''ಬಾ ನನ್ನ ತೊಡೆಯ ಮೇಲೆ ಕುಂತ್ಕೋ'' ; ಖ್ಯಾತ ನಿರ್ದೇಶಕನ ಬಂಡವಾಳ ಬಯಲು ಮಾಡಿದ ನಟಿ..!
ಚಿತ್ರರಂಗದಲ್ಲಿ ಅನೇಕರು ಮುಖವಾಡದ ಬದುಕನ್ನು ಬದುಕುತ್ತಾರೆ.ಕೆಲವರು ಇಲ್ಲಿ ಪ್ರಚಾರದ ಹುಚ್ಚಿಗೆ ಬಂದರೆ,ಹಲವರು ಹೆಣ್ಣಿನ ಚಪಲಕ್ಕೆ ಚಿತ್ರ ನಿರ್ಮಾಣ ಮಾಡುತ್ತಾರೆ. ಈ ಕಾರಣಕ್ಕೆ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ತೀರಾ ಸಾಮಾನ್ಯವಾಗಿಬಿಟ್ಟಿದೆ.ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ಧ ಮನಸ್ಸುಗಳು ಖೆಡ್ಡಾ ಎಂಬ ಅರಿವಿದ್ದರೂ ಬಿದ್ದು ಏಳುವ ಸಂದರ್ಭಗಳಿಗೆ ಗುರಿಯಾಗಿರುತ್ತಾರೆ.ಇನ್ನೂ ಕೆಲವರಂತೂ ಇಂತಹ ಕುಕೃತ್ಯವನ್ನು ಎಡಗಾಲಲ್ಲಿ ಒದ್ದಿದ್ದಾರೆ.
ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಚಿತ್ರರಂಗದ ಇನ್ನೊಂದು ಮುಖದ ಪರಿಚಯವನ್ನು ಮಾಡಿಸುವ ಮೂಲಕ ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಇದಕ್ಕೆ ಶ್ರೇಯಾ ಗುಪ್ತೋ ಸದ್ಯದ ಉದಾಹರಣೆ.

ಹೌದು, ಶ್ರೇಯಾ ಗುಪ್ತೋ, ಬೆಂಗಾಲಿ ಬೆಡಗಿ. ಮೊನ್ನೆ ಮೊನ್ನೆ ಬಿಡುಗಡೆಯಾದ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರದಲ್ಲಿ ಪಾತ್ರವೊಂದನ್ನು ಶ್ರೇಯಾ ನಿರ್ವಹಿಸಿದ್ದಾರೆ. ಇದಕ್ಕೂ ಮುನ್ನ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದ ಶ್ರೇಯಾ, ಸಿಕಂದರ್ ಚಿತ್ರದ ನಿರ್ದೇಶಕ ಎಆರ್ ಮುರಗದಾಸ್ ನಿರ್ದೇಶನದ ದರ್ಬಾರ್ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ರಜಿನಿಕಾಂತ್ ಎದುರು ನಟಿಸಿ ಸೈ ಎನಿಸಿಕೊಂಡಿದ್ದರು. ವಾರಣಂ ಆಯಿರಂ ಮತ್ತು ಮಥಿಯಾಲ್ ವೆಲ್ ಶ್ರೇಯಾ ಅಭಿನಯದ ಇನ್ನೆರಡು ತಮಿಳು ಚಿತ್ರಗಳು.
ಇಂಥಾ ಶ್ರೇಯಾ ಈಗ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಅದೊಂದು ಘಟನೆಯಿಂದ ದಕ್ಷಿಣ ಚಿತ್ರರಂಗದ ಸಹವಾಸ ಸಾಕು ಎಂದು ನಾನು ಮುಂಬೈಗೆ ಓಡಿ ಬಂದೆ ಎಂದು ಹೇಳಿದ್ದಾರೆ.ಈ ಕುರಿತು 'ಡಿಎನ್‌ಎ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶ್ರೇಯಾ ಅದು 2014ರ ಸಮಯ ನಾನು ಆಗಷ್ಟೇ ನನ್ನ ಶಿಕ್ಷಣವನ್ನು ಮುಗಿಸಿದ್ದೆ ಆಗ ಚೆನ್ನೈದಿಂದ ಖ್ಯಾತ ನಿರ್ದೇಶಕರೊಬ್ಬರಿಂದ ನನಗೆ ಒಂದು ಕರೆ ಬಂತು, ಅವರು ಆಡಿಷನ್‌ಗೆ ಬರುವಂತೆ ಹೇಳಿದ್ದರು ಎಂದು ಹೇಳಿದ್ದಾರೆ.
