ಸಂಸಾರದ ಸರಿಗಮಪ ; ಕೂಡಿ ಬಾಳಿದರೆ ಸ್ವರ್ಗ ಸುಖ ಎಂದ ನವಾಜುದ್ದೀನ್ ಸಿದ್ದಿಕಿ -ಆಲಿಯಾ..!
ಒಂದು ಕ್ಷಣ ಕಿತ್ತಾಡುವುದು. ಮತ್ತೊಂದು ಕ್ಷಣ ಮುದ್ದಾಡುವುದು. ಬಾಲಿವುಡ್ ಗೆ ಹೊಸದೇನಲ್ಲ. ಅನಾದಿಕಾಲದಿಂದ್ಲೂ ಇಲ್ಲಿ ಪ್ರೀತಿಯಲ್ಲಿ ಬಿದ್ದು ಎದ್ದು ಎಲ್ಲರೂ ಒದ್ದಾಡಿದವರೇ. ಬಾಲಿವುಡ್ ನ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ದಿಕಿ ಕೂಡ ಇದರಿಂದ ಹೊರತಲ್ಲ.
ಹೌದು, ನವಾಜುದ್ದೀನ್ ಸಿದ್ದಿಕಿಯ ಸಂಸಾರ ವರ್ಷಗಳ ಹಿಂದೆ ಬೀದಿಗೆ ಬಂದಿತ್ತು. ಮುಂಬೈನ ಸಿಕ್ಕ ಸಿಕ್ಕ ರಸ್ತೆಗಳಲ್ಲಿ ನವಾಜುದ್ದೀನ್ ಹಾಗೂ ಅವರ ಪತ್ನಿ ಆಲಿಯಾ ಮಾಡಿಕೊಂಡ ರಂಪ ರಾಮಾಯಣ ಒಂದೆರಡಲ್ಲ. ಹಣದ ಮೇಲಿನ ದಾಹವೋ, ಬೇರೆಯವರ ಮೇಲಿನ ಮೋಹವೋ ಒಟ್ನಲ್ಲಿ ಸಮರಕ್ಕೆ ಬಿದ್ದಂತೆ ಸತಿ ಪತಿಗಳಿಬ್ಬರೂ ಸೆಣಸಾಡಿದ್ದರು. ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನ ಮಾಡುವುದರ ಮೂಲಕ ಆಡಿಕೊಳ್ಳೋರ ಬಾಯಿಗೆ ಆಹಾರವೂ ಆಗಿದ್ದರು. ವಿಚ್ಚೇದನಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರು.

ಆದರೆ ಈಗ ದೂರವಾಗಬೇಕಿದ್ದ ಇಬ್ಬರು ಒಂದಾಗೋಣ ಬಾ ಎಂದಿದ್ದಾರೆ. ಮುನಿಸು ಮರೆತು ದುಬೈನಲ್ಲಿ ತಮ್ಮ ಮದುವೆಯ ಹದಿನಾಲ್ಕನೇ ವಾರ್ಷಿಕೋತ್ಸವವನ್ನ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.
ತಮ್ಮ ಇಬ್ಬರೂ ಮಕ್ಕಳಾದ ಶೋರಾ ಮತ್ತು ಯಾನಿ ಭವಿಷ್ಯವನ್ನ ಗಮನದಲ್ಲಿಟ್ಟುಕೊಂಡು, ಮತ್ತೆ ನವಾಜುದ್ದೀನ್ ಸಿದ್ದಿಕಿ ಜೊತೆ ಒಂದೇ ಸೂರಿನಡಿ ಸಂಸಾರದ ಸರಿಗಮಪವನ್ನ ಲಯಬದ್ಧವಾಗಿ ಹಾಡಲು ಮುಂದಾಗಿರುವ ಆಲಿಯಾ ಸಿದ್ದಿಕಿ, "ಇತ್ತೀಚಿನ ದಿನಗಳಲ್ಲಿ, ನಮ್ಮ ಜೀವನದಲ್ಲಿ ಕೆಲವು ವಿಷಯಗಳು ಬದಲಾಗಿವೆ, ನಾವು ಪ್ರಪಂಚದೊಂದಿಗೆ ಕೆಟ್ಟದ್ದನ್ನು ಹಂಚಿಕೊಂಡಾಗ, ಒಳ್ಳೆಯದನ್ನು ಸಹ ಹಂಚಿಕೊಳ್ಳಬೇಕು ಎಂಬ ಜ್ಞಾನೋದಯ ನನಗೆ ಆಗಿದೆ'' ಅಂದಿದ್ದಾರೆ.

