ಅವನ ಜೊತೆ ಮಲಗ್ತಾಳೆ, ನಾವು ಕರೆದ್ರೆ ಮಾತ್ರ... ; ಚುಚ್ಚು ಮಾತುಗಳಿಗೆ ಕಣ್ಣೀರಾದ ನಟಿ
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂ*ಗಿಕ ಹಿಂಸೆ ಅನುಭವಿಸುತ್ತಲೇ ಇದ್ಧಾರೆ. ಬದಲಾದ ಈ ಕಾಲದಲ್ಲಿ ಮಹಿಳಾ ಸಬಲೀಕರಣದ ಕುರಿತು ಭಾಷಣಗಳನ್ನು ಮಾಡಲಾಗುತ್ತೆ ಆದರೂ, ವಾಸ್ತವದಲ್ಲಿ ಮಹಿಳೆಯ ಸಾಧನೆ.. ಶ್ರಮ ಮತ್ತು ಪ್ರತಿಭೆಗಿಂತ ಭೋಗದ ವಸ್ತು ಎಂದುಕೊಂಡ ವಿಕೃತ ಮನಸ್ಥಿತಿಗಳು ಇಂದಿಗೂ ಕೂಡ ಇವೆ.
ಕೇವಲ ಚಿತ್ರರಂಗ ಮಾತ್ರ ಅಲ್ಲ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಾನಸಿಕ ನೆಮ್ಮದಿ ಹಾಳು ಮಾಡಲು ಈ ಕಾ*ಮಾಂಧರು ಇದ್ದೇ ಇರುತ್ತಾರೆ. ಆದರೆ ಚಿತ್ರರಂಗದಲ್ಲಿ ಈ ಸಂಖ್ಯೆ ತುಸು ಹೆಚ್ಚೇ ಇದೆ. ಇದಕ್ಕೆ ಪುರಾವೆ ಎಂಬಂತೆ ಹಲವರು ಇಲ್ಲಿಯವರೆಗೆ ತಮ್ಮ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಚಿತ್ರರಂಗದಲ್ಲಿ ಹೇಗೆ ಹಲವರು ಮುಖವಾಡದ ಬದುಕು ಬದುಕುತ್ತಿದ್ದಾರೆ ಎನ್ನುವುದನ್ನು ಹೇಳಿದ್ದಾರೆ. ಈ ಸಾಲಿಗೆ ಈಗ ಮೇಘಾ ಘಾಡ್ಗೆ ಕೂಡ ಸೇರಿಕೊಂಡಿದ್ದಾರೆ.

ಹೌದು, ಮೇಘಾ ಘಾಡ್ಗೆ.. ಮರಾಠಿ ಚೆಲುವೆ. ಯಾವ ಗಾಡ್ ಫಾದರ್ ಇಲ್ಲದೇ ಚಿತ್ರರಂಗದಲ್ಲಿ ಇಂದು ತಮ್ಮದೇ ಛಾಪು ಮೂಡಿಸಿರುವ ಮೇಘಾ ಚಿತ್ರರಂಗಕ್ಕೆ ಬಂದಿದ್ದು ''ಪಚಾಡ್ಲೇಲಾ'' ಚಿತ್ರದ ಮೂಲಕ. ಆ ನಂತರ ''ಮಹೇರ್ಚಿ ಮಾಯಾ'' ..''ಚಲ್ ಧರ್ ಪಕಡ್''.. ''ಪೋಪಟ್''.. ''ಪರ್ತು''..ಹೀಗೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡ ಮೇಘಾ ಫಾಡ್ಗೆ ಮರಾಠಿಯ ''ಬಿಗ್ ಬಾಸ್'' ಸೀಸನ್ ನಾಲ್ಕರಲ್ಲಿ ಭಾಗವಹಿಸಿದ್ದರು. ಮೂರು ವಾರ ಮನೆಯಲ್ಲಿದ್ದರು.
