09 ವರ್ಷದಲ್ಲಿ 19 ಫ್ಲಾಪ್ ಚಿತ್ರಗಳನ್ನು ನೀಡಿ ಚಿತ್ರರಂಗದಿಂದ ದೂರವಾದ ಈ ಚೆಲುವೆಯ ದಾಂಪತ್ಯ ಕೂಡ ಮುರಿದು ಬಿತ್ತು..!
ಅಪ್ಪ ಅಮ್ಮ ಸ್ಟಾರ್ ಆದರೆ ಮಕ್ಕಳು ಸ್ಟಾರ್‌ಗಳಾಗುವುದು.. ರಾಜಕಾರಣಿಯಾದರೆ ಮಕ್ಕಳು ರಾಜಕೀಯಕ್ಕೆ ಧುಮುಕುವುದು.. ಕಾಮನ್. ಆದರೆ ಅದರಲ್ಲಿ ಗೆದ್ದವರಿಗಿಂತ ಸೋತು ಬಿದ್ದವರೇ ಹೆಚ್ಚು. ಉದಾಹರಣೆಗೆ ಇಶಾ ಡಿಯೋಲ್.
ಹೌದು, ತಂದೆ ಧಮೇಂದ್ರ ಮತ್ತು ಹೇಮಾ ಮಾಲಿನಿಯಿಂದ ಕಲೆಯನ್ನು ರಕ್ತದಲ್ಲಿಯೇ ಪಡೆದ ಇಶಾ ಡಿಯೋಲ್ ಗೆ ಚಿತ್ರರಂಗಕ್ಕೆ ಬರುವುದು ಕಷ್ಟವೇನು ಆಗಲಿಲ್ಲ. ಹದಿಹರೆಯಕ್ಕೆ ಕಾಲಿಟ್ಟ ತಕ್ಷಣ ಸುಲಭವಾಗಿ ಇಶಾ ಡಿಯೋಲ್ ಚಿತ್ರರಂಗಕ್ಕೆ ಬಂದರು. ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಸಹೋದರಿಯೆಂಬ ಕಾರಣಕ್ಕೂ ಕೂಡ ಬಾಲಿವುಡ್‌ನವರು ರತ್ನಗಂಬಳಿಯನ್ನೇ ಹಾಕಿ ಇಶಾಗೆ ಸ್ವಾಗತವನ್ನೂ ಮಾಡಿದರು.

ಆದರೆ, ಪ್ರಥಮ ಚುಂಬನಂ ದಂತ ಭಗ್ನಂ ಎಂಬಂತೆ ಇಶಾ ಡಿಯೋಲ್ ಅಭಿನಯದ ಮೊದಲ ಚಿತ್ರ ಕೊಹಿ ಮೇರೆ ದಿಲ್ ಸೇ ಪೂಚೇ ಮಕಾಡೆ ಮಲಗಿತ್ತು. ಆ ನಂತರ ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಳ್ಳುವ ಸೌಭಾಗ್ಯ ಸಿಕ್ಕಿತಾದರೂ ಆ ಚಿತ್ರ ಕೂಡ ಸೋತು ಹೋಯಿತು. ಆ ನಂತರ ಬಂದ ಕ್ಯಾ ದಿಲ್ ನೆ ಕಹಾ, ಕುಚ್ ತೋ ಹೈ, ಚುರಾ ಲಿಯಾ ಹೈ ತುಮ್ನೆ, ಹೀಗೆ ಇಶಾ ಅಭಿನಯದ ಚಿತ್ರಗಳೆಲ್ಲವೂ ಒಂದಾದ ಮೇಲೊಂದರಂತೆ ನೆಲ ಕಚ್ಚಿದವು.
ಸತತ ಸೋಲುಗಳಿಂದ ಹೈರಾಣಾದ ಸಮಯದಲ್ಲಿಯೇ ಧೂಮ್ ಇಶಾ ಕೈ ಹಿಡಿಯಿತು. ಮೊದಲ ಗೆಲುವು ಕಂಡಿದ್ದು ಇಶಾ ಈ ಚಿತ್ರದಲ್ಲಿಯೇ. ಆದರೆ ಈ ಚಿತ್ರದಲ್ಲಿ ಇವರ ಅಭಿನಯಕ್ಕಿಂತ ಇವರು ಹಾಕಿಕೊಂಡಿದ್ದ ಬಿಕಿನಿ ಕುರಿತು ಹೆಚ್ಚು ಚರ್ಚೆಗಳಾದವು. ಇಲ್ಲಿಂದಾಚೆ ಮುಂದೆ ಮಲ್ಟಿ ಸ್ಟಾರ್ ಚಿತ್ರಗಳಿಗೆ ಸೀಮಿತವಾದ ಇಶಾ ಗುಂಪಲ್ಲಿ ಕಳೆದು ಹೋದರು. ಪರಿಣಾಮ .. ಒಂಬತ್ತು ವರ್ಷದಲ್ಲಿ ಇಶಾ ಡಿಯೋಲ್ ಖಾತೆಗೆ ಒಂದು ಎರಡಲ್ಲ, ಹತ್ತೊಂಬತ್ತು ಫ್ಲಾಪ್ ಚಿತ್ರಗಳು ಜಮೆಯಾದವು.

