66ನೇ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ? ಕೊನೆಗೂ ಪ್ರತಿಕ್ರಿಯಿಸಿದ ಬಾಲಿವುಡ್ ಹಿರಿಯ ನಟಿ
ಬಾಲಿವುಡ್ ನಟಿ ನೀನಾ ಗುಪ್ತಾ ಕಡ್ಡಿ ತುಂಡು ಮಾಡಿದಂತೆ ಮಾತನಾಡುತ್ತಾರೆ. ಒಂದ್ಕಾಲದಲ್ಲಿ ತಮ್ಮ ಅಫೇರ್‌ಗಳ ಕಾರಣಕ್ಕೂ ಭಾರೀ ಸುದ್ದಿ ಆಗಿದ್ದರು. ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವ್ ರಿಚರ್ಡ್ಸ್ ಜೊತೆಗೂ ಲಿವ್ ಇನ್ ರಿಲೀಷನ್‌ಶಿಪ್‌ನಲ್ಲಿ ಇದ್ದರು. ಈ ಬಗ್ಗೆ ಮುಚ್ಚುಮರೆ ಇಲ್ಲದೇ ಮಾತನಾಡುತ್ತಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ರಿಸೆಪ್ಷನ್ ಪಾರ್ಟಿಗೆ ನೀನಾ ಗುಪ್ತಾ ಹಾಜರಾಗಿದ್ದರು.
ಪತಿ ವಿವೇಕ್ ಮೆಹ್ರಾ ಜೊತೆ ವಿರೋಷ್ ರಿಸೆಪ್ಷನ್ ಪಾರ್ಟಿಗೆ ನೀನಾ ಗುಪ್ತಾ ಆಗಮಿಸಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗಿತ್ತು. ಫೋಟೊಗಳಲ್ಲಿ ನೀನಾ ಅವರನ್ನು ನೋಡಿ ಪ್ರಗ್ನೆಂಟ್ ಆಗಿದ್ದಾರಾ? ಎಂದು ಕೆಲವರು ಕಾಮೆಂಟ್ ಮಾಡಿದ್ದರು. 66ನೇ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ ಆಗಿಬಿಟ್ರಾ? ಎಂದು ಚರ್ಚಿಸಲು ಆರಂಭಿಸಿದ್ದರು. ಇದೀಗ ಸ್ವತಃ ನೀನಾ ಗುಪ್ತಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

8 ವರ್ಷಗಳ ಹಿಂದೆ ಬಂದಿದ್ದ 'ಬಧಾಯಿ ಹೋ' ಚಿತ್ರದಲ್ಲಿ ಮಧ್ಯ ವಯಸ್ಸಿನ ಹೆಂಗಸು ಗರ್ಭಿಣಿ ಆಗುವ ಕಥೆ ಇತ್ತು. ಆ ಪಾತ್ರದಲ್ಲಿ ನೀನಾ ಗುಪ್ತಾ ನಟಿಸಿದ್ದರು. ಅದೇ ಕಾರಣಕ್ಕೆ ನಿಜ ಜೀವನದಲ್ಲೂ 'ಬಧಾಯಿ ಹೋ' ಎಂದು ನೆಟ್ಟಿಗರು ಕಾಮೆಂಟ್ ಮಾಡಲು ಆರಂಭಿಸಿದ್ದರು. ಕೊನೆಗೂ ಈ ಬಗ್ಗೆ ಆಕೆ ಪ್ರತಿಕ್ರಿಯಿಸುವಂತಾಗಿದೆ.
