ಸರಿಯಾದ ಸಮಯಕ್ಕೆ ಸರಿಯಾದ ವ್ಯಕ್ತಿ ಸಿಕ್ಕಾಗ ನಾನು ಮತ್ತೆ ಪ್ರೀತಿಯಲ್ಲಿ ಬೀಳಬಹುದು ಎಂದ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ..!
ಲವ್ ಮಾಡೋಕೆ ನಾನಾ ವಿಧ. ಯಾರು ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೋ ಅದು ಅವರ ಅವರಿಗಷ್ಟೇ ಗೊತ್ತಿರುತ್ತೆ. ಆದರೆ.. ರೀಲ್‌ನಲ್ಲಿ ಚಿಗುರೊಡೆಯುವ ಪ್ರೀತಿ ಬಹುತೇಕ ರಿಯಲ್ ಆಗಿರುತ್ತೆ. ಇದಕ್ಕೆ.. ಉದಾಹರಣೆ ಎಂಬಂತೆ ಹೃದಯದಿಂದ ಮದುವೆಯಾಗಿ ಇಂದು ಸುಖ ಸಂಸಾರ ನಡೆಸುತ್ತಿರುವ ಅನೇಕರು ಈ ಬಣ್ಣದ ಪ್ರಪಂಚದಲ್ಲಿದ್ದಾರೆ.
ಆದರೆ.. ಇವರೆಲ್ಲರ ನಡುವೆ ಈಗೀಗ ಅದ್ಯಾಕೋ ಕೆಲವರ ಬದುಕಿನಲ್ಲಿ ಅನ್ಯೋನ್ಯತೆಯ ಕೊರತೆ ಕಾಡುತ್ತಿದೆ. ಸಣ್ಣ ಸಣ್ಣ ವಿಚಾರಕ್ಕೆ ದಾಂಪತ್ಯ ಮುರಿದು ಬೀಳುತ್ತಿದೆ. ಇನ್ನೂ ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ ಆ ನೋವು ಅನೇಕರಿಗೆ ವರ್ಷಾನುವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ.. ಪ್ರೀತಿ ಮರೆಯಲಾಗದೆ.. ಅನೇಕರು ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ಇದೆ.

ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನೂ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಇವತ್ತು ದೂರವಾದಷ್ಟೇ ಬೇಗ ಬೇರೆಯವರಿಗೆ ಅನೇಕರು ಹತ್ತಿರವಾಗುತ್ತಾರೆ. ದಾಂಪತ್ಯ ಮುರಿದು ಬಿದ್ದ ನೋವಾಗಲಿ.. ಪ್ರೀತಿಯಲ್ಲಿ ಅನುಭವಿಸಿದ ನೋವಾಗಲಿ.. ಮುಖದಲ್ಲಿ ಈ ಯಾವ ಲವಲೇಶವೂ ಕಾಣಿಸುವುದಿಲ್ಲ. ಇದಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಮತ್ತೊಂದು ಉದಾಹರಣೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಈಗ ದೂರವಾಗಿದ್ದಾರೆ. ಮೊದಲ ನೋಟ, ಮೊದಲ ಭೇಟಿ, ಮೊದಲ ಸ್ಪರ್ಶ ಮರೆತು ಅವರ ಅವರ ಬದುಕಿನಲ್ಲಿ ನೆಮ್ಮದಿಯಾಗಿದ್ದಾರೆ. ಎರಡೆರಡು ಬಾರಿ ಮದುವೆಯಾಗಿದ್ದನ್ನೂ ಕೂಡ ಇಬ್ಬರು ಮರೆತು ಖುಷಿಯಾಗಿದ್ದಾರೆ. ಬೇರೆಯವರ ಸಾಂಗತ್ಯವನ್ನು ಬಯಸುತ್ತಿದ್ದಾರೆ.
ಇದಕ್ಕೆ ಪುರಾವೆ ಎಂಬಂತೆ ಹಾರ್ದಿಕ್ ಪಾಂಡ್ಯ ಹೆಸರು ಬ್ರಿಟನ್‌ನ ಬೆಡಗಿ ಜಾಸ್ಮಿನ್ ವಾಲಿಯಾ ಜೊತೆ ತಳುಕು ಹಾಕಿಕೊಂಡಿದೆ. ಭಾರತ-ಪಾಕಿಸ್ತಾನದ ನಡುವೆ ಪಂದ್ಯದಲ್ಲಿ ದುಬೈ ಕ್ರೀಡಾಂಗಣದಲ್ಲಿ ಜಾಸ್ಮಿನ್ ವಾಲಿಯಾ ಕಾಣಿಸಿಕೊಂಡ ನಂತರ ಇಬ್ಬರ ಸಂಬಂಧದ ಕುರಿತು ಚರ್ಚೆ ನಡೆಯುತ್ತಿದೆ. ಹೀಗಿರುವಾಗ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಪ್ರೀತಿಯಲ್ಲಿ ನಾನು ಮತ್ತೆ ಬೀಳಲು ರೆಡಿಯಾಗಿದ್ದೇನೆ ಎಂದು ಹೇಳಿದ್ಧಾರೆ.ಬದುಕು-ನಂಬಿಕೆಯ ಕುರಿತು ಪಾಠವನ್ನು ಮಾಡಿದ್ದಾರೆ.
