ಅಂದು ಇಲ್ಲ, ಇಂದು ಇಲ್ಲ; ರಾವಣಾಸುರ ಯಶ್ ರಾಮಾಯಣ- ಕೆರಳಿದ್ದೇಕೆ 'ಮಿರ್ಜಾಪುರ್'ನ ಬಬ್ಲು?
ನಿಜಾ ... ಸಿನಿಮಾ ಕಲಾವಿದರೆಂದಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಇದನ್ನ ಮನಗಂಡೇ ತಮ್ಮ ಸುತ್ತ-ಮುತ್ತ ತಮ್ಮ ಬಗ್ಗೆ ಹಲವಾರು ಸುದ್ದಿ ಕೇಳಿ ಬಂದರೂ, ಕೆಲವರು ಆ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯೆಯನ್ನು ನೀಡಲು ಹೋಗುವುದಿಲ್ಲ.
ಯಾಕೆಂದರೆ ಹೀಗೆ ಹರಿದಾಡುವ ಸುದ್ದಿಗಳಲ್ಲಿ ಅರ್ಧಕ್ಕೆ ಅರ್ಧ ಸುಳ್ಳಾಗಿರುತ್ತಾವೆ. ಇನ್ನೂ ಕೆಲ ಒಮ್ಮೆ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ಉದ್ದೇಶದಿಂದಲೇ ಕೆಲವರು ''ಫೇಕ್ ನ್ಯೂಸ್''ಗಳನ್ನು ತೇಲಿ ಬಿಡುತ್ತಾರೆ. ವಿಕ್ರಾಂತ್ ಮ್ಯಾಸ್ಸೆ ಅವರ ವಿಚಾರದಲ್ಲಿಯೂ ಹೀಗೆ ನೆಮ್ಮದಿ ಕೆಡಿಸುವ ಪ್ರಯತ್ನ ಆಗಿದೆಯಾ ಗೊತ್ತಿಲ್ಲ. ಆದರೆ.. ಯಶ್ ನಿರ್ಮಾಣದ ''ರಾಮಾಯಣ'' ವಿಚಾರವನ್ನು ಕೇಳಿ ವಿಕ್ರಾಂತ್ ಮ್ಯಾಸ್ಸೆ ಸದ್ಯ ಕೆರಳಿದ್ದಾರೆ. ತಮ್ಮ ಆಕ್ರೋಶವನ್ನು ಹೊರ ಹಾಕಿ ಹಂಚಿಕೊಂಡಿದ್ದ ಪೋಸ್ಟ್‌ನ್ನು ಡಿಲೀಟ್ ಮಾಡಿದ್ದಾರೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ''ರಾಮಾಯಣ''ದಲ್ಲಿ ರಣ್ಬೀರ್ ಕಪೂರ್ ರಾಮನ ಪಾತ್ರ ನಿರ್ವಹಿಸಿದರೆ, ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಯಶ್ ರಾವಣನಾಗಿ ಅಬ್ಬರಿಸಿದರೆ ಸನ್ನಿ ಡಿಯೋಲ್ ಹನುಮಂತನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರಲ್ಲದೇ ರವಿ ದುಬೆ.. ಅರುಣ್ ಗೋವಿಲ್.. ಲಾರಾ ದತ್ತಾ.. ಶೀಬಾ ಚಡ್ಡಾ.. ಹೀಗೆ ಹಲವರು ನಿತೇಶ್ ತಿವಾರಿ ನಿರ್ದೇಶನದ ರಾಮಾಯಣದ ಭಾಗವಾಗಿದ್ದಾರೆ.
ಇನ್ನೇನು ಈ ದೀಪಾವಳಿ ಹಬ್ಬದಂದು ''ರಾಮಾಯಣ'' ಚಿತ್ರದ ಮೊದಲ ಭಾಗ ಬೆಳ್ಳಿತೆರೆಯಲ್ಲಿ ಅನಾವರಣವಾಗಲಿದೆ. ಪ್ರೇಕ್ಷಕರಲ್ಲಿ ಈ ಚಿತ್ರ ನೋಡುವ ಆತುರ-ಕಾತುರ ಎರಡು ಇದೆ. ಹೀಗಿರುವಾಗ ನಿನ್ನೆ-ಮೊನ್ನೆಯಿಂದ ''ರಾಮಾಯಣ'' ಚಿತ್ರದಲ್ಲಿ ಡ್ಯಾನ್ಸರ್ ಕಂ ನಟ ರಾಘವ್ ಜುಯೆಲ್ ಕೂಡ ಇದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ರಾವಣನ ಹಿರಿಯ ಮಗ ಮೇಘನಾದ (ಇಂದ್ರಜಿತ್) ಪಾತ್ರವನ್ನು ರಾಘವ್ ನಿರ್ವಹಿಸಲಿದ್ದಾರೆ ಎಂದು ಗುಲ್ಲಾಗಿತ್ತು.
