ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಪತ್ನಿ ಆಲಿಯಾ
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಆತನ ಪತ್ನಿ ಆಲಿಯಾ ಮತ್ತೊಮ್ಮೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದೀಗ ಏಕಾಏಕಿ ಪತಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ತನ್ನ ಮಕ್ಕಳನ್ನು ತನ್ನಿಂದ ದೂರ ಮಾಡಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮಾಡಿ ಮಾತನಾಡಿದ್ದಾರೆ. ಕೆಲ ದಿನಗಳಿಂದ ಆಲಿಯಾ ಪತಿ ಸಿದ್ದಿಕಿ ಹಾಗೂ ಆತನ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಾ ಬರ್ತಿದ್ದಾರೆ.
"ನನ್ನ ಮಕ್ಕಳಿಗೆ ಆತ ಎಂದಿಗೂ ತಂದೆ ಆಗೋಕೆ ಸಾಧ್ಯವಿಲ್ಲ. ಮಕ್ಕಳು ಹೇಗಿದ್ದಾರೆ ಎಂದು ಒಂದು ದಿನವೂ ನೋಡಲಿಲ್ಲ. ಆದರೆ ಇದ್ದಕ್ಕಿದ್ದಂತೆ ಈಗ ಬಹಳ ಒಳ್ಳೆಯ ತಂದೆ ಎನ್ನುವಂತೆ ಸಾಬೀತು ಮಾಡಿ ನನ್ನ ಮಕ್ಕಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಹಣದಿಂದ ಜನರನ್ನು ಕೊಂಡುಕೊಳ್ಳಬಹುದು, ಆದರೆ ನನ್ನ ಮಕ್ಕಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಅಸಲಿಗೆ ಅವರನ್ನು ಇಲ್ಲಿ ಇರಿಸಬೇಕು ಎಂದುಕೊಂಡಿದ್ದೀಯಾ? ನಿನ್ನೊಟ್ಟಿಗೆ ಇರ್ತಾರೆ ಅಂದುಕೊಂಡಿದ್ದೀಯಾ? ತಂದೆ ಅಂದ್ರೆ ಏನು ಎಂದು ಅವರಿಗೆ ಗೊತ್ತಿಲ್ಲ" ಎಂದು ಕಣ್ಣೀರು ಹಾಕಿದ್ದಾರೆ.

"ನನ್ನ ಮಕ್ಕಳನ್ನು ನಿಮ್ಮ ತಾಯಿ ಅಕ್ರಮ ಸಂತಾನ ಎಂದಾಗ ನಿನಗೆ ಮಾತು ಬರಲಿಲ್ಲ. ಆಗ ಮೌನವಾಗಿ ಇದ್ದೆ. ಈಗ ನೋಡಿದರೆ ಬಹಳ ಒಳ್ಳೆಯ ವ್ಯಕ್ತಿ ಎಂದು ನಿರೂಪಿಸಿಕೊಳ್ಳು ಹೊರಟಿದ್ದೀಯಾ. ಮಹಾನಟ ನೀನು. ಸಾಕ್ಷ್ಯಾಧಾರಗಳ ಸಮೇತ ನನ್ನ ಮೇಲೆ ಅತ್ಯಾಚಾರ ಎಸಗಿದ್ದೀಯಾ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಏನೇ ಆದರೂ ಮನಸ್ಸು ಇಲ್ಲದ ಕಟುಕರ ಕೈಗೆ ನನ್ನ ಮಕ್ಕಳು ಸೇರಲು ಬಿಡುವುದಿಲ್ಲ" ಎಂದು ಬರೆದುಕೊಂಡಿದ್ದಾರೆ.

ನವಾಜುದ್ದೀನ್ ಸಿದ್ದಿಕಿ ಕುಟುಂಬಸ್ಥರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಊಟ, ನೀರು ಕೊಡದೇ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ಮಾಧ್ಯಮಗಳ ಮುಂದೆ ಆಲಿಯಾ ಇತ್ತೀಚೆಗೆ ಹೇಳಿಕೊಂಡಿದ್ದರು. ಇದೀಗ ಪತಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ, ತಮ್ಮನ್ನು ಮನೆಯಿಂದ ಹೊರಗೆ ಹಾಕಲು ಏನೆಲ್ಲಾ ಕುತಂತ್ರ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಆಲಿಯಾ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


Click it and Unblock the Notifications











