ಮಿಸ್ ವರ್ಲ್ಡ್ 2021 ರದ್ದು! ಕಾರಣ ಭಾರತದ ಸ್ಪರ್ಧಿ ಮಾನಸಾ ವಾರಣಾಸಿಗೆ ಕೋವಿಡ್ ಪಾಸಿಟಿವ್!
ಡಿಸೆಂಬರ್ 12 ರಂದು ಭಾರತಕ್ಕೆ ಒಂದು ವಿಶೇಷ ದಿನವಾಗಿತ್ತು, ಇದಕ್ಕೆ ಕಾರಣ 21 ವರ್ಷಗಳ ನಂತರ ಭಾರತೀಯ ಯುವತಿಯೊಬ್ಬರು ಮತ್ತೊಮ್ಮೆ ಮಿಸ್ ಯೂನಿವರ್ಸ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡರು. ಹರ್ನಾಜ್ ಸಂಧು ವಿಶ್ವಸುಂದರಿ 2021 ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದು ಮಾತ್ರವೇ ಅಲ್ಲದೇ ವಿಶ್ವದ ಅತ್ಯಂತ ದುಬಾರಿ ಬೆಲೆಯ, ವಿಶಿಷ್ಟತೆಯ ಸಂಕೇತವಾದ ಕಿರೀಟವನ್ನು ಧರಿಸುವ ಮೂಲಕ ಮಿಂಚಿದರು.
ಮಿಸ್ ಯೂನಿವರ್ಸ್ ಕಾರ್ಯಕ್ರಮದ ನಂತರ ಎಲ್ಲಾ ಭಾರತೀಯ ಫ್ಯಾಷನ್ ಪ್ರಿಯರು ಮಿಸ್ ವರ್ಲ್ಡ್ 2021 ಕಾರ್ಯಕ್ರಮವನ್ನು ಎದುರುನೋಡುತ್ತಿದ್ದರು. ಇದಕ್ಕೆ ಪ್ರಮುಖ ಕಾರಣ ಭಾರತದ ಮಾನಾಸಾ ವಾರಣಾಸಿ. ಇಂತಹ ಸಂದರ್ಭದಲ್ಲೆ ಇದೀಗ ಮಿಸ್ ವರ್ಲ್ಡ್ 2021 ಕಾರ್ಯಕ್ರಮ ರದ್ದಾಗಿರೋ ವಿಚಾರ ಹೊರಬಂದಿದೆ.
ಹೌದು ಈ ಮಿಸ್ ವರ್ಲ್ಡ್ 2021 ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದ ಸಾಕಷ್ಟು ಸ್ಪರ್ಧಿಗಳಿಗೆ ಇದೀಗ ಕೊರೋನಾ ದೃಡ ಪಟ್ಟಿರುವ ಬಗ್ಗೆ ಮಾಹಿತಿ ಹೊರಬಂದಿದ್ದು, ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದ ಮಾನಸಾ ವಾರಣಾಸಿಗೂ ಕೋವಿಡ್ ಪಾಸಿಟಿವ್ ಆಗಿದೆ. ಉಳಿದ ಸ್ಪರ್ಧಿಗಳ ಸುರಕ್ಷತೆಯ ಕಾರಣದಿಂದಾಗಿ ಇದೀಗ ಮಿಸ್ ವರ್ಲ್ಡ್ 2021 ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂಬ ಸುದ್ದಿ ಧೃಡಪಟ್ಟಿದೆ.

ಯಾರು ಆತಂಕ ಪಡಬೇಡಿ ಎಂದು ಭರವಸೆ ನೀಡಿದ ಮಿಸ್ ವರ್ಲ್ಡ್ ಆಯೋಜಕರು
ಪೋರ್ಟ್ ರಿಕೋದಲ್ಲಿ ಮಿಸ್ ವರ್ಲ್ಡ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಬೇಕಿತ್ತು. ಪ್ರತೀ ವರ್ಷದಂತೆ ಈ ಬಾರಿಯೂ ಸ್ಪರ್ಧಿಗಳು ಸಿದ್ಧತೆ ನಡೆಸಿದ್ದರು, ಸಾಕಷ್ಟು ಕನಸುಗಳನ್ನು ಹೊತ್ತು ಬಂದಿದ್ದ ಹಲವರಿಗೆ ಇದೀಗ ನಿರಾಸೆ ಆಗಿದೆ. ಆದರೆ ಮಿಸ್ ವರ್ಲ್ಡ್ 2021 ಆಯೋಜಕರು ಈ ಬಗ್ಗೆ ಮಾಹಿತಿ ನೀಡಿದ್ದು, "ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ಕೋವಿಡ್ ಧೃಡ ಪಟ್ಟಿರುವ ಸ್ಪರ್ಧಿಗಳು ಗುಣಮುಖ ಆಗುತ್ತಿದ್ದಂತೆ ಮಿಸ್ ವರ್ಲ್ಡ್ 2021 ಕಾರ್ಯಕ್ರಮವನ್ನು ಪ್ರತೀ ವರ್ಷದಂತೆ ನಡೆಸುತ್ತೇವೆ. ಈ ಬಗ್ಗೆ ಎಲ್ಲಾ ಸಿದ್ಧತೆಗಳು ನಡೆದಿದ್ದು, ಆತಂಕ ಪಡಬೇಡಿ. ಮಿಸ್ ವರ್ಲ್ಡ್ 2021 ಕಾರ್ಯಕ್ರಮದ ದಿನಾಂಕವನ್ನು ಆದಷ್ಟು ಬೇಗ ನಿಮ್ಮ ಮುಂದೆ ಅನೌನ್ಸ್ ಮಾಡಲಾಗುವುದು'' ಎಂದು ತಿಳಿಸಿದೆ.

