ಡಿವೋರ್ಸ್ ನೋವು ಮರೆತು 'ಸೆಕೆಂಡ್ ಇನಿಂಗ್ಸ್' ಶುರು ಮಾಡಿದ ನಟಿ ; ಸದ್ದಿಲ್ಲದೇ ರಿಜಿಸ್ಟರ್ ಮದುವೆಯಾದ 44 ವರ್ಷದ ಚೆಲುವೆ
ಮದುವೆ ಎಂಬ ಮೂರಕ್ಷರ ಜೀವನ ಪರ್ಯಂತದ ಬದ್ದತೆ ಮತ್ತು ಭರವಸೆ. ಆದರೆ .. ವಾಸ್ತವದಲ್ಲಿ ಕೆಲ ಒಮ್ಮೆ ಈ ಬದ್ದತೆ ಮರೆಯಾಗುತ್ತೆ. ಬದುಕಿನ ಪ್ರಯಾಣದಲ್ಲಿ ಸಂಬಂಧ ಅರ್ಧದಲ್ಲಿಯೇ ಮುರಿದು ಬೀಳುತ್ತೆ. ಹೀಗಾದಾಗ ಸಾಮಾನ್ಯವಾಗಿ ಅನೇಕರು ಮತ್ತೊಂದು ಮದುವೆಯಾಗುವ ಮನಸು ಮಾಡುವುದಿಲ್ಲ. ಅಯ್ಯೋ ಒಮ್ಮೆ ಅನುಭವಿಸಿದ್ದೇ ಸಾಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ.
ಇನ್ನು ಕೆಲವರು ಅಳೆದು ತೂಗಿ ಹೊಸ ಭರವಸೆಯ ಜೊತೆ ಹೊಸ ಬದುಕಿಗೆ ಇನ್ನೊಮ್ಮೆ ಮುನ್ನುಡಿ ಬರೆಯಲು ಅಣಿಯಾಗುತ್ತಾರೆ. ಪ್ರೀತಿಗೆ ಹಾತೊರೆಯುತ್ತಾರೆ. ತಮ್ಮ ಕಷ್ಟಕ್ಕೆ..ಕಣ್ಣೀರಿಗೆ.. ಹೆಗಲಾಗುವ ಸಂಗಾತಿಯನ್ನು ಹುಡುಕಿ ಹೊಸ ಭರವಸೆಯ ಜೊತೆ ತಮ್ಮ ಬದುಕಿನ ಹೊಸ ಅಧ್ಯಾಯ ಶುರು ಮಾಡುತ್ತಾರೆ. ಉದಾಹರಣೆಗೆ ನಂದಿತಾ ಪಾಟ್ಕರ್.

ಹೌದು, ನಂದಿತಾ ಪಾಟ್ಕರ್.. ಮರಾಠಿ ಚಿತ್ರರಂಗದ ಚೆಲುವೆ. ಒಂದ್ಕಾಲದಲ್ಲಿ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಾ ರಂಗಭೂಮಿಯತ್ತ ವಾಲಿದ ನಂದಿತಾ 2014ರಲ್ಲಿ ತೆರೆಕಂಡ ''ಎಲಿಜಬೆತ್ ಏಕಾದಶಿ'' ಚಿತ್ರದ ಮೂಲಕ ಚಿತ್ರ ರಂಗಕ್ಕೆ ಬಂದರು.
ಆ ನಂತರ ಕಿರುತೆರೆಯತ್ತ ಮುಖ ಮಾಡಿದ ನಂದಿತಾ ''ಸಹಕುಟುಂಬ ಸಹಪರಿವಾರ''.. ''ಮಾಝೆ ಪತಿ ಸೌಭಾಗ್ಯವತಿ''.. ''ತು ಮಾಝಾ ಸಂಗಾತಿ'' .. ಹೀಗೆ ಹಲವು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಮಹಾರಾಷ್ಟ್ರದೆಲ್ಲೆಡೆ ಮನೆ ಮಾತಾದರು. ''ಬಾಬಾ''.. ''ಖಾರಿ ಬಿಸ್ಕೆಟ್''.. ''ಬಾಲ್ಭಾರತಿ''.. ''ಪಂಚಕ್''.. ಮತ್ತು ''ಡಾ. ಕಾಶಿನಾಥ್ ಘಾಣೇಕರ್'' ಇವರು ಅಭಿನಯಿಸಿರುವ ಇನ್ನುಳಿದ ಕೆಲ ಪ್ರಮುಖ ಸಿನಿಮಾಗಳು.
ಇಂಥಾ ನಂದಿತಾ ಪಾಟ್ಕರ್ ಸದ್ಯ ಸದ್ದಿಲ್ಲದೇ ತಮ್ಮ 44ನೇ ವರ್ಷದಲ್ಲಿ ನಿನ್ನೆ (ಏಪ್ರಿಲ್ 6-2026) ಎರಡನೇ ಬಾರಿ ಮದುವೆಯಾಗಿದ್ಧಾರೆ. ಕೆಲವೇ ಕೆಲ ಅತ್ಯಾಪ್ತರ ಸಮ್ಮುಖದಲ್ಲಿ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ನಂದಿತಾ ಕೈ ಹಿಡಿದ ವರನ ಹೆಸರು ವಿಪುಲ್ ಮಹಾಗಾಂವ್ಕರ್. ಮರಾಠಿ ರಂಗಭೂಮಿಯಲ್ಲಿ ಹೆಸರಾಂತ ನಿರ್ದೇಶಕ ಇವರು.
ಬ್ಯಾಕ್‌ಸ್ಟೇಜ್ ಆರ್ಟಿಸ್ಟ್ ಆಗಿ ವೃತ್ತಿಜೀವನ ಆರಂಭಿಸಿದ ವಿಪುಲ್, 17ಕ್ಕೂ ಅಧಿಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ''ಪೈ ಪೈಶಾಚಿ ಗೋಷ್ಟ್''.. ''ಖಿಡ್ಕಿ'.. ''ಉಧ್ವಸ್ತ್ ಧರ್ಮಶಾಲಾ''.. ಮುಂತಾದ ನಾಟಕಗಳ ಮೂಲಕ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ.

