ಪ್ರೇಮ್ಸ್ 'ವಿಲನ್' ರಾವಣನೇ ಎಷ್ಟೋ ವಾಸಿ, 7000 ವರ್ಷಗಳ ಹಿಂದೆನೇ ಕೊಹ್ಲಿ ಹೇರ್‌ಸ್ಟೈಲ್; ಟ್ರೋಲ್ ಆದ ಆದಿಪುರುಷ್ ರಾವಣ!
ಈ ವರ್ಷ ಅತಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿದ್ದ ಭಾರತದ ಸಿನಿಮಾಗಳ ಪೈಕಿ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ನಿರ್ದೇಶಕ ಓಂ ರಾವತ್ ಕಾಂಬಿನೇಶನ್‌ನ ಆದಿಪುರುಷ್ ಸಹ ಒಂದು. ಇದೇ ಮೊದಲ ಬಾರಿಗೆ ಬಾಲಿವುಡ್ ಚಿತ್ರಕ್ಕಾಗಿ ಪ್ರಭಾಸ್ ಬಣ್ಣ ಹಚ್ಚಿದ್ದು, ಮೂಲ ಹಿಂದಿ ಚಿತ್ರವಾಗಿರುವ ಆದಿಪುರುಷ್ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದೆ.
ಚಿತ್ರ ಇಂದು ( ಜೂನ್ 16 ) ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಚಿತ್ರದ ಮುಂಗಡ ಬುಕಿಂಗ್ ಭಾನುವಾರವೇ ಆರಂಭಗೊಂಡಿದ್ದು, ಸಿನಿ ರಸಿಕರು ಹಾಗೂ ಪ್ರಭಾಸ್ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿಸಿದ್ದಾರೆ.

ಇಂದು ಬೆಳಗ್ಗೆ ಐದು ಗಂಟೆಯಿಂದಲೇ ಚಿತ್ರದ ಪ್ರದರ್ಶನಗಳು ಆರಂಭಗೊಂಡಿದ್ದು, ಪ್ರೇಕ್ಷಕರು ಸೂರ್ಯ ಉದಯಿಸುವ ಮುನ್ನವೇ ಆದಿಪುರುಷ್ ಚಿತ್ರದಲ್ಲಿನ ರಾಮನ ದರ್ಶನ ಪಡೆದುಕೊಂಡಿದ್ದಾರೆ. ಇನ್ನು ಈ ಚಿತ್ರ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಟೀಕೆಗಳನ್ನು ಎದುರಿಸಿತ್ತು.
ಹೌದು, ಆದಿಪುರುಷ್ ತಂಡ ಕೆಟ್ಟ ವಿಎಫ್ಎಕ್ಸ್ ಕಾರಣದಿಂದಾಗಿ ಸಿನಿ ರಸಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಮೊದಲಿಗೆ ಬಿಡುಗಡೆಗೊಂಡಿದ್ದ ಚಿತ್ರದ ಟೀಸರ್ ಕಂಡು ಇದೆಂಥಾ ವಿಎಫ್ಎಕ್ಸ್, ಈ ರೀತಿಯ ಕೆಟ್ಟ ಗ್ರಾಫಿಕ್ಸ್ ಬಳಸಿ ಚಿತ್ರ ನಿರ್ಮಿಸಲು 500 ಕೋಟಿ ಬೇಕಾ ಎಂದು ಚಿತ್ರತಂಡಕ್ಕೆ ನೆಟ್ಟಿಗರು ಚಾಟಿ ಬೀಸಿದ್ದರು.
