ಬಾಲಿವುಡ್‌ನಲ್ಲಿ ಫ್ಲಾಪ್ ಕೈಹಿಡಿದ ಸೌತ್; ಎರಡರಲ್ಲಿ ಯಾವುದು ಇಷ್ಟ ಎಂದಿದ್ದಕ್ಕೆ ಮೃಣಾಲ್ ಕೊಟ್ಟ ಉತ್ತರವಿದು
ಕೆಲ ನಟಿಯರು ಸೌತ್‌ನಲ್ಲಿ ಕೆಲ ಚಿತ್ರಗಳನ್ನು ಮಾಡಿ ಯಶಸ್ಸು ಸಿಗದೇ ಬಾಲಿವುಡ್‌ಗೆ ಕಾಲಿಟ್ಟ ಬಳಿಕ ಬಿಗ್ ಸ್ಟಾರ್‌ಗಳಾದ ಉದಾಹರಣೆಗಳಿವೆ. ಆದರೆ ಬಾಲಿವುಡ್‌ನಲ್ಲಿ ಹೆಚ್ಚೇನೂ ಸಕ್ಸಸ್ ಸಿಗದೇ ಇದ್ದಾಗ ಸೌತ್ ಕಡೆ ಮುಖ ಮಾಡಿ ಯಶಸ್ಸು ಸಾಧಿಸಿದವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು.
ಹೌದು, ಈ ಹಿಂದೆ ದೊಡ್ಡ ಚಿತ್ರರಂಗವೆಂದರೆ ಬಾಲಿವುಡ್, ಸೌತ್ ಇಂಡಸ್ಟ್ರಿಗಳಿಗಿಂತ ದೊಡ್ಡ ಹಾಗೂ ಸಕ್ಸಸ್‌ಫುಲ್ ಚಿತ್ರರಂಗವೆಂದರೆ ಬಾಲಿವುಡ್ ಎಂಬ ಅಭಿಪ್ರಾಯಗಳಿತ್ತು. ಆದರೆ ಈಗ ಹಾಗಿಲ್ಲ. ಕಾಲ ಬದಲಾಗಿದೆ. ಬಾಲಿವುಡ್ ಚಿತ್ರರಂಗವನ್ನೂ ಸೌತ್ ಇಂಡಸ್ಟ್ರಿಗಳು ಹಿಂದಿಕ್ಕಿ ದೊಡ್ಡ ಮಾರುಕಟ್ಟೆ ಕಂಡುಕೊಂಡಿವೆ. ಬಾಲಿವುಡ್ ಸ್ಟಾರ್ ನಟರ ಚಿತ್ರಗಳು ಸೌತ್ ಚಿತ್ರಗಳ ಎದುರು ನಿಲ್ಲಲಾಗದೇ ಮಕಾಡೆ ಮಲಗಿವೆ.

ಹೀಗೆ ದೊಡ್ಡದಾಗಿ ಸದ್ದು ಮಾಡಿರುವ ಸೌತ್ ಇಂಡಸ್ಟ್ರಿಗಳಲ್ಲಿ ಕೆಲಸ ನಿರ್ವಹಿಸಲು ಬಾಲಿವುಡ್ ಮಂದಿ ಸಹ ಇಷ್ಟಪಡುತ್ತಿದ್ದಾರೆ. ಇಷ್ಟು ವರ್ಷಗಳಲ್ಲಿ ಸೌತ್ ಕಡೆ ಹೆಚ್ಚೇನೂ ಮುಖ ಮಾಡದ ಹಲವಾರು ಕಲಾವಿದರು ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ಭಾರತದ ಚಿತ್ರಗಳಲ್ಲಿ ಕೆಲಸ ಮಾಡಿದ್ದನ್ನು ಕಾಣಬಹುದಾಗಿದೆ. ಆಲಿಯಾ ಭಟ್, ಅನುಪಮ್ ಖೇರ್, ಅಜಯ್ ದೇವಗನ್ ಹಾಗೂ ಸಂಜಯ್ ದತ್ ರೀತಿಯ ಸ್ಟಾರ್‌ಗಳೇ ಸೌತ್ ಚಿತ್ರಗಳಲ್ಲಿ ನಟಿಸಿದ್ದು, ಬಾಲಿವುಡ್‌ನಲ್ಲಿ ಲಯ ಕಂಡುಕೊಳ್ಳದ ಪುಟ್ಟ ಕಲಾವಿದರೂ ಸಹ ಸೌತ್ ಚಿತ್ರಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.
ಕೆಲವರು ಸಾಧಾರಣ ಯಶಸ್ಸನ್ನು ಗಳಿಸಿದರೆ, ಇನ್ನೂ ಕೆಲವರು ತಮ್ಮ ಇಷ್ಟು ವರ್ಷಗಳ ಸಿನಿ ಜೀವನದಲ್ಲಿ ಸಿಗದಿದ್ದ ದೊಡ್ಡ ಯಶಸ್ಸನ್ನು ಇಲ್ಲಿ ಕಂಡುಕೊಂಡಿದ್ದಾರೆ. ಇದಕ್ಕೆ ಪ್ರಸ್ತುತ ಉತ್ತಮ ಉದಾಹರಣೆಯೆಂದರೆ ಮೃಣಾಲ್ ಠಾಕೂರ್. ಹೌದು, ಕಳೆದ ವರ್ಷ ತೆರೆಕಂಡ ದುಲ್ಕರ್ ಸಲ್ಮಾನ್ ನಟನೆಯ ಸೀತಾ ರಾಮಮ್ ಚಿತ್ರದಲ್ಲಿ ಸೀತಾ/ ರಾಣಿ ನೂರ್ ಜಹಾನ್ ಪಾತ್ರವನ್ನು ನಿರ್ವಹಿಸಿದ್ದ ಮೃಣಾಲ್ ಠಾಕೂರ್ ಬಿಗ್ಗೆಸ್ಟ್ ಸಕ್ಸಸ್ ಕಂಡು ತಮ್ಮ ಸಿನಿ ಜೀವನದಲ್ಲಿ ಇಲ್ಲಿಯವರೆಗೂ ಸಿಗದಿದ್ದಂತಹ ಫೇಮ್ ಕಂಡುಕೊಂಡರು.

