ಆಸ್ಪತ್ರೆಯಲ್ಲಿ 'ಮಿಷನ್ ಮಂಗಲ್' ಡೈರೆಕ್ಟರ್: ಜಗನ್ ಆರೋಗ್ಯ ಸ್ಥಿತಿ ಗಂಭೀರ
'ಮಿಷನ್ ಮಂಗಲ್' ಸಿನಿಮಾದ ನಿರ್ದೇಶಕ ಜಗನ್ ಶಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ನಿರ್ದೇಶಕ ಜಗನ್ ಶಕ್ತಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆಯಂತೆ. ಕಳೆದ 24 ಗಂಟೆಗಳಿಂದ ಚಿಕಿತ್ಸೆ ನಡೆಯುತ್ತದೆಯಂತೆ. ಈ ಬಗ್ಗೆ ಬಾಲಿವುಡ್ ಸಿನಿಮಾ ವೆಬ್ ಸೈಟ್ ಗಳು ವರದಿ ಮಾಡಿವೆ.
ಜಗನ್ ಶಕ್ತಿ ಮೂಲತಃ ಕರ್ನಾಟಕದವರು. ನಿರ್ದೇಶಕ ಆರ್ ಬಾಲ್ಕಿ ಜೊತೆಗೆ ಕೆಲಸ ಮಾಡುತ್ತಿದ್ದ, ಅವರು ಬಾಲಿವುಡ್ ಚಿತ್ರರಂಗದ ಮೂಲಕ ಗುರುತಿಸಿಕೊಂಡರು. 'ಮಿಷನ್ ಮಂಗಲ್' ಅವರ ಮೊದಲ ಸಿನಿಮಾವಾಗಿದ್ದು, ಅಕ್ಷಯ್ ಕುಮಾರ್ ಚಿತ್ರದ ಮೂಲಕ ಸ್ವಾತಂತ್ರ್ಯ ನಿರ್ದೇಶಕರಾಗಿ ಲಾಂಚ್ ಆಗಿದ್ದರು.

ತಲೆ ಸುತ್ತಿ ಬಿದ್ದ ಜಗನ್
ಜಗನ್ ಶಕ್ತಿ ಆರೋಗ್ಯ ಸ್ಥಿತಿಯ ಬಗ್ಗೆ ಕುಟುಂಬ ಹಾಗೂ ಸ್ನೇಹಿತರು ಮಾತನಾಡಿದ್ದಾರೆ. ಶನಿವಾರ ಚೆನ್ನಾಗಿಯೇ ಇದ್ದ ಜಗನ್ ಇದ್ದಕ್ಕಿದ್ದ ಹಾಗೆ ತಲೆ ಸುತ್ತಿ ಬಿದ್ದರಂತೆ. ನಂತರ ತಡ ಮಾಡದೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪರೀಕ್ಷೆ ನಡೆಸಿದ ವೈದ್ಯರು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ತಿಳಿಸುತ್ತಾರೆ.

ಗಂಭೀರ ಸ್ಥಿತಿಯಲ್ಲಿ ಇದ್ದಾರೆ
ಶನಿವಾರ ಮುಂಬೈನ ಆಸ್ಪತ್ರೆಗೆ ಜಗನ್ ರನ್ನು ದಾಖಲು ಮಾಡಿದ್ದು, ಸದ್ಯದವರೆಗೆ ಚಿಕಿತ್ಸೆ ನೀಡಲಾಗುತ್ತಿದೆಂತೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಚಿಕಿತ್ಸೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ನಂತರ ವೈದ್ಯರು ತಿಳಿಸುತ್ತಾರಂತೆ.

ಜಗನ್ ಬೆಂಗಳೂರಿನ ಹುಡುಗ
ಜಗನ್ ಶಕ್ತಿ ಬೆಂಗಳೂರಿನ ಹುಡುಗ. ಹಿಂದಿ ಚಿತ್ರರಂಗದ ಮೂಲಕ ಹೆಸರು ಮಾಡಿದ ಜಗನ್ ಮೊದಲು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರು. 'ಉಗ್ರಂ' ಸಿನಿಮಾದ ಕಲಾ ನಿರ್ದೇಶಕ ವಿಭಾಗದಲ್ಲಿ ಆಕಸ್ಮಿಕವಾಗಿ ಕೆಲಸ ಮಾಡುವ ಅವಕಾಶ ಅವರಿಗೆ ಸಿಕ್ಕಿತ್ತು. ಆ ನಂತರ ಹಿಂದಿ ಚಿತ್ರರಂಗಕ್ಕೆ ಹೋದ ಜಗನ್ 'ಮಿಷನ್ ಮಂಗಲ್' ಮೂಲಕ ಡೈರೆಕ್ಟರ್ ಆದರು.

ಹೊಸ ಸಿನಿಮಾದ ಕೆಲಸಗಳು ನಡೆಯುತ್ತಿತ್ತು
'ಮಿಷನ್ ಮಂಗಲ್' ಸಿನಿಮಾದ ನಂತರ ಜಗನ್ ಶಕ್ತಿ ತಮ್ಮ ಎರಡನೇ ಸಿನಿಮಾದ ತಯಾರಿಯಲ್ಲಿ ಇದ್ದರು. ಈ ಬಾರಿ ತಮಿಳಿನ ಸೂಪರ್ ಹಿಟ್ ಸಿನಿಮಾವನ್ನು ಹಿಂದಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ವಿಜಯ್ ಹಾಗೂ ಸಮಂತಾ ನಟನೆಯ 'ಕತ್ತಿ'ಯನ್ನು ಜಗನ್ ರಿಮೇಕ್ ಮಾಡುತ್ತಿದ್ದಾರೆ. ಇದು ಎ ಆರ್ ಮುರುಗದಾಸ್ ನಿರ್ದೇಶನದ ಸಿನಿಮಾ.


Click it and Unblock the Notifications