Cannes 2023: ನೀಲಿ ಲಿಪ್‌ಸ್ಟಿಕ್ ಹಚ್ಚಿಕೊಂಡು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ 'ಐರಾವತ'ನ ಅರಗಿಣಿ
ಗೊತ್ತಿದ್ದೋ ಗೊತ್ತಿಲ್ದೆನೋ ಕೆಲವೊಮ್ಮೆ ಬಾಲಿವುಡ್ ಬೆಡಗಿಯರು ತಮ್ಮ ವಿಭಿನ್ನ ರೆಡ್ ಕಾರ್ಪೆಟ್ ಲುಕ್ ಕಾರಣಕ್ಕೆ ಟ್ರೋಲ್ ಆಗುತ್ತಾರೆ. ಸದ್ಯ 76ನೇ ಕಾನ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್‌ನಲ್ಲಿ ನಡೀತಿದೆ. ಬಾಲಿವುಡ್ ಬೆಡಗಿಯರು ಕೂಡ ಭಾಗಿ ಆಗಿ ರಂಗೇರಿಸುತ್ತಿದ್ದಾರೆ. ಭಿನ್ನ ವಿಭಿನ್ನ ಕಾಸ್ಟ್ಯೂಮ್‌ಗಳಲ್ಲಿ ದರ್ಶನ ಕೊಡುತ್ತಿದ್ದಾರೆ. ಇನ್ನು 10 ದಿನ ಈ ಸಿನಿ ಉತ್ಸವ ಮುಂದುವರೆಯಲಿದೆ.
ದೊಡ್ಡ ಕುಲಾಯಿಯ ಗೌನ್ ತೊಟ್ಟು ಐಶ್ವರ್ಯ ರೈ ಟ್ರೋಲ್ ಆಗುತ್ತಿದ್ದಾರೆ. ಇದೀಗ ಊರ್ವಶಿ ರೌಟೇಲಾ ಕೂಡ ಆ ಸಾಲಿಗೆ ಸೇರಿಕೊಳ್ಳುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಐಶ್ವರ್ಯ ರೈ ಇಂತದ್ದೇ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಕಳೆದ 3 ದಿನಗಳಿಂದ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಊರ್ವಶಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ದಿನ ಪಿಂಕ್ ಕಲರ್ ಗೌನ್, ಮೊಸಳೆ ಆಕಾರದ ನೆಕ್ಲೆಸ್‌ನಿಂದ ಗಮನ ಸೆಳೆದಿದ್ದರು. ನಂತರ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಇದೀಗ ಆಕೆ ವಿಭಿನ್ನ ಗೌನ್ ಮತ್ತೆ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡಿದ್ದಾರೆ.

'ಇಂಡಿಯಾನಾ ಜೋನ್ಸ್ ಮತ್ತು ಡಯಲ್ ಆಫ್ ಡೆಸ್ಟಿನಿ' ಸಿನಿಮಾ ಪ್ರೀಮಿಯರ್ ವೇಳೆ ನಟಿ ಐಶ್ವರ್ಯ ರೈ ಸಿಲ್ವರ್ ಗೌನ್‌ನಲ್ಲಿ ಗಮನ ಸೆಳೆದಿದ್ದರು. ಇದೀಗ ಅದೇ ಸಿನಿಮಾ ಪ್ರೀಮಿಯರ್ ಸಂದರ್ಭದಲ್ಲಿ ಊರ್ವಶಿ ರೌಟೇಲಾ ಕ್ರೀಮ್ ಹಾಗೂ ನೀಲಿ ಬಣ್ಣದ ಡಿಸೈನರ್ ಗೌನ್‌ದಲ್ಲಿ ಮಿಂಚಿದ್ದಾರೆ. ಡೀಪ್ ನೆಕ್ ಇರುವ ಹಾಫ್ ಶೋಲ್ಡರ್ ಗೌನ್‌ನಲ್ಲಿ 3ನೇ ದಿನ 'ಐರಾವತ' ಸಿನಿಮಾ ಬೆಡಗಿ ಎಂಟ್ರಿ ಕೊಟ್ಟಿದ್ದಾರೆ.
ನೀಲಿ ಬಣ್ಣದ ಲಿಪ್‌ಸ್ಟಿಕ್
ಬಣ್ಣದ ಪಕ್ಷಿಯಂತೆ ಡಿಸೈನರ್ ಸೈಯದ್ ಕೊಬೈಸಿ ಈ ಗೌನ್ ಡಿಸೈನ್ ಮಾಡಿದ್ದಾರೆ. ಗೌನ್‌ನ ಕೆಲಭಾಗ ಸ್ಕರ್ಟ್ ಥೇಟ್ ಪಕ್ಷಿಯ ಪುಕ್ಕದಂತಿದೆ. ಇನ್ನು ಗೌನ್‌ಗೆ ಮ್ಯಾಚಿಂಗ್ ಎನ್ನುವಂತೆ ಊರ್ವಶಿ ತುಟಿಗೆ ನೀಲಿ ಬಣ್ಣದ(ಲಿಪ್‌ಸ್ಟಿಕ್) ಹಚ್ಚಿಕೊಂಡಿದ್ದಾರೆ. ಕೆಲವರಿಗೆ ಇದು ಇಷ್ಟವಾಗಿದ್ದರೆ ಮತ್ತೆ ಕೆಲವರು ಯಾರಾದರೂ ನೀಲಿ ಬಣ್ಣದ ಲಿಪ್‌ಸ್ಟಿಕ್ ಹಚ್ಚಿಕೊಳ್ಳುತ್ತಾರಾ ಎಂದು ಕೇಳುತ್ತಿದ್ದಾರೆ. ಇದೇ ಕಾರಣಕ್ಕೆ ಟ್ರೋಲ್ ಮಾಡುತ್ತಿದ್ದಾರೆ.