ಇನ್ನು 2014ರಲ್ಲಿ ಬಿಡುಗಡೆಗೊಂಡ ಮರಾಠಿ ಚಿತ್ರ ವಿಟ್ಟಿ ದಂಡು ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟ ನಟಿ ಮೃಣಾಲ್ ಠಾಕೂರ್ ಬಳಿಕ ಬಾಲಿವುಡ್‌ನಲ್ಲಿ ಏಳೆಂಟು ಚಿತ್ರಗಳಲ್ಲಿ ನಟಿಸಿದರು. ಈ ಯಾವ ಚಿತ್ರದಲ್ಲಿಯೂ ಮೃಣಾಲ್ ಠಾಕೂರ್‌ಗೆ ಬ್ರೇಕ್ ಹಾಗೂ ಖ್ಯಾತಿ ದೊರಕಲಿಲ್ಲ. ಇಷ್ಟು ಚಿತ್ರಗಳಲ್ಲಿ ಸಿಗದಿದ್ದಷ್ಟು ದೊಡ್ಡ ಮಟ್ಟದ ಖ್ಯಾತಿಯನ್ನು ತಂದುಕೊಟ್ಟದ್ದು ಸೀತಾ ರಾಮಮ್. ಕಥೆ ಹಾಗೂ ಬಾಕ್ಸ್ ಆಫೀಸ್ ವಿಚಾರದಲ್ಲಿಯೂ ಸೀತಾ ರಾಮಮ್ ಗೆದ್ದಿತ್ತು. ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಕ್ಲಬ್ ಸೇರಿತ್ತು.
ಹೀಗೆ ತನ್ನ ಸಿನಿ ಜೀವನಕ್ಕೆ ದೊಡ್ಡ ತಿರುವು ತಂದುಕೊಟ್ಟ ಸೀತಾ ರಾಮಮ್ ಚಿತ್ರದ ಬಗ್ಗೆ ಮೃಣಾಲ್ ಠಾಕೂರ್‌ಗೆ ಅಪಾರ ಗೌರವ ಹಾಗೂ ಪ್ರೀತಿ ಇದೆ. ಈ ಚಿತ್ರದ ಬಳಿಕ ಬೃಹತ್ ಆಫರ್ ಪಡೆದುಕೊಳ್ಳುತ್ತಿರುವ ಮೃಣಾಲ್ ಠಾಕೂರ್ ನಿನ್ನೆ ( ಏಪ್ರಿಲ್ 9 ) ಟ್ವಿಟರ್‌ನಲ್ಲಿ ಅಭಿಮಾನಿಗಳ ಜತೆಗೆ ಮುಕ್ತ ಚಾಟ್ ಮಾಡಿದ್ದಾರೆ. ತನ್ನ ಫಾಲೋವರ್ಸ್ ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಈ ವೇಳೆ ನೆಟ್ಟಿಗನೋರ್ವ ನಿಮಗೆ ಬಾಲಿವುಡ್ ಇಷ್ಟನಾ ಅಥವಾ ಸೌತ್ ಇಂಡಸ್ಟ್ರಿ ಇಷ್ಟನಾ ಎಂಬ ಪ್ರಶ್ನೆ ಕೇಳಿದ್ದಾರೆ.
ಈ ಪ್ರಶ್ನೆಗೆ ಜಾಣ್ಮೆಯಿಂದ ಉತ್ತರಿಸಿರುವ ಸೀತಾ ರಾಮಮ್ ಬೆಡಗಿ 'ಇಂಡಿಯನ್ ಸಿನಿಮಾ' ಎಂದು ರಿಟ್ವೀಟ್ ಮಾಡಿದ್ದಾರೆ. ಈ ಮೂಲಕ ಎರಡರಲ್ಲಿ ಯಾವುದೇ ಒಂದು ಆಯ್ಕೆಯನ್ನು ಮಾಡಿದ್ದರೂ ವಿವಾದಕ್ಕೆ ಒಳಗಾಗಬಹುದಿದ್ದ ಮೃಣಾಲ್ ಠಾಕೂರ್ ಜಾಗರೂಕತೆಯಿಂದ ಉತ್ತರ ನೀಡಿದ್ದಾರೆ.


Click it and Unblock the Notifications











