ಮೌನಿಯನ್ನು ಕಳೆದುಕೊಳ್ಳಬಾರದೆಂದು ಮದುವೆಯಾದೆ ಎಂದಿದ್ದ ಸೂರಜ್ ; ನಾಲ್ಕೇ ವರ್ಷದಲ್ಲಿ ಕಮರಿತು ಪ್ರೀತಿ
ಮದುವೆ ಎನ್ನುವುದು ಸಮರಸ ಜೀವನದ ಆರಂಭ. ಜೊತೆಗಾರ ಅಥವಾ ಜೊತೆಗಾರ್ತಿಯ ಆಯ್ಕೆಗೆ ಮದುವೆ ಎನ್ನುವುದು ಸಾಮಾಜಿಕ ಮನ್ನಣೆ ಪಡೆದಿರುವ ಅಡಿಪಾಯ. ಇನ್ನೂ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿ ಭೂಲೋಕದಲ್ಲಿ ನಡೆಯುವಂತಹದ್ದು ಎನ್ನುವುದು ಹಿರಿಯರ ನಂಬಿಕೆ. ಆದರೆ.. ಈಗೀಗ ಮದುವೆ ಕೇವಲ ಆಡಂಬರಕ್ಕೆ ಮಾತ್ರ ಸೀಮಿತವಾಗುತ್ತಿದೆ. ವೈಭವ ಮತ್ತು ಭವ್ಯತೆಗೆ ಮನಸೋತ ಅನೇಕರು ಮದುವೆಯ ಮಹತ್ವವನ್ನೇ ಮರೆಯುತ್ತಿದ್ದಾರೆ.
ಇನ್ನೂ.. ಬಣ್ಣದ ಲೋಕದಲ್ಲಿ ಈ ಮದುವೆ .. ಮನೆ .. ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಹಲವರು ಮಾಡುತ್ತಲೇ ಇರುತ್ತಾರೆ. ಚಿಕ್ಕ ಚಿಕ್ಕ ವಿಚಾರಕ್ಕೆ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಎರಡು ಮೂರು ವರ್ಷಗಳಲ್ಲಿ ಹಲವಾರು ತಾರೆಯರು ಈ ಮದುವೆಯ ಸಂಕೋಲೆಯಿಂದ ಮುಕ್ತರಾಗಿದ್ದಾರೆ. ಈ ಸಾಲಿಗೆ ಈಗ ಮೌನಿ ರಾಯ್ ಅಧಿಕೃತವಾಗಿ ಸೇರಿದ್ದಾರೆ.

ಹೌದು, ಕಳೆದೊಂದು ವಾರದಿಂದ ಮೌನಿ ರಾಯ್ ದಾಂಪತ್ಯ ಜೀವನ ಚರ್ಚೆಯಲ್ಲಿತ್ತು. ಇಬ್ಬರ ವೈವಾಹಿಕ ಬದುಕು ಮುಕ್ತಾಯವಾಗಿದೆ ಎನ್ನುವ ಅನುಮಾನ ಹಲವರನ್ನು ಕಾಡುತ್ತಿತ್ತು. ಹಾಗಂತೆ-ಹೀಗಂತೆ ಎಂಬ ಮಾತು ಕೂಡ ಮುಂಬೈನೆಲ್ಲೆಡೆ ಕೇಳಿ ಬರುತ್ತಿತ್ತು.
ತಮ್ಮ ವೈಯಕ್ತಿಕ ಬದುಕು ''ಬ್ರೇಕಿಂಗ್ ನ್ಯೂಸ್'' ಆಗಿರುವುದನ್ನು ಕಂಡು ದಯಮಾಡಿ ಸುಳ್ಳು ಕಥೆಗಳನ್ನು ಹೆಣೆಯಬೇಡಿ, ನಮಗೆ ಸ್ವಲ್ಪ ಸಮಯ ಮತ್ತು ಗೌಪ್ಯತೆಯನ್ನು ನೀಡಿ ಎಂದು ಮನವಿಯನ್ನು ಕೂಡ ಮೌನಿ ರಾಯ್ ಮಾಡಿದ್ದರು. ಆದರೂ ಚರ್ಚೆ ಕಡಿಮೆಯಾಗಲಿಲ್ಲ. ಹೀಗಾಗಿಯೇ ಬೇಸತ್ತು ಖುದ್ದು ಈಗ ಮೌನಿ ರಾಯ್ ಅಧಿಕೃತವಾಗಿ ತಮ್ಮ ದಾಂಪತ್ಯ ಮುರಿದು ಬಿದ್ದಿರುವುದು ಸತ್ಯ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮೌನಿ ರಾಯ್, ನಮ್ಮ ವೈಯಕ್ತಿಕ ಜೀವನದಲ್ಲಿ ಕೆಲವರು ಮಿತಿ ಮೀರಿ ತಲೆ ಹಾಕುತ್ತಿರುವುದು ನಮಗೆ ಬೇಸರ ತಂದಿದೆ ಎಂದು ಹೇಳಿದ್ದಾರೆ. ನಾವಿಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ದೂರವಾಗಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿರುವ ಮೌನಿ ರಾಯ್, ಈ ವಿಷಯವನ್ನು ಬಹಳ ಖಾಸಗಿಯಾಗಿ ಮತ್ತು ಶಾಂತಿಯುತವಾಗಿ ನಿಭಾಯಿಸಲು ನಮಗೆ ಸ್ವಲ್ಪ ಸಮಯ ಬೇಕಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ವೈಯಕ್ತಿಕ ಬದುಕಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಅದಕ್ಕೆ ಮಸಾಲೆ ಹಾಕುವ ಪ್ರಯತ್ನಗಳು ಕೂಡ ನಡೆಯುತ್ತಿವೆ ಎಂದು ತಮ್ಮ ಬೇಸರ ಹೊರ ಹಾಕಿರುವ ಮೌನಿ, ನಮ್ಮ ದಾಂಪತ್ಯ ಜೀವನದ ಕುರಿತು ಹಬ್ಬಿರುವ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮ ಆದ್ಯತೆಗಳು ಬದಲಾಗಿವೆ, ಹಾಗಾಗಿ ಪರಸ್ಪರ ಗೌರವ ಮತ್ತು ಅರಿವಿನೊಂದಿಗೆ ನಾವು ನಮ್ಮ ಮುಂದಿನ ಜೀವನದ ಹಾದಿಯನ್ನು ಬದಲಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿರುವ ಮೌನಿ ರಾಯ್, ಈ ಕಠಿಣ ಸಮಯವನ್ನು ನಾವು ಬಹಳ ಗಂಭೀರವಾಗಿ ಮತ್ತು ಖಾಸಗಿಯಾಗಿ ನಿಭಾಯಿಸುತ್ತಿದ್ದೇವೆ ಎಂದಿದ್ದಾರೆ.
ಮುಂದಿನ ದಿನಗಳಲ್ಲೂ ನಮ್ಮ ನಡುವಿನ ಸ್ನೇಹವನ್ನು ನಾವು ಗೌರವಿಸುತ್ತೇವೆ ಮತ್ತು ಕಾಪಾಡಿಕೊಳ್ಳುತ್ತೇವೆ ಎಂದಿರುವ ಮೌನಿ, ನಮ್ಮ ಖಾಸಗಿತನಕ್ಕೆ ನೀವು ಗೌರವ ನೀಡುತ್ತೀರಿ ಎಂದು ನಂಬಿದ್ದೇವೆ. ಈ ಸಮಯದಲ್ಲಿ ನೀವು ನೀಡುತ್ತಿರುವ ಬೆಂಬಲಕ್ಕೆ ಧನ್ಯವಾದಗಳು ಎಂದು ಹೇಳಿದ್ಧಾರೆ.
ಅಂದ್ಹಾಗೇ ನಾಲ್ಕು ವರ್ಷಗಳ ಹಿಂದೆ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ''ಬಾಂಬೆ ಟೈಮ್ಸ್''ಗೆ ಸಂದರ್ಶನ ನೀಡಿದ್ದರು. ನಾನು ಮದುವೆಯಾಗಲು ತುದಿಗಾಲಿನಲ್ಲಿ ಇದ್ದೆ, ಆದರೆ ಸೂರಜ್ ರೆಡಿ ಇರಲಿಲ್ಲ ಎಂದು ಮೌನಿ ಈ ಸಂದರ್ಶನದಲ್ಲಿ ಹೇಳಿದ್ದರು.
ನಾನು ಆರಂಭದಲ್ಲಿ ಮದುವೆಗೆ ವಿರುದ್ಧವಾಗಿದೆ ಆದರೆ ಒಂದು ವರ್ಷದ ನಂತರ ಮನಸು ಬದಲಾಯ್ತು ಎಂದು ಹೇಳಿದ್ದ ಸೂರಜ್ ಕೆಲ ವರ್ಷಗಳ ಡೇಟಿಂಗ್ ನಂತರ ಒಮ್ಮೆ ಮದುವೆಯಾಗದಿದ್ದರೆ ನಿನ್ನ ದಾರಿ ನಿನ್ನದು, ನನ್ನ ದಾರಿ ನನ್ನದು ಎಂದು ಮೌನಿ ಖಂಡತುಂಡವಾಗಿ ಹೇಳಿದಳು, ಆಗ ಮದುವೆಯಾಗದೇ ಇದ್ದರೆ ನಾನು ಇವಳನ್ನು ಕಳೆದುಕೊಳ್ಳುತ್ತೇನೆ ಎಂದುಕೊಂಡು ನಾನು ಮದುವೆಗೆ ತಯರಾದೆ ಎಂದು ಹೇಳಿದ್ದರು. ಕಳೆದುಕೊಳ್ಳುವ ಭಯದಲ್ಲಿ ಮದುವೆಯಾದ ಸೂರಜ್ ನಂಬಿಯಾರ್ ಈಗ ನಾಲ್ಕು ವರ್ಷದ ನಂತರ ಮೌನಿ ರಾಯ್ ಅವರನ್ನು ಮದುವೆ ನಂತರ ಕಳೆದುಕೊಂಡಿದ್ದಾರೆ. ಎರಡು ಜೀವ ಒಂದೇ ಉಸಿರು ಎನ್ನುವಂತೆ ಇದ್ದ ಈ ಜೋಡಿ ಕೊನೆಗೂ ದೂರ ಆಗಿದೆ.


Click it and Unblock the Notifications