ಇನ್ನೂ "ನಮ್ಮ ಸಂಬಂಧದಲ್ಲಿ ನಾವು ಎದುರಿಸಿದ ಸಮಸ್ಯೆಗಳು ಯಾವಾಗಲೂ ಮೂರನೇ ವ್ಯಕ್ತಿಯಿಂದ ಎಂದು ನಾನು ಭಾವಿಸುತ್ತೇನೆ ಎಂದಿರುವ ಆಲಿಯಾ, ಈಗ ಆ ತಪ್ಪುಗ್ರಹಿಕೆ ಈಗ ದೂರವಾಗಿದೆ ಎಂದಿದ್ದಾರೆ. ನಮ್ಮ ಮಕ್ಕಳ ಕಾರಣದಿಂದಾಗಿ ನಾವು ಸಂಪೂರ್ಣವಾಗಿ ಶರಣಾಗಿದ್ದೇವೆ ಎಂದಿರುವ ಆಲಿಯಾ ಮಕ್ಕಳು ಈಗ ಬೆಳೆಯುತ್ತಿದ್ದಾರೆ. ಇನ್ನೂ ನವಾಜ್ ಅಂದರೆ ಶೋರಾಗೆ ಪಂಚ ಪ್ರಾಣ. ನಾವೂ ಇಬ್ಬರು ದೂರವಾಗುವುದನ್ನ ತನ್ನ ಇಬ್ಬರು ಮಕ್ಕಳಿಂದ ಸಹಿಸಲು ಸಾಧ್ಯವಾಗುತ್ತಿಲ್ಲ ಹೀಗಾಗಿಯೇ ಈ ನಿರ್ಧಾರ'' ಅಂದಿದ್ದಾರೆ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಹಿರಿಯರ ಮಾತನ್ನೂ ಪುನರುಚ್ಚಿಸಿದ್ದಾರೆ ಆಲಿಯಾ ಸಿದ್ದಿಕಿ
ಇನ್ನೂ ನವಾಜುದ್ದೀನ್ ಸಿದ್ದಿಕಿ ಹಾಗೂ ಆಲಿಯಾ ಅವರ ಈ ಪುನರ್ ಮಿಲನದ ಸುದ್ದಿಯನ್ನ ಕೇಳಿ ಬಾಲಿವುಡ್ ನಲ್ಲಿ ಹರ್ಷೋಲ್ಲಾಸದ ವಾತಾವರಣ ಮನೆ ಮಾಡಿದೆ. ನವಾಜುದ್ದೀನ್ ಸಿದ್ದಿಕಿ ಅವರಿಗೆ ಅವರ ಅಭಿಮಾನಿಗಳು ಶುಭಾಶಯವನ್ನ ಕೋರುತ್ತಿದ್ದಾರೆ. ನಿಮ್ಮಿಬ್ಬರ ಮೇಲೆ ಮತ್ಯಾವ ಕೆಟ್ಟ ದೃಷ್ಟಿಯೂ ಬೀಳದೆ ಇರಲಿ ಎಂದು ಹರಸಿ ಹಾರೈಸುತ್ತಿದ್ದಾರೆ. ಮಿಕ್ಕಂತೆ ಮದುವೆಯ ವಾರ್ಷಿಕೋತ್ಸವವನ್ನ ಆಚರಿಸಿ ದುಬೈನಿಂದ ನವಾಜುದ್ದೀನ್ ಸಿದ್ದಿಕಿ ದುಬೈನಿಂದ ಮುಂಬೈಗೆ ಮರಳಿ ಬಂದಿದ್ದಾರೆ. ನವಾಜುದ್ದೀನ್ ಪತ್ನಿ ಆಲಿಯಾ ತಮ್ಮಿಬ್ಬರ ಮಕ್ಕಳ ಜೊತೆ ಇನ್ನೂ ದುಬೈನಲ್ಲಿಯೇ ಇದ್ದಾರೆ. ಆದಷ್ಟು ಬೇಗ ಬಲಗಾಲಿಟ್ಟು ಮುಂಬೈನಲ್ಲಿರುವ ಮನೆಗೆ ಮರಳಲಿದ್ದಾರೆ
ಒಟ್ನಲ್ಲಿ ನವಾಜುದ್ದೀನ್ ಸಿದ್ದಿಕಿ ಹಾಗೂ ಆಲಿಯಾ ಇಬ್ಬರಿಗೂ ತಾವು ಮಾಡಿದ ತಪ್ಪಿನ ಅರಿವಾಗಿದೆ. ಪಶ್ಚಾತಾಪದ ಬೇಗುದಿಯಲ್ಲಿ ಇಬ್ಬರ ಹೃದಯ ನೊಂದು ಬೆಂದು ಹೋಗಿದೆ. ಹಳೆಯದನ್ನೆಲ್ಲ ಮರೆತು, ಹೊಸ ಬದುಕನ್ನ ಆರಂಭ ಮಾಡಲು ಹೊರಟಿರುವ ಈ ಇಬ್ಬರಿಗೂ ನಿಮ್ಮದು ಒಂದು ಶುಭ ಹಾರೈಕೆ ಇರಲಿ


Click it and Unblock the Notifications