ಈ ಕುರಿತು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನತಾಶಾ ಸ್ಟಾಂಕೋವಿಕ್, ನಾನು ಹೊಸ ಅನುಭವಗಳನ್ನು ಅನುಭವಿಸಲು ಸಿದ್ಧಳಾಗಿದ್ದೇನೆ ಹೊಸ ಅವಕಾಶಗಳನ್ನು ಎದುರು ನೋಡುತ್ತಿದ್ದೇನೆ, ಮತ್ತೊಮ್ಮೆ ನನ್ನ ಹೃದಯದಲ್ಲಿ ಪ್ರೀತಿ ಅರಳುವ ಸಮಯಕ್ಕೆ ಕೂಡ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಪ್ರೀತಿಯಲ್ಲಿ ಮತ್ತೊಮ್ಮೆ ಬೀಳಲು ನನಗೆ ಭಯ ಇಲ್ಲ ಎಂದು ಹೇಳಿದ್ದಾರೆ.
ಮೊದಲಿಂದ ನಾನು ಬದುಕು ಬಂದಂತೆ ಸ್ವೀಕರಿಸುತ್ತಾ ಬಂದವಳು, ಹೀಗಾಗಿ ಸರಿಯಾದ ಸಮಯಕ್ಕೆ ಸರಿಯಾದ ವ್ಯಕ್ತಿ ಬಂದಾಗ ಮತ್ತೊಮ್ಮೆ ಪ್ರೀತಿಯಾದರು ಆಗಬಹುದು ಎಂದು ಹೇಳಿರುವ ನತಾಶಾ ನಾನು ಅರ್ಥಪೂರ್ಣ ಸಂಬಂಧಗಳಿಗೆ ಬೆಲೆ ಕೊಡುತ್ತೇನೆ, ನಂಬಿಕೆ ಮತ್ತು ವಿಶ್ವಾಸವೇ ಸಂಬಂಧದ ಅಡಿಪಾಯ ಎಂದು ನಾನು ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಕಳೆದ ವರ್ಷ ನನ್ನ ಬದುಕಿನಲ್ಲಿ ತುಂಬಾನೇ ಸವಾಲುಗಳು ಎದುರಾದವು, ಆ ಸವಾಲುಗಳನ್ನು ಎದುರಿಸುವ ಸಮಯದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡು ತರಹದ ಅನುಭವಗಳಾಗಿವೆ ಎಂದು ಹೇಳಿರುವ ನತಾಶಾ ವಯಸ್ಸಾದಂತೆ ನಾವು ಪ್ರಬುದ್ಧರಾಗುವುದಿಲ್ಲ ಬದಲಿಗೆ ನಾವು ಜೀವನದಲ್ಲಿ ಕಲಿತ ಪಾಠಗಳಿಂದ ಅನುಭವಗಳಿಂದ ಪ್ರಬುದ್ಧತಾಗುತ್ತೇವೆ ಎಂಬ ನಂಬಿಕೆ ನನ್ನದು ಎಂದು ಹೇಳಿದ್ದಾರೆ.
ಜೀವನ ನಾವು ಅಂದುಕೊಂಡಂತೆ ಅಲ್ಲ, ನಾವು ಅಂದುಕೊಂಡಂತೆ ಎಲ್ಲ ಹಂತದಲ್ಲಿ ನಡೆಯುವುದಿಲ್ಲ ಎಂದಿರುವ ನತಾಶಾ ಆಗಿ ಹೋಗಿದ್ದರ ಬಗ್ಗೆ ಚಿಂತೆ ಮಾಡುತ್ತಾ ಕುಳಿತುಕೊಂಡರೆ ಪ್ರಯೋಜನ ಇಲ್ಲ ಅದರಿಂದ ಇರುವ ಚೂರು ಪಾರು ನೆಮ್ಮದಿ ಕೂಡ ಹಾಳಾಗುತ್ತೆ ಎಂದು ಹೇಳಿದ್ದಾರೆ. ಬೇರೆಯವರ ತಪ್ಪುಗಳನ್ನು ಸಾಬೀತು ಮಾಡುವ ಪ್ರಯತ್ನವನ್ನು ಮಾಡುತ್ತಾ ಯಾವತ್ತೂ ಕೂರಬಾರದು ಬದಲಿಗೆ ಎಲ್ಲರನ್ನು ಕ್ಷಮಿಸಿ ನಾವು ನಮ್ಮ ಬದುಕಿನಲ್ಲಿ ಮುನ್ನಡೆಯಬೇಕು,ಮುಂದುವರೆಯಬೇಕು ಎಂದು ನತಾಶಾ ಹೇಳಿದ್ದಾರೆ.
