ನಟಿ ಜೈರಾ ಗೆ ಕಿರುಕುಳ : ಸೂಕ್ತ ಕ್ರಮಕ್ಕೆ ಮುಂದಾದ ರಾಷ್ಟ್ರೀಯ ಮಹಿಳಾ ಆಯೋಗ
'ದಂಗಲ್' ಚಿತ್ರದ ನಟಿ ಜೈರಾ ವಾಸೀಮ್ ದೆಹಲಿ - ಮುಂಬೈ ನಡುವೆ ವಿಮಾನದಲ್ಲಿ ಪ್ರಯಾಣಿಸುವಾಗ ಕಿರಾತಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದ. ತನ್ನ ಮೇಲೆ ಆದ ಈ ಕಿರುಕುಳದ ಬಗ್ಗೆ ನಟಿ ಜೈರಾ ವಾಸೀಮ್ ವಿಡಿಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಇದೀಗ ರಾಷ್ಟ್ರೀಯ ಮಹಿಳಾ ಆಯೋಗ ಜೈರಾ ವಾಸೀಮ್ ಮೇಲೆ ಆಗಿರುವ ಕಿರುಕುಳವನ್ನು ಖಂಡಿಸಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಈ ಘಟನೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಜೈರಾ ವಾಸೀಮ್ ಜೊತೆ ಆ ವ್ಯಕ್ತಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ವೇಳೆ ವಿಮಾನದಲ್ಲಿ ಇದ್ದ ಸಹ ಪ್ರಯಾಣಿಕರು ಮತ್ತು ವಿಸ್ತಾರ ಏರ್ ಲೈನ್ಸ್ ವಿಮಾನದ ಸಿಬ್ಬಂದಿ ಯಾಕೆ ಸಹಾಯಕ್ಕೆ ಬರಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಇದರ ಜೊತೆಗೆ ಘಟನೆಯನ್ನು ತೀವ್ರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ ಅಸಭ್ಯ ವರ್ತನೆ ನಡೆಸಿದ ವ್ಯಕ್ತಿ ಮತ್ತು ವಿಸ್ತಾರ ಏರ್ ಲೈನ್ಸ್ ವಿಮಾನ ಸಂಸ್ಥೆಯ ವಿರುದ್ಧ ದೂರು ದಾಖಲಿಸುವ ನಿರ್ಧಾರ ಮಾಡಿದೆ.
ಅಂದಹಾಗೆ, ವಿಮಾನದಲ್ಲಿ ಜೈರಾ ವಾಸೀಮ್ ಹಿಂದಿನ ಸೀಟ್ ನಲ್ಲಿ ಕುಳಿತ್ತಿದ್ದ ಈತ ಜೈರಾ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಆ ಕಿರಾತಕ ತನ್ನ ಕಾಲಿನಿಂದ ಜೈರಾ ವಾಸೀಮ್ ದೇಹವನ್ನು ಮುಟ್ಟಿದ್ದಾನೆ. ಈ ವೇಳೆ ವಿಮಾನದ ಸಿಬ್ಬಂದಿ ಹೇಳಿದರು ಅವರು ನನ್ನ ಸಹಾಯಕ್ಕೆ ಬಂದಿಲ್ಲ ಎಂದು ಜೈರಾ ವಾಸೀಮ್ ತಮ್ಮ ದುಖಃವನ್ನು ಹಂಚಿಕೊಂಡಿದ್ದರು.

ಇನ್ನು 17 ವರ್ಷದ ಜೈರಾ ವಾಸೀಮ್ 'ದಂಗಲ್' ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು. ಮೊದಲ ಸಿನಿಮಾದಲ್ಲಿಯೇ ದೊಡ್ಡ ಮಟ್ಟದ ಯಶಸ್ಸು ಮತ್ತು ಜನಪ್ರಿಯತೆಯನ್ನು ಪಡೆದ ಜೈರಾ ವಾಸೀಮ್ ಇತ್ತೀಚಿಗಷ್ಟೆ ಅಮೀರ್ ಖಾನ್ ನಿರ್ಮಾಣದ 'ಸೀಕ್ರೆಟ್ ಸೂಪರ್ ಸ್ಟಾರ್' ಸಿನಿಮಾದಲ್ಲಿ ನಟಿಸಿದ್ದರು.


Click it and Unblock the Notifications










