ಕುಂಭಮೇಳದ ವೈರಲ್ ಹುಡುಗಿ ಮದುವೆಗೆ ಟ್ವಿಸ್ಟ್; ಪತಿ ಫರ್ಮಾನ್ ಖಾನ್ ವಿರುದ್ಧ ಫೋಕ್ಸೊ ಕೇಸ್
ನಟಿ ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಅಂತರ್-ಧರ್ಮೀಯ ವಿವಾಹ ವಿವಾದ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಇದು ಲವ್ ಜಿಹಾದ್ ಎಂದು ಕೆಲವರು ಆರೋಪಿಸಿದ್ದರು. ಇದೀಗ ಮೊನಾಲಿಸಾ ಪತಿ ಫರ್ಮಾನ್ ಖಾನ್ ವಿರುದ್ಧ ಫೋಕ್ಸೊ ಕೇಸ್ ದಾಖಲಾಗಿದೆ. ಪ್ರಕರಣದಲ್ಲಿ ಆತ ಜೈಲಿಗೆ ಹೋಗುವ ಸಾಧ್ಯತೆ ದಟ್ಟವಾಗಿದೆ.
ಮಾರ್ಚ್ 11ರಂದು ಕೇರಳದ ತಿರುವನಂತಪುರಂನಲ್ಲಿರುವ ಅರುಮನೂರ್ ಶ್ರೀ ನೈನಾರ್ ದೇವಸ್ಥಾನದಲ್ಲಿ ಪೊಲೀಸ್ ಭದ್ರತೆ ನಡುವೆ ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಮದುವೆ ನಡೆದಿತ್ತು. ಮಲಯಾಳಂ ಚಿತ್ರದಲ್ಲಿ ನಟಿಸೋಕೆ ಮೊನಾಲಿಸಾ ಆಯ್ಕೆ ಆಗಿದ್ದಳು. ಆ ಚಿತ್ರದ ಚಿತ್ರೀಕರಣದ ಸೆಟ್‌ನಲ್ಲಿ ಫರ್ಮಾನ್ ಜೊತೆ ಆಕೆ ಲವ್ ಆಗಿತ್ತು. ಪೋಷಕರ ವಿರೋಧದ ನಡುವೆ ಆಕೆ ಪ್ರಿಯಕರನ ಜೊತೆ ಮದುವೆ ಆಗಿದ್ದರು.

ಮೊನಾಲಿಸಾ ಇನ್ನು ಅಪ್ರಾಪ್ತೆ ಎನ್ನುವ ಆರೋಪ ಕೇಳಿಬಂದಿತ್ತು. NCST ತನಿಖೆ ವೇಳೆ ಮೊನಾಲಿಸಾಗೆ ಮದುವೆಯ ಸಮಯದಲ್ಲಿ ಆಕೆಗೆ 16 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಹಾಗಾಗಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ, ಅಪಹರಣ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಕುಂಭಮೇಳದ ಸಮಯದಲ್ಲಿ ಮೊನಾಲಿಸಾ ಭೋಸ್ಲೆ ಎಂಬ ಯುವತಿ ರುದ್ರಾಕ್ಷಿ ಮತ್ತು ಹೂಮಾಲೆ ಮಾರುತ್ತ ತನ್ನ ಸುಂದರ ಕಣ್ಣುಗಳಿಂದ ಗಮನ ಸೆಳೆದಿದ್ದಳು. ನೋಡನೋಡುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಳು.
ಖಾರ್ಗೋನ್‌ನ ಮಹೇಶ್ವರ ಪಟ್ಟಣದ ಮೂಲದ ಮೊನಾಲಿಸಾ ಭೋಸ್ಲೆ ಪ್ರಯಾಗ್ ರಾಜ್ ಕುಂಭಮೇಳದಿಂದ ರಾತ್ರೋರಾತ್ರಿ ಫೇಮಸ್ ಆಗಿಬಿಟ್ಟಿದ್ದಳು. ಕೊನೆಗೆ ಪೋಷಕರ ವಿರೋಧದ ನಡುವೆ ಮದುವೆ ಆಗಿದ್ದಳು. ಆಕೆಗೆ 18 ವರ್ಷ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಪೊಲೀಸರು ಮದುವೆಗೆ ಭದ್ರತೆ ಒದಗಿಸಿದ್ದರು. ಆಕೆಯ ತಂದೆ ಕೂಡ ಮದುವೆ ಆಗದಂತೆ ಮಗಳ ಮನವೊಲಿಸಲು ಪ್ರಯತ್ನಿಸಿದ್ದರು. ರಕ್ಷಣೆ ಕೋರಿ ಮೊನಾಲಿನಾ ಹಾಗೂ ಫರ್ಮಾನ್ ಕೇರಳದ ತಿರುವಂತಪುರಂನ ಥಂಪನೂರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಪೊಲೀಸರು ಮೊನಾಲಿಸಾ ತಂದೆಯನ್ನು ಠಾಣೆಗೆ ಕರೆಸಿ ಆಕೆಗೆ 18 ವರ್ಷ ವಯಸ್ಸಾಗಿದೆ. ಹಾಗಾಗಿ ತಾನು ಯಾರೊಟ್ಟಿಗೆ ಇರಬೇಕು ಎಂದು ನಿರ್ಧರಿಸುವ ಕಾನೂನುಬದ್ಧ ಹಕ್ಕು ಹೊಂದಿದ್ದಾರೆ ಎಂದು ಹೇಳಿದ್ದರು. ಹಾಗಾಗಿ ಮೊನಾಲಿಸಾ ತಂದೆ ಸುಮ್ಮನಾಗಿದ್ದರು. ಆದರೆ ಆಕೆಗೆ ಇನ್ನು 18 ವರ್ಷ ವಯಸ್ಸಾಗಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು.
