'ರಾಮಾಯಣ' ಚಿತ್ರಕ್ಕಾಗಿ ಯಶ್ ಜೊತೆ ಪಾರ್ಟ್ನರ್‌ಶಿಪ್ ಬಗ್ಗೆ ನಮಿತ್ ಮಲ್ಹೋತ್ರಾ ಮಾತು
ಯಶ್ ನಟನೆಯ ಸಿನಿಮಾ ಯಾವಾಗ ಬರುತ್ತೋ ಎಂದು ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ಜೂನ್ 4ಕ್ಕೆ ಬರಬೇಕಿದ್ದ 'ಟಾಕ್ಸಿಕ್' ರಿಲೀಸ್ ಮುಂದಕ್ಕೆ ಹೋಗಿದೆ. ಯಾವಾಗ ಎನ್ನುವುದು ಸ್ಪಷ್ಟವಾಗಿಲ್ಲ. 'ರಾಮಾಯಣ' ಚಿತ್ರವನ್ನು ಅಕ್ಟೋಬರ್ ಕೊನೆ ವಾರದಲ್ಲಿ ದೀಪಾವಳಿ ಸಂಭ್ರಮದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
ಈಗಾಗಲೇ 'ರಾಮಾಯಣ' ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ. 4000 ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಹೇಳಿದ್ದಾರೆ. ರಾವಣನಾಗಿ ನಟಿಸುವುದರ ಜೊತೆಗೆ ಯಶ್ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ನಮಿತ್ ಒಡೆತನದ DNEG ಗ್ರಾಫಿಕ್ಸ್ ಡಿಸೈನ್ ಸಂಸ್ಥೆ 'ಟಾಕ್ಸಿಕ್' ಚಿತ್ರಕ್ಕೆ ಕೆಲಸ ಮಾಡುತ್ತಿದೆ. ಆ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ಜೊತೆ ಸೇರಿ ಯಶ್ ನಿರ್ಮಾಣ ಮಾಡುತ್ತಿದ್ದಾರೆ.

'ಟಾಕ್ಸಿಕ್' ಚಿತ್ರದ ಗ್ರಾಫಿಕ್ಸ್ ಕೆಲಸಕ್ಕೆ ನಮಿತ್ ಜೊತೆ ಮಾತುಕತೆ ನಡೆಸುವಾಗ ಇಬ್ಬರ ನಡುವೆ ಒಡನಾಟ ಶುರುವಾಗಿತ್ತು. ಅದೇ ಸಮಯದಲ್ಲಿ 'ರಾಮಾಯಣ' ಕಾವ್ಯವನ್ನು ದೊಡ್ಡಮಟ್ಟದಲ್ಲಿ ತೆರೆಗೆ ತರಲು ನಮಿತ್ ಮುಂದಾಗಿರುವ ವಿಚಾರ ಗೊತ್ತಾಗಿ ಯಶ್ ಕೂಡ ಕೈ ಜೋಡಿಸಿದ್ದರು. ಹೀಗೆ ಚಿತ್ರದ ನಿರ್ಮಾಪಕನಾಗಿಯೂ ಯಶ್ ತಮ್ಮನ್ನು ತೊಡಗಿಸಿಕೊಂಡರು. ಸಿನಿಮಾಕಾನ್ ಸಮಾವೇಶದಲ್ಲಿ ಇಬ್ಬರೂ ಸೇರಿ 'ರಾಮಾಯಣ' ಚಿತ್ರದ ಪ್ರಚಾರದಲ್ಲಿ ಭಾಗಿ ಆಗಿದ್ದರು.
