ದೀಪಾವಳಿ ಮುನ್ನವೇ ರಾಮ-ರಾವಣ ಮಹಾಕಾಳಗ ; ರಾಮಾಯಣ ರಿಲೀಸ್ ಡೇಟ್ ಚೇಂಜ್ - ನಮಿತ್ ಮಲ್ಹೋತ್ರಾ ಮಾಸ್ಟರ್ ಪ್ಲಾನ್
ದೀಪಾವಳಿ ಅಂದರೆ ಸಂಭ್ರಮ.. ಸಡಗರ. ದೀವಳಿಗೆಯ ದೀಪದ ಬತ್ತಿ ಉರಿದು ಬೆಳಕನ್ನು ಸುತ್ತಲೂ ಬೀರಿ ಕತ್ತಲಿನ ನಿವಾರಣೆಗೆ ನೆರವಾಗುವಂತೆ ಮಾನವನ ಬದುಕೂ ಕೂಡ ಜಗದ ಸಂಸಾರದ ಕತ್ತಲಿನ ನಿವಾರಣೆಗೆ ವಿನಿಯೋಗವಾಗುತ್ತಾ ನೆರವಾಗಬೇಕು ಎಂಬುದನ್ನು ದೀಪಾವಳಿ ಹಬ್ಬ ವರ್ಷಾನು ವರ್ಷ ನಮಗೆ ನೆನಪು ಮಾಡುತ್ತೆ. ಇಂತಹ ದೀಪಾವಳಿ ಹಬ್ಬ ಅಂದರೆ ಚಿತ್ರರಂಗಕ್ಕೆ ತುಂಬಾನೇ ಅಚ್ಚು ಮೆಚ್ಚು.
ಇದಕ್ಕೆ ಕೈಗನ್ನಡಿ ಎಂಬಂತೆ ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಲವು ಚಿತ್ರಗಳು ತೆರೆಗೆ ಬರುತ್ತವೆ. ಅದರಲ್ಲಿಯೂ ಸ್ಟಾರ್ ಗಳ ಚಿತ್ರಕ್ಕೆ ಈ ಸಮಯದಲ್ಲಿ ಎಲ್ಲಿಲ್ಲದ ಬೇಡಿಕೆ ಇರುತ್ತೆ. ಸ್ಟಾರ್ ಗಳ ನಡುವೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಪೈಪೋಟಿಯೂ ಇರುತ್ತೆ.

ಆದರೆ ಈ ವರ್ಷ ಬಾಲಿವುಡ್‌ನಲ್ಲಿ ಈ ನೂಕುನುಗ್ಗಲಿನ ವಾತಾವರಣ ಇಲ್ಲ. ಯಾಕೆಂದರೆ ಅವತ್ತು ಅಂದರೆ ದೀಪಾವಳಿ ಹಬ್ಬದ ಪ್ರಯುಕ್ತ ಮಹಾಕಾವ್ಯವೊಂದು ಬೆಳ್ಳಿಪರದೆಯ ಮೇಲೆ ಅನಾವರಣವಾಗಲಿದೆ. ಅದುವೇ ''ರಾಮಾಯಣ''.
ಆದರೆ ಈಗ ಈ ''ರಾಮಾಯಣ''ದಲ್ಲಿ ಬದಲಾವಣೆಯಾಗಿದೆ. ದೀಪಾವಳಿ ಹಬ್ಬದಂದು ಅಲ್ಲ ಬದಲಿಗೆ ಒಂದು ವಾರದ ಮೊದಲೇ ''ರಾಮಾಯಣ'' ಬೆಳ್ಳಿಪರದೆಯ ಮೇಲೆ ಧಗಧಗಿಸಲಿದೆ. ಈ ಬದಲಾವಣೆ ಕಾರಣದ ಹಿಂದೆ ವ್ಯಾಪಾರದ ಲೆಕ್ಕಾಚಾರ ಇದೆ ಎನ್ನುವುದೇ ಸದ್ಯದ ಬ್ರೇಕಿಂಗ್ ನ್ಯೂಸ್.