ನತಾಶಾ ಅವರ ಈ ಮಾತುಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಈಗ ಚರ್ಚೆ ಶುರುವಾಗಿದೆ. ನಂಬಿಕೆಯ ಮಾತುಗಳನ್ನು ನತಾಶಾ ಹೇಳಿರುವ ಹಿನ್ನೆಲೆ ಹಾರ್ದಿಕ್ ಪಾಂಡ್ಯ ದಾಂಪತ್ಯದಲ್ಲಿ ದ್ರೋಹ ಎಸಗಿರಬಹುದು ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ.
ಇನ್ನು, ಎರಡನೇ ಮದುವೆ, ಪ್ರೀತಿಯಲ್ಲಿ ಎರಡನೇ ಸಲ ಬೀಳುವ ಕುರಿತು ಮಾತನಾಡಿದ ಮಾತುಗಳಿಗೆ ಕೂಡ ಪ್ರತಿಕ್ರಿಯೆಯನ್ನು ನೀಡುತ್ತಿರುವ ಅನೇಕರು ಎರಡನೇ ಅವಕಾಶ ನೀಡುವುದು ಎರಡು ಬಾರಿ ಪುಸ್ತಕ ಓದಿದಂತೆ, ಅದು ಹೇಗೆ ಕೊನೆಗೊಳ್ಳುತ್ತೆ ಎಂದು ನಿಮಗೆ ಈಗಾಗಲೇ ತಿಳಿದಿದೆ ಹೀಗಾಗಿ ಪ್ರೀತಿ-ಪ್ರೇಮದ ವಿಚಾರವನ್ನು ತಲೆಯಿಂದ ತೆಗೆದು ಹಾಕಿ ನೆಮ್ಮದಿಯಾಗಿ ನಿಮ್ಮ ಮಗನ ಜೊತೆ ಬದುಕಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನತಾಶಾ ಅವರಿಗೆ ಈ ಮೂಲಕ ಸಲಹೆಯನ್ನು ಕೂಡ ನೀಡಿದ್ದಾರೆ.
ಅಂದ್ಹಾಗೇ ಹಾರ್ದಿಕ್ ಪಾಂಡ್ಯ ಅವರಿಂದ ನತಾಶಾ ದೂರವಾದ ನಂತರ ನತಾಶಾ ಹೆಸರು ಒಂದ್ಕಾಲದಲ್ಲಿ ಬಾಲಿವುಡ್ ನಾಯಕಿ ದಿಶಾ ಪಠಾಣಿ ಜೊತೆ ಸುತ್ತಾಡಿದ್ದ ಅಲೆಕ್ಸಾಂಡರ್ ಅಲೆಕ್ಸ್ ಜೊತೆ ಥಳುಕು ಹಾಕಿಕೊಂಡಿತ್ತು. ಇದಕ್ಕೆ ಪೂರಕವಾಗಿ ಇಬ್ಬರು ಜೊತೆ ಜೊತೆಯಾಗಿ ಓಡಾಡುವ ದೃಶ್ಯಗಳು ಕೂಡ ವೈರಲ್ ಕೂಡ ಆಗಿವೆ.
ಇನ್ನು ಅಲೆಕ್ಸಾಂಡರ್ ಅಲೆಕ್ಸ್ ಮೂಲ ಕೂಡ ಸೆರ್ಬಿಯಾದಲ್ಲಿದೆ. ಇನ್ನೂ ಈ ವ್ಯಕ್ತಿ ನತಾಶಾ ಅವರ ಜಿಮ್ ಟ್ರೇನರ್ ಕೂಡ ಹೌದು.ಇದಕ್ಕೆ ಸಾಕ್ಷಿ ಎನ್ನುವಂತೆ ಅಲೆಕ್ಸಾಂಡರ್ ಜೊತೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋಗಳನ್ನು ಕೂಡ ನತಾಶಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ನತಾಶಾ ಅನೇಕ ಬಾರಿ ಅಲೆಕ್ಸಾಂಡರ್ ನನ್ನ ಸಹೋದರನಂತೆ ಎಂದು ಈ ಹಿಂದೆ ಹೇಳಿದ್ದಾರೆ. ಹೀಗಾಗಿ ಇಬ್ಬರ ನಡುವೆ ಇರುವುದು ಅಕ್ಕ-ತಮ್ಮನ ಸಂಬಂಧ ಎಂಬ ಅಭಿಪ್ರಾಯವನ್ನು ಈ ಹಿಂದೆ ವ್ಯಕ್ತಪಡಿಸಿದ್ದು ಇದೆ.