ಯಶ್ ಜೊತೆಗಿನ ಪಾರ್ಟ್ನರ್‌ಶಿಪ್ ಬಗ್ಗೆ ಇದೀಗ ನಮಿತ್ ಮಲ್ಹೋತ್ರಾ ಮಾತನಾಡಿದ್ದಾರೆ. Top Film Magazine ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಅವರು ಮಾತನಾಡಿದ್ದಾರೆ. 'ರಾಮಾಯಣ' ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಯಶ್ ನನ್ನ ಜೊತೆ ಕೈ ಜೋಡಿಸಿದ್ದು ಆನೆಬಲ ತಂದುಕೊಟ್ಟಿದೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
"ನಿಮಗೆ ಗೊತ್ತಾ, ಯಶ್ ಅದ್ಭುತ ನಟ ಮಾತ್ರವಲ್ಲ, ಬಹಳ ಮಹತ್ವಾಕಾಂಕ್ಷೆ ಮತ್ತು ಆಕಾಂಕ್ಷೆ ಇರುವವರು. ಅವರು ನನ್ನೊಂದಿಗೆ ನಿಂತು, ನನ್ನ ಮೇಲೆ ಸಂಪೂರ್ಣ ವಿಶ್ವಾಸವಿಟ್ಟು, "ನಮಿತ್, ನಾವು 'ರಾಮಾಯಣ' ಚಿತ್ರವನ್ನು ಮಾಡಲು ಬಯಸಿದರೆ, ಪಾಲುದಾರರಾಗಿ ಒಟ್ಟಿಗೆ ಮಾಡೋಣ. ನಾವು ಅದನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಜಗತ್ತಿಗೆ ಕೊಂಡೊಯ್ಯಬೇಕು" ಎಂದು ಹೇಳಿದ್ದಾಗಿ ನೆನಪಿಸಿಕೊಂಡಿದ್ದಾರೆ. ಯಶ್ ಆ ಮಾತು ನನಗೆ ತುಂಬಾ ಅಮೂಲ್ಯವಾಗಿತ್ತು. ಅವರಷ್ಟು ಸಾಮರ್ಥ್ಯವಿರುವ ಯಾರಾದರೂ ಪಾಲುದಾರರಾಗಿ ಬಂದು ನಟನಾಗಿ ಮಾತ್ರವಲ್ಲದೆ ತಮ್ಮ ಪೂರ್ಣ ಶಕ್ತಿಯನ್ನು ನೀಡಿದಾಗ, ಅದು ಬಹಳ ದೂರ ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಅದೇ ನಂಬಿಕೆ ಅಂತಿಮವಾಗಿ ನಾವು ಭಾರತದಿಂದ ಜಗತ್ತಿಗೆ ಹಿಂದೆಂದೂ ಮಾಡದ ಏನನ್ನಾದರೂ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಜನರಿಗೆ ಅರಿತುಕೊಳ್ಳುವಂತೆ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
ಎ. ಆರ್ ರಹಮಾನ್ ಹಾಗೂ ಹ್ಯಾನ್ಸ್ ಜಿಮ್ಮರ್ ಅವರನ್ನು ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎಂದು ಕೂಡ ನಮಿತ್ ಹೇಳಿದ್ಧಾರೆ. ನಾನು ಮೊದಲಿನಿಂದ ರಹಮಾನ್ ಸಂಗೀತದ ಅಭಿಮಾನಿ. ಬಳಿಕ ಹಾಲಿವುಡ್ ಸಿನಿಮಾಗಳನ್ನು ನೋಡಲು ಆರಂಭಿಸಿದ ನಂತರ ಹ್ಯಾನ್ಸ್ ಜಿಮ್ಮರ್ ಸಂಗೀತಕ್ಕೆ ಮಾರು ಹೋದೆ. ಭಾರತ ಹಾಗೂ ಪಾಶ್ಚಿಮಾತ್ಯ ಸಂಗೀತವನ್ನು ಸೇರಿಸಿದರೆ ಎಂತಹ ಮ್ಯಾಜಿಕ್ ಆಗುತ್ತದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ರಹಮಾನ್‌ಗೆ 'ರಾಮಾಯಣ' ಬಗ್ಗೆ ಹೇಳಬೇಕಿಲ್ಲ. ಹ್ಯಾನ್ಸ್ ಅವರಿಗೆ ನಮ್ಮ ವಿಷನ್ ಹೇಳಿದಾಗ ಅವರು ಖುಷಿಯಿಂದ ಒಪ್ಪಿಕೊಂಡ್ರು ಎಂದಿದ್ದಾರೆ.
'ರಾಮಾಯಣ' ಚಿತ್ರದಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್, ಶೂರ್ಪನಖಿಯಾಗಿ ರಕುಲ್, ಮಂಡೋದರಿಯಾಗಿ ಕಾಜಲ್ ಅಗರ್‌ವಾಲ್ ಬಣ್ಣ ಹಚ್ಚಿದ್ದಾರೆ.


Click it and Unblock the Notifications