ಮೃಣಾಲ್ ಠಾಕೂರ್ ಜೊತೆ ದೀಪಾವಳಿ ಆಚರಿಸಿದ ಈ ಯುವಕ ಯಾರು ?
ಅಂದ ಚೆಂದ ಇದ್ದರೆ ಪ್ರತಿಭೆ ಇರಲ್ಲ. ಪ್ರತಿಭೆ ಇದ್ದವರಲ್ಲಿ ಗ್ಲಾಮರ್ ಇರಲ್ಲ ಎನ್ನುವಂಥಾ ಪರಿಸ್ಥಿತಿಯಲ್ಲಿ ಎರಡನ್ನೂ ಎರಕ ಹೊಯ್ದಂತೆ ಇರುವವರು ಮೃಣಾಲ್ ಠಾಕೂರ್. ಹುಟ್ಟಿದ್ದು ಮಹಾರಾಷ್ಟ್ರದಲ್ಲಿ ಆದರೂ, ದಕ್ಷಿಣದೆಲ್ಲೆಡೆ ಅಭಿಮಾನಿ ಬಳಗವನ್ನ ಹೊಂದಿರುವ ಮೃಣಾಲ್ ಸೀತಾ ರಾಮಂ .. ಹಾಯ್ ನನ್ನಾ .. ಫ್ಯಾಮಿಲಿ ಸ್ಟಾರ್ .. ಹೀಗೆ ಒಂದಾದ ಮೇಲೊಂದು ತೆಲುಗು ಸಿನಿಮಾಗಳ ಮೂಲಕ ಜನ ಮನ ಗೆದ್ದರು. ಅಸಂಖ್ಯಾತ ಅಭಿಮಾನಿಗಳನ್ನು ಕೂಡ ಸಂಪಾದಿಸಿದರು.
ಆದರೆ ಈಗ ಮೃಣಾಲ್‌ಗೆ ಹೀಗೆ ಸಂಪಾದಿಸಿದ ಅಭಿಮಾನಿಗಳಿಂದನೇ ಕಿರಿಕಿರಿಯಾಗುತ್ತಿದೆ. ಅತಿರೇಕದ ಅಭಿಮಾನ ಆತಂಕ ಹೆಚ್ಚಿಸಿದೆ. ಹೌದು, ಅಸಲಿಗೆ ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು.. ಸೆಲ್ಪಿ ಕೇಳೋದು .. ಮಾತನಾಡಲು ಹವಣಿಸೋದು ಕಾಮನ್ನು. ಇದಕ್ಕೆ ಯಾರ ಅಭ್ಯಂತರ ಕೂಡ ಇಲ್ಲ. ಆದರೆ, ಇನ್ನೂ ಕೆಲವರು ಅಭಿಮಾನದ ಹೆಸರಿನಲ್ಲಿ ತಮ್ಮ ಇಷ್ಟದ ನಟ ಮತ್ತು ನಟಿಯ ಭಾವ ಚಿತ್ರಗಳನ್ನು ತಂತ್ರಜ್ಞಾನದ ಸಹಾಯದಿಂದ ಎಡಿಟ್ ಮಾಡುತ್ತಾರೆ. ತಮ್ಮ ತಮ್ಮ ಕಲ್ಪನೆಗೆ ಅನುಗುಣವಾಗಿ ತಾರೆಯರ ಫೋಟೊ ಪಕ್ಕ ತಾವು ಇರುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ತಮ್ಮ ನೆಚ್ಚಿನ ಸ್ಟಾರ್ ಇದರಿಂದ ಮುಜುಗರಕ್ಕೀಡಾಗಬಹುದು ಎನ್ನುವ ಆಲೋಚನೆಯನ್ನು ಕೂಡ ಮಾಡದೇ ಸೋಶಿಯಲ್ ಮೀಡಿಯಾದಲ್ಲಿ ಬಿಟ್ಟಿ ಬಿಲ್ಡಪ್ ಕೊಡುತ್ತಾರೆ.

