"ನನಗೆ ಸಿಕ್ಕ ಫಿಲ್ಮ್‌ಫೇರ್ ಟ್ರೋಫಿಗಳನ್ನು ವಾಶ್‌ರೂಂ ಡೋರ್ ಹಿಡಿಕೆಯಾಗಿ ಇಟ್ಟಿದ್ದೇನೆ.. ಯಾಕೆ ಗೊತ್ತಾ?"
ಇತ್ತೀಚೆಗಷ್ಟೆ ನಟ ಕಿಶೋರ್ ಪ್ರಶಸ್ತಿಗಳಿಗಾಗಿ ನಡೆಯುವ ಲಾಬಿ ಬಗ್ಗೆ ಮಾತನಾಡಿದ್ದರು. ಪ್ರಶಸ್ತಿ ಕೊಡುವುದಲ್ಲ, ತಗೋಳ್ಳೊದು ಎಂದು ವ್ಯಂಗ್ಯವಾಡಿದ್ದರು. ಇದೀಗ ಬಾಲಿವುಡ್ ನಟ ನಸೀರುದ್ದೀನ್ ಶಾ ಕೂಡ ಪ್ರಶಸ್ತಿಗಳ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ತಮಗೆ ಸಿಕ್ಕ ಪ್ರಶಸ್ತಿಗಳನ್ನು ಬಾತ್‌ರೂಮ್ ಡೋರ್ ಹ್ಯಾಂಡಲ್ ಆಗಿ ಬಳಸುತ್ತಿರುವುದಾಗಿ ಹೇಳಿ ನಟ ಅಚ್ಚರಿ ಮೂಡಿಸಿದ್ದಾರೆ.
ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಸಿರುದ್ದೀನ್ ಶಾ "ಪಾತ್ರಕ್ಕಾಗಿ ಯಾರು ಶ್ರಮಿಸುತ್ತಾರೋ ಅವರು ಶ್ರೇಷ್ಠ ನಟ- ನಟಿ ಆಗುತ್ತಾರೆ ಎಂದು ಹೇಳಿದ್ದಾರೆ. ಅದು ಬಿಟ್ಟು ಚಿತ್ರರಂಗದ ಕೆಲವೇ ಕೆಲವು ನಟರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಈ ವರ್ಷದ ಅತ್ಯುತ್ತಮ ನಟ ಎಂದು ಘೋಷಿಸುವುದು ಸರಿಯಲ್ಲ ಎಂದು ತಾವು ಭಾವಿಸುವುದಾಗಿ ನಸೀರುದ್ದೀನ್ ಶಾ ಅಭಿಪ್ರಾಯಪಟ್ಟಿದ್ದಾರೆ. ಪ್ರಶಸ್ತಿಗಳನ್ನು ನೋಡಿ ನಾನು ಹಿಗ್ಗುವುದಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ ನನಗೆ ಘೋಷಿಸಿದ ಎರಡು ಪ್ರಶಸ್ತಿಗಳನ್ನು ಪಡೆಯಲು ನಾನು ಹೋಗಲಿಲ್ಲ."

"ನನ್ನ ವೃತ್ತಿಜೀವನದ ಆರಂಭದಲ್ಲಿ ನನಗೆ ಪ್ರಶಸ್ತಿಗಳು(ಟ್ರೋಫಿ) ಬಂದಾಗ ನನಗೆ ಸಂತೋಷವಾಯಿತು. ಆದರೆ ಅದರ ಬಗ್ಗೆ ತಿಳಿದ ನಂತರ ನನಗೆ ಪ್ರಶಸ್ತಿಗಳ ಬಗ್ಗೆ ಆಸಕ್ತಿ ಕಡಿಮೆಯಾಯಿತು. ಫಿಲ್ಮ್‌ಫೇರ್ ಅಂತೆ, ಮತ್ತೆ ಇನ್ನು ಯಾವ್ಯಾವುದೋ ಹೆಸರುಗಳ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅವುಗಳಲ್ಲಿ ನನಗೆ ಶ್ರೇಷ್ಠವಾದದ್ದೇನೂ ಕಾಣುತ್ತಿಲ್ಲ" ಎಂದು ನಾಸಿರುದ್ದೀನ್ ಶಾ ಹೇಳಿದ್ದಾರೆ.
ವಾಶ್‌ರೂಂ ಡೋರ್ ಹಿಡಿಕೆಯಾಗಿ ಟ್ರೋಫಿ
ಪ್ರಶಸ್ತಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಾಗೂ ಪ್ರಶಸ್ತಿಗಳನ್ನು ನೀವು ಬಾತ್ ರೂಂ ಹಿಡಿಕೆಯಾಗಿ ಬಳಸುತ್ತಿದ್ದೀರಾ ಎನ್ನುವ ಗಾಸಿಪ್ ಬಗ್ಗೆ ಏನು ಹೇಳುತ್ತೀರಾ ಎನ್ನುವ ಪ್ರಶ್ನೆಗೆ "ಈಗಾಗಲೇ ನನಗೆ ಹಲವು ಪ್ರಶಸ್ತಿಗಳು ಬಂದಿದ್ದು, ಫಾರ್ಮ್ ಹೌಸ್ ನಿರ್ಮಿಸಿದರೆ ಬಾತ್‌ರೂಂ ಡೋರ್ ಹಿಡಿಕೆಯಾಗಿ ಪ್ರಶಸ್ತಿಗಳನ್ನು ಬಳಸಬೇಕು ಎಂದುಕೊಂಡೆ. ಏಕೆಂದರೆ ಆಗ ವಾಶ್‌ರೂಮ್‌ಗೆ ಹೋಗುವವರೆಲ್ಲ ಆ ಪ್ರಶಸ್ತಿಗಳನ್ನು ಹಿಡಿಯುತ್ತಾರೆ, ಆದ್ದರಿಂದ ಅವರಿಗೂ ಆ ಪ್ರಶಸ್ತಿಗಳು ಬರುತ್ತವೆ ಎಂದು ಹೇಳಿದ್ದಾರೆ.

