"ಮದುವೆಗೂ ಮುನ್ನ ಗರ್ಭಿಣಿಯಾಗಿದ್ದೆ, ಆ ಪಟ್ಟಿಗೆ ನನ್ನನ್ನೂ ಸೇರಿಸಿದ್ದಾರೆ"; ನೇಹಾ ಧೂಪಿಯಾ
ಮದುವೆಗೂ ಮುನ್ನ ಕೆಲ ನಟಿಯರು ಗರ್ಭಿಣಿ ಆಗಿರುವ ಉದಾಹರಣೆಗಳಿವೆ. ಮದುವೆ ಆಗಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದವರು ಇದ್ದಾರೆ. ಇವತ್ತಿಗೂ ಈ ಬಗ್ಗೆ ಮೌನ ವಹಿಸಿದವರು, ಅದೆಲ್ಲಾ ಸುಳ್ಳು ಎಂದು ಹೇಳುವವರು ಇದ್ದಾರೆ. ಬಾಲಿವುಡ್ ನಟಿ ನೇಹಾ ಧೂಪಿಯಾ ಕೂಡ ಮದುವೆಗೂ ಮುನ್ನೆ ಗರ್ಭಿಣಿ ಆಗಿದ್ದರು. ಈ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ.
2018ರಲ್ಲಿ ಅಂಗದ್ ಬೇಡಿ ಜೊತೆ ನಟಿ ನೇಹಾ ಧೂಪಿಯಾ ಹೊಸ ಬಾಳಿಗೆ ಕಾಲಿಟ್ಟಿದ್ದರು. ಮದುವೆಯಾಗಿ 6 ತಿಂಗಳಿಗೆ ಆಕೆ ಗರ್ಭಿಣಿ ಎನ್ನುವ ಸುದ್ದಿ ಹೊರಬಿದ್ದಿತ್ತು. ಈ ಬಗ್ಗೆ ಸಾಕಷ್ಟು ಟ್ರೋಲ್ ಎದುರಿಸುವಂತಾಗಿತ್ತು. ಇವತ್ತಿಗೂ ಇಂತಹ ಟ್ರೋಲ್ ನೋಡುತ್ತಿದ್ದೇನೆ ಎಂದು ಆಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ನೇಹಾ 'ಫ್ರೀಡಂ ಟು ಫೀಡ್' ಎಂಬ ವೇದಿಕೆ ಆರಂಭಿಸಿದ್ದಾರೆ. ತಾವು ಎದುರಿಸಿದ ಟ್ರೋಲ್‌ಗಳೇ ಇದಕ್ಕೆ ಪ್ರೇರಣೆ ಎಂದಿದ್ದಾರೆ. ಮಹಿಳೆಯರ ಆರೋಗ್ಯದ ಬಗೆಗಿನ ಚರ್ಚೆ ನಿಷಿದ್ಧವೆಂದು ಪರಿಗಣಿಸುವ ಬದಲು ಅವುಗಳನ್ನು ಸಾಮಾನ್ಯಗೊಳಿಸುವುದು ಮುಖ್ಯ, ಈ ಬಗ್ಗೆ ಜಾಗೃತಿ ಮೂಡಿಸಲು, ಮೂಢ ನಂಬಿಕೆ ತೊಡೆದುಹಾಕಲು ಈ ವೇದಿಕೆ ಎಂದು ಆಕೆ ಹೇಳಿದ್ದಾರೆ.

