ಮುಸ್ಲಿಂ ಯುವಕನ ಜೊತೆ ಕುಂಭಮೇಳ ಮೊನಾಲಿಸಾ ಮದುವೆ; ಇದು 'ಲವ್ ಜಿಹಾದ್' ಎಂದ ನಿರ್ದೇಶಕ
ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿ ಮೊನಾಲಿಸಾ ಬೋಂಸ್ಲೆ ರಾತ್ರೋರಾತ್ರಿ ಫೇಮಸ್ ಆಗಿದ್ದು ಗೊತ್ತೇಯಿದೆ. ತನ್ನ ಸುಂದರ ಕಣ್ಣುಗಳಿಂದಲೇ ಮೋಡಿ ಮಾಡಿದ್ದ ಚೆಲುವೆಗೆ ಇದ್ದಕ್ಕಿದ್ದಂತೆ ನೇಮು ಫೇಮು ಸಂಪಾದಿಸಿದ್ದಳು. ಇದೀಗ ದಿಢೀರನೆ ಮದುವೆಯಾಗಿ ಮೊನಾಲಿಸಾ ಅಚ್ಚರಿ ಮೂಡಿಸಿದ್ದಾಳೆ.
ಮುಸ್ಲಿಂ ಯುವಕ ಫರ್ಮಾನ್ ಎಂಬುವವನ ಜೊತೆ ಪೋಷಕರ ವಿರೋಧದ ನಡುವೆ ಮೊನಾಲಿಸಾ ಮದುವೆ ನಡೆದಿದೆ. 6 ತಿಂಗಳಿನಿಂದ ಪ್ರೀತಿಸುತ್ತಿದ್ದ ಜೋಡಿ ಮದುವೆಯಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬುಧವಾರ(ಮಾರ್ಚ್ 12) ಮೊನಾಲಿಸಾ ತಮ್ಮ ತಂದೆ ವಿಜಯ್ ಸಿಂಗ್ ಭೋಸ್ಲೆ ವಿರುದ್ಧ ಕೇರಳದ ತಿರುವನಂತಪುರಂನ ಥಂಪನೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಬೇರೆ ಯುವಕನನ್ನು ಮದುವೆ ಆಗುವಂತೆ ತಂದೆ ಒತ್ತಡ ಹೇರುತ್ತಿದ್ದಾರೆ ಎಂದು ದೂರು ನೀಡಿದ್ದಳು.

ತಾನು ಹಾಗೂ ಮೊಹಮ್ಮದ್ ಫರ್ಮಾನ್ ಇಷ್ಟಪಟ್ಟು ಮದುವೆ ಆಗುತ್ತಿರುವುದಾಗಿ ಜೋಡಿ ಪೊಲೀಸ್ ಠಾಣೆಯಲ್ಲಿ ಹೇಳಿತ್ತು. ತಂದೆ ತನ್ನನ್ನು ಹಿಂದಕ್ಕೆ ಕರೆದುಕೊಂಡು ಹೋಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಳು. ಬಳಿಕ ಪೊಲೀಸರ ಅನುಮತಿ ಪಡೆದು ಕೇರಳದ ದೇವಸ್ಥಾನದಲ್ಲಿ ಪ್ರೀತಿಸಿದ ಯುವಕನ ಜೊತೆ ಮದುವೆ ನಡೆದಿತ್ತು. ಆದರೆ ಇದು ಲವ್ ಜಿಹಾದ್ ಎಂದು ಸಿನಿಮಾ ನಿರ್ದೇಶಕ ನಿರ್ದೇಶಕ ಸನೋಜ್ ಮಿಶ್ರಾ ಆರೋಪಿಸಿದ್ದಾರೆ.
ಮೊನಾಲಿನಾ ನಟಿಸಿದ್ದ 'ದಿ ಡೈರಿ ಆಫ್ ಮಣಿಪುರ' ಚಿತ್ರವನ್ನು ಸನೋಜ್ ಮಿಶ್ರಾ ನಿರ್ಮಾಣ ಮಾಡಿದ್ದರು. ಇದೀಗ ಆಕೆಯ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ. "ಗಂಗೆಯ ಮಗಳೆಂದು ಭಾವಿಸಿದ್ದ ಹುಡುಗಿ, ಆಕೆಗಾಗಿ ನಾನು 10 ಕೋಟಿ ಸಾಲ ಪಡೆದು ಜೈಲಿಗೆ ಹೋಗಿದ್ದೆ, ಒಬ್ಬ ಮುಸ್ಲಿಂ ಯುವಕನ ಜೊತೆ ಓಡಿಹೋಗಿ ಎಲ್ಲವನ್ನೂ ನಾಶಮಾಡಿದ್ದಾಳೆ. ಇದು ಪ್ರೀತಿಯ ಹೋರಾಟ ಅಲ್ಲ, ಲವ್ ಜಿಹಾದ್" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಮೊನಾಲಿಸಾಳಿಗೆ ತಾನು ಪ್ರೀತಿಯನ್ನು ಗೆದ್ದಿದ್ದೀನಿ ಎನಿಸಿರಬಹುದು. ಆದರೆ ವಾಸ್ತವದಲ್ಲಿ, ಇದು ಲವ್ ಜಿಹಾದ್, ಅದಕ್ಕೆ ಅವಳು ಈಗಾಗಲೇ ಬಲಿಯಾಗಿದ್ದಾಳೆ ಎಂದು ಸನೋಜ್ ಮಿಶ್ರಾ ಹೇಳಿದ್ದಾರೆ. "ಮೊನಾಲಿಸಾಳ ಮದುವೆಗೆ ಮ್ಯಾನೇಜರ್ ಮತ್ತು ಬ್ರೋಕರ್ ಸಹಕಾರವೂ ಇದೆ. ಇಂದು ಆತ ನಿರುದ್ಯೋಗಿ. ಮೊನಾಲಿಸಾಳಿಗೆ ಶಿಕ್ಷಣ ನೀಡಲು ನಾನು ಅವನನ್ನು ಆರಿಸಿಕೊಂಡಿದ್ದೆ" ಎಂದು ಪೋಸ್ಟ್ ಮಾಡಿದ್ದಾರೆ.
ಮೊನಾಲಿಸಾಗೆ ಸಿನಿಮಾ ಅವಕಾಶ ಕೊಟ್ಟಿದ್ದ ಸನೋಜ್ ಮಿಶ್ರಾ ಅತ್ಯಾ*ಚಾರ ಹಾಗೂ ಬೆದರಿಕೆ ಆರೋಪದಡಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದರು. ಈ ಬಗ್ಗೆ ಕೂಡ ಬರೆದುಕೊಂಡಿದ್ದಾರೆ. "ನನ್ನನ್ನು ಸುಳ್ಳು ಆರೋಪಗಳ ಮೇಲೆ ಜೈಲಿಗೆ ಕಳುಹಿಸಿದರು. ಗೌರವಾನ್ವಿತ ಯೋಗಿ ಆದಿತ್ಯನಾಥ್ ಅವರ ಭವ್ಯ ಕಾರ್ಯಕ್ರಮವಾದ ಮಹಾ ಕುಂಭಮೇಳವನ್ನು ಹಾಳುಮಾಡುವುದು ಏಕೈಕ ಉದ್ದೇಶವಾಗಿತ್ತು. ನಾನು ಜೈಲಿನಲ್ಲಿದ್ದಾಗ ಕಥೆಯನ್ನು ಬರೆದೆ, ಮತ್ತು ಚಿತ್ರವನ್ನು ಪೂರ್ಣಗೊಳಿಸಿದೆ. ಮೊನಾಲಿಸಾ ತಾಯಿಯಿಂದ ದೂರಾಗಿ ಬಹಳ ನೋವು ಅನುಭವಿಸಿದ್ದಳು. ತಾಯಿ ಬಳಿ ಹೋಗಲು ಹವಣಿಸುತ್ತಿದ್ದಳು. ಆದರೆ ಇಂದು ಆಕೆ ತೆಗೆದುಕೊಂಡ ಮದುವೆ ನಿರ್ಧಾರ ಸರಿಯಲ್ಲ" ಎಂದಿದ್ದಾರೆ.
ಪೋಷಕರ ವಿರೋಧದ ನಡುವೆ ಕೇರಳದ ಪೂವಾರ್ ಬಳಿಯ ಅರುಮನೂರ್ ದೇವಸ್ಥಾನದಲ್ಲಿ ಮೊನಾಲಿಸಾ ಹಾಗೂ ಮೊಹಮದ್ ಫರ್ಮಾನ್ ಮದುವೆ ನಡೆದಿದೆ. ಅಂದಹಾಗೆ ಮೊನಾಲಿಸಾ ಹುಟ್ಟೂರು ಇಂದೋರ್. ಈಗ ಆಕೆ ಕೈ ಹಿಡಿದಿರುವ ಯುವಕ ಮಹಾರಾಷ್ಟ್ರದವನು. ಸಿನಿಮಾ ಶೂಟಿಂಗ್ ಸೆಟ್‌ನಲ್ಲೇ ಲವ್ ಆಗಿತ್ತು. ಇಬ್ಬರದ್ದು ಬೇರೆ ಬೇರೆ ರಾಜ್ಯ ಆಗಿದ್ದರೂ ಕೇರಳಕ್ಕೆ ಹೋಗಿ ಮದುವೆ ಆಗಿದ್ದಾರೆ.
ತಮ್ಮ ಮದುವೆಗೆ ಕೇರಳ ಸೂಕ್ತ ಎಂದು ಜೋಡಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿದೆ. ಮೊನಾಲಿಸಾ ಕೊರಳಿಗೆ ತಾಳಿ ಕಟ್ಟಿ ಮಹಮದ್ ಫರ್ಮಾನ್ ಹಣೆಗೆ ಕುಂಕುಮ ಇಟ್ಟಿದ್ದಾನೆ. ಸ್ಥಳೀಯರು ಹಾಗೂ ರಾಜಕೀಯ ಮುಖಂಡರು ಸಾಥ್ ಕೊಟ್ಟಿದ್ದರು. ಪೊಲೀಸರು ಜೋಡಿಗೆ ಭದ್ರತೆ ಒದಗಿಸಿದ್ದಾರೆ. ಮದುವೆ ಬಳಿಕ ಜೋಡಿ "ರಿಯಲ್ ಕೇರಳ ಸ್ಟೋರಿ" ಎಂದು ಬರೆದ ನಾಮಫಲಕ ಪ್ರದರ್ಶನ ಮಾಡಿದ್ದಾರೆ. ಆ ವೀಡಿಯೋ ಫುಲ್ ವೈರಲ್ ಆಗ್ತಿದೆ.


Click it and Unblock the Notifications