ಸದ್ಯ ದಾಖಲೆಗಳಲ್ಲಿ ಮೊನಾಲಿನಾ ಜನ್ಮ ದಿನಾಂಕದಲ್ಲಿ ವ್ಯತ್ಯಾಸ ಕಂಡುಬಂದಿದೆ ಎನ್ನಲಾಗ್ತಿದೆ. ಹಾಗಾಗಿ ಅಪಹರಣ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಫರ್ಮಾನ್ ವಿರುದ್ಧ ಮೊನಾಲಿಸಾಳ ಹುಟ್ಟೂರು ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ಮೊನಾಲಿಸಾ ಮದುವೆ ಬಗ್ಗೆ ತಂದೆ ಜಯಸಿಂಗ್ ಭೋಸ್ಲೆ ಹಿಂದೆ ಪ್ರತಿಕ್ರಿಯಿಸಿದ್ದರು. "ಕೇರಳದಲ್ಲಿ ನಟನೆ ಕಲಿಯಲು, ಸಿನಿಮಾದಲ್ಲಿ ನಟಿಸಲು ಮೊನಾಲಿಸಾಳನ್ನು ಕಳಿಸಿಕೊಡಿ ಎಂದು ಒಂದು ದಿನ ಕೆಲವರು ಬಂದು ಕರೆದುಕೊಂಡು ಹೋದ್ರು. ಈಗ ನೋಡಿದ್ರೆ ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಮದುವೆ ಆಗಿದ್ದಾರೆ. ನಾನು ಈ ಮದುವೆ ಬೇಡ, ಊರಿಗೆ ಹೋಗೋಣ ಎಂದೆ. ಆದರೆ ಆಕೆಗೆ 18 ವರ್ಷ ವಯಸ್ಸಾಗಿರುವುದರಿಂದ ಇಷ್ಟಪಟ್ಟವರನ್ನು ಮದುವೆ ಆಗಬಹುದು ಎಂದು ಪೊಲೀಸರು ಹೇಳಿದ್ರು. ಹಾಗಾಗಿ ನಾನು ಏನು ಮಾಡಲು ಸಾಧ್ಯವಾಗಲಿಲ್ಲ" ಎಂದು ತಿಳಿಸಿದ್ದರು.
ಇನ್ನು ಮೊನಾಲಿಸಾಳ ಚಿಕ್ಕಪ್ಪ ಮಾತನಾಡಿ "ಸಿನಿಮಾ ಅವಕಾಶದ ನೆಪವೊಡ್ಡಿ ಆಕೆಯನ್ನು ಕೇರಳಕ್ಕೆ ಕರೆಸಿದ್ದರು. ನಾವು ವಿದ್ಯಾವಂತರಲ್ಲ, ಇದೆಲ್ಲಾ ಹೇಗಾಯ್ತು ಗೊತ್ತಿಲ್ಲ. ಯಾರಾದರೂ ಆಕೆಯ ಮೇಲೆ ಪ್ರಭಾವಬೀರಿ ಇದೆಲ್ಲಾ ನಡೆದಿರಬಹುದು. ಈಗ ಆಕೆ ನಿರ್ಧಾರ ಒಪ್ಪಿಕೊಳ್ಳದೇ ಕುಟುಂಬಕ್ಕೆ ಬೇರೆ ದಾರಿಯಿಲ್ಲ" ಎಂದಿದ್ದರು.


Click it and Unblock the Notifications