ನಟಿ ನೇಹಾ ಧೂಪಿಯಾ ತಮ್ಮ ಹೊಸ ಪ್ರಯತ್ನದ ಬಗ್ಗೆ ಮಿಡ್‌ಡೇ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ವೇಳೆ ತಾವು ಎದುರಿಸಿದ ಟ್ರೋಲ್ ಬಗ್ಗೆ ನೆನಪಿಸಿಕೊಂಡಿದ್ದಾರೆ. "ನಾನು ಅಂಗದ್ ಜೊತೆ ಮದುವೆಯಾದ ಆರು ತಿಂಗಳ ನಂತರ ಮಗಳಿಗೆ ಜನ್ಮ ನೀಡಿದೆ. ಆದರೆ ನಮ್ಮ ಮದುವೆ ಬಗ್ಗೆ ಭಾರೀ ಚರ್ಚೆ ಶುರುವಾಗಿತ್ತು. 'ಆರು ತಿಂಗಳಲ್ಲಿ ಮಗು ಹೇಗೆ ಬಂತು? ಅದು ಹೇಗೆ ಸಾಧ್ಯ" ಎಂದೇ ಬಹಳ ಚರ್ಚೆ ನಡೀತು ಎಂದು ನೇಹಾ ನೆನಪಿಸಿಕೊಂಡಿದ್ದಾರೆ.
ಇವತ್ತಿಗೂ ನಾನು ಟ್ರೋಲ್ ಎದುರಿಸುತ್ತಿದ್ದೇನೆ ಎಂದು ನೇಹಾ ಬೇಸರ ವ್ಯಕ್ತಪಡಿಸಿದ್ದಾರೆ. "ಮದುವೆಗೆ ಮುನ್ನ ಗರ್ಭಿಣಿಯಾಗುವ ನಟಿಯರ ಬಗೆಗಿನ ಸುದ್ದಿಗಳು, ಟ್ಯಾಗ್‌ಗಳನ್ನು ನಾನು ನೋಡುತ್ತೇನೆ. ನೀನಾ ಗುಪ್ತಾ ಮತ್ತು ಆಲಿಯಾ ಭಟ್ ಅವರಂತೆಯೇ ಅದೇ ಪಟ್ಟಿಯಲ್ಲಿ ನನ್ನ ಹೆಸರು ಇದೆ ಎಂದು ನನಗೆ ಅನಿಸುತ್ತದೆ. ನಿಜ ಹೇಳಬೇಕು ಅಂದರೆ ಇದೆಲ್ಲಾ ಹಾಸ್ಯಾಸ್ಪದ ಎನಿಸುತ್ತದೆ. ಗರ್ಭಧಾರಣೆ ಎನ್ನುವುದು ಬಹಳ ಸುಂದರವಾದದ್ದು" ಎಂದು ನೇಹಾ ಹೇಳಿದ್ದಾರೆ. ಇದೇ ಟೀಕೆಗಳನ್ನು ನೋಡಿ ನೋಡಿ 'ಫ್ರೀಡಂ ಟು ಫೀಡ್' ಎಂಬ ವೇದಿಕೆ ಹುಟ್ಟುಹಾಕಿದೆ ಎಂದಿದ್ದಾರೆ.

ತಮ್ಮ ಮೊದಲ ಪ್ರೆಗ್ನೆನ್ಸಿ ಹಾಗೂ ಮದುವೆ ಬಗ್ಗೆ ಎರಡು ವರ್ಷಗಳ ಹಿಂದೆ Times now ಸಂದರ್ಶನದಲ್ಲಿ ನೇಹಾ ಮಾತನಾಡಿದ್ದರು. "ನನ್ನ ಆಯ್ಕೆ ಯಾರನ್ನೂ ನೋಯಿಸಬಾರದು ಎಂದು ನನ್ನ ಪ್ರೀತಿಯ ವಿಚಾರ ಮನೆಯಲ್ಲಿ ಹೇಳಿದ್ದೆ. ನಾನು ಗರ್ಭಿಣಿ ಆಗಿರುವ ಸಂಗತಿಯನ್ನು ಪೋಷಕರಿಗೆ ತಿಳಿಸಿದ್ದೆ. ಮನೆಯವರು ಸರಿ ಎಂದರು. ಆದರೆ ಮುಂದಿನ 72 ಗಂಟೆಯೊಳಗೆ ಮದುವೆ ಆಗಬೇಕು ಎಂದು ಷರತ್ತು ಹಾಕಿದ್ದರು. ಅಂದರೆ ಎರಡೂವರೆ ದಿನಗಳ ಸಮಯಾವಕಾಶ ಸಿಕ್ಕಿತ್ತು. ನಂತರ ನಾನು ಮುಂಬೈಗೆ ತೆರಳಿ ಸರಳವಾಗಿ ಅಂಗದ್ ಜೊತೆ ಮದುವೆ ಮಾಡಿಕೊಂಡೆ" ಎಂದು ಹೇಳಿದ್ದರು.
2018ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ನೇಹಾ ಬಳಿಕ 2021ರಲ್ಲಿ 2ನೇ ಬಾರಿ ಗರ್ಭಿಣಿ ಆಗಿದ್ದರು. ಬಳಿಕ ಗಂಡು ಮಗುವನ್ನು ದಂಪತಿ ಬರಮಾಡಿಕೊಂಡಿದ್ದರು. ಕೇರಳದಲ್ಲಿ ಹುಟ್ಟಿ ಬೆಳೆದ ನೇಹಾ ಮೊದಲಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದರು. ನಂತರ ಜಪಾನೀಸ್ ಚಿತ್ರವೊಂದರಲ್ಲಿ ಮಿಂಚಿದ್ದರು. ಒಂದು ತೆಲುಗು ಸಿನಿಮಾ ಮೂಲಕ ನಾಯಕಿಯಾಗಿ ನಟಿಸಿದ್ದರು, 'ಕಯಾಮತ್' ಆಕೆಯ ಮೊದಲ ಬಾಲಿವುಡ್ ಸಿನಿಮಾ ಆಗಿತ್ತು.


Click it and Unblock the Notifications











