ನಡುರಸ್ತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿ ಪೊಲೀಸರ ಕೆಂಗಣ್ಣಿಗೆ ಗುರಿಯಾದ ನಟ
ಬಾಲಿವುಡ್ ನಟ ವರುಣ್ ಧವನ್ ತೆಗೆಸಿಕೊಂಡಿರುವ ಸೆಲ್ಫಿಯೊಂದು ಮುಂಬೈ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ. ನಟ ವರುಣ್ ಧವನ್ ಮುಂಬೈನ ನಡುರಸ್ತೆಯ ಟ್ರಾಪಿಕ್ ನಲ್ಲಿ ಕಾರು ನಿಲ್ಲಿಸಿ ಯುವತಿಯ ಜೊತೆ ಫೋಟೋ ಕ್ಲಿಕ್ಕಿಸಿದ್ದಾರೆ. ತಾವು ಇದ್ದ ಕಾರು ಮತ್ತು ಆ ಯುವತಿ ಇದ್ದ ಆಟೋ ಕಾಣುವಂತೆ ಫೋಟೋ ಕ್ಲಿಕ್ಕಿಸಿದ್ದಾರೆ.
ರಸ್ತೆಯಲ್ಲಿ ಈ ರೀತಿ ಫೋಟೋ ತೆಗೆದುಕೊಂಡಿರುವುದು ಅಪಾಯ ಮತ್ತು ಇದರಿಂದ ಬೇರೆಯವರಿಗೆ ತೊಂದರೆಯಾಗಿದೆ ಎಂಬ ದೃಷ್ಠಿಯಿಂದ ಪೊಲೀಸರು ವರುಣ್ ಗೆ ಎಚ್ಚರಿಕೆ ನೀಡಿದ್ದಾರೆ.

''ವರುಣ್ ಧವನ್, ಈ ರೀತಿಯ ಸಾಹಸಗಳು ಸಿನಿಮಾದಲ್ಲಿ ನೋಡಿದ್ರೆ ಚೆನ್ನಾಗಿರುತ್ತೆ. ಆದ್ರೆ, ಮುಂಬೈ ರಸ್ತೆಯಲ್ಲಿ ಅಲ್ಲ. ನಿಮ್ಮ ಜೀವನವನ್ನ ರಿಸ್ಕ್ ನಲ್ಲಿಡುವುದಲ್ಲದೇ, ಬೇರೆಯವರಿಗೂ ಇದು ಸಂಕಷ್ಟ ತರುವುದು. ನಿಮ್ಮಿಂದ ನಾವು ಜವಾಬ್ದಾರಿಯುತ ಕೆಲಸಗಳನ್ನ ನಿರೀಕ್ಷೆ ಮಾಡುತ್ತೇವೆ. ನೀವೊಬ್ಬ ಯೂತ್ ಐಕಾನ್. ನಿಮ್ಮ ಮನೆಗೆ ಈ ಇ-ಚಲನ್ ಬರುತ್ತಿದೆ. ಮುಂದಿನ ಬಾರಿ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತೆ'' ಎಂದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ವರುಣ್ ಧವನ್ ಕ್ಷಮೆ ಕೇಳಿದ್ದಾರೆ. ''ನನ್ನ ಕಾರು ಟ್ರಾಫಿಕ್ ನಲ್ಲಿ ತುಂಬ ಹೊತ್ತು ನಿಂತಿತ್ತು. ಈ ಮಧ್ಯೆ ಫೋಟೋ ಕೇಳಿದ ಅಭಿಮಾನಿಯ ಭಾವನೆಯನ್ನ ನೋಯಿಸಲು ಮನಸ್ಸು ಒಪ್ಪಲಿಲ್ಲ. ಹಾಗಾಗಿ, ಈ ಫೋಟೋ ತೆಗೆಸಿಕೊಳ್ಳಬೇಕಾಯಿತು. ಮುಂದಿನ ದಿನಗಳಲ್ಲಿ ಈ ರೀತಿ ಘಟನೆಗಳು ಮತ್ತೆ ಸಂಭವಿಸಲ್ಲ'' ಎಂದು ತಿಳಿಸಿದ್ದಾರೆ.


Click it and Unblock the Notifications