ಇನ್ನು ಮಹಾರಾಷ್ಟ್ರದ ಸಾಂಪ್ರದಾಯಿಕ ನೃತ್ಯವಾದ ''ಲಾವಣಿ'' ಯಲ್ಲಿ ಇವರು ಬೇರೆಯವರಿಗಿಂತ ಒಂದು ಹೆಜ್ಜೆ ಮುಂದೆ. ಹೀಗಾಗಿಯೇ ಇವರನ್ನು 'ಲಾವಣಿ ಕ್ವೀನ್' ಎಂದೇ ಕರೆಯುತ್ತಾರೆ. ಇಂಥಾ ಮೇಘಾ ಘಾಡ್ಗೆ ಸದ್ಯ ತಮ್ಮ ಬದುಕಿನ ಕಹಿ ಅನುಭವ ಹಂಚಿಕೊಂಡಿದ್ದಾರೆ. ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ತಮಗೆ ಚಿತ್ರಹಿಂಸೆ ನೀಡಿದ್ದ ಎಂದು ನೆನಪು ಮಾಡಿಕೊಂಡಿದ್ದಾರೆ.
ಈ ಕುರಿತು ''ರಾಜಶ್ರೀ ಮರಾಠಿ'' ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮೇಘಾ, ನನಗೆ ಸಿಗಬೇಕಾದ ಅವಕಾಶಗಳು ಸಿಗಲಿಲ್ಲ ಎಂದು ಹೇಳಿದ್ದಾರೆ. ಒಂದೆರಡ್ಮೂರು ಜನರನ್ನು ನಾನು ಭೇಟಿಯಾದೆ, ಆ ಸಮಯದಲ್ಲಿ ಅವಕಾಶಗಳು ಕೂಡ ಸಿಕ್ಕಿದ್ದವು ಎಂದು ಹೇಳಿರುವ ಮೇಘಾ, ಆದರೆ ಪರೋಕ್ಷವಾಗಿ ಹೊಂದಾಣಿಕೆಯ ಮಾತುಗಳನ್ನಾಡಲಾಯ್ತು, ಹೀಗಾಗಿ ಹಿಂದೆ ಸರಿದೆ ಎಂದಿದ್ದಾರೆ.
ನನಗೆ ಚಿತ್ರರಂಗದ ಯಾವ ಹಿನ್ನೆಲೆ ಇಲ್ಲ, ಹೀಗಾಗಿ ನನಗೆ ಯಾರು ಚಿತ್ರರಂಗದಲ್ಲಿ ಗೊತ್ತಿರಲಿಲ್ಲ, ಯಾವುದು ಸರಿ ಯಾವುದು ತಪ್ಪು ಎಂದು ಸರಿಯಾದ ಮಾರ್ಗ ತೋರಿಸುವ ಜನರು ನನ್ನ ಸುತ್ತ ಇರಲಿಲ್ಲ ಎಂದು ಹೇಳಿರುವ ಮೇಘಾ, ಆ ಸಮಯದಲ್ಲಿ ಜನರನ್ನು ಹೇಗೆ ಎದುರಿಸಬೇಕು..? ಇಲ್ಲಿ ಸಹಾಯಕರು ಯಾರು..? ಸಹಾಯಕ ನಿರ್ದೇಶಕರು ಯಾರು..? ಕೆಲಸ ಬೇಕು ಅಂದರೆ ಯಾರನ್ನು ಹೋಗಿ ಭೇಟಿ ಮಾಡಬೇಕು..? ಹೀಗೆ ಏನೆಂದರೆ ನನಗೆ ಏನೂ ಗೊತ್ತಿರಲಿಲ್ಲ ಎಂದು ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ನಾನು ಇವತ್ತು ಇಲ್ಲಿ ಇರಲು ಕಾರಣ ಅಂದರೆ ಅದು ಲಕ್ಷ್ಯಾ ಮಾಮ, ಅವರಿಂದಲೇ ನನಗೆ ''ಪಚಾಡ್ಲೇಲಾ'' ಸಿಕ್ತು ಎಂದು ಧನ್ಯತಾಭಾವ ವ್ಯಕ್ತಪಡಿಸಿರುವ ಮೇಘಾ, ನನ್ನ ಹತ್ತಿರ ಯಾವ ಮ್ಯಾನೇಜರ್ ಇರಲಿಲ್ಲ, ಸಹಾಯಕ ಇರಲಿಲ್ಲ, ನನ್ನ ಪರವಾಗಿ ಮಾತನಾಡಲು ಯಾರು ಇರಲಿಲ್ಲ, ಹೀಗಾಗಿ ಹಲವರು ನನ್ನನ್ನೂ ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನವನ್ನು ಮಾಡಿದರು ಎಂದು ಭಾವುಕರಾಗಿದ್ದಾರೆ.