ಹೌದು, ಅಸಲಿಗೆ ನವೆಂಬರ್ 6ರಂದು ಹಾಲಿವುಡ್‌ನ ದೈತ್ಯರು ಕಣಕ್ಕಿಳಿಯುತ್ತಿದ್ದಾರೆ. ''ಗಾಡ್ಜಿಲ್ಲಾ ಮೈನಸ್ ಜೀರೋ'' ಮತ್ತು ''ದಿ ಕ್ಯಾಟ್ ಇನ್ ದಿ ಹ್ಯಾಟ್'' ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇನ್ನು ಭಾರತದಲ್ಲಿ ಹಾಲಿವುಡ್ ಕ್ರೇಜ್ ಹೇಗಿದೆ ಎನ್ನುವುದು ಎಲ್ಲರಿಗೆ ಗೊತ್ತಿರುವ ವಿಚಾರ. ಹೀಗಿರುವಾಗ ಹಾಲಿವುಡ್‌ನಲ್ಲಿ ಕೇಳಬೇಕಾ..?
ಹೀಗಾಗಿಯೇ ''ರಾಮಾಯಣ'' ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಒಂದು ಹೆಜ್ಜೆ ಇಟ್ಟಿದ್ದಾರೆ. ಹಾಗಂಥ ನಮಿತ್ ಮಲ್ಹೋತ್ರಾ ಹೆದರಿದ್ದಾರೆ ಎಂದರ್ಥ ಅಲ್ಲ. ಬದಲಿಗೆ ಹಾಲಿವುಡ್ ದೈತ್ಯರನ್ನು ಮಣ್ಣು ಮುಕ್ಕಿಸಿ, ಎರಡು ವಾರದಲ್ಲಿ ಹಾಕಿದ ಬಂಡವಾಳ ಎತ್ತಿಕೊಂಡು ಬಿಡುವ ಪ್ಲಾನ್ ಮಾಡಿದ್ದಾರೆ ನಮಿತ್ ಮಲ್ಹೋತ್ರಾ.

''ಬಾಲಿವುಡ್ ಹಂಗಾಮ'' ವರದಿಯ ಪ್ರಕಾರ ನಮಿತ್ ಮಲ್ಹೋತ್ರಾಗೆ ಕೇವಲ ಭಾರತದಲ್ಲಿ ಮಾತ್ರ ಅಲ್ಲ ಅಖಂಡ ವಿಶ್ವದೆಲ್ಲೆಡೆ ತಮ್ಮ ''ರಾಮಾಯಣ'' ಚಿತ್ರಕ್ಕೆ ಅಭೂತಪೂರ್ವ ಸ್ವಾಗತ ಸಿಗುತ್ತೆ ಎನ್ನುವ ಭರವಸೆ ಇದೆ. ಇದೇ ಭರವಸೆಯಲ್ಲಿ ಒಂದು ವಾರದ ಮೊದಲು ಅಂದರೆ ಅಕ್ಟೋಬರ್ 30ರಂದು ''ರಾಮಾಯಣ'' ಬಿಡುಗಡೆ ಮಾಡಲು ನಮಿತ್ ಮಲ್ಹೋತ್ರಾ ಮುಂದಾಗಿದ್ದಾರೆ.
ಒಂದು ವೇಳೆ ನಮಿತ್ ಮಲ್ಹೋತ್ರಾ ಅವರ ಲೆಕ್ಕಾಚಾರ ಸರಿಯಾದರೆ ದೀಪಾವಳಿಯ ರಜಾದಿನಗಳಂದು ಚಿತ್ರಮಂದಿರದ ಎದುರು ನೂಕು ನುಗ್ಗಲಿನ ವಾತಾವರಣ ಕಂಡು ಬರುವುದು ಖಚಿತ. ಚಿತ್ರದ ಗಳಿಕೆ ದುಪ್ಪಟ್ಟಾಗುವುದು ನಿಶ್ಚಿತ.
