ಇಸ್ರೇಲ್‌ನಲ್ಲಿ ತನ್ನ ಸಹೋದರಿ, ಬಾವ ಬರ್ಬರವಾಗಿ ಕೊಲೆಯಾಗಿದ್ದಾರೆ ಎಂದ ನಟಿ ಮಧುರಾ ನಾಯ್ಕ್
ಇಸ್ರೇಲ್‌ನಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲುವ ಯಾವುದೇ ಸೂಚನೆ ಕಾಣುತ್ತಿಲ್ಲ. ಮತ್ತೆ ಮತ್ತೆ ಭಯಾನಕ ಮತ್ತು ಹೃದಯವಿದ್ರಾವಕ ಘಟನೆಗಳು ವರದಿಯಾಗುತ್ತಲೇ ಇವೆ. ಯುದ್ಧಪೀಡಿತ ಇಸ್ರೇಲ್‌ನಲ್ಲಿ ಇರುವ ಭಾರತೀಯರ ಸಂಬಂಧಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಲವರು ಹತ್ಯೆಯಾಗಿದ್ದಾರೆ.
ಇತ್ತೀಚೆಗೆ ಇಸ್ರೇಲ್‌ನಲ್ಲಿ ಫಿಲಂ ಫೆಸ್ಟಿವಲ್‌ಗೆ ಹೋಗಿ ಸುಮಾರು 36 ಗಂಟೆಗಳ ಕಾಲ ಬಾಲಿವುಡ್ ನಟಿ ನುಶ್ರತ್ ಭರುಚಾ ಸಿಲುಕಿಕೊಂಡಿದ್ದರು. ಅವರು ಸುರಕ್ಷಿತವಾಗಿ ದೇಶಕ್ಕೆ ಹಿಂತಿರುಗಿದ್ದಾರೆ. ಜೊತೆಗೆ ಅಲ್ಲಿನ ಭಯಾನವ ಅನುಭವವನ್ನು ವಿವರಿಸಿ ವಿಡಿಯೋ ಮತ್ತು ಒಂದು ನೋಟ್ ಕೂಡ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಮತ್ತೊಬ್ಬ ನಟಿ ತಮ್ಮ ಸಂಬಂಧಿಕರು ಇಸ್ರೇಲ್‌ನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.

ನಾಗಿನ್ ನಟಿ ಮಧುರಾ ನಾಯ್ಕ್ ಮನದ ನೋವು
ಟಿವಿ ಧಾರಾವಾಹಿ ನಾಗಿನ್‌ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ನಟಿ ಮಧುರಾ ನಾಯ್ಕ್ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಸೋದರಸಂಬಂಧಿಯಾದ ಒಡಯಾ ಮತ್ತು ಅವರ ಪತಿ ಇಸ್ರೇಲ್‌ನಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ನಡೆಯುತ್ತಿರುವ ಇಸ್ರೇಲ್ - ಹಮಾಸ್ ಸಂಘರ್ಷದ ಮಧ್ಯೆ ಶನಿವಾರ ಇಬ್ಬರು ತಮ್ಮ ಮಕ್ಕಳ ಮುಂದೆಯೇ ಭೀಕರವಾಗಿ ಕೊಲೆಯಾಗಿದ್ದಾರೆ ಎಂದು ನಟಿ ಮಧುರಾ ನಾಯ್ಕ್ ಹೇಳಿದ್ದಾರೆ. ತಾನು ಎರಡೂ ಕಡೆಯಿಂದ ನಡೆಯುತ್ತಿರುವ 'ಯಾವುದೇ ರೀತಿಯ ಹಿಂಸೆಯನ್ನು ಬೆಂಬಲಿಸುವುದಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದು, ಇಸ್ರೇಲ್‌ನ ಆತ್ಮರಕ್ಷಣೆ ಹಕ್ಕನ್ನು ಸಮರ್ಥಿಸಿಕೊಂಡಿದ್ದಾರೆ.
ವಿಡಿಯೋದಲ್ಲಿ ಮಧುರಾ ನಾಯ್ಕ್ ಹೇಳಿದ್ದು ಏನು?
"ನಾನು, ಮಧುರಾ ನಾಯಕ್, ಭಾರತೀಯ ಮೂಲದ ಯಹೂದಿ. ನಾವು ಈಗ ಇಲ್ಲಿ ಭಾರತದಲ್ಲಿ ಕೇವಲ 3,000 ಮಂದಿ ಇದ್ದೇವೆ. ಹಿಂದಿನ ದಿನ ಅಂದರೆ ಅಕ್ಟೋಬರ್ 7 ರಂದು ನಾವು ನಮ್ಮ ಕುಟುಂಬದ ಒಬ್ಬ ಮಗಳು ಮತ್ತು ಮಗನನ್ನು ಕಳೆದುಕೊಂಡೆವು. ನನ್ನ ಸೋದರಸಂಬಂಧಿ ಒಡೆಯ ಅವರನ್ನು ಅವರ ಪತಿಯನ್ನು ಇಬ್ಬರು ಮಕ್ಕಳ ಸಮ್ಮುಖದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಾನು ಮತ್ತು ನನ್ನ ಕುಟುಂಬ ಇಂದು ಎದುರಿಸುತ್ತಿರುವ ದುಃಖವನ್ನು ಪದಗಳಲ್ಲಿ ಹೇಳಲಾಗುವುದಿಲ್ಲ. ಇಸ್ರೇಲ್ ನೋವಿನಲ್ಲಿದೆ. ಇಸ್ರೇಲ್‌ನ ಮಕ್ಕಳು, ಮಹಿಳೆಯರು ಮತ್ತು ಬೀದಿಗಳು ಹಮಾಸ್‌ನ ಕೋಪದಲ್ಲಿ ಜ್ವಾಲೆಯಲ್ಲಿ ಉರಿಯುತ್ತಿವೆ. ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ದುರ್ಬಲರನ್ನು ಗುರಿಯಾಗಿಸಲಾಗುತ್ತಿದೆ" ಎಂದು ನೀವು ತೋಡಿಕೊಂಡಿದ್ದಾರೆ.

