ಸನೋಜ್ ಮಿಶ್ರಾ ನನ್ನ ಎದೆಗೆ ಕೈ ಹಾಕಿದ್ದ.. ಆದ್ರೆ ಕುಟುಂಬಸ್ಥರು ಏನಂದ್ರು ಗೊತ್ತಾ?- ಮೊನಾಲಿಸಾ ಕಣ್ಣೀರು
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಮದುವೆ ವಿಚಾರ ಬೇರೆ ಬೇರೆ ತಿರುವು ಪಡೆದುಕೊಳ್ತಿದೆ. ಪೋಷಕರ ಒಪ್ಪಿಗೆ ಇಲ್ಲದೇ ಆಕೆ ಪ್ರಿಯಕರನ ಜೊತೆ ಮದುವೆ ಆಗಿದ್ದಾರೆ. ಇದು ಲವ್ ಜಿಹಾದ್ ಎಂದು ನಿರ್ದೇಶಕ ಸನೋಜ್ ಮಿಶ್ರಾ ಆರೋಪಿಸಿರುವುದು ಗೊತ್ತೇಯಿದೆ. ಮೊನಾಲಿಸಾ ನಟನೆಯ ಮೊದಲ ಚಿತ್ರವನ್ನು ಸನೋಜ್ ನಿರ್ಮಿಸುತ್ತಿದ್ದಾರೆ.
ತಮ್ಮದು ಲವ್ ಜಿಹಾದ್ ಎಂದು ಹೇಳಿದ ಸನೋಜ್ ಮಿಶ್ರಾ ವಿರುದ್ಧ ಮೊನಾಲಿಸಾ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಆ ವ್ಯಕ್ತಿ ನನ್ನ ಖಾಸಗಿ ಅಂಗಾಂಗ ಮುಟ್ಟಿದ್ದ. ನಮ್ಮ ಕುಟುಂಬ ಸದಸ್ಯರಿಗೆ ಹೇಳಿದ್ರೆ, ಯಾರು ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಆಕೆ ಸುದ್ದಿಗೋಷ್ಠಿಯಲ್ಲಿ ಹೇಳಿರುವುದು ವೈರಲ್ ಆಗ್ತಿದೆ. 'ದಿ ಡೈರಿ ಆಫ್ ಮಣಿಪುರ' ಎಂಬ ಚಿತ್ರವನ್ನು ಸನೋಜ್ ಮಿಶ್ರಾ ನಿರ್ಮಿಸಿ ನಿರ್ದೇಶನ ಮಾಡುತ್ತಿದ್ದರು. ಚಿತ್ರದಲ್ಲಿ ಮೊನಾಲಿಸಾ ಹಾಗೂ ಅಮೀರ್ ರಾವ್ ನಾಯಕ, ನಾಯಕಿಯಾಗಿ ನಟಿಸುತ್ತಿದ್ದರು.

ಕೊಚ್ಚಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮೊನಾಲಿಸಾ ಭೋಸ್ಲೆ ಮಾತನಾಡಿದ್ದಾರೆ. "ಸನೋಜ್ ಮಿಶ್ರಾ ಒಳ್ಳೆ ವ್ಯಕ್ತಿ ಅಲ್ಲ. ಚಿತ್ರೀಕರಣದ ವೇಳೆ ಹಲವು ಬಾರಿ ನನ್ನ ಖಾಸಗಿ ಅಂಗಗಳನ್ನು ಮುಟ್ಟಿದ್ದ. ನಾನು ಈ ವಿಚಾರವನ್ನು ನನ್ನ ಕುಟುಂಬ ಸದಸ್ಯರಿಗೆ ಹೇಳಿದೆ. ಆದರೆ ಪ್ರಯೋಜನವಾಗಲಿಲ್ಲ. ಇದು ನಿನ್ನ ಮೊದಲ ಸಿನಿಮಾ ಸುಮ್ಮನಿರು ಎನ್ನುವಂತೆ ಮಾತನಾಡಿದ್ರು. ಮೊದಲ ಸಿನಿಮಾ ಅನ್ನುವ ಕಾರಣಕ್ಕೆ ನಾನು ಅತ್ಯಾ*ಚಾರಕ್ಕೆ ಒಳಗಾಗಬೇಕೆ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮೊನಾಲಿಸಾ ಜೊತೆ ಪತಿ ಫರ್ಮಾನ್ ಕೂಡ ಹಾಜರಿದ್ದರು. ನಟಿಯಾಗುವ ಕನಸು ಗೊತ್ತು ಬರುವ ಯುವತಿಯರಿಗೆ ಸನೋಜ್ ಮಿಶ್ರಾ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ ಎಂದು ಮೊನಾಲಿಸಾ ಆರೋಪಿಸಿದ್ದಾರೆ. "ನಾನು ಫರ್ಮಾನ್‌ನನ್ನು ಮದುವೆ ಆಗಿದ್ದು ಸನೋಜ್ ಮಿಶ್ರಾಗೆ ಇಷ್ಟವಿಲ್ಲ. ಅದೇ ಕಾರಣಕ್ಕೆ ಲವ್ ಜಿಹಾದ್ ಎಂದು ಬಿಂಬಿಸಿ ಕೋಮು ಸಂಘರ್ಷ ಸೃಷ್ಟಿಸಲು ಮುಂದಾಗಿದ್ದಾರೆ. ಜೀವ ಬೆದರಿಕೆ ಕರೆಗಳು ಬರ್ತಿವೆ. ನನಗೆ ಅನ್ಯಾಯವಾದಾಗ ಜೊತೆಗೆ ನಿಲ್ಲದ ಕುಟುಂಬ ಈಗ ಆರೋಪ ಮಾಡುತ್ತಿದ್ದಾರೆ ಎಂದು ಮೊನಾಲಿಸಾ ಅಲವತ್ತುಕೊಂಡಿದ್ದಾರೆ.
