ಅಪರಿಚಿತನ ಬೈಕ್ ಏರಿ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಶೇರ್ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಬಿಗ್‌ಬಿ!
ದೇಶದಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೆಲವೊಮ್ಮೆ ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡು ಸರಿಯಾದ ಸಮಯಕ್ಕೆ ತಲುಪಬೇಕಾದ ಜಾಗ ತಲುಪಲಾಗದೇ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಮುಂಬೈನಲ್ಲಿ ಇದೇ ರೀತಿ ಟ್ರಾಫಿಕ್ ಜಾಮ್‌ನಲ್ಲಿ ಇತ್ತೀಚೆಗೆ ಅಮಿತಾಬ್ ಬಚ್ಚನ್ ಸಿಕ್ಕಿ ಹಾಕಿಕೊಂಡಿದ್ದಾರೆ. ಕೂಡಲೇ ಬಿಗ್ ಬಿ ಕಾರ್ ಬಿಟ್ಟು ಅಪರಿಚಿತನ ಬೈಕ್‌ನಲ್ಲಿ ಡ್ರಾಪ್ ಪಡೆದಿದ್ದಾರೆ.
ಬಾಲಿವುಡ್‌ನಲ್ಲಿ ಮಿಸ್ಟರ್ ಪರ್ಫೆಕ್ಷನಿಷ್ಟ್ ಎನಿಸಿಕೊಂಡಿರುವ ಅಮಿತಾಬ್ ಯಾವತ್ತೂ ಶೂಟಿಂಗ್‌ಗೆ ತಡವಾಗಿ ಹೋದವರಲ್ಲ. ಎಲ್ಲದರಲ್ಲೂ ಶಿಸ್ತು ಪಾಲಿಸುವ ಬಿಗ್‌ಬಿ ಶೂಟಿಂಗ್ ಸೆಟ್‌ಗೂ ಸರಿಯಾದ ಸಮಯಕ್ಕೆ ಹಾಜರಾಗುತ್ತಾರೆ. ಆದರೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡು ಬಹಳ ಹೊತ್ತು ಕಾದರೂ ಪ್ರಯೋಜನವಾಗಿದ್ದಾಗ ಅಲ್ಲೇ ಬಂದ ಬೈಕ್ ಸವಾರರೊಬ್ಬರ ಜೊತೆ ಸೇರಬೇಕಾದ ಸ್ಥಳಕ್ಕೆ ಸೇರಿದ್ದಾರೆ. ಈ ವಿಚಾರವನ್ನು ಫೋಟೊ ಸಮೇತ ಇನ್‌ಸ್ಟಾಗ್ರಾಮ್‌ನಲ್ಲಿ ಅಮಿತಾಬ್ ಬರೆದುಕೊಂಡಿದ್ದಾರೆ.

"ಡ್ರಾಪ್ ನೀಡಿದ್ದಕ್ಕೆ ಧನ್ಯವಾದ ಗೆಳೆಯಾ.. ನಿನಗೆ ಗೊತ್ತಿಲ್ಲ .. ಆದರೆ ನೀನು ನನ್ನನ್ನು ಕೆಲಸದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಕರೆದೊಯ್ದಿದ್ದೀಯಾ.. ಬಹಳ ವೇಗವಾಗಿ ಮತ್ತು ಪರಿಹರಿಸಲಾಗದ ಟ್ರಾಫಿಕ್ ಜಾಮ್ ತಪ್ಪಿಸಿ ತಲುಪಿಸಿದ್ದೀಯಾ. ಕ್ಯಾಪ್, ಶಾರ್ಟ್ಸ್ ಮತ್ತು ಹಳದಿ ಬಣ್ಣ ಟೀಶರ್ಟ್ ತೊಟ್ಟಿದ್ದ ನಿಮಗೆ ಧನ್ಯವಾದ" ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬರು ಹೆಲ್ಮೆಟ್ ಹಾಕಿಲ್ಲವಲ್ಲ ಎಂದು ಕೆಲವರು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ ಕಾಮೆಂಟ್ ಮಾಡಿದ್ದಾರೆ.
ನಿಯಮದ ಪ್ರಕಾರ, ಕೇಂದ್ರ ಮೋಟಾರು ವಾಹನ ಕಾಯ್ದೆಯಡಿ, ದ್ವಿಚಕ್ರ ವಾಹನ ಸವಾರರು ಇಬ್ಬರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಆದರೆ ಇಲ್ಲಿ ಸವಾರ ಹಾಗೂ ಅಮಿತಾಬ್ ಇಬ್ಬರೂ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿರುವುದು ಗೊತ್ತಾಗುತ್ತಿದೆ. ಅದೇ ಕಾರಣಕ್ಕೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲೇ ಪೊಲೀಸರಿಗೆ ದೂರು ನೀಡಿದ್ದ ಮುಂಬೈ ಪೊಲೀಸರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದನ್ನು ಟ್ರಾಫಿಕ್ ಪೊಲೀಸ್ ಇಲಾಖೆ ಗಮನಕ್ಕೆ ತಂದಿರುವುದಾಗಿ ರಿಪ್ಲೇ ಮಾಡಿ ತಿಳಿಸಿದ್ದಾರೆ.