ಆ ನಂತರ ನಾನು ನನ್ನ ತಾಯಿಯ ಜೊತೆ ಚೆನ್ನೈಗೆ ಆಡಿಷನ್ ನೀಡಲು ಹೋದೆ ಎಂದಿರುವ ಶ್ರೇಯಾ ಅವರ ಕ್ಯಾಬಿನ್ ಒಳಗಡೆ ನಾನು ಹೋದ ನಂತರ ಅವರು 'ಬಾ ನನ್ನ ತೊಡೆಯ ಮೇಲೆ ಕುಂತ್ಕೋ, ಕುಂತ್ಕೊಂಡು ಈ ಸನ್ನಿವೇಶವನ್ನು ಅಭಿನಯಿಸಿ ತೋರಿಸು ಎಂದು ಹೇಳಿದರು ಎಂದು ಹೇಳಿದ್ದಾರೆ. ನಿರ್ದೇಶಕರ ಮಾತು ನನಗೆ ಕೇಳಿ ಇರಿಸು ಮುರಿಸು ಆಯ್ತು, ಆಶ್ಚರ್ಯ ಆಯ್ತು, ಕೋಪ ಕೂಡ ಬಂತು ಎಂದಿರುವ ಶ್ರೇಯಾ ನಾನು ಮನೆಯಲ್ಲಿ ಸೀನ್ ಪ್ರ್ಯಾಕ್ಟಿಸ್ ಮಾಡಿಕೊಂಡು ನಾಳೆ ಬರುವುದಾಗಿ ಹೇಳಿ ಅಲ್ಲಿಂದ ಮೆಲ್ಲನೆ ಕಾಲ್ಕಿತ್ತೆ ಎಂದು ಹೇಳಿದ್ದಾರೆ. ಆ ನಂತರ ನಾನು ಆ ಕಡೆ ತಲೆಯೂ ಹಾಕಲಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಈ ಅನುಭವದಿಂದ ನನಗೆ ಚೆನ್ನೈನಲ್ಲಿ ಅವಕಾಶಗಳನ್ನು ಹುಡುಕಲು ಭಯವಾಯ್ತು, ಹೀಗಾಗಿ ಸಹವಾಸವೇ ಬೇಡ, ಪ್ರಯತ್ನ ಮಾಡುವುದಾದರೆ ಮುಂಬೈನಲ್ಲಿ ಮಾಡೋಣ ಎಂದುಕೊಂಡು ನಾನು ಮುಂಬೈಗೆ ಬಂದೆ ಎಂದು ಹೇಳಿರುವ ಶ್ರೇಯಾ ಗುಪ್ತೋ ಕಾಸ್ಟಿಂಗ್ ಕೌಚ್ ಇನ್ನು ಚಿತ್ರರಂಗದಲ್ಲಿ ಜೀವಂತವಾಗಿದೆ ನನ್ನ ಅದೃಷ್ಟಕ್ಕೆ ಆ ನಂತರ ನನಗೆ ಯಾವ ಕೆಟ್ಟ ಅನುಭವ ಚಿತ್ರರಂಗದಲ್ಲಿ ಆಗಿಲ್ಲ ಎಂದು ಹೇಳಿದ್ದಾರೆ.
ಅಂದ್ಹಾಗೇ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರ ಸೋತಿದೆ. ಆದರೆ ಶ್ರೇಯಾ ಗುಪ್ತೋ ಅವರ ಮೇಲಿಗ ಬಾಲಿವುಡ್ ಕಣ್ಣು ಬಿದ್ದಿದೆ. ತಮ್ಮ ಅಭಿನಯದಿಂದ ಹಿಂದಿ ಉದ್ಯಮದ ಗಮನ ಸೆಳೆಯುವಲ್ಲಿ ಶ್ರೇಯಾ ಯಶಸ್ವಿಯಾಗಿದ್ದಾರೆ. ಹೀಗಾಗಿಯೇ ಅನೇಕ ಮಾಧ್ಯಮಗಳು ಶ್ರೇಯಾ ಗುಪ್ತೋ ಅವರ ಸಂದರ್ಶನವನ್ನು ಮಾಡುತ್ತಿವೆ.


Click it and Unblock the Notifications











