ಹಾಲಿವುಡ್ ಸುರಸುಂದರನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಮಿಥುನ್ ಚಕ್ರವರ್ತಿ ಮುದ್ದಿನ ಮಗಳು ದಿಶಾನಿ
ಕೇವಲ ಎರಡು ಅಕ್ಷರದಲ್ಲಿ ಪ್ರೀತಿಯನ್ನು ನಿರೂಪಿಸುವುದು ಕಷ್ಟ. ಯಾಕೆಂದರೆ.. ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯ ಇಲ್ಲ. ಈ ಪ್ರೀತಿಯನ್ನು ಅನುಭವಿಸಿಯೇ ತೀರಬೇಕು. ಅದರಲ್ಲಿಯೂ ನಿಜವಾದ ಪ್ರೀತಿ ಅಂದರೆ ಯಾವುದು ? ನಿಜವಾದ ಪ್ರೀತಿ ಅಂದರೇನು ? ನಿಜವಾದ ಪ್ರೀತಿಯನ್ನು ಗುರುತಿಸುವುದು ಹೇಗೆ ? ಎಂಬೆಲ್ಲಾ ಪ್ರಶ್ನೆಗಳು ಪ್ರೀತಿಸಿದವರ ಮನದಲ್ಲಿ ಮೂಡುವುದು ಸಹಜ.
ಆದರೆ ನಿಜವಾದ ಪ್ರೀತಿ.. ಎನ್ನುವುದು ಹೃದಯದ ಬಡಿತ ಅಲ್ಲ. ನನ್ನ ಹೃದಯದ ಬಡಿತ ಅನುಕ್ಷಣ ನಿನ್ನದೇ ಹೆಸರು ಹೇಳುತ್ತಿದೆ ಎಂದರೆ ಅದು ನಿಜವೂ ಅಲ್ಲ. ನಿಜವಾದ ಪ್ರೀತಿ ಅನ್ನೋದು ಪರಿಪೂರ್ಣ ಪ್ರಣಯವದು ಎನ್ನುವುದು ಹಲವರ ಅಭಿಪ್ರಾಯ. ಇನ್ನು ಈ ಪ್ರೀತಿ ಯಾರ ಮೇಲೆ ಬೇಕಾದರೂ, ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಆಗಬಹುದು. ಉದಾಹರಣೆಗೆ ದಿಶಾನಿ ಚಕ್ರವರ್ತಿ.

ಹೌದು, ದಿಶಾನಿ ಚಕ್ರವರ್ತಿ.. ಬಾಲಿವುಡ್‌ನ ಡಿಸ್ಕೋ ಡ್ಯಾನ್ಸರ್ ಮಿಥುನ್ ಚಕ್ರವರ್ತಿಯವರ ಮುದ್ದಿನ ಮಗಳು. ವಿಶೇಷ ಅಂದರೆ ಇವರು ಮಿಥುನ್ ಚಕ್ರವರ್ತಿ ಹೆತ್ತ ಮಗಳಲ್ಲ. ಬದಲಿಗೆ ದತ್ತು ಪುತ್ರಿ.
ಕೋಲ್ಕತ್ತಾದ ಕಸದ ರಾಶಿಯಲ್ಲಿ ಸಿಕ್ಕಿದ್ದರು ದಿಶಾನಿ
ಮಾಧ್ಯಮಗಳು ಹಿಂದೆ ವರದಿ ಮಾಡಿರುವಂತೆ ಕೋಲ್ಕತ್ತಾದ ಕಸದ ರಾಶಿಯಲ್ಲಿ ಸಿಕ್ಕಿದ್ದರು ದಿಶಾನಿ. ಸ್ಥಳಿಯ ಪತ್ರಿಕೆಯೊಂದರಲ್ಲಿ ಮಗುವನ್ನು ರಕ್ಷಿಸಿದ ಸುದ್ದಿಯನ್ನು ಓದಿ ಭಾವುಕರಾದ ಮಿಥುನ್ ತಮ್ಮ ಪತ್ನಿ ಯೋಗಿತಾ ಬಾಲಿ ಅವರ ಸಂಪೂರ್ಣ ಬೆಂಬಲದೊಂದಿಗೆ ದಿಶಾನಿ ಅವರನ್ನು ದತ್ತು ಪಡೆದರು.