ಈ ಥರದ ಕೆಟ್ಟ ಪ್ರತಿಕ್ರಿಯೆಗಳು ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಚಿತ್ರತಂಡ ಬಿಡುಗಡೆಯನ್ನು ವಿಳಂಬ ಮಾಡಿ ಕೆಲ ಬದಲಾವಣೆಗಳನ್ನು ಮಾಡಿಕೊಂಡಿತು. ಚಿತ್ರದ ಗುಣಮಟ್ಟವನ್ನು ಸುಧಾರಿಸಿ ಹಲವು ದಿನಗಳ ಬಳಿಕ ಮತ್ತೊಂದು ಟ್ರೈಲರ್ ಅನ್ನು ಬಿಡುಗಡೆಗೊಳಿಸಿತು. ಈ ಟ್ರೈಲರ್ ಕಂಡ ಚಿತ್ರ ಪ್ರೇಮಿಗಳು ಚಿತ್ರತಂಡ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದೆ, ಈಗ ಚಿತ್ರದ ಗುಣಮಟ್ಟ ಚೆನ್ನಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಆದರೆ ಚಿತ್ರ ಬಿಡುಗಡೆಯಾದ ನಂತರ ವಿಎಫ್ಎಕ್ಸ್ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಹನುಮಂತ ಹಾಗೂ ರಾವಣನ ಪಾತ್ರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ನಡೆಯುತ್ತಿದೆ.
ರಾವಣನ ಪಾತ್ರವನ್ನು ಸೈಫ್ ಅಲಿ ಖಾನ್ ನಿರ್ವಹಿಸಿದ್ದು, ಚಿತ್ರದಲ್ಲಿ ರಾವಣನ ಅವತಾರ ಕಂಡು ಸಿನಿ ರಸಿಕರು ಕಾಮೆಂಟ್ ಮೇಲೆ ಮಾಡುತ್ತಿದ್ದಾರೆ. ಚಿತ್ರದಲ್ಲಿನ ರಾವಣನ ದೃಶ್ಯವೊಂದರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ರಾಣನ ತಲೆಗಳು ಉಳಿದ ಚಿತ್ರಗಳ ಹಾಗೆ ಒಂದೇ ಸಾಲಿನಲ್ಲಿ ಇರದೇ ವೃತ್ತಾಕಾರದಲ್ಲಿವೆ. ಈ ಫೋಟೊ ಕಂಡು ನೆಟ್ಟಿಗರು ನಕ್ಕಿದ್ದಾರೆ. 500 ಕೋಟಿ ಖರ್ಚು ಮಾಡಿ ಇಷ್ಟು ಕಳಪೆ ಮಟ್ಟದ ಚಿತ್ರ ಮಾಡಿದ್ದೀರ ಎಂದು ಕಿಡಿಕಾರಿದ್ದಾರೆ.
ಇನ್ನು ಇದರ ಜತೆಗೆ ಪ್ರೇಮ್ ನಿರ್ದೇಶನ ಮಾಡಿದ್ದ 'ದಿ ವಿಲನ್ ಚಿತ್ರವನ್ನು ಹೋಲಿಕೆ ಮಾಡಿರುವ ನೆಟ್ಟಿಗರು ಇದಕ್ಕಿಂತ ನಮ್ಮ ಪ್ರೇಮ್ ವಿಲನ್ ಚಿತ್ರದಲ್ಲಿ ಬರುವ ಶಿವ ರಾಜ್‌ಕುಮಾರ್ ರಾವಣನ ವಿಎಫ್ಎಕ್ಸ್ ಎಷ್ಟೋ ಪರವಾಗಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಅಲ್ಲದೇ ರಾವಣನ ಹತ್ತು ಮುಖಗಳು ವಿಭಿನ್ನ ಹೇರ್ ಸ್ಟೈಲ್ ಹೊಂದಿದ್ದು, ಒಂದು ಈಗಿನ ಕಾಲದ 'ಡಬಲ್ ಸೈಡ್ ಲೈನ್' ಇರುವ ಹೇರ್ ಸ್ಟೈಲ್ ಸಹ ಇದರಲ್ಲಿದೆ. ಇದನ್ನು ಗಮನಿಸಿದ ನೆಟ್ಟಿಗರು ಈಗ ವಿರಾಟ್ ಕೊಹ್ಲಿ ಮಾಡಿರುವ ಹೇರ್ ಸ್ಟೈಲ್ ಅನ್ನು 7000 ವರ್ಷಗಳ ಹಿಂದೆ ರಾವಣ ಮಾಡಿದ್ದ ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