ಹೀಗೆ ಕೇವಲ ಸೋಲನ್ನೇ ಕಂಡ ಇಶಾ ಆ ನಂತರ ಚಿತ್ರರಂಗದಿಂದ ದೂರವಾದರು. 2012ರಲ್ಲಿ ಉದ್ಯಮಿ ಭರತ್ ತಖ್ತಾನಿಯನ್ನು ಮದುವೆಯಾದರು. ಆ ನಂತರ ಕನ್ನಡ ಚಿತ್ರರಂಗಕ್ಕೂ ಬಂದ ಇಶಾ ಕೇರ್ ಆಫ್ ಫುಟ್‌ಪಾತ್ 2 ಚಿತ್ರದಲ್ಲಿ ಕೂಡ ಕಾಣಿಸಿಕೊಂಡರು. ಅದೇ ಕೊನೆ. ಆ ನಂತರ ಎರಡು ಮಕ್ಕಳ ತಾಯಿಯಾದ ಇಶಾ ಡಿಯೋಲ್, ಈ ವರ್ಷದ ಆರಂಭದಲ್ಲಿ ತಮ್ಮ ಹನ್ನೆರಡು ವರ್ಷದ ದಾಂಪತ್ಯಕ್ಕೆ ಎಳ್ಳು-ನೀರು ಬಿಟ್ಟರು. ಭರತ್ ತಖ್ತಾನಿ ಅವರಿಂದ ದೂರವಾದರು.
ಇಂಥಾ ಇಶಾ ಡಿಯೋಲ್ ಕೈಯಲ್ಲಿ ಸದ್ಯಕ್ಕೆ ಹೇಳಿಕೊಳ್ಳುವಂತಹ ಕೆಲಸ ಇಲ್ಲ. ಆದರೂ ಇಶಾ ಡಿಯೋಲ್ ಸಿರಿವಂತೆ. ಮುಂಬೈ ಮಾಧ್ಯಮಗಳು ವರದಿ ಮಾಡಿರುವಂತೆ ಇಶಾ ಡಿಯೋಲ್ ನೂರು ಕೋಟಿ ಆಸ್ತಿಯ ಒಡತಿ. ಅಂದ್ಹಾಗೇ ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇಶಾ ಡಿಯೋಲ್, ತಮ್ಮ ತಂದೆ ಧಮೇಂದ್ರ ಅವರಿಗೆ ನಾನು ಚಿತ್ರರಂಗಕ್ಕೆ ಬರುವುದು ಇಷ್ಟ ಇರಲಿಲ್ಲ ಎಂದು ಹೇಳಿದ್ದರು. ನನಗೆ 18 ತುಂಬುತ್ತಿದ್ದಂತೆಯೇ ಮದುವೆ ಮಾಡಬೇಕೆಂದು ಅವರು ಅಂದುಕೊಂಡಿದ್ದರು ಎಂದು ಹೇಳಿದ್ದ ಇಶಾ ಮನೆಯಲ್ಲಿ ತುಂಬಾ ಕಟ್ಟುನಿಟ್ಟಾದ ವಾತಾವರಣ ಇತ್ತು ಎಂದು ಹೇಳಿದ್ದರು.
ನಮ್ಮ ತಂದೆ ಶಾರ್ಟ್ ಸ್ಕರ್ಟ್ ಧರಿಸಿ ಮನೆಯಾಚೆ ಹೋಗಲು ಬಿಡುತ್ತಿರಲಿಲ್ಲ ಎಂದು ಹೇಳಿದ್ದ ಇಶಾ, ತಡರಾತ್ರಿಯ ಪಾರ್ಟಿಗಳೆಲ್ಲ ನನಗೆ ಹಗಲು ಕನಸುಗಳಂತಾಗಿದ್ದವು ಎಂದು ಹೇಳಿದ್ದರು. ಮನೆಯ ಈ ವಾತಾವರಣದಿಂದ ಬೇಸತ್ತು ಕೊನೆ ಕೊನೆಗೆ ಸುಳ್ಳು ಹೇಳಿ ನಾನು ಸ್ನೇಹಿತರ ಜೊತೆ ರಾತ್ರಿ ಆಚೆ ಸುತ್ತಾಡಲು ಹೋಗುತ್ತಿದ್ದೆ ಆ ಅನುಭವ ಕೂಡ ಒಂದು ರೀತಿ ಚೆನ್ನಾಗಿಯೇ ಇತ್ತು ಎಂದು ಕೂಡ ಇಶಾ ಡಿಯೋಲ್ ಹೇಳಿದ್ದರು.


Click it and Unblock the Notifications











