ್ ವರ್ಮಾ ಮಾತ್ರ ಆಲಿಯಾ ಖುರೇಶಿ ಜೊತೆ ಸುತ್ತಾಡುವಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಇಬ್ಬರು ಜೊತೆಯಾಗಿ ಊಟ ಮಾಡಿದ್ದಾರೆ. ರೆಸ್ಟೋರೆಂಟ್‌ನಿಂದ ಹೊರ ಬಂದಿದ್ಧಾರೆ. ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.
ಇನ್ನು ಬಾಲಿವುಡ್‌ನ ಪಾಪರಾಜಿಗಳ ಪ್ರಕಾರ ಹೀರೋ ಮತ್ತು ಹೀರೋಯಿನ್ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದರೆ, ಅಲ್ಲಿ ಪ್ರೇಮಾಂಕುರವಾಗಿದೆ ಎಂದೇ ಅರ್ಥ.
ಹೀಗಾಗಿ ಸದ್ಯ ವಿಜಯ್ ವರ್ಮಾ ಮತ್ತು ಆಲಿಯಾ ಖುರೇಶಿ ಅವರ ಈ ಡಿನ್ನರ್ ಡೇಟ್‌ನ ಫೋಟೊ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆಲಿಯಾಗೆ ವಿಜಯ್ ವರ್ಮಾ ಮನ ಸೋತಿದ್ದಾರೆ ಎಂಬ ಚರ್ಚೆ ಕೂಡ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
ಅಂದ್ಹಾಗೇ ಆಲಿಯಾ ಖುರೇಶಿ ಚಿತ್ರರಂಗಕ್ಕೆ ಹೊಸಬರು. ವಿಜಯ್ ವರ್ಮಾಗೆ ಹೋಲಿಸಿದರೆ ಅನುಭವ ಕಡಿಮೆ. ಶಾರುಖ್ ಖಾನ್ ಅಭಿನಯದ ''ಜವಾನ್'' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಆಲಿಯಾ ''ಬಂದಿಶ್ ಬ್ಯಾಂಡಿಟ್ಸ್ 2'' ನಲ್ಲಿಯೂ ಅದ್ಭುತವಾಗಿ ಅಭಿನಯಿಸಿದ್ದಾರೆ. ಇನ್ನು ಆಲಿಯಾ ಕೇವಲ ನಾಯಕಿ ಮಾತ್ರ ಅಲ್ಲ ಗಾಯಕಿ ಕೂಡ ಹೌದು.
ಒಟ್ನಲ್ಲಿ ಸದ್ಯ ಆಲಿಯಾ ಖುರೇಶಿ ಮತ್ತು ವಿಜಯ್ ವರ್ಮಾ ಪ್ರೇಮದ ಬಲೆಯಲ್ಲಿ ಸಿಲುಕಿದ್ದಾರೆ ಎನ್ನುವ ಅನುಮಾನ ಹಲವರಲ್ಲಿದೆ. ಇಬ್ಬರ ಸಂಬಂಧದ ಕುರಿತು ಚರ್ಚೆಯೂ ಆಗುತ್ತಿದೆ. ಇದು ಸ್ನೇಹನಾ..?ಪ್ರೀತಿನಾ ..? ಉತ್ತರ ಸರಿಯಾದ ಕಾಲ ಕೂಡಿ ಬಂದಾಗಲೇ ಗೊತ್ತಾಗಲಿದೆ.


Click it and Unblock the Notifications