ಇನ್ನುಳಿದಂತೆ ಕಳೆದ ವರ್ಷ ಹಾರ್ದಿಕ್ ಪಾಂಡ್ಯ ಅವರಿಂದ ವಿಚ್ಛೇದನ ಪಡೆದ ನಂತರ ನತಾಶಾ ಪ್ರೀತಿಯ ಕುರಿತು ಪದ್ಯವನ್ನು ಬರೆದಿದ್ದರು. ಪ್ರೀತಿ ಅಂದರೆ ತಾಳ್ಮೆ.. ಪ್ರೀತಿ ಅಂದರೆ ದಯೆ.. ಎಂದಿರುವ ನತಾಶಾ, ಪ್ರೀತಿ ಅಸೂಯೆ ಪಡಲ್ಲ, ಪ್ರೀತಿ ಯಾವಾಗಲೈ ಹೆಮ್ಮೆ ಪಡುವುದಿಲ್ಲ. ಅದು ಯಾರನ್ನೂ ಅವಮಾನ ಮಾಡುವುದಿಲ್ಲ. ಯಾವತ್ತೂ ಪ್ರೀತಿ ಹೆಮ್ಮೆಯನ್ನು ಪಡುವುದಿಲ್ಲ, ಸ್ವಾರ್ಥಿಯಂತೂ ಪ್ರೀತಿ ಅಲ್ಲವೇ ಅಲ್ಲ, ಸುಲಭವಾಗಿ ಕೋಪಿಸಿಕೊಳ್ಳುವುದು ಇಲ್ಲ. ಪ್ರೀತಿ ಯಾವತ್ತು ತಪ್ಪುಗಳ ಕುರಿತು ದಾಖಲೆ ಇರಲ್ಲ. ಕೆಡುಕು ಇದ್ದರೆ ಪ್ರೀತಿ ಸಂತೋಷವೂ ಪಡುವುದಿಲ್ಲ. ಬದಲಿಗೆ ಪ್ರೀತಿ ನಮ್ಮನ್ನು ರಕ್ಷಿಸುತ್ತೆ. ನಂಬುತ್ತೆ. ನಮ್ಮ ಬದುಕಿಗೆ ಭರವಸೆಯನ್ನು ಕೂಡ ನೀಡುತ್ತೆ. ಪ್ರೀತಿ ಯಾವತ್ತು ವಿಫಲವಾಗುವುದಿಲ್ಲ ಎಂದು ನತಾಶಾ ಸ್ಟಾಂಕೋವಿಕ್ ಬರೆದುಕೊಂಡಿದ್ದರು.
ನತಾಶಾ ಅವರ ಈ ಬರಹದಿಂದ ಯಾರು ಯಾರಿಂದ ಮೋಸ ಹೋದರು ಎಂಬ ಚರ್ಚೆಗೆ ಕಾರಣವಾಗಿತ್ತು.ಆ ನಂತರ ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಮೋಸ ಮತ್ತು ಭಾವನಾತ್ಮಕ ನಿಂದನೆಯ ಕುರಿತು ಕೂಡ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಹಂಚಿಕೊಂಡಿದ್ದ ಫೋಸ್ಟ್‌ನ್ನು ಮೆಚ್ಚಿಕೊಂಡಿದ್ದರು. ಈ ಹಿನ್ನೆಲೆ ಆ ಫೋಸ್ಟ್ ಜೊತೆ ನತಾಶಾ ಅವರ ಈ ಬರಹವನ್ನು ತಾಳೆ ಹಾಕಿ ನೋಡಿದ್ದ ಅನೇಕರು ನತಾಶಾ ಅವರಿಗೆ ಹಾರ್ದಿಕ್ ಪಾಂಡ್ಯ ಅವರೇ ಮೋಸ ಮಾಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೆಲ್ಲದಕ್ಕೆ ಪೂರಕವಾಗಿ ನತಾಶಾ ಈಗ ನೀಡಿರುವ ಸಂದರ್ಶನದಲ್ಲಿ ಕೂಡ ನಂಬಿಕೆ ವಿಶ್ವಾಸದ ಕುರಿತು ಮಾತುಗಳನ್ನಾಡಿದ್ದಾರೆ. ಈ ಕಾರಣಕ್ಕೆ ನಂಬಿಕೆ ದ್ರೋಹ ಎಸಗಿದ್ದು ಯಾರು ಎನ್ನುವ ಚರ್ಚೆ ಮತ್ತೆ ಶುರುವಾಗಿದೆ.


Click it and Unblock the Notifications











