ಆಲಿಯಾ ಭಟ್ ಸಿನಿಮಾಕ್ಕೆ ಮತ್ತೆ ಸಂಕಷ್ಟ: ಶಾಸಕನಿಂದ ದೂರು
ಆಲಿಯಾ ಭಟ್ ನಟಿಸಿರುವ ಹೊಸ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾಕ್ಕೆ ಸತತ ವಿಘ್ನಗಳು ಎದುರಾಗುತ್ತಲೇ ಇವೆ.
ಆರಂಭದಲ್ಲಿ ಕೋವಿಡ್ ಮತ್ತು ಇತರೆ ಕಾರಣಗಳಿಂದ ಸಿನಿಮಾ ಚಿತ್ರೀಕರಣ ತಡವಾದರೆ, ಈಗ ಬಿಡುಗಡೆ ಹಂತಕ್ಕೆ ಬಂದಿರುವ ವೇಳೆಗೆ ಒಂದರ ಹಿಂದೊಂದರಂತೆ ತೊಡಕುಗಳು ಸಿನಿಮಾಕ್ಕೆ ಎದುರಾಗುತ್ತಿದೆ.
'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾವು ಕಾಮಾಟಿಪುರದ ಗಂಗೂಬಾಯಿ ಜೀವನದ ಕತೆಯಾಗಿದ್ದು, ಸಿನಿಮಾವನ್ನು ಬಿಡುಗಡೆ ಮಾಡಬಾರದೆಂದು ಗಂಗೂಬಾಯಿಯ ಪುತ್ರ ಪ್ರಕರಣ ದಾಖಲಿಸಿದ್ದರು. ಸಿನಿಮಾದ ಬಗ್ಗೆ ತೀವ್ರ ಆಕ್ಷೇಪವನ್ನು ಗಂಗೂಬಾಯಿ ಪುತ್ರ ವ್ಯಕ್ತಪಡಿಸಿದ್ದಾರೆ. ಹಲವು ಮಾಧ್ಯಮಗಳಲ್ಲಿ ಈ ಬಗ್ಗೆ ಸಂದರ್ಶನವನ್ನು ಅವರು ನೀಡಿದ್ದಾರೆ.

ಇದೀಗ ಕಾಮಾಟಿಪುರದ ಜನತೆ ಹಾಗೂ ಸ್ಥಳೀಯ ಶಾಸಕರು 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದು ಸಿನಿಮಾ ಬಿಡುಗಡೆ ತಡೆಯಬೇಕು ಎಂದು ದಾವೆ ಹೂಡಿದ್ದಾರೆ.
''ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದಲ್ಲಿ ಕಾಮಾಟಿಪುರದ ಬಗ್ಗೆ ಕೆಟ್ಟದಾಗಿ ಚಿತ್ರಿಸಲಾಗಿದೆ. ಸಿನಿಮಾ ಬಿಡುಗಡೆ ಆದರೆ ಕಾಮಾಟಿಪುರದ ನಿವಾಸಿಗಳ ಬಗ್ಗೆ ಸಾರ್ವಜನಿಕರು ಕೆಟ್ಟದಾಗಿ ಯೋಚಿಸಲಿದ್ದಾರೆ. ಇಲ್ಲಿನ ನಿವಾಸಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಲಿದ್ದಾರೆ ಹಾಗಾಗಿ ಸಿನಿಮಾವನ್ನು ಬಿಡುಗಡೆ ಮಾಡಬಾರದು ಅಥವಾ ಸಿನಿಮಾದಲ್ಲಿ ಬಳಕೆ ಮಾಡಲಾಗಿರುವ ಕಾಮಾಟಿಪುರ ಹೆಸರನ್ನು ತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ.
ಶಾಸಕ ಅಮಿನ್ ಪಟೇಲ್ ಹಾಗೂ ಕಾಮಾಟಿಪುರದ ನಿವಾಸಿಗಳು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದು, ಅರ್ಜಿ ಇನ್ನಷ್ಟೆ ವಿಚಾರಣೆಗೆ ಬರಬೇಕಿದೆ.
ಕಾಮಾಟಿಪುರದಲ್ಲಿ ಈ ಹಿಂದೆ ಹಲವು ವೇಶ್ಯಾಗೃಹಗಳಿದ್ದವು. ಆದರೆ ಕಾಲಾಂತರದಲ್ಲಿ ಸರ್ಕಾರ ಹಾಗೂ ಎನ್‌ಜಿಓಗಳ ನೆರವಿನಿಂದ ಅವೆಲ್ಲವೂ ನಿಷ್ಕ್ರಿಯವಾದವು. ಹಿಂದೆ ಕಾಮಾಟಿಪುರದ ರಾಣಿಯಂತಿದ್ದ ಗಂಗೂಬಾಯಿಯ ನಿಜ ಜೀವನದ ಕತೆಯನ್ನೇ ಆಧರಿಸಿ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಮಾಡಲಾಗಿದೆ. ಸಿನಿಮಾದಲ್ಲಿ ಆಲಿಯಾ ಭಟ್ ಗಂಗೂಬಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಸಂಜಯ್ ಲೀಲಾ ಬನ್ಸಾಲಿ.
ಗಂಗೂಬಾಯಿಯ ದತ್ತು ಪುತ್ರ ಬಾಬು ರಾವ್ ಜೀ ಶಾ ಸಹ ಸಿನಿಮಾದ ಮೇಲೆ ದಾವೆ ಹೂಡಿದ್ದು ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಕೋರಿದ್ದಾರೆ. ''ಈ ಸಿನಿಮಾ ಬಿಡುಗಡೆ ಬಳಿಕ ನನ್ನ ತಾಯಿ ವೇಶ್ಯೆ ಎಂದು ಇತಿಹಾಸದಲ್ಲಿ ದಾಖಲಾಗಲಿದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿಯೂ ಕೆಲವರು 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಿನಿಮಾದ ಹೆಸರು ಕರ್ನಾಟಕದ ಸಂಗೀತ ವಿದುಷಿ ಗಂಗೂಬಾಯಿ ಹಾನಗಲ್ ಅವರ ಹೆಸರಿನೊಂದಿಗೆ ಹೋಲಿಕೆ ಆಗುತ್ತದೆ ಹಾಗಾಗಿ ಸಿನಿಮಾದ ಹೆಸರು ಬದಲಾವಣೆ ಮಾಡಬೇಕು ಎಂದು ಕನ್ನಡ ಜಾಗೃತಿ ವೇದಿಕೆ ಒತ್ತಾಯಿಸಿದೆ.


Click it and Unblock the Notifications