ಇದಕ್ಕೆ ಒಂದು ಉದಾಹರಣೆ ಎನ್ನುವಂತೆ ಮೃಣಾಲ್ ಠಾಕೂರ್ ಅವರ ಅಭಿಮಾನಿಯೊಬ್ಬ ಮೃಣಾಲ್ ಜೊತೆ ದೀಪಾವಳಿ ಆಚರಿಸುತ್ತಿರುವಂತೆ ಫೋಟೊ ಎಡಿಟ್ ಮಾಡಿದ್ದಾನೆ. ಆ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಕೂಡ ಹಂಚಿಕೊಂಡಿದ್ದಾನೆ. ಇದನ್ನು ಕಂಡು ಕೆರಳಿ ಕೆಂಡವಾಗಿರುವ ಮೃಣಾಲ್ ನಿಮಗೆ ನೀವ್ಯಾಕೇ ಸಮಾಧಾನ ಮಾಡಿಕೊಳ್ಳುತ್ತಿದ್ದೀರಾ, ನೀವು ಮಾಡಿರುವುದು ಸರಿಯೆಂದು ನಿಮಗೆ ಅನ್ಸುತ್ತಾ..? ಖಂಡಿತ ಅಲ್ಲ ಎಂದು ಆ ಅಭಿಮಾನಿ ಹಂಚಿಕೊಂಡ ಫೋಟೊ ಕೆಳಗೆ ಕಾಮೆಂಟ್ ಮಾಡಿದ್ದಾರೆ. ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಆದರೆ, ಆ ನಂತರ ಮೃಣಾಲ್ ಕೂಡಲೇ ತಾವು ಮಾಡಿದ ಕಾಮೆಂಟ್‌ನ ಡಿಲೀಟ್ ಮಾಡಿದ್ದಾರೆ. ಯಾಕೆಂದರೆ ಮೃಣಾಲ್ ಆ ಅಭಿಮಾನಿಯನ್ನೂ ತರಾಟೆ ತೆಗೆದುಕೊಂಡ ಬೆನ್ನಲ್ಲಿಯೇ ಅನೇಕರು ಆ ಅಭಿಮಾನಿ ವಿರುದ್ಧ ಸಮರ ಸಾರಿದ್ದರು. ಸೈಬರ್ ಅಟ್ಯಾಕ್ ಮಾಡಲು ಶುರು ಮಾಡಿದ್ದರು. ಈ ಕಾರಣಕ್ಕೆ ಕೆಲವೇ ಕ್ಷಣಗಳಲ್ಲಿ ತಾವು ಮಾಡಿದ್ದ ಕಾಮೆಂಟ್ ಡಿಲೀಟ್ ಮಾಡಿದ ಮೃಣಾಲ್ ಆ ನಂತರ ವಿಡಿಯೋ ಮೂಲಕ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಆ ಹುಡುಗನನ್ನು ಅವನ ಪಾಡಿಗೆ ನೆಮ್ಮದಿಯಿಂದ ಇರಲು ಬಿಟ್ಟುಬಿಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.
ಆ ಹುಡುಗನ ಪ್ರಾಣವನ್ನೇ ತೆಗೆಯುತ್ತೀರಾ ಹೇಗೆ ನೀವೆಲ್ಲ..? ಎಂದು ಪ್ರಶ್ನೆ ಮಾಡಿರುವ ಮೃಣಾಲ್ ಮೊದಲು ನಾನು ಆ ವೀಡಿಯೋ ನೋಡಿದಾಗ ನನಗೆ ಖುಷಿಯಾಗಿತ್ತು. ಯಾಕೆಂದರೆ ಕೊನೆ ಪಕ್ಷ ನಾನು ದೀಪಾವಳಿಯನ್ನು ಆ ಹುಡುಗನ ಜೊತೆ ಆಚರಿಸುತ್ತಿದ್ದೇನೆ ಎಂದುಕೊಂಡಿದ್ದೆ. ಆದರೆ ಆ ನಂತರ ಅವನ ಖಾತೆಯನ್ನು ಪರಿಶೀಲಿಸಿದಾಗ ಅಲ್ಲಿ ಅನೇಕ ನಟಿಯರ ಫೋಟೊ ಮತ್ತು ವಿಡಿಯೋಗಳನ್ನು ಆತ ಎಡಿಟ್ ಮಾಡಿರುವುದನ್ನು ನೋಡಿ ನನ್ನ ಹೃದಯ ನುಚ್ಚು ನೂರಾಯಿತು ಎಂದಿದ್ದಾರೆ. ಅವನಲ್ಲಿರುವ ಕಲೆಯನ್ನು ನಾನು ನಿಜವಾಗಿ ಗೌರವಿಸುತ್ತೇನೆ ಮತ್ತು ಆ ಕಲೆಯನ್ನು ಆತ ಸರಿಯಾದ ಜಾಗದಲ್ಲಿ ಪ್ರದರ್ಶನ ಮಾಡಲಿ ಎಂದು ಆಶಿಸುತ್ತೇನೆ ಎಂದಿರುವ ಮೃಣಾಲ್ ದಯವಿಟ್ಟು ಅವನನ್ನು ಕೆಟ್ಟ ಪದಗಳಿಂದ ನಿಂದಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅವನ ಉದ್ದೇಶ ಬಹುಶಃ ಕೆಟ್ಟದ್ದಲ್ಲ ಆದರೆ ನನ್ನಂತೆ ಬೇರೆಯವರ ಹೃದಯಕ್ಕೆ ಆತ ನೋವುಂಟು ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೂಡ ಈ ಕುರಿತು ಬರೆದುಕೊಂಡಿರುವ ಮೃಣಾಲ್ ಮುಂದೊಂದು ದಿನ ನೀನು ಸಿನಿಮಾಗಳನ್ನು ಎಡಿಟ್ ಮಾಡುವಂತಾಗಲಿ ಎಂದು ಹಾರೈಸಿದ್ದಾರೆ.


Click it and Unblock the Notifications











