ಮನೆಯವರ ಮಾತು ಕೇಳದೇ ಈ ಸ್ಟಾರ್‌ನ ಎರಡನೇ ಹೆಂಡ್ತಿಯಾದಳು ಈ ನಾಯಕಿ, ಎರಡೇ ವರ್ಷಕ್ಕೆ ಮುರಿದು ಬಿತ್ತು ದಾಂಪತ್ಯ..!
ದಾಂಪತ್ಯದಲ್ಲಿ ಚಿಕ್ಕ-ಚಿಕ್ಕ ವಿರಸಗಳು ಸಾಂಗತ್ಯದ ಅರ್ಥವನ್ನು ಗಟ್ಟಿ ಮಾಡುತ್ತವೆ. ಇಬ್ಬರ ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸುತ್ತವೆ. ಇಬ್ಬರ ನಡುವೆ ಇರುವ ತಪ್ಪು ಅಭಿಪ್ರಾಯಗಳನ್ನು-ಗ್ರಹಿಕೆಗಳನ್ನು ಸರಿಪಡಿಸಿಕೊಂಡು ಹೋಗುವುದರಲ್ಲಿಯೇ ದಾಂಪತ್ಯದ ಅರ್ಥ ಅಡಗಿದೆ ಎನ್ನುವುದು ಅನೇಕರ ಅಭಿಪ್ರಾಯ. ಆದರೆ ಕೆಲ ಒಮ್ಮೆ ಈ ದಾಂಪತ್ಯದಲ್ಲಿ ಮೂಡುವ ಬಿರುಕನ್ನು ಆರಂಭದಲ್ಲಿಯೇ ಸರಿಪಡಿಸಿಕೊಳ್ಳದಿದ್ದರೆ ಅದು ಹಾದಿ ತಪ್ಪಿ ಎಲ್ಲಿಗೋ ಹೋಗಿ ತಲುಪುವ ಅಪಾಯ ಇದ್ದೇ ಇರುತ್ತೆ. ಅರ್ಧದಲ್ಲಿಯೇ ಸಂಬಂಧಗಳು ಕಳಚಿ ಹೋಗುತ್ತವೆ. ಇದಕ್ಕೆ ಜೆನ್ನಿಫರ್ ವಿಂಗೆಟ್ ಮತ್ತು ಕರಣ್ ಸಿಂಗ್ ಗ್ರೋವರ್ ದಾಂಪತ್ಯ ತಾಜಾ ಉದಾಹರಣೆ.
ಹೌದು, ಜೆನ್ನಿಫರ್ ಮತ್ತು ಕರಣ್ ಸಿಂಗ್ ಹಿಂದಿ ಕಿರುತೆರೆಯ ಪ್ರೇಕ್ಷಕರಿಗೆ ಚಿರಪರಿಚಿತ ಮುಖಗಳು. ಕಸೌತಿ ಜಿಂದಗಿ ಕೇ, ಕ್ಯಾ ಹೋಗಾ ನಿಮ್ಮೋ ಕಾ, ಕಹೀ ತೋ ಹೋಗಾ, ಸರಸ್ವತಿ ಚಂದ್ರ, ಬೇಹದ್, ಹೀಗೆ ಹಲವಾರು ಧಾರಾವಾಹಿಗಳ ಮೂಲಕ ಜೆನ್ನಿಫರ್ ವಿಂಗೆಟ್ ಅಭಿಮಾನಿಗಳನ್ನು ಸಂಪಾದಿಸಿದ್ದರೆ ಕರಣ್ ಸಿಂಗ್ ಗ್ರೋವರ್ ದಿಲ್ ದೋಸ್ತಿ ಡ್ಯಾನ್ಸ್, ಖಬೂಲ್ ಹೈ, ಪರಿವಾರ್ ಧಾರಾವಾಹಿಗಳ ಮೂಲಕ ಮನೆ ಮಾತಾದವರು. ಇನ್ನೂ ಜೆನ್ನಿಫರ್ ಮತ್ತು ಕರಣ್ ಸಿಂಗ್ ಗ್ರೋವರ್ ಜೊತೆಯಲ್ಲಿ ಅಭಿನಯಿಸಿದ್ದ ದಿಲ್ ಮಿಲ್ ಗಯೇ ಒಂದೂವರೆ ದಶಕದ ಹಿಂದೆ ಕಿರುತೆರೆಯಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು.