ಮುಂದುವರೆದು ಆಘಾತಕಾರಿ ಘಟನೆಯನ್ನು ಕೂಡ ಹಂಚಿಕೊಂಡಿರುವ ಮೇಘಾ, ನಾನೊಂದು ಪಾರ್ಟಿಯಲ್ಲಿ ಭಾಗವಹಿಸಿದ್ದೆ, ಎಲ್ಲರಂತೆ ನಾನು ಕೂಡ ನನ್ನ ಸ್ನೇಹಿತರ ಜೊತೆ ಡ್ಯಾನ್ಸ್ ಮಾಡುತ್ತಿದ್ದೆ, ಎಂಜಾಯ್ ಮಾಡುತ್ತಿದ್ದೆ, ಆ ಸಮಯದಲ್ಲಿ ಒಬ್ಬ ವ್ಯಕ್ತಿ ಏಕಾಏಕಿ ಬಂದು ನನ್ನ ಕೂದಲು ಹಿಡಿದು ಎಳೆದ, ನಿನ್ನ ಯೋಗ್ಯತೆ ಏನು ಅಂತ ನನಗೆ ಗೊತ್ತು, ನಿನ್ನನ್ನು ನೀನು ತುಂಬಾ ಬುದ್ದಿವಂತಳು ಅಂದುಕೊಂಡಿದ್ದೀಯಾ..? ಎಂದು ಕುಡಿದ ಅಮಲಿನಲ್ಲಿ ಬಡಬಡಿಸಲು ಶುರು ಮಾಡಿದ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ನನ್ನ ಗೆಳತಿ ಬಂದು ನನ್ನನ್ನು ಕುಡಿದ ಮತ್ತಿನಲ್ಲಿದ್ದ ಆ ವ್ಯಕ್ತಿಯಿಂದ ಪಾರು ಮಾಡಿದಳು ಎಂದಿದ್ದಾರೆ. ಅವನು ಯಾವುದರ ಕುರಿತು ಮಾತನಾಡಿದ ಅನ್ನೋದು ನನಗೆ ಇವತ್ತಿನವರೆಗೂ ಗೊತ್ತಾಗಿಲ್ಲ ಎಂದು ಹೇಳಿದ್ದಾರೆ.
ಚಿತ್ರರಂಗದಲ್ಲಿ ತಮಗೆ ನೋವಾದ ಘಟನೆಯನ್ನು ಕೂಡ ನೆನದಿರುವ ಮೇಘಾ, ಅರೇ ಇವಳು ಅವನ ಜೊತೆ ಹೋಗಿ ಮಲಗ್ತಾಳೆ, ನಮ್ಮ ಜೊತೆ ಮಾತ್ರ ಮಲಗಲು ಬಾರದೇ ಡ್ರಾಮಾ ಮಾಡ್ತಾಳೆ, ಆದರೂ ಕೂಡ ಪ್ರಯತ್ನ ಮಾಡು ಬಂದರೂ ಬರಬಹುದು ಎಂದೆಲ್ಲಾ ಕೀಳಾಗಿ ನನ್ನ ಕುರಿತು ಮಾತನಾಡುತ್ತಾರೆ ಎಂದು ಕಣ್ಣೀರು ಹಾಕಿದ್ದಾರೆ. ಸದ್ಯ ಮೇಘಾ ಘಾಡ್ಗೆ ಅವರ ಈ ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮರಾಠಿ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.


Click it and Unblock the Notifications