ಆದರೆ, ಇದೇ ಸಮಯದಲ್ಲಿ ''ಮಿರ್ಜಾಪುರ್'' ಸರಣಿಯಲ್ಲಿ ಬಬ್ಲು ಪಂಡಿತ್ ಪಾತ್ರದ ಮೂಲಕ ಅಬ್ಬರಿಸಿದ್ದ ವಿಕ್ರಾಂತ್ ಮ್ಯಾಸ್ಸೆ ಅವರ ಹೆಸರನ್ನು ಕೂಡ ಎಳೆದು ತರಲಾಗಿತ್ತು. ವಿಕ್ರಾಂತ್ ಮ್ಯಾಸ್ಸೆ ಅವರನ್ನು ಹೊರದಬ್ಬಿ ರಾವಣನ ಮಗನ ಪಾತ್ರಕ್ಕೆ ರಾಘವ್ ಜುಯೆಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ''ಪಿಂಕ್ ವಿಲ್ಲಾ ''ವರದಿ ಮಾಡಿದೆ. ಈ ಸುದ್ದಿ ವಿಕ್ರಾಂತ್ ಮ್ಯಾಸ್ಸೆ ಅವರ ಕಣ್ಣಿಗೆ ಬಿದ್ದಿದೆ. ಅವರನ್ನು ಕೆರಳಿಸಿದೆ.
ಹೀಗಾಗಿಯೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕಿಡಿ ಕಾರಿದ ವಿಕ್ರಾಂತ್ ಮ್ಯಾಸ್ಸೆ ನಾನು ಯಾವತ್ತು ಈ ಚಿತ್ರದ ಭಾಗವಾಗಿರಲಿಲ್ಲ, ಅಂದು ಇಲ್ಲ.. ಇಂದು ಇಲ್ಲ.. ಎಂದು ಹೇಳಿದ್ದಾರೆ. ಜವಾಬ್ದಾರಿ ಮಾಧ್ಯಮಗಳ ಬೇಜವಾಬ್ಧಾರಿತನಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿ ''ರಾಮಾಯಣ'' ತಂಡಕ್ಕೆ ಒಳ್ಳೆಯದಾಗಲಿ, ನಾನು ಚಿತ್ರದ ಟಿಕೆಟ್ ಖರೀದಿಸಿ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುತ್ತೇನೆ ಎಂದು ಹೇಳಿದ್ದಾರೆ.

ಆದರೆ, ಆ ನಂತರ ಅದೇನಾಯ್ತೋ ಗೊತ್ತಿಲ್ಲ. ವಿಕ್ರಾಂತ್ ಮ್ಯಾಸ್ಸೆ ತಮ್ಮ ಈ ಪೋಸ್ಟ್‌ನ್ನು ಡಿಲೀಟ್ ಮಾಡಿದ್ದಾರೆ. 4000 ಕೋಟಿ ಬಂಡವಾಳ ಹೂಡಿ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ನಿರ್ಮಾಪಕರ ಒತ್ತಡದಿಂದಾನಾ..? ರಾಘವ್ ಜುಯೆಲ್ ಮೇಲಿನ ಪ್ರೀತಿ ವಿಶ್ವಾಸದಿಂದನಾ..? ಅಥವಾ ಬಾಲಿವುಡ್ ಪಿಆರ್ ತಂತ್ರಗಾರಿಕೆಯಿಂದಾನಾ..? ಗೊತ್ತಿಲ್ಲ. ಆದರೆ ವಿಕ್ರಾಂತ್ ಮ್ಯಾಸ್ಸೆ ಅವರ ಈ ನಡೆ ಹಲವರಲ್ಲಿ ಅನುಮಾನ ಹುಟ್ಟುಹಾಕಿದೆ. ಪೋಸ್ಟ್ ಮಾಡುವುದೇಕೆ..? ಡಿಲೀಟ್ ಮಾಡುವುದೇಕೆ..? ಎನ್ನುವ ಪ್ರಶ್ನೆ ಮೂಡಿಸಿದೆ. ಸ್ಕ್ರೀನ್ ಶಾಟ್‌ನ ಈ ಯುಗದಲ್ಲಿ ಪೋಸ್ಟ್ ಡಿಲೀಟ್ ಮಾಡಿದರೆ ಪ್ರಯೋಜವಾದರೂ ಏನು..? ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.
ಒಟ್ನಲ್ಲಿ ಸದ್ಯ ''ರಾಮಾಯಣ'' ಚಿತ್ರದಲ್ಲಿ ನಾನು ಇಲ್ಲ ಎಂದು ವಿಕ್ರಾಂತ್ ಮ್ಯಾಸ್ಸೆ ಸ್ಪಷ್ಟನೆ ನೀಡಿದ್ದಾರೆ. ನಿಜಕ್ಕೂ ವಿಕ್ರಾಂತ್ ಮ್ಯಾಸ್ಸೆ ಬದಲಿಗೆ ರಾಘವ್ ಜುಯೆಲ್ ಬಂದರೋ ಅಥವಾ ವಿಕ್ರಾಂತ್ ಎಂದಿಗೂ ಅಲ್ಲಿರಲಿಲ್ಲವೋ ಎಂಬುದು ಕೇವಲ ಒಂದು ಚರ