2 ಗಂಟೆಗೆ 10,000 ; ಮನೆಗೆಲಸದವರಿಗೆ ಸಂಬಳ ನೀಡಲು ನಟಿಯ ಮೀನಾಮೇಷ , ವ್ಯಾಪಕ ಆಕ್ರೋಶ
ಮಹಾನಗರದ ಬದುಕು ಅಂದರೆ ಅವಕಾಶಗಳ ಆಗರ ಮತ್ತು ಯಾಂತ್ರಿಕತೆಯ ಬದುಕು. ಜೀವನ ಇಲ್ಲಿ ತುಂಬಾನೇ ದುಬಾರಿ. ಕನಸು ಕಾಣುವುದಕ್ಕೂ ಇಲ್ಲಿ ಬೆಲೆ ತೆರಬೇಕು. ಗಗನಕ್ಕೇರುತ್ತಿರುವ ಮನೆ ಬಾಡಿಗೆ, ಇಂಧನ ದರ, ಮಿತಿ ಮೀರಿದ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ಇವೆಲ್ಲದರಿಂದ ಸಂಬಳ ಬಂದು ಹದಿನೈದು ದಿನಗಳಾಗಿರಲ್ಲ. ಆಗಲೇ ಜೇಬು ಖಾಲಿಯಾಗಿರುತ್ತೆ.
ಈ ಕಾಂಕ್ರೀಟ್ ಪ್ರಪಂಚದಲ್ಲಿ ಶ್ರೀಮಂತರ ಬದುಕು ಸರಾಗವಾಗಿ ಸಾಗುವಂತೆ ಮಾಡುವವರು ಮನೆ ಕೆಲಸದವರು. ಬೆಂಗಳೂರು .. ಮುಂಬೈ .. ದೆಹಲಿ ಅಂತಹ ಮೆಟ್ರೋ ನಗರಗಳಲ್ಲಿ ಧನಿಕರ ಪಾಲಿನ ಜೀವನಾಡಿ ಇವರು. ಮೈ ಬಗ್ಗಿಸಿ ಕೆಲಸ ಮಾಡಲಾರದವರ ಮನೆಯಲ್ಲಿ ಕೆಲಸ ಮಾಡುವವರು ಎಂಬ ಮಾತಿಂದ ಹಿಡಿದು ಇವರಿಲ್ಲದಿದ್ದರೆ ಮನೆ ನಡೆಯುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಇವರು ಒಂದು ಮನೆಯನ್ನು ಆವರಿಸಿಕೊಂಡಿರುತ್ತಾರೆ. ಇಂತಹ ಮನೆ ಕೆಲಸದವರ ಕುರಿತು ಕೀರ್ತಿ ಕುಲ್ಹಾರಿ ಮಾತನಾಡಿರುವ ಮಾತು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಹೌದು, ಕೀರ್ತಿ ಕುಲ್ಲಾರಿ.. ಬಾಲಿವುಡ್‌ನ ಚೆಲುವೆ. ಕಳೆದ 15 ವರ್ಷಗಳಿಂದ ಹಲವಾರು ಚಿತ್ರಗಳಲ್ಲಿ ಮತ್ತು ವೆಬ್ ಸರಣಿಗಳಲ್ಲಿ ಕೃತಿ ಕಾಣಿಸಿಕೊಂಡಿದ್ದಾರೆ. ತಮ್ಮ ಅಭಿನಯದಿಂದ ಅಸಂಖ್ಯಾತ ಜನರ ಹೃದಯವನ್ನು ಕೂಡ ಗೆದ್ದಿದ್ದಾರೆ.
''ಪಿಂಕ್''.. ''ಇಂಧು ಸರ್ಕಾರ್''.. ''ಉರಿ -ದಿ ಸರ್ಜಿಕಲ್ ಸ್ಟೈಕ್''.. ''ಮಿಷನ್ ಮಂಗಲ್''.. ಇವರು ಅಭಿನಯಿಸಿದ ಕೆಲ ಪ್ರಮುಖ ಚಿತ್ರಗಳು. ಇನ್ನು ''ಕ್ರಿಮಿನಲ್ ಜಸ್ಟಿಸ್''.. ''ಹ್ಯೂಮನ್'' ಮತ್ತು ''ಫೋರ್ ಮೋರ್ ಶಾಟ್ಸ್'' ಇವರ ಜನಪ್ರಿಯ ವೆಬ್ ಸರಣಿಗಳು.