ಇಂಥಾ ಜೆನ್ನಿಫರ್ ವಿಂಗೆಟ್ ಮತ್ತು ಕರಣ್ ಸಿಂಗ್ ಗ್ರೋವರ್ ಜೊತೆ ಜೊತೆಯಲ್ಲಿ ಕೆಲಸ ಮಾಡುತ್ತಾ ಪ್ರೀತಿಯಲ್ಲಿ ಬಿದ್ದರು. ಮದ್ವೆಯಾಗುವ ನಿರ್ಧಾರವನ್ನು ಮಾಡಿದರು. ಆದರೆ, ಜೆನ್ನಿಫರ್ ಅವರ ಹಿತೈಶಿಗಳು, ಸ್ನೇಹಿತರು, ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇನ್ನೊಮ್ಮೆ ಆಲೋಚನೆ ಮಾಡುವಂತೆ ಹೇಳಿದ್ದರು. ಯಾಕೆಂದರೆ, ಜೆನ್ನಿಫರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಕರಣ್ ಸಿಂಗ್ ಗ್ರೋವರ್‌ಗೆ ಅದಾಗಲೇ ಮದ್ವೆಯಾಗಿತ್ತು. ಕೇವಲ ಹತ್ತೇ ತಿಂಗಳಿನಲ್ಲಿ ದಾಂಪತ್ಯ ಮುರಿದು ಕೂಡ ಬಿದ್ದಿತ್ತು.
ಹೌದು, ಅಸಲಿಗೆ ಜೆನ್ನಿಫರ್ ಅವರಿಗಿಂತ ಮೊದಲು ಮತ್ತೊಬ್ಬ ನಟಿ ಶ್ರದ್ಧಾ ನಿಗಮ್ ಅವರ ಜೊತೆ ಕರಣ್ ಸಿಂಗ್ ಗ್ರೋವರ್ ಮದ್ವೆಯಾಗಿದ್ದರು. ಆದರೆ, ಮದ್ವೆಯಾಗಿ ಇನ್ನೂ ಹತ್ತು ತಿಂಗಳು ಕಳೆದಿರಲಿಲ್ಲ ನೃತ್ಯ ನಿರ್ದೇಶಕಿ ನಿಕೋಲ್ ಅಲ್ವಾರೆಜ್ ಜೊತೆ ಕರಣ್ ಸಿಂಗ್ ಗ್ರೋವರ್ ಹೆಸರು ಥಳುಕು ಹಾಕಿಕೊಂಡಿತ್ತು. ಈ ಕಾರಣಕ್ಕೆ ಕರಣ್ ಸಿಂಗ್ ಗ್ರೋವರ್‌ಗೆ ಶ್ರದ್ಧಾ ನಿಗಮ್ ವಿಚ್ಛೇದನ ನೀಡಿ ದೂರವಾದರು. ಹೀಗಾಗಿಯೇ ಕರಣ್ ಸಿಂಗ್ ಗ್ರೋವರ್ ಜೊತೆ ಮದ್ವೆಯಾಗಲು ಜೆನ್ನಿಫರ್ ಮುಂದಾದಾಗ ಅನೇಕರು ಬೇಡ ಎನ್ನುವ ಸಲಹೆಯನ್ನು ನೀಡಿದ್ದರು. ಜೆನ್ನಿಫರ್ ಸ್ನೇಹಿತರು ನಿನಗೇನಾದರೂ ಹುಚ್ಚು ಹಿಡಿದಿದೆಯಾ ಎಂದು ಕೇಳಿದ್ದರು.

ಆದರೆ ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ. ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಜೆನ್ನಿಫರ್ ಕೂಡ ಇದರಿಂದ ಹೊರತಾಗಿರಲಿಲ್ಲ. ಅಕ್ಕ-ಪಕ್ಕದವರ ಸಲಹೆ-ಸೂಚನೆ ಯಾವುದು ಜೆನ್ನಿಫರ್‌ಗೆ ಕೇಳಿಸಲಿಲ್ಲ. ಇಷ್ಟೇ ಯಾಕೆ ಆ ಕ್ಷಣದಲ್ಲಿ ಆ ದೇವರೇ ಬಂದು ಕರಣ್ ಸಿಂಗ್ ಗ್ರೋವರ್ ಜೊತೆ ಮದ್ವೆಯಾಗಬೇಡ ಎಂದು ಹೇಳಿದ್ದರೂ ಕೂಡ ಕೇಳುವ ಮನಸ್ಥಿತಿಯಲ್ಲಿ ಜೆನ್ನಿಫರ್ ಇರಲಿಲ್ಲ.
