ಸೊಂಟಕ್ಕೆ ಕೈಹಾಕಿದ ದುರುಳರು ; ಮಧ್ಯದ ಬೆರಳು ತೋರಿಸಿದ ಕೆಜಿಎಫ್ ನಟಿ- ಭೇಷ್ ಎಂದ ತಾರೆಯರು
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂಗಿಕ ಹಿಂಸೆ ಅನುಭವಿಸುತ್ತಾರೆ. ಚಿತ್ರರಂಗದಲ್ಲಿರುವ ನಾಯಕಿಯರು.. ಗಾಯಕಿಯರು ಕೂಡ ಇದರಿಂದ ಹೊರತಾಗಿಲ್ಲ. ಅಭಿಮಾನದ ಹೆಸರಿನಲ್ಲಿ ಇಲ್ಲಿ ಹಲವರು ಮಾಡಬಾರದ್ದನ್ನೆಲ್ಲಾ ಮಾಡಲು ಮುಂದಾಗುತ್ತಾರೆ. ಗುಂಪಿನಲ್ಲಿ ಸೇರಿಕೊಂಡು ಹೆಣ್ಣು ಮಕ್ಕಳ ಖಾಸಗಿ ಭಾಗಕ್ಕೆ ಕೈ ಹಾಕುವ ಪ್ರಯತ್ನ ಮಾಡುತ್ತಾರೆ.
ಮತ್ತೂ ಕೆಲವರು ಮಾತನಾಡಬಾರದ ಮಾತುಗಳನ್ನಾಡುತ್ತಾರೆ. ಸಾರ್ವಜನಿಕ ಸ್ಥಳದಲ್ಲಿಯೇ ನರಕ ದರ್ಶನ ಮಾಡಿಸುತ್ತಾರೆ. ಈ ಮೂಲಕ ತಮ್ಮ ವಿಕೃತ ಮನಸ್ಥಿತಿಯ ಪ್ರದರ್ಶನ ಮಾಡುತ್ತಾರೆ. ಕೆಲವು ಮಹಿಳೆಯರು ಆ ಕ್ಷಣದಲ್ಲಿಯೇ ಇಂತಹ ನೀಚ ಕೆಲಸಗಳನ್ನು ಖಂಡಿಸುತ್ತಾರೆ. ಎಲ್ಲರ ಎದುರೇ ಮಾನ ಮರ್ಯಾದೆ ಹರಾಜು ಹಾಕುತ್ತಾರೆ. ಉದಾಹರಣೆಗೆ ಮೌನಿ ರಾಯ್.

ಹೌದು, ಮೌನಿ ರಾಯ್.. ''ಕೆ.ಜಿ.ಎಫ್'' ಚಿತ್ರದ ಹಿಂದಿ ವರ್ಷನ್‌ನಲ್ಲಿ ಹೆಜ್ಜೆ ಹಾಕಿದ್ದ ಮದನಾರಿ. ನೋಡಲು ಶಿಲಾಬಾಲಿಕೆಯಂತೆ ಇರುವ ಮೌನಿ ತಮ್ಮ ಕನಸಿನ ಈ ಪ್ರಯಾಣವನ್ನ ಆರಂಭ ಮಾಡಿದ್ದು ಕಿರುತೆರೆಯ ಮೂಲಕ. ''ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ'' ಧಾರಾವಾಹಿ ಇವರ ಮೊದಲ ಹೆಜ್ಜೆ.
ಆ ನಂತರ ''ಕಸ್ತೂರಿ''.. ''ದೇವೊಂಕೇ ದೇವ್ ಮಹಾದೇವ್'' ಸೇರಿ ಕೆಲ ಧಾರಾವಾಹಿ ಮಾಡಿದ್ದ ಮೌನಿ ರಾಯ್ ಅದೃಷ್ಟ ಏಕ್ತಾ ಕಪೂರ್ ಕಚೇರಿಯಲ್ಲಿತ್ತು. ಏಕ್ತಾ ನಿರ್ಮಾಣದ ''ನಾಗಿನ್'' ಬೇಕಿದ್ದ ಹೆಸರನ್ನ ಇವರಿಗೆ ತಂದು ಕೊಡ್ತು. ಅಲ್ಲಿಂದಾಚೆ.. ಮೌನಿ ಒಂದಾದ ಮೇಲೊಂದು ಅವಕಾಶ ಪಡೆದರು. ಐಟಂ ಹಾಡುಗಳಿಗೆ ಹೆಜ್ಜೆ ಹಾಕ್ತಾನೇ, ನಾಯಕಿಯಾಗುವ ''ಗೋಲ್ಡ್''ನ ಅವಕಾಶ ಪಡೆದರು. ''ಬ್ರಹ್ಮಾಸ್ತ್ರ'' ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದರು. ಎರಡು ವರ್ಷದ ಹಿಂದೆ ಸೂರಜ್ ನಂಬಿಯಾರ್ ಅವರನ್ನ ಮದುವೆಯೂ ಆದರು. ಸದ್ಯಕ್ಕೆ ಮೌನಿ ಸುಖಿ ಸಂಸಾರಿ.
ಇಂಥಾ ಮೌನಿ ರಾಯ್ ತೀರಾ ಇತ್ತೀಚೆಗೆ ಹರಿಯಾಣದಲ್ಲಿ ಕಾರ್ಯಕ್ರವೊಂದಕ್ಕೆ ಹೋಗಿದ್ದರು. ಆದರೆ ಈ ಸಮಯದಲ್ಲಿ ಇವರಿಗೆ ಜೀವನದ ಸಂಧ್ಯಾಕಾಲದಲ್ಲಿರುವ ಪುರುಷರು ಕಿರುಕುಳ ನೀಡಿದ್ದರು. ತಮಗಾದ ಈ ಮಾನಸಿಕ ಮತ್ತು ದೈಹಿಕ ವೇದನೆಯನ್ನು ಮೌನಿ ರಾಯ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ನನ್ನ ಜೊತೆ ಫೋಟೋ ತೆಗೆದುಕೊಳ್ಳಲು ಬಂದು ಇಬ್ಬರು ಅಂಕಲ್‌ಗಳು ನನ್ನ ಸೊಂಟಕ್ಕೆ ಕೈ ಹಾಕಿದರು ಎಂದು ಹೇಳಿದ್ದ ಮೌನಿ ರಾಯ್ ನಾನು ವಿರೋಧಿಸಿದ್ದು ಅವರಿಗೆ ಇಷ್ಟ ಆಗಲಿಲ್ಲ. ಆ ನಂತರ ನನ್ನ ಎದುರು ನಿಂತು ಕೆಟ್ಟದಾಗಿ ಸನ್ನೆ ಮಾಡುತ್ತಿದ್ದರು ಎಂದು ಕಿಡಿ ಕಾರಿದ್ದರು.