ಅದರಲ್ಲಿಯೂ ವಿಶೇಷವಾಗಿ ''ಫೋರ್ ಮೋರ್ ಶಾಟ್ಸ್'' ಇವರಿಗೆ ಅಪಾರವಾದ ಹೆಸರು-ಕೀರ್ತಿ ತಂದು ಕೊಡ್ತು. 2019ರಿಂದ ಈ ವೆಬ್ ಸರಣಿಯ ಭಾಗವಾಗಿರುವ ಕೃತಿ ಇಲ್ಲಿಯವರೆಗೆ ನಾಲ್ಕು ಸೀಸನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂಥಾ ಕೀರ್ತಿ ಕುಲ್ಹಾರಿ ಕೇವಲ ಎರಡು ಗಂಟೆ ಮನೆ ಕೆಲಸ ಮಾಡಲು ಮನೆ ಕೆಲಸದವರು ಹತ್ತು ಸಾವಿರ ಸಂಬಳ ಕೇಳುತ್ತಾರೆ ಎಂದು ಹೇಳಿದ್ದಾರೆ.
ಹೌದು, ಈ ಕುರಿತು ''ಬಾಲಿವುಡ್ ಬಬಲ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕೀರ್ತಿ ಕುಲ್ಹಾರಿ , ನಾನು ಇತ್ತೀಚೆಗೆ ಯಾರಿ ರೋಡ್‌ನಲ್ಲಿ ಹೊಸ ಮನೆಗೆ ಸ್ಥಳಾಂತರಗೊಂಡೆ, ಈ ಸಮಯದಲ್ಲಿ ಮನೆ ಕೆಲಸದವರ ಬೇಡಿಕೆ ಕೇಳಿ ಆಶ್ಚರ್ಯಗೊಂಡೆ ಎಂದು ಹೇಳಿದ್ದಾರೆ.

ಕೇವಲ ಎರಡು ಗಂಟೆಯ ಕೆಲಸ ಮಾಡುವಂತೆ ನಾನು ಹೇಳಿದ್ದೇ, ಆ ಎರಡು ಗಂಟೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಬೇಕು. ಅಂದರೆ, ಕಸ ಗುಡಿಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಸಮಯ ಸಿಕ್ಕರೆ ಧೂಳು ಒರೆಸುವುದು ಎಂದು ಹೇಳಿರುವ ಕೀರ್ತಿ ಈ ಕೆಲಸಕ್ಕೆ ಮನೆ ಕೆಲಸದಾಕೆ ಹತ್ತು ಸಾವಿರ ಕೇಳಿದರು ಎಂದು ಹೇಳಿದ್ದಾರೆ. ನನಗೆ ಈ ಮೊತ್ತ ತುಂಬಾನೇ ಅಸಮಂಜಸ ಎನಿಸಿತು, ಇದು ನ್ಯಾಯನಾ..? ಎನ್ನುವ ಪ್ರಶ್ನೆನಾ ನನ್ನ ಮ್ಯಾನೇಜರ್ ಬಳಿ ನಾನು ಕೇಳಿದ್ದೇ ಎಂದಿದ್ದಾರೆ.
