ಇಂದು ನಾನು ನಿನಗೆ ಏನೂ ಅಲ್ಲ ; 23ನೇ ವಯಸ್ಸಿನಲ್ಲಿ ಆತ್ಮ*ಹತ್ಯೆಗೆ ಶರಣಾದ ಮಾಡೆಲ್..!
ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ. ಸಮಸ್ಯೆಗಳನ್ನು ಎದುರಿಸಿ ಬದುಕುವ ಶಕ್ತಿ ಹೊಂದಬೇಕು. ಸಮಸ್ಯೆ ಬಂದಾಗ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಆದರೆ ವಿಶ್ವದೆಲ್ಲೆಡೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹಿಂದೊಮ್ಮೆ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಇದು ಸಾಮಾಜಿಕ ಸಮಸ್ಯೆ ಎಂದು ಕೂಡ ಹೇಳಿದೆ. ಪ್ರತಿ 100 ಜನರಲ್ಲಿ 70 ಜನ ಪುರುಷರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ
ಎಂದು ಎನ್‌ಸಿಆರ್‌ಬಿ { ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ } ಕೂಡ ವರದಿ ನೀಡಿದೆ. ಇಷ್ಟೇ ಅಲ್ಲದೇ ಶೇಕಡಾ 36 % ಮಹಿಳೆಯರು ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದೆ. ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿ ಪುರುಷರು ಮತ್ತು ಆತ್ಮಹತ್ಯೆಗೆ ಪ್ರಯತ್ನಿಸುವರಲ್ಲಿ ಮಹಿಳೆಯರು ಮುಂದಿರುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ.

ಜೀವನದಲ್ಲಿ ನಾನಾ ಸಮಸ್ಯೆಗಳಿಂದ ಬೇಸತ್ತು, ತಾಳ್ಮೆಯ ಕೊರತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವರ ಸಂಖ್ಯೆ ಈಗೀಗ ಹೆಚ್ಚಾಗುತ್ತಿದೆ. ಇದಕ್ಕೆ ಅಂಜಲಿ ವರ್ಮೊರಾ ಆತ್ಮಹತ್ಯೆ ಪ್ರಕರಣ ಮತ್ತೊಂದು ಉದಾಹರಣೆ.
ಹೌದು, ಅಂಜಲಿ ವರ್ಮೋರಾ ಗುಜರಾತ್‌ನ ಖ್ಯಾತ ಮಾಡೆಲ್. 23ರ ಹರೆಯದ ಅಂಜಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ರೀಲ್ಸ್‌ಗಳನ್ನು ಕೂಡ ಮಾಡುತ್ತಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ 37,000 ಫಾಲೋವರ್ಸ್‌ಗಳನ್ನು ಹೊಂದಿದ್ದವರು ಅಂಜಲಿ ವರ್ಮೋರಾ.
ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ ಇನ್ನೂ ಬಾಳಿ ಬದುಕಬೇಕಿದ್ದ ಅಂಜಲಿ ವರ್ಮೋರಾ, ಸೂರತ್ ನಗರದ ಅಥ್ವಾ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ. ಶನಿವಾರ ರಾತ್ರಿ ಫ್ಯಾನ್‌ಗೆ ಸ್ಕಾರ್ಫ್ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅಂಜಲಿ ಖಿನ್ನತೆಯಿಂದ ಬಳಲುತ್ತಿದ್ದರು ಮಾನಸಿಕ ಒತ್ತಡಕ್ಕೊಳಗಾಗಿದ್ದರು ಎನ್ನುವುದು ತಿಳಿದು ಬಂದಿದೆ. ಅಂಜಲಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ಕಳುಹಿಸಿದ್ದು, ಮನೆಯಲ್ಲಿ ಡೆತ್ ನೋಟ್ ಸಿಕ್ಕಿಲ್ಲ ಎಂದು ವರದಿಯಾಗಿದೆ.
ಇನ್ನು ಅಂಜಲಿ ಫೋನ್‌ನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದು ಸಂಬಂಧಿಕರಿಂದ ಹೇಳಿಕೆ ಪಡೆದಿದ್ದಾರೆ. ಮತ್ತೊಂದು ಕಡೆ ಅಂಜಲಿ ಖಿನ್ನತೆ ಮತ್ತು ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಇರಬಹುದು ಎನ್ನುವ ಅನುಮಾನ ಕೂಡ ಇದೀಗ ಪೊಲೀಸರಿಗೆ ಕಾಡುತ್ತಿದೆ.
ಯಾಕೆಂದರೆ ಕಳೆದ ಕೆಲ ದಿನಗಳಿಂದ ಅಂಜಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ನಿರಂತರವಾಗಿ ಭಾವನಾತ್ಮಕವಾದ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಆತ್ಮಹತ್ಯೆಗೆ ಶರಣಾಗುವ ಮುನ್ನ 'ಇಂದು ನಾನು ನಿನಗೆ ಏನೂ ಅಲ್ಲ ಎಂದು ಅರಿತುಕೊಂಡೆ' ಎಂದು ಒಂದು ಕಡೆ ಪೋಸ್ಟ್ ಹಂಚಿಕೊಂಡಿರುವ ಅಂಜಲಿ ಮತ್ತೊಂದು ಕಡೆ 'ನಾವು ಎಲ್ಲವನ್ನೂ ಕಳೆದುಕೊಂಡರೂ ಕೂಡ ಅದು ದೊಡ್ಡ ವಿಷಯವಲ್ಲ, ಆದರೆ ನೀವು ಪ್ರೀತಿಯನ್ನು ಕಳೆದುಕೊಂಡರೆ ಅದರಿಂದ ತುಂಬಾ ನೋವಾಗುತ್ತೆ' ಎಂದು ಬರೆದುಕೊಂಡಿದ್ದರು.
ಈ ಹಿನ್ನೆಲೆ ಗೆಳೆಯನ ಜೊತೆ ಅಂಜಲಿ ಬ್ರೇಕಪ್ ಮಾಡಿಕೊಂಡಿರಬಹುದೆನ್ನುವ ಶಂಕೆಯನ್ನು ವ್ಯಕ್ತಪಡಿಸಿರುವ ಪೊಲೀಸರು ಅಂಜಲಿ ಗೆಳೆಯನ ಹುಡುಕಾಟವನ್ನು ಕೂಡ ಶುರು ಮಾಡಿದ್ದಾರೆ ಎಂದು ಟಿವಿ9 ತೆಲುಗು ವಾಹಿನಿ ವರದಿಯನ್ನು ಮಾಡಿದೆ. ಅಂಜಲಿ ಗೆಳೆಯ ಸಿಕ್ಕರೆ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಸಿಗಬಹುದು ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡುವ ಕನಸು ಕಂಡಿದ್ದ ಅಂಜಲಿ ರೆವಿನ್ಯೂ ಬೈಲ್‌ಕ್ಯುಜಿಯರ್ ಏಜೆನ್ಸಿಯಲ್ಲಿ ಕೂಡ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.
Disclaimer : ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 - 25497777.


Click it and Unblock the Notifications