ಇಲ್ಲಿಂದ ಮಿಥುನ್ ಚಕ್ರವರ್ತಿಯ ಮನೆ ಮಗಳಾದ ದಿಶಾನಿ, ಸದ್ಯ ಅಮೆರಿಕಾದ ವಾಸಿ. ತಂದೆಯ ಹೆಜ್ಜೆ ಗುರುತನ್ನೇ ಹಿಂಬಾಲಿಸಿಕೊಂಡು ಮುಂಬೈನ ''ದಿ ಜೆಫ್ ಗೋಲ್ಡ್‌ಬರ್ಗ್ ಸ್ಟುಡಿಯೋ''ದಲ್ಲಿ ಅಭಿನಯದ ಅ ಆ ಇ ಈ ಕಲಿತ ದಿಶಾನಿ, ಲಾಸ್ ಏಂಜಲೀಸ್‌ನ ''ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿ''ಯಿಂದ ಪದವಿಯನ್ನು ಕೂಡ ಪಡೆದಿದ್ದಾರೆ.
ಇನ್ನು ಅಲ್ಲಿನ ಪ್ರತಿಷ್ಠಿತ ''ಲೀ ಸ್ಟ್ರಾಸ್‌ಬರ್ಗ್ ಥಿಯೇಟರ್ ಅಂಡ್ ಫಿಲ್ಮ್ ಇನ್‌ಸ್ಟಿಟ್ಯೂಟ್''ನಲ್ಲಿ ಎರಡು ವರ್ಷಗಳ ತರಬೇತಿಯನ್ನು ಕೂಡ ಪಡೆದಿರುವ ದಿಶಾನಿ, ಹಾಲಿವುಡ್‌ನ ಸ್ವತಂತ್ರ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ''ಗಿಫ್ಟ್''.. ''ಅಂಡರ್‌ಪಾಸ್''.. ''ದಿ ಗೆಸ್ಟ್''.. ಮತ್ತು ''ಫೀಡ್ ಮೀ'' ಸೇರಿದಂತೆ ಕೆಲವು ಶಾರ್ಟ್ ಫಿಲ್ಮ್‌ಗಳಲ್ಲಿ ಅಭಿನಯಿಸಿದ್ಧಾರೆ.

ಇಂಥಾ ದಿಶಾನಿ ಚಕ್ರವರ್ತಿ ಸದ್ಯ ತಮ್ಮ ಬಹುಕಾಲದ ಗೆಳೆಯ ಮೈಲ್ಸ್ ಮಾಂಟ್ಜಾರಿಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ಧಾರೆ. ಸಂಪೂರ್ಣ ಸಿನಿಮಾ ಶೈಲಿಯಲ್ಲಿ ಮೈಲ್ಸ್ ಮಾಂಟ್ಜಾರಿಸ್ ತಮ್ಮ ಮನದನ್ನೆ ದಿಶಾನಿ ಎದುರು ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದು ಸದ್ಯ ಇವರ ಈ ಲವ್ ಪ್ರಪೋಸ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಯಾರು ಈ ಮೈಲ್ಸ್ ಮಾಂಟ್ಜಾರಿಸ್..?
ಮಿಥುನ್ ಚಕ್ರವರ್ತಿಯ ಭಾವಿ ಅಳಿಯ, ಮೈಲ್ಸ್ ಮಾಂಟ್ಜಾರಿಸ್ ಹಾಲಿವುಡ್‌ನಲ್ಲಿ ಸ್ಟೆಡಿಕ್ಯಾಮ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಇವರು ಕಲರಿಸ್ಟ್ ಕೂಡ ಹೌದು. ಇಎಸ್‌ಪಿಎನ್.. ಎನ್‌ಎಫ್‌ಎಲ್.. ಡಿಸ್ನಿ.. ಅಮೆಜಾನ್.. ಮ್ಯಾಕ್ಸ್.. ಸೇರಿ ಹಲವು ಪ್ರಮುಖ ಪ್ರೊಡಕ್ಷನ್ ಕಂಪನಿಗಳ ಮಾರ್ಕೆಟಿಂಗ್ ಕ್ಯಾಂಪೇನ್‌ಗಳನ್ನು ಮಾಡಿರುವ ಮೈಲ್ಸ್ ಮಾಂಟ್ಜಾರಿಸ್ ಕೆಲ ಡಾಕ್ಯುಮೆಂಟರಿ ಮತ್ತು ಮ್ಯೂಸಿಕ್ ವಿಡಿಯೋ ಪ್ರಾಜೆಕ್ಟ್‌ಗಳಲ್ಲಿ ಕೂಡ ಕೆಲಸ ಮಾಡಿದ್ದಾರೆ.