ಮುಂದುವರೆದು ನನ್ನಂಥವರಿಗೆ ಈ ರೀತಿ ಆಗುತ್ತದೆ ಎಂದರೆ, ಚಿತ್ರರಂಗಕ್ಕೆ ಈಗಷ್ಟೇ ಬಂದ ಹೊಸ ನಾಯಕಿಯರ ಕಥೆ ಏನು ಎಂದು ಪ್ರಶ್ನೆ ಮಾಡಿದ್ದ ಮೌನಿ ರಾಯ್ ನನಗೆ ಕಿರುಕುಳ ಆಗಿದೆ. ಮನಸಿಗೆ ಬಹಳ ನೋವಾಗಿದೆ. ಇಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಅವರ ಮಗಳ ಜೊತೆ, ಸಹೋದರಿಯರ ಜೊತೆ ಇದೇ ರೀತಿ ಯಾರಾದರೂ ನಡೆದುಕೊಂಡರೆ ಏನು ಮಾಡುತ್ತಾರೆ ಅಂತ ನನಗೆ ಆಶ್ಚರ್ಯ ಆಗುತ್ತಿದೆ ಎಂದು ಕೆಂಡ ಕಾರಿದ್ದರು.
ಇದೀಗ ಇದೇ ಕಾರ್ಯಕ್ರಮದ ವಿಡಿಯೋ ಒಂದು ವೈರಲ್ ಆಗಿದ್ದು ವೈರಲ್ ಆದ ವಿಡಿಯೋದಲ್ಲಿ ತಮಗೆ ಅಶ್ಲೀಲ ಸನ್ನೆ ಮಾಡಿದವರಿಗೆ ತಮಗೆ ಕಿರುಕುಳ ನೀಡಿದವರಿಗೆ ಮೌನಿ ರಾಯ್ ಮಧ್ಯದ ಬೆರಳು ತೋರಿಸಿದ್ದಾರೆ.
ಆಕ್ರೋಶದಿಂದ ಕೆಳಗಿಳಿದಿದ್ದಾರೆ. ವೈರಲ್ ಆದ ಈ ವಿಡಿಯೋಗೆ ಭೂಮಿ ಫೆಡ್ನೇಕರ್.. ಆಯುಷ್ಮಾನ್ ಖುರಾನ ಅವರ ಪತ್ನಿ ತಾಹಿರಾ ಕಶ್ಯಪ್ ಸೇರಿ ಹಲವರು ಕಾಮೆಂಟ್ ಮಾಡಿದ್ದಾರೆ. ಮೌನಿ ರಾಯ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.



Click it and Unblock the Notifications