ಸ್ಪರ್ಧಿಗಳ ಆರೋಗ್ಯದ ಬಗ್ಗೆ ವೈದ್ಯರ ವರದಿ !
ಇನ್ನು ಕೋವಿಡ್ ಧೃಡ ಪಟ್ಟಿರುವ ಸ್ಪರ್ಧಿಗಳು ಪೋರ್ಟ್ ರಿಕೋ ದಲ್ಲೆ ಐಸೋಲೇಟ್ ಆಗಿದ್ದಾರೆ ಎಂಬ ಮಾಹಿತಿಯನ್ನು ಮಿಸ್ ವರ್ಲ್ಡ್ ಲಿಮಿಟೆಡ್‌ನ ಸಿಇಒ ಜೂಲಿಯಾ ಮೊರ್ಲೆ ಹೇಳಿದ್ದಾರೆ. ಹಾಗೆ ಈ ವಿಚಾರದ ಬಗ್ಗೆ ತಿಳಿಸಿರುವ ಸಿಇಒ ಜೂಲಿಯಾ ಮೊರ್ಲೆ "ನಾವು ಸ್ಪರ್ಧಿಗಳ ಆರೋಗ್ಯದ ಬಗ್ಗೆ ತುಂಬಾ ನಿಗಾ ಇಟ್ಟಿದ್ದೇವೆ. ಯಾರು ಅತಂಕ ಪಡಬೇಡಿ. ಕಿರೀಟವನ್ನು ಮುಡಿಗೇರಿಸಿಕೊಳ್ಳಲು ನಮ್ಮ ಸ್ಪರ್ಧಿಗಳು ಕಾತರರಾಗಿದ್ದಾರೆ. ವೈದ್ಯರು ಯಾವತ್ತು ಅಂತಿಮವಾಗಿ ಸ್ಪರ್ಧಿಗಳ ಆರೋಗ್ಯ ವರದಿಯನ್ನು ನೀಡುತ್ತಾರೋ ಅಂದು ಮಿಸ್ ವರ್ಲ್ಡ್ 2021 ಕಾರ್ಯಕ್ರಮ ನಡೆಸುವ ದಿನಾಂಕವನ್ನು ತಿಳಿಸುತ್ತೇವೆ" ಎಂದಿದ್ದಾರೆ.

ಆದಷ್ಟು ಬೇಗ ಮಿಸ್ ವರ್ಲ್ಡ್ 2021 ಕಾರ್ಯಕ್ರಮ
ಇನ್ನು ಭಾರತದ ಮಾನಸಾ ವಾರಣಾಸಿ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ, ಗುಣಮುಖರಾಗುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮಾನಸಾ ಮತ್ತೆ ಮೊದಲಿನಂತೆ ಚೇತರಿಸಿಕೊಳ್ಳುತ್ತಾರೆ, ಈ ನಿಟ್ಟಿನಲ್ಲಿ ವೈದ್ಯರು ಕೂಡ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಪೂರ್ಣವಾಗಿ ಗುಣಮುಖರಾದ ನಂತರ ಅಂತಿಮ ಪರೀಕ್ಷೆಯನ್ನು ನಡೆಸಿ ಅವರನ್ನು ಸಿದ್ಧಗೊಳಿಸಲಾಗುತ್ತೆ ಎನ್ನಲಾಗಿದೆ.

ಕಿರೀಟ ಮುಡಿಗೇರಿಸಿಕೊಳ್ಳುವ ಬಗ್ಗೆ ನಿರೀಕ್ಷೆ!
ಇನ್ನು ಮಾನಸಾ ವಾರಣಾಸಿ ತೆಲಂಗಾಣದಲ್ಲಿ ಇಂಜಿನಿಯರಿಂಗ್ ವೃತ್ತಿಯನ್ನು ನಿರ್ವಹಿಸುತ್ತಿದ್ದು, '2020ರ ಮಿಸ್ ಇಂಡಿಯಾ ವರ್ಲ್ಡ್' 2020ರ ವಿಜೇತರು ಕೂಡ ಆಗಿದ್ದಾರೆ. ಹಿಗಾಗಿ ಇವರ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು 2021ರ ಮಿಸ್ ವರ್ಲ್ಡ್‌ನಲ್ಲೂ ಕಿರೀಟ ತನ್ನದಾಗಿಸಿಕೊಳ್ಳುತ್ತಾರೆ ಅಂತ ನಿರೀಕ್ಷಿಸಲಾಗಿದೆ. ಎನೀ ವೇ ಕೋವಿಡ್ ಸೊಂಕಿತ ಎಲ್ಲಾ ಸ್ಪರ್ಧಿಗಳು ಆದಷ್ಟು ಬೇಗ ಗುಣಮುಖ ಆಗಲಿ ಮತ್ತು ಮಿಸ್ ವರ್ಲ್ಡ್ 2021 ಕಾರ್ಯಕ್ರಮ ಆದಷ್ಟು ಬೇಗ ನಡೆಯಲಿ ಎಂದು ಫ್ಯಾಷನ್ ಪ್ರಿಯರು ಕಾಯುತ್ತಿದ್ದಾರೆ.


Click it and Unblock the Notifications