ಪರ್ಪಲ್ ಕಲರ್ ಲಿಪ್‌ಸ್ಟಿಕ್ ಹಚ್ಚಿದ ಐಶ್
7 ವರ್ಷಗಳ ಹಿಂದೆ ಇದೇ ರೀತಿ ನಟಿ ಐಶ್ವರ್ಯ ರೈ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪರ್ಪಲ್ ಕಲರ್ ಲಿಪ್‌ಸ್ಟಿಕ್ ಕಾರಣಕ್ಕೆ ಟ್ರೋಲ್ ಆಗಿದ್ದರು. 2016ರ ಕಾನ್ ಸಿನಿ ಉತ್ಸವದಲ್ಲಿ ಈ ರೀತಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಐಶ್ ದರ್ಶನ ಕೊಟ್ಟಿದ್ದರು. ಅವತ್ತಿನ ಕಾಲಕ್ಕೆ ಈ ಲುಕ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಮೀಮ್ಸ್‌ಗಳಿಗೂ ಆಹಾರವಾಗಿತ್ತು. ಕೊನೆಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಾಜಿ ವಿಶ್ವ ಸುಂದರಿ "ಆ ಬಣ್ಣದ ಲಿಪ್‌ಸ್ಟಿಕ್ ಹಚ್ಚಿಕೊಳ್ಳುವುದು ನನ್ನ ಆಯ್ಕೆ ಆಗಿರಲಿಲ್ಲ" ಎಂದು ಹೇಳಿದ್ದರು.
ಐಶ್ವರ್ಯಗೆ ಹೋಲಿಸಿ ಊವರ್ಶಿ ಟ್ರೋಲ್
ಸದ್ಯ ಐಶ್ವರ್ಯ ಪರ್ಪಲ್ ಲಿಪ್‌ಸ್ಟಿಕ್‌ಗೆ ಹೋಲಿಸಿ ಊರ್ವಶಿಯ ನೀಲಿ ಬಣ್ಣದ ಲಿಪ್‌ಸ್ಟಿಕ್ ಲುಕ್ ಬಗ್ಗೆ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರಂತೂ ಐಶ್ ಆ ಲುಕ್ ಅನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಐಶ್ವರ್ಯ ರೀತಿಯಲ್ಲೇ ಎಲ್ಲಾ ಗೊತ್ತಿದ್ದು ಊರ್ವಶಿ ಈ ಲಿಪ್‌ಸ್ಟಿಕ್ ಹಚ್ಚಿಕೊಂಡು ಕಾಣಿಸಿಕೊಂಡಿದ್ದಾರೆ ಅನ್ನುವುದು ಕೆಲವರ ವಾದ. ಒಟ್ಟಾರೆ ಊರ್ವಶಿಯ ಈ ಫೋಟೊಗಳು ಸಖತ್ ವೈರಲ್ ಆಗುತ್ತಿದೆ.

'ಐರಾವತ'ನ ಬೆಡಗಿ ಊರ್ವಶಿ
ಬಾಲಿವುಡ್ ನಟಿ ಊರ್ವಶಿ ಕನ್ನಡ 'ಐರಾವತ' ಚಿತ್ರದಲ್ಲೂ ನಟಿಸಿದ್ದರು. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಮಿಂಚಿದ್ದರು. ಇನ್ನು ಈಕೆಗೆ ಬಾಲಿವುಡ್‌ನಲ್ಲಿ ದೊಡ್ಡ ಅವಕಾಶಗಳು ಸಿಗಲಿಲ್ಲ. ಇತ್ತೀಚೆಗೆ ಐಟಂ ಸಾಂಗ್‌ಗಳ ಕಡೆ ಊರ್ವಶಿ ಮುಖ ಮಾಡಿದ್ದಾರೆ. ಇತ್ತೀಚೆಗೆ 'ವಾಲ್ತೇರು ವೀರಯ್ಯ' ಚಿತ್ರದಲ್ಲಿ ಚಿರಂಜೀವಿ ಜೊತೆ ಬಿಂದಾಸ್ ಸ್ಟೆಪ್ಸ್ ಹಾಕಿದ್ದರು.


Click it and Unblock the Notifications