ಸರಳವಾಗಿ ಹೇಳಬೇಕು ಅಂದರೆ ಮೊದಲ ವಾರದಲ್ಲೇ ಪಾಸಿಟಿವ್ ಪ್ರತಿಕ್ರಿಯೆಯನ್ನು ''ರಾಮಾಯಣ'' ಪಡೆದುಕೊಂಡರೆ, ನೋಡಿದ ಜನ ನಾಲ್ಕೊಳ್ಳೆಯ ಮಾತುಗಳನ್ನಾಡಿದರೆ, ದೀಪಾವಳಿ ಹಬ್ಬದ ರಜಾ ದಿನಗಳಿರುವ ಎರಡನೇ ವಾರದಲ್ಲಿ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಉತ್ತುಂಗಕ್ಕೇರಲಿದೆ.
ಈ ಮೂಲಕ ಹಬ್ಬದ ದಿನಗಳಲ್ಲಿ ಎರಡನೇ ವಾರದ ಗಳಿಕೆಯು ಮೊದಲ ವಾರಕ್ಕಿಂತಲೂ ಹೆಚ್ಚಾಗುವಂತೆ ಮಾಡಿ, ಭಾರತೀಯ ಚಿತ್ರರಂಗದಲ್ಲೇ ಹೊಸ ಬಿಸಿನೆಸ್ ಟ್ರೆಂಡ್ ಸೃಷ್ಟಿಸುವ ಉದ್ದೇಶ ನಮಿತ್ ಮಲ್ಹೋತ್ರಾ ಅವರದ್ದು.
ಇದರ ಜೊತೆ ಅಕ್ಟೋಬರ್ 30ರಂದು ಬಿಡುಗಡೆ ಮಾಡಿದರೆ ಯಾವುದೇ ಪೈಪೋಟಿ ಇಲ್ಲದೆ ಮೊದಲ ವಾರ ದೇಶದ ಎಲ್ಲಾ ಪ್ರಮುಖ ಮಲ್ಟಿಪ್ಲೆಕ್ಸ್, ಐಮ್ಯಾಕ್ಸ್ (IMAX) ಹಾಗೂ ಸಿಂಗಲ್ ಸ್ಕ್ರೀನ್‌ಗಳನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳಬಹುದು.
450 ಕೋಟಿ ವಿತರಣಾ ಹಕ್ಕುಗಳ ಭಾರಿ ಡೀಲ್!
ಇನ್ನು ''ರಾಮಾಯಣ''ದ ಮೇಲೆ ಕೇವಲ ನಿರ್ಮಾಪಕ ನಮಿತ್ ಮಲ್ಹೋತ್ರಾಗೆ ಮಾತ್ರ ವಿಶ್ವಾಸ ಇಲ್ಲ. ವಿತರಕರಿಗೆ ಕೂಡ ''ರಾಮಾಯಣ'' ಭಾರತೀಯ ಚಲನಚಿತ್ರ ರಂಗದ ಇತಿಹಾಸದಲ್ಲಿಯೇ ಹೊಸದೊಂದು ಇತಿಹಾಸ ಸೃಷ್ಟಿಸುತ್ತೆ ಎನ್ನುವ ನಂಬಿಕೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರದ ವಿತರಣೆಯ ಹಕ್ಕು ಪಡೆಯಲು ಹಲವರು ಮುಂದಾಗಿದ್ದು, ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ದೇಶದ ಪ್ರಮುಖ ವಿತರಕರಿಂದ ಸುಮಾರು 450 ಕೋಟಿ ಮೊತ್ತದ ಬೃಹತ್ ಆಫರ್ ಬಂದಿದೆ ಎಂದು ಕೂಡ ''ಬಾಲಿವುಡ್ ಹಂಗಾಮ'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಯಾರಿಗೆ ವಿತರಣಾ ಹಕ್ಕುಗಳನ್ನು ನೀಡಬೇಕು ಎಂಬ ಬಗ್ಗೆ ಸದ್ಯದಲ್ಲೇ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.


Click it and Unblock the Notifications