ತಾನು ಯಹೂದಿ ಎಂಬ ಕಾರಣಕ್ಕೆ ತಾನು ಗುರಿಯಾಗಿದ್ದೇನೆ ಎಂದು ಮಧುರಾ ನಾಯ್ಕ್ ಆರೋಪಿಸಿದ್ದಾರೆ. "ನಿನ್ನೆ, ನಾನು ನಮ್ಮ ನೋವನ್ನು ಜಗತ್ತಿಗೆ ತಿಳಿಸಲು ನನ್ನ ಸಹೋದರಿ ಮತ್ತು ಅವರ ಕುಟುಂಬದ ಚಿತ್ರವನ್ನು ಪೋಸ್ಟ್ ಮಾಡಿದ್ದೇನೆ. ಆದರೆ ಪ್ಯಾಲೇಸ್ಟಿನಿಯನ್ ಪರವಾದ ಅರಬ್ ಪ್ರಚಾರವು ಎಷ್ಟು ಗಟ್ಟಿಯಾಗಿ ನಡೆಯುತ್ತಿದೆ ಎಂಬುದನ್ನು ನೋಡಿ ನನಗೆ ಆಘಾತವಾಯಿತು. ನಾನು ಯಹೂದಿ ಎಂದು ನನ್ನನ್ನು ಅವಮಾನ ಮಾಡಲಾಯಿತು. ಆತ್ಮರಕ್ಷಣೆ ಭಯೋತ್ಪಾದನೆ ಅಲ್ಲ. ನಾನು ಯಾವುದೇ ರೀತಿಯ ಹಿಂಸಾಚಾರವನ್ನು ಅಥವಾ ಎರಡೂ ಕಡೆಯ ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ" ಎಂದಿದ್ದಾರೆ.
ಇಸ್ರೇಲ್-ಹಮಾಸ್ ಸಂಘರ್ಷ
ಇಸ್ರೇಲ್‌ನ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಗಾಝಾ ಪ್ರದೇಶಗಳು ನಿರಂತರ ಹಿಂಸಾಚಾರಕ್ಕೆ ಒಳಗಾಗಿವೆ. ಪ್ಯಾಲೇಸ್ಟಿನಿಯನ್ ಗುಂಪು ಹಮಾಸ್ ಇಸ್ರೇಲ್‌ನ ಕೆಲವು ಭಾಗಗಳ ಮೇಲೆ ದಾಳಿ ಮಾಡಿದ ನಂತರ ಶನಿವಾರ ಸಂಘರ್ಷ ಪ್ರಾರಂಭವಾಗಿದೆ. ಅಕ್ಟೋಬರ್ 8 ರಂದು ಗಾಝಾ ಆಳುವ ಹಮಾಸ್ ವಿರುದ್ಧ ಇಸ್ರೇಲ್ ಯುದ್ಧ ಘೋಷಿಸಿದೆ.


Click it and Unblock the Notifications