ಹೀಗಾಗಿಯೇ ತಮ್ಮ ಮನದ ಮಾತುಗಳನ್ನಷ್ಟೇ ಕೇಳಿ ಕರಣ್ ಸಿಂಗ್ ಗ್ರೋವರ್ ಜೊತೆ ಮದ್ವೆಯಾಗಿಯೇ ಬಿಟ್ಟರು ಜೆನ್ನಿಫರ್ ವಿಂಗೇಟ್. ಆದರೆ ದುರ್ದೈವ ಪ್ರೀತಿಸಿ-ಮೋಹಿಸಿ ಸ್ನೇಹಿತರ ವಿರೋಧದ ನಡುವೆ ಕರಣ್ ಸಿಂಗ್ ಗ್ರೋವರ್ ಅವರನ್ನು ಮದ್ವೆಯಾದ ಜೆನ್ನಿಫರ್‌ಗೆ ತಮ್ಮ ದಾಂಪತ್ಯವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಮದ್ವೆಯಾದ ಎರಡೇ ವರ್ಷದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯದ ಅಲೆಯೇಳಲು ಶುರುವಾಯ್ತು. 2012ರಲ್ಲಿ ಖುಷಿ ಖುಷಿಯಾಗಿ ಕರಣ್ ಸಿಂಗ್ ಗ್ರೋವರ್ ಜೊತೆ ಮದ್ವೆಯಾಗಿದ್ದ ಜೆನ್ನಿಫರ್ 2014ರಲ್ಲಿ ಕಣ್ಣೀರಾಕುತ್ತಾ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳಿದರು. ಕರಣ್ ಸಿಂಗ್ ಗ್ರೋವರ್‌ಗೆ ವಿಚ್ಛೇದನ ನೀಡಿದರು. ಕೆಲ ವರ್ಷಗಳ ಹಿಂದೆ ಬಾಲಿವುಡ್ ಬಬಲ್‌ಗೆ ನೀಡಿದ ಸಂದರ್ಶನದಲ್ಲಿ ಜೆನ್ನಿಫರ್ ತಮ್ಮ ಈ ಮದ್ವೆ ಮತ್ತು ವಿಚ್ಚೇದನದ ಕುರಿತು ಮಾತನಾಡಿದ್ದರು.
ಅಂದ್ಹಾಗೇ ಜೆನ್ನಿಫರ್ ವಿಂಗೇಟ್ ಅವರಿಂದ ದೂರವಾದ ಕರಣ್ ಸಿಂಗ್ ಗ್ರೋವರ್ ಆ ನಂತರ 2016ರಲ್ಲಿ ಮೂರನೇ ಮದ್ವೆಯಾದರು. ಇವರ ಮೂರನೇ ಪತ್ನಿ ಬೇರೆ ಯಾರು ಅಲ್ಲ ಬದಲಿಗೆ ಬಾಲಿವುಡ್‌ನಲ್ಲಿ ಒಂದುಕಾಲದಲ್ಲಿ ಸಂಚಲನ ಸೃಷ್ಟಿಸಿದ್ದ ಬಿಪಾಶಾ ಬಸು. ಇವರಿಬ್ಬರ ದಾಂಪತ್ಯಕ್ಕೆ ಈಗ 08 ವರ್ಷಗಳಾಗಿದ್ದು ಇಬ್ಬರಿಗೆ ದೇವಿ ಎಂಬ ಮುದ್ದಾದ ಹೆಣ್ಣುಮಗಳಿದ್ದಾಳೆ. ಇತ್ತ ಕರಣ್ ಸಿಂಗ್ ಗ್ರೋವರ್ ಅವರಿಂದ ದೂರವಾದ ಜೆನ್ನಿಫರ್ ಮದ್ವೆಯಾಗದೇ ಒಂಟಿ ಜೀವನ ನಡೆಸುತ್ತಿದ್ದಾರೆ.


Click it and Unblock the Notifications