"ಇಲ್ಲಿ ಬಧಾಯಿ ಹೋ ನಡೆಯುತ್ತಿಲ್ಲ. ನಾನು ಗರ್ಭಿಣಿಯಲ್ಲ. ಸೀರೆಯ ಬಟ್ಟೆ ದಪ್ಪವಾಗಿತ್ತು, ಅಷ್ಟೇ. ಅದೇ ಕಾರಣಕ್ಕೆ ವಿಜಯ್-ರಶ್ಮಿಕಾ ಆರತಕ್ಷತೆ ಸಮಾರಂಭದಲ್ಲಿ ನಾನು ಸ್ವಲ್ಪ ದಪ್ಪವಾಗಿ ಕಾಣುವಂತೆ ಮಾಡಿತು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ವಯಸ್ಸಿನಲ್ಲಿ ಜನರು ನನ್ನ ಗರ್ಭಧಾರಣೆಯ ಬಗ್ಗೆ ಊಹಿಸುತ್ತಿರುವುದು ನನಗೆ ಇಷ್ಟವಾಯಿತು. ಇದು ನಾವು ಒಂದು ಸಮಾಜವಾಗಿ ಬದಲಾಗುತ್ತಿದ್ದೇವೆ ಎಂದು ತೋರಿಸುತ್ತದೆ" ಎಂದು ಬಾಲಿವುಡ್ ಹಂಗಾಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವ್ ರಿಚರ್ಡ್ಸ್ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದ ನೀನಾ ಗುಪ್ತಾ ಮದುವೆಗೂ ಮುನ್ನ ತಾಯಿಯಾಗಿದ್ದರು. ಈ ಬಗ್ಗೆ ಸಾಕಷ್ಟು ಬಾರಿ ಮುಕ್ತವಾಗಿ ಮಾತನಾಡಿದ್ದಾರೆ. ಕಲ್ಕತ್ತಾದಲ್ಲಿ ಹುಟ್ಟಿ ದೆಹಲಿಯಲ್ಲಿ ಓದಿ ಬೆಳೆದ ನೀನಾ ಗುಪ್ತಾ ಕೆಲ ಅಂತರಾಷ್ಟ್ರೀಯ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಕಾಲೇಜು ದಿನಗಳಲ್ಲೇ ರಂಗಭೂಮಿಯಲ್ಲಿ ಗುರ್ತಿಸಿಕೊಂಡಿದ್ದರು. ಹಾಗಾಗಿ ಚಿತ್ರರಂಗ ಪ್ರವೇಶ ಕಷ್ಟವಾಗಲಿಲ್ಲ.
ನೆಗೆಟಿವ್ ರೋಲ್‌ಗಳಲ್ಲಿ ಆರಂಭದಲ್ಲಿ ನೀನಾ ಮಿಂಚಿದ್ದರು. ಮುಂದೆ ಅದಕ್ಕೆ ಬ್ರ್ಯಾಂಡ್ ಆಗಿಬಿಟ್ಟಿದ್ದರು. 1982ರಲ್ಲಿ ಬಂದಿದ್ದ 'ಸಾಥ್ ಸಾಥ್' ಆಕೆ ನಟಿಸಿದ ಮೊದಲ ಸಿನಿಮಾ. ಮುಂದೆ 'ಜಾನೆ ಭಿ ದೋ ಯಾರೋ', 'ಗಾಂಧಿ', 'ಉತ್ಸವ್', 'ಲೈಲಾ', 'ಸ್ವರ್ಗ್', 'ಬಲ್ವಾನ್', 'ಖಳ್‌ನಾಯಕ್' ಹೀಗೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಕಿರುತೆರೆ ಕಾರ್ಯಕ್ರಮಗಳು ಮಾತ್ರವಲ್ಲ ಇತ್ತೀಚೆಗೆ ವೆಬ್ ಸೀರಿಸ್‌ನಲ್ಲಿ ಕೂಡ ನೀನಾ ಗುಪ್ತಾ ನಟಿಸುತ್ತಿದ್ದಾರೆ.
'ಗುಡ್‌ಬೈ' ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಬಾಲಿವುಡ್ ಪ್ರವೇಶಿಸಿದ್ದರು. ಮೊದಲ ಚಿತ್ರದಲ್ಲೇ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸೋ ಅವಕಾಶ ಗಿಟ್ಟಿಸಿಕೊಂಡಿದ್ದರು. ಚಿತ್ರದಲ್ಲಿ ರಶ್ಮಿಕಾ ತಾಯಿ ಪಾತ್ರದಲ್ಲಿ ನೀನಾ ಗುಪ್ತಾ ನಟಿಸಿದ್ದರು. ವಿರೋಷ್ ಮದುವೆ ಆರತಕ್ಷತೆಗೆ ಬಾಲಿವುಡ್‌ನಲ್ಲಿ ಕೆಲವೇ ಸೆಲೆಬ್ರೆಟಿಗಳಿಗೆ ಆಹ್ವಾನ ಸಿಕ್ಕಿತ್ತು. ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್, ನಟಿ ಕೃತಿ ಸನೂನ್, ಮೃಣಾಲ್ ಠಾಕೂರ್, ರಿಯಾ ಚಕ್ರವರ್ತಿ ಈ ಪಟ್ಟಿಯಲ್ಲಿದ್ದರು. ನೀನಾ ಗುಪ್ತಾ ಅವರಿಗೂ ರಶ್ಮಿಕಾ ಆಮಂತ್ರಣ ನೀಡಿದ್ದರು.
'ವಧ್ - 2' ಎಂಬ ಚಿತ್ರದಲ್ಲಿ ನೀನಾ ಗುಪ್ತಾ ಕೊನೆಯದಾಗಿ ನಟಿಸಿದ್ದರು. ಫೆಬ್ರವರಿ 6ರಂದು ಸಿನಿಮಾ ತೆರೆಗೆ ಬಂದಿತ್ತು. ಕ್ರೈಂ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು.


Click it and Unblock the Notifications