ಮಿಥುನ್ ಚಕ್ರವರ್ತಿಯ ಮದುವೆ ಮತ್ತು ಮಕ್ಕಳ ವಿವರ
ಮಿಥುನ್ ಚಕ್ರವರ್ತಿ 1979ರಲ್ಲಿ ಹೆಲೆನಾ ಲ್ಯೂಕ್ ಜೊತೆ ಮದುವೆಯಾಗಿದ್ದರು. ಚಿತ್ರದ ಚಿತ್ರೀಕರಣದ ಸಮಯದಲ್ಲಿ ಮಿಥುನ್ ಚಕ್ರವರ್ತಿ ಅವರನ್ನು ಮೊದಲು ಭೇಟಿಯಾದ ಹೆಲೆನಾ ಲ್ಯೂಕ್ ಆ ನಂತರ ಮಿಥುನ್ ಜೊತೆ ಸ್ನೇಹ ಬೆಳೆಸಿದರು. ಸ್ನೇಹ ಆ ನಂತರ ಪ್ರೇಮಕ್ಕೆ ತಿರುಗಿತು.
ಇನ್ನೂ ಈ ಸಮಯದಲ್ಲಿ ಆಗಷ್ಟೇ ಸಾರಿಕಾ ಅವರಿಂದ ದೂರವಾಗಿದ್ದ ಮಿಥುನ್ ಚಕ್ರವರ್ತಿ ಕೂಡ ಹೆಲೆನಾ ಅವರನ್ನು ಪ್ರೀತಿ ಮಾಡಿದರು. ಮದುವೆ ಕೂಡ ಆದರು. ಆದರೆ ದುರಾದೃಷ್ಟವಶಾತ್ ಮಿಥುನ್ ಚಕ್ರವರ್ತಿ ಮತ್ತು ಹೆಲೆನಾ ಲ್ಯೂಕ್ ದಾಂಪತ್ಯ ಕೇವಲ ನಾಲ್ಕೇ ನಾಲ್ಕು ತಿಂಗಳಿಗೆ ಮುರಿದು ಬಿತ್ತು.
ಹೆಲೆನಾ ಲ್ಯೂಕ್ ಅವರಿಂದ ದೂರವಾದ ನಂತರ ನಟಿ ಯೋಗಿತಾ ಬಾಲಿ ಅವರ ಜೊತೆ ಸಪ್ತಪದಿ ತುಳಿದರು. ಇವರ ಪ್ರೇಮ ಸಂಕೇತವಾಗಿ ಇವರಿಗೆ ಮೂವರು ಮಕ್ಕಳಿದ್ದಾರೆ. ಅವರೇ ಮಿಮೋಹ್ ಚಕ್ರವರ್ತಿ, ಉಷ್ಮೇ ಚಕ್ರವರ್ತಿ, ನಮಾಶಿ ಚಕ್ರವರ್ತಿ. ಆ ನಂತರ ಇವರ ಪುಟ್ಟ ಪ್ರಪಂಚಕ್ಕೆ ಬಂದವರೇ ದಿಶಾನಿ ಚಕ್ರವರ್ತಿ.
ಸದ್ಯ ದಿಶಾನಿ ಚಕ್ರವರ್ತಿಯವರ ನಿಶ್ಚಿತಾರ್ಥದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಹಲವರು ದಿಶಾನಿ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಇದೇ ಡಿಸೆಂಬರ್ ನಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆಯುವ ಸಾಧ್ಯತೆ ಇದೆ.
ದಿಶಾನಿ ಚಕ್ರವರ್ತಿ ಅಕ್ಟೋಬರ್ 24, 2000 ರಂದು ಜನಿಸಿದರು. ಅವರು 75 ವರ್ಷದ ಮಿಥುನ್ ಚಕ್ರವರ್ತಿ ಅವರ ದತ್ತು ಪುತ್ರಿ. ಅವರು ಉದಯೋನ್ಮುಖ ನಟಿ ಮತ್ತು ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಯಾಗಿದ್ದಾರೆ. ದಿಶಾನಿ ಅವರನ್ನು ಮಿಥುನ್ ಚಕ್ರವರ್ತಿ ಮತ್ತು ಅವರ ನಟಿ ಪತ್ನಿ ಯೋಗಿತಾ ಬಾಲಿ ದತ್ತು ಪಡೆದಿದ್ದರು. ದಿಶಾನಿ ಸದ್ಯ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದು, ಅಲ್ಲೇ ತಮ್ಮ ನಟನಾ ವೃತ್ತಿಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದು, ಆಗಾಗ್ಗೆ ತಮ್ಮ ವೈಯಕ್ತಿಕ ಜೀವನದ ಝಲಕ್ ಹಂಚಿಕೊಳ್ಳುತ್ತಿರುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರಿಗೆ 94 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.


Click it and Unblock the Notifications