ಮುಂದುವರೆದು ನೀವು ಕೇವಲ ಎರಡು ಗಂಟೆಗಳ ಕಾಲ ಬರುತ್ತೀರಿ, ಆ ಸಮಯದಲ್ಲಿ ಎಷ್ಟು ಕೆಲಸ ಮಾಡಲು ಸಾಧ್ಯವೋ ಅಷ್ಟನ್ನು ಮಾತ್ರ ಮಾಡುತ್ತೀರಿ. ಹಾಗಿದ್ದಾಗ ಕೇವಲ ಅದಕ್ಕಾಗಿ ನನಗೆ 10,000 ರೂಪಾಯಿ ಚಾರ್ಜ್ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನೆ ಕೇಳಿರುವ ಕೀರ್ತಿ ಕುಲ್ಹಾರಿ, ಮನೆಗೆಲಸದವರು ಸೆಲೆಬ್ರಿಟಿಗಳ ಮುಖ ನೋಡಿ, ಇವರ ಬಳಿ ದುಡ್ಡು ಇದ್ದೇ ಇರುತ್ತದೆ, ಇನ್ನು ಸ್ವಲ್ಪ ಜಾಸ್ತಿ ಕೇಳೋಣ ಎಂದು ಯೋಚಿಸಿ ದರವನ್ನು ಕೂಡ ಹೆಚ್ಚಿಸುತ್ತಾರೆ ಎಂದು ಲೇವಡಿ ಮಾಡಿದ್ದಾರೆ. ಮನೆ ಕೆಲಸದವರಲ್ಲಿ ದುರಾಸೆ ಹೆಚ್ಚಿರುತ್ತೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಸದ್ಯ ಕೀರ್ತಿ ಕುಲ್ಹಾರಿ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರಖ್ಯಾತ ನಟಿ ಮತ್ತು ಟಿವಿ ನಿರೂಪಕಿ ಮಿನಿ ಮಾಥುರ್ ಕೂಡ ಕೀರ್ತಿ ಅವರ ಈ ಹೇಳಿಕೆಯನ್ನು ಖಂಡಿಸಿದ್ದು, ಅವರ ಎರಡು ಗಂಟೆಗಳ ಕೆಲಸ ನಮಗೆ ಅದೇ ಅವಧಿಯಲ್ಲಿ ಎಷ್ಟು ಸಂಪಾದಿಸಲು ನೆರವಾಗುತ್ತದೆ ಎಂಬುದನ್ನು ಯೋಚಿಸಿ, ವಿಶ್ವದ ಯಾವುದೇ ಭಾಗದಲ್ಲೂ ಇದು ಕನಿಷ್ಠ ಕೂಲಿಗಿಂತ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನೀವು ಅದೇ ಎರಡು ಗಂಟೆಗೆ ಎಷ್ಟು ಸಂಭಾವನೆಯನ್ನು ಪಡೆಯುತ್ತೀರಾ..? ಆ ಸಂಭಾವನೆಗೆ ನೀವು ಅರ್ಹರು ಎಂದಾದರೆ, ಮನೆ ಕೆಲಸದವರು ಕೂಡ ಅರ್ಹರು ಎಂದು ಕಾಮೆಂಟ್ ಮಾಡಿದ್ದಾರೆ. ಇದು ನಿಮಗೆ ಜಾಸ್ತಿ ಎನಿಸುತ್ತದೆಯೇ? ವಾಹ್ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಇನ್ನು ಕೆಲವರು ಕೀರ್ತಿ ಧ್ವನಿಗೆ ಧ್ವನಿಗೂಡಿಸಿ ಇಷ್ಟೊಂದು ಹೆಚ್ಚಾ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸದ್ಯ ಕೀರ್ತಿ ಕುಲ್ಹಾರಿ ಅವರ ಈ ಹೇಳಿಕೆ ತೀವ್ರ ಚರ್ಚೆಗೆ ನಾಂದಿ ಹಾಡಿದೆ. ಅಂದ್ಹಾಗೇ ಕೀರ್ತಿ ಕುಲ್ಹಾರಿ ಈ ಮಾತು ಇಂದು ನಿನ್ನೆ ಹೇಳಿದ್ದಲ್ಲ. ಕೆಲ ದಿನಗಳ ಹಿಂದೆ ಹೇಳಿದ ಮಾತು ಇದು. ಕೀರ್ತಿ ಅವರ ಸಂದರ್ಶನದಲ್ಲಿ ಈ ತುಣುಕನ್ನು ''ಅನ್‌ಕಟ್ ಇಂಡಿಯಾ'' ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ಹಿನ್ನೆಲೆ ಹಳೆಯ ವಿಡಿಯೋ ಮತ್ತೆ ಮುನ್ನೆಲೆಗೆ ಬಂದಿದೆ. ಕ್ಷಣಾರ್ಧದಲ್ಲಿ ವೈರಲ್ ಆಗಿದೆ.



Click it and Unblock the Notifications