Breaking: 'ನಾಗರಹಾವು' ಸಿನಿಮಾ ನಟ ಮುಕುಲ್ ದೇವ್ ನಿಧನ
ಕನ್ನಡ ಸಿನಿಮಾಗಳಲ್ಲಿ ಕೂಡ ಅಬ್ಬರಿಸಿದ್ದ ಬಾಲಿವುಡ್ ನಟ ಮುಕುಲ್ ದೇವ್ ಕೊನೆಯುಸಿರೆಳೆದಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ದೆಹಲಿ ಮೂಲದ ನಟ ಮುಕುಲ್ ದೇವ್ ಹಿಂದಿ, ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದು ಹೆಚ್ಚು. ದಕ್ಷಿಣದಲ್ಲಿ ಕನ್ನಡ, ಬೆಂಗಾಲಿ, ತೆಲುಗು ಚಿತ್ರಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು.
ನಟ ಮುಕುಲ್ ದೇವ್ ನಿಧನಕ್ಕೆ ಕಾರಣ ಏನು ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ. ಅವರ ಅಗಲಿಕೆಗೆ ಆಪ್ತರು, ಚಿತ್ರರಂಗದವರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಹಿಂದಿ ಹಾಗೂ ಪಂಜಾಬಿ ಕಿರುತೆರೆ ಕಾರ್ಯಕ್ರಮಗಳಲ್ಲಿ ಕೂಡ ಅವರು ನಟಿಸಿದ್ದರು.

ಕನ್ನಡದಲ್ಲಿ ದಿಗಂತ್, ರಮ್ಯಾ ನಟಿಸಿದ್ದ 'ನಾಗರಹಾವು' ಹಾಗೂ ಉಪೇಂದ್ರ ನಟನೆಯ 'ರಜನಿ' ಸಿನಿಮಾಗಳಲ್ಲಿ ಮುಕುಲ್ ದೇವ್ ಮಿಂಚಿದ್ದರು.ಆತನ ನಿಧನಕ್ಕೆ ನಟರಾದ ವಿಂದು ದಾರಾ ಸಿಂಗ್, ಮನೋಜ್ ಬಾಜಪೇಯಿ ಹಾಗೂ ನಟಿ ದೀಪ್ಶಿಖಾ ನಾಗ್ಪಾಲ್ ಸಂತಾಪ ಸೂಚಿಸಿದ್ದಾರೆ.
"ನನ್ನ ಭಾವನೆಗಳನ್ನು ಈಗ ಪದಗಳಲ್ಲಿ ಹೇಳುವುದು ಅಸಾಧ್ಯ. ಮುಕುಲ್ ನನಗೆ ಒಬ್ಬ ಸಹೋದರನಂತಿದ್ದ. ಒಳ್ಳೆ ಕಲಾವಿದ, ಉತ್ಸಾಹದ ಚಿಲುಮೆಯಂತಿದ್ದ. ಆತ ತುಂಬಾ ಬೇಗನೆ ಬಹಳ ಚಿಕ್ಕ ವಯಸ್ಸಿನಲ್ಲೇ ಕೊನೆಯುಸಿರೆಳೆದಿದ್ದಾನೆ. ಅವರ ಕುಟುಂಬ ಮತ್ತು ಈ ನಷ್ಟದಿಂದ ದುಃಖಿಸುತ್ತಿರುವ ಎಲ್ಲರಿಗೂ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ. ಮಿಸ್ ಯು ಮೇರಿ ಜಾನ್, ನಾವು ಮತ್ತೆ ಭೇಟಿಯಾಗುವವರೆಗೆ. ಓಂ ಶಾಂತಿ" ಎಂದು ನಟ ಮನೋಜ್ ಬಾಜಪೇಯಿ ಬರೆದುಕೊಂಡಿದ್ದಾರೆ.
ಅಂದಹಾಗೆ ಮುಕುಲ್ ದೇವ್ ಸಹೋದರ ರಾಹುಲ್ ದೇವ್ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇದೀಗ ಕಿರಿಯ ಸಹೋದರನ ನಿಧನದ ಬಗ್ಗೆ ರಾಹುಲ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಜೊತೆ ಮುಕುಲ್ ದೇವ್ ಅಂತ್ಯಕ್ರಿಯೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
"ನಮ್ಮ ಸಹೋದರ ಮುಕುಲ್ ದೇವ್ ನಿನ್ನೆ ರಾತ್ರಿ ನವದೆಹಲಿಯಲ್ಲಿ ಶಾಂತಿಯುತವಾಗಿ ನಿಧನರಾದರು. ಅವರ ಮಗಳು ಸಿಯಾ ದೇವ್ ಅವರನ್ನು ಅಗಲಿದ್ದಾರೆ. ಸಹೋದರರಾದ ರಶ್ಮಿ ಕೌಶಲ್, ರಾಹುಲ್ ದೇವ್ ಮತ್ತು ಸೋದರಳಿಯ ಸಿದ್ಧಾಂತ್ ದೇವ್ ಅವರಿಂದ ದೂರಾಗಿದ್ದಾರೆ. ಸಂಜೆ 5 ಗಂಟೆಗೆ ಅಂತ್ಯಕ್ರಿಯೆಗೆ ನಮ್ಮೊಂದಿಗೆ ಸೇರಿ" ಎಂದು ರಾಹುಲ್ ದೇವ್ ಬರೆದುಕೊಂಡಿದ್ದಾರೆ. ದೆಹಲಿಯ ದಯಾನಂದ್ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಹ್ಯಾಂಡ್ಸಮ್ ನಟ ಮುಕುಲ್ ದೇವ್ ನೆಗೆಟಿವ್ ಪಾತ್ರಗಳಲ್ಲಿ ನಟಿಸಿದ್ದೆ ಹೆಚ್ಚು. ಸಹೋದರ ರಾಹುಲ್ ಕೂಡ ವಿಲನ್ ಆಗಿಯೇ ಹೆಚ್ಚು ಸಿನಿಮಾಗಳಲ್ಲಿ ಅಬ್ಬರಿಸಿದ್ದಾರೆ. ಮುಕುಲ್ ದೇವ್ ಅನಾರೋಗ್ಯದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ದಿಢೀರ್ ನಿಧನಕ್ಕೆ ಕಾರಣ ಏನು ಎನ್ನುವುದು ಗೊತ್ತಿಲ್ಲ ಎಂದು Times Now ವರದಿ ಮಾಡಿದೆ.
'ಸನ್ ಆಫ್ ಸರ್ದಾರ್', 'ಜೈ ಹೋ', 'ಆರ್.. ರಾಜ್‌ಕುಮಾರ್', 'ಯಮ್ಲಾ ಪಾಗ್ಲಾ ದಿವಾನ', 'ಜಸ್ಟ್ ಮ್ಯಾರೀಡ್' ಮಕುಲ್ ದೇವ್ ನಟಿಸಿದ ಕೆಲ ಜನಪ್ರಿಯ ಬಾಲಿವುಡ್ ಸಿನಿಮಾಗಳು.


Click it and Unblock the Notifications