ಮೊನಾಲಿನಾ ಮದುವೆ ಬಗ್ಗೆ ಸನೋಜ್ ಸುದೀರ್ಘವಾಗಿ ಪೋಸ್ಟ್ ಮಾಡಿದ್ದರು. ಇದು ಲವ್ ಜಿಹಾದ್ ಎಂದು ಆರೋಪಿಸಿ ದೂರು ನೀಡಿದ್ದರು. ನಿಷೇಧಿತ ಪಿಎಫ್‌ಐ ಸಂಘಟನೆ ಇವರಿಬ್ಬರ ಮದುವೆಗೆ ಬೆಂಬಲ ನೀಡಿದೆ ಎಂದು ಆರೋಪಿಸಿದ್ದರು. ಮಾರ್ಚ್ 11ರಂದು ಕೇರಳದ ತಿರುವನಂತಪುರಂ ಸಮೀಪದ ಪೂವರ್‌ನಲ್ಲಿರುವ ಅರುಮನೂರ್ ಶ್ರೀ ನೈನಾರ್ ದೇವಸ್ಥಾನದಲ್ಲಿ ಮೊನಲಿಸಾ ಹಾಗೂ ಫರ್ಮಾನ್ ಮದುವೆ ನಡೆದಿತ್ತು. ಇಬ್ಬರದ್ದು 6 ತಿಂಗಳ ಲವ್‌ಸ್ಟೋರಿ.
ಮಲಯಾಳಂನ 'ನಾಗಮ್ಮ' ಚಿತ್ರದಲ್ಲಿ ಮೊನಾಲಿಸಾ ನಟಿಸುತ್ತಿದ್ದಾರೆ. ಮಹಾರಾಷ್ಟ್ರ ಮೂಲದ ಫರ್ಮಾನ್ ಕೂಡ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ಸಮಯದಲ್ಲೇ ಇಬ್ಬರ ಭೇಟಿ, ಪರಿಚಯ, ಸ್ನೇಹ ಶುರುವಾಗಿತ್ತು. ಬಳಿಕ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದಾರೆ. ಫರ್ಮಾನ್ ಮದುವೆ ಬೇಡ ಎಂದರೂ ನಾನೇ ಮದುವೆಗೆ ಒಪ್ಪಿಸಿದೆ ಎಂದು ಆಕೆ ಹೇಳಿದ್ದರು.
ಮಗಳ ಮದುವೆ ಬಗ್ಗೆ ತಂದೆ ಜಯಸಿಂಗ್ ಭೋಸ್ಲೆ ಮಾತನಾಡಿದ್ದರು. "ಕೇರಳದಲ್ಲಿ ನಟನೆ ಕಲಿಯಲು, ಸಿನಿಮಾದಲ್ಲಿ ನಟಿಸಲು ಮೊನಾಲಿಸಾಳನ್ನು ಕಳಿಸಿಕೊಡಿ ಎಂದು ಕೆಲವರು ಬಂದು ಕರೆದುಕೊಂಡು ಹೋದ್ರು. ಈಗ ನೋಡಿದ್ರೆ ಇಬ್ಬರೂ ಮದುವೆ ಆಗಿಬಿಟ್ಟಿದ್ದಾರೆ. ಮದುವೆ ವಿಷಯ ಹೇಳಿದಾಗ ನಾನು ಬೇಡ, ಊರಿಗೆ ಹೋಗೋಣ ಎಂದೆ. ಆಕೆಗೆ 18 ವರ್ಷ ವಯಸ್ಸಾಗಿರುವುದರಿಂದ ಇಷ್ಟಪಟ್ಟವರನ್ನು ಮದುವೆ ಆಗಬಹುದು ಎಂದು ಪೊಲೀಸರು ಹೇಳಿದ್ರು. ಅದಕ್ಕೆ ಏನು ಮಾಡಲು ಆಗಲಿಲ್ಲ" ಎಂದಿದ್ದರು.


Click it and Unblock the Notifications