ಪದ್ಮಶ್ರೀ, ಪದ್ಮಭೂಷಣ ವಿಶೇಷ
"ಹೆಚ್ಚಿನ ಪ್ರಶಸ್ತಿಗಳು ಲಾಬಿಯಿಂದ ಬರುತ್ತವೆ ಎಂದು ಅವರು ಹೇಳಿದ್ದಾರೆ. ಆದರೆ ರಾಷ್ಟ್ರಪತಿ ಕೈಯಿಂದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದಾಗ ಖುಷಿಯಾಯಿತು. ಅದನ್ನು ನೋಡಿ ಅವರ ತಂದೆ ಖುಷಿ ಪಡುತ್ತಾರೆ ಎಂದುಕೊಂಡೆ" ಎಂದು ನಸೀರುದ್ಧೀನ್ ಶಾ ವಿವರಿಸಿದ್ದಾರೆ. ಸದ್ಯ ಬಾಲಿವುಡ್ ನಟನ ಹೇಳಿಕೆ ಭಾರೀ ವೈರಲ್ ಆಗಿದೆ.
"ಪ್ರಶಸ್ತಿಗಳು ಬರಲ್ಲ..'ತಗೋ'ಬೇಕು"
ಇತ್ತೀಚೆಗೆ ನಟ ಕಿಶೋರ್ ಮಾತನಾಡಿ "ಪ್ರಶಸ್ತಿಗಳು ಬರಲ್ಲ..'ತಗೋ'ಬೇಕು" ಎಂದಿದ್ದರು. "ಇದೆಲ್ಲಾ ಹೇಳಿದರೆ ಯಾರಿಗೆ ತೊಂದರೆ ಆಗುತ್ತೆ ಅಂತ ಗೊತ್ತಿಲ್ಲ. ಆದರೆ ಪ್ರಶಸ್ತಿಗಾಗಿ ಲಾಬಿ ನಡೆಯುತ್ತಲೇ ಇದೆ. ನಾನು ಬಂದ ಸಮಯದಲ್ಲೇ ಪ್ರಶಸ್ತಿಗಾಗಿ ದುಡ್ಡು, ಲಾಬಿ ಎಲ್ಲಾ ಶುರುವಾಯಿತು. ಗೊತ್ತಿಲ್ಲ, ಈಗ ಕೊಡುವ ಅವಾರ್ಡ್‌ಗಳನ್ನು ನೋಡಿದರೆ ಅದರ ಹಿಂದೆ ಏನಾಗಿರಬಹುದು ಅಂತ ಯೋಚಿಸಿದರೆ ನಿಜವಾಗಿಯೂ ಅನುಮಾನ ಬರುತ್ತೆ" ಎಂದಿದ್ದರು.

ನನಗೆ ನಂದಿ ಸಿಕ್ಕಿಲ್ಲ ಎಂದ ಸಿದ್ದಾರ್ಥ್
ತಮಿಳು ನಟ ಸಿದ್ದಾರ್ಥ್ ಸಹ ಪ್ರಶಸ್ತಿ ನೀಡುವುದರ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. "ನೀವು ನನ್ನನ್ನು ಕೇಳಬಹುದು, ಯಾಕೆ ನಿಮಗೆ ನಂದಿ (ಆಂಧ್ರ ಪ್ರದೇಶದ ರಾಜ್ಯ ಪ್ರಶಸ್ತಿ) ಅವಾರ್ಡ್ ಬಂದಿಲ್ಲ, ಇಷ್ಟು ಒಳ್ಳೆ ಸಿನಿಮಾ ಮಾಡಿದ್ದೀರಾ ಎಂದು. ಈ ಪ್ರಶ್ನೆ ನನ್ನನ್ನು ಕೇಳಬಾರದು. ನಂದಿ ಅವಾರ್ಡ್‌ನ ಕೇಳಬೇಕು. ನಾನು ಏನಾದರೂ ತಪ್ಪು ಮಾಡಿದ್ದೀನಾ? ನನಗೆ ಯಾಕೆ 'ಬೊಮ್ಮರಿಲ್ಲು', 'ನುವೊಸ್ತಾನಂಟೆ ನೇನೊದ್ದಂಟಾನ' ಸಿನಿಮಾಗಳಿಗೆ ಕೊಟ್ಟಿಲ್ಲ ಅಂತ. ಒಂದು ವೇಳೆ ಅವಾರ್ಡ್ ಕೊಟ್ಟಿದ್ದರೆ ಏನಾಗುತ್ತಿತ್ತು. ಆ ಸಿನಿಮಾಗಳಿಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಬಂತು. ನನಗೆ ಮಾತ್ರ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದರು.


Click it and Unblock the Notifications