ಒಟ್ಟಾರೆ ಅಮಿತಾಬ್ ಬಚ್ಚನ್ ಇನ್‌ಸ್ಟಾ ಪೋಸ್ಟ್‌ನಿಂದಲೇ ಇಬ್ಬರು ಹೆಲ್ಮೆಟ್ ಧರಿಸದೇ ಬೈಕ್ ಏರಿದ್ದು ಪೊಲೀಸರ ಗಮನಕ್ಕೆ ಬರುವಂತಾಗಿದೆ. ಅಮಿತಾಬ್ ಬಚ್ಚನ್ ರೀತಿಯಲ್ಲೇ ಅನುಷ್ಕಾ ಶರ್ಮಾ ಕೂಡ ಹೆಲ್ಮೆಟ್ ಧರಿಸದೇ ಬೈಕ್‌ನಲ್ಲಿ ಸವಾರಿ ಮಾಡಿದ್ದಾರೆ. ರೋಡ್ ಬ್ಲಾಕ್ ಆಗಿದ್ದ ಹಿನ್ನೆಲೆಯಲ್ಲಿ ಅನುಷ್ಕಾ ಶರ್ಮಾ ತಮ್ಮ ಬಾಡಿಗಾರ್ಡ್ ಜೊತೆ ಬೈಕ್ ಏರಿ ಪ್ರಯಾಣಿಸಿದ್ದಾರೆ. ಆ ಸಮಯದಲ್ಲಿ ಇಬ್ಬರು ಹೆಲ್ಮೆಟ್ ಧರಿಸಿಲ್ಲ. ಈ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಇದೇ ಪ್ರಶ್ನೆ ಎತ್ತಿದ್ದಾರೆ.
ಕೂಡಲೇ ಆ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು ಇದನ್ನು ಟ್ರಾಫಿಕ್ ಪೊಲೀಸರ ಗಮನಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ. ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಅಮಿತಾಬ್ ಕೊನೆಯದಾಗಿ 'ಊಂಚೈ' ಚಿತ್ರದಲ್ಲಿ ನಟಿಸಿದ್ದರು. ಸದ್ಯ ಅವರ ಕೈಯಲ್ಲಿ ಈಗ ಐದಾರು ಸಿನಿಮಾಗಳಿವೆ. ಅದರಲ್ಲಿ ಒಂದು ತೆಲುಗು ಸಿನಿಮಾ ಎನ್ನುವುದು ವಿಶೇಷ. 'ಗಣಪತ್', 'ಗೂಮರ್', 'ದಿ ಉಮೇಶ್ ಕ್ರಾನಿಕಲ್ಸ್', 'ಪ್ರಾಜೆಕ್ಟ್ ಕೆ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಮತ್ತೊಂದು ಕಡೆ ಅನುಷ್ಕಾ ಶರ್ಮಾ ಮಗಳ ಲಾಲಾನೆ ಪಾಲನೆ ಜೊತೆಗೆ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಸದ್ಯ 'ಚಕ್‌ದಾ ಎಕ್ಸ್‌ಪ್ರೆಸ್' ಚಿತ್ರದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ಟಿ ಜೂಲಗ್ ಗೋಸ್ವಾಮಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಈ ಬಾರಿ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲೂ ಭಾಗವಹಿಸುತ್ತಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಡಿಸೈನರ್ ಕಾಸ್ಟ್ಯೂಮ್‌ನಲ್ಲಿ ಮಿಂಚು ಹರಿಸಲಿದ್ದಾರೆ.


Click it and Unblock the Notifications