ಇನ್ನು ವಿಪುಲ್ ಅವರಿಗೆ ಇದು ಎರಡನೇ ಮದುವೆನಾ..? ಅಥವಾ ಮೊದಲನೆಯದ್ದಾ..? ಎನ್ನುವುದು ಗೊತ್ತಿಲ್ಲ. ಯಾಕೆಂದರೆ ತಮ್ಮ ವೈಯಕ್ತಿಕ ಬದುಕನ್ನು ವಿಪುಲ್ ತುಂಬಾನೇ ಗೌಪ್ಯವಾಗಿ ಇಟ್ಟಿದ್ದಾರೆ. ನಂದಿತಾ ಪಾಟ್ಕರ್ ಕೂಡ ಇದರಿಂದ ಹೊರತಾಗಿಲ್ಲ. ಹಲವರಿಗೆ ಇದು ನಂದಿತಾ ಅವರ ಎರಡನೇ ಮದುವೆ ಎನ್ನುವುದಷ್ಟೇ ಗೊತ್ತು. ಆದರೆ ಮೊದಲ ಮದುವೆ ಮತ್ತು ವಿಚ್ಚೇದನದ ಕುರಿತು ಯಾರಲ್ಲಿಯೂ ಮಾಹಿತಿ ಇಲ್ಲ.
ನಂದಿತಾ ಪಾಟ್ಕರ್ ಕೂಡ ಯಾವೊಂದು ಸಂದರ್ಶನದಲ್ಲಿಯೂ ತಮ್ಮ ವೈಯಕ್ತಿಕ ಬದುಕಿನ ಈ ಪುಟವನ್ನು ತೆರೆದು ಓದಿಲ್ಲ. ಒಂಟಿಯಾಗಿ ಜೀವನ ನಿರ್ವಹಿಸುವುದು ಕಷ್ಟವಾಗುತ್ತಿದೆ, ಡಿವೋರ್ಸ್ ಆದ ನಂತರ ನಮ್ಮ ಸಮಾಜ ನನ್ನನ್ನೂ ಹೇಗೆ ನೋಡುತ್ತೆ ಎಂಬ ಭಯ ನನ್ನಲ್ಲಿತ್ತು ಎಂದು ಮಾತ್ರ ನಂದಿತಾ ಪಾಟ್ಕರ್ ಹಿಂದೆ ನೀಡಿರುವ ಸಂದರ್ಶನಗಳಲ್ಲಿ ಹೇಳಿದ್ದಾರೆಯೇ ಹೊರತು ಮದುವೆ ಮುರಿದು ಬೀಳಲು ಕಾರಣವೇನು ಎನ್ನುವುದನ್ನು ಹೇಳಿಲ್ಲ.
ಸದ್ಯ ನಂದಿತಾ ಪಾಟ್ಕರ್ ಮತ್ತು ವಿಪುಲ್ ಮಹಾಗಾಂವ್ಕರ್ ಅವರ ಮದುವೆಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರು ಈ ನವ ಜೋಡಿಗೆ ಶುಭ ಕೋರುತ್ತಿದ್ದಾರೆ. ಸರಳವಾಗಿ ಹೊಸ ಬದುಕು ಶುರು ಮಾಡಿದ್ದಕ್ಕೆ ಇವರ ಅಭಿಮಾನಿಗಳು ಅಭಿನಂದನೆಯನ್ನು ಸಲ್ಲಿಸುತ್ತಿದ್ದಾರೆ.


Click it and Unblock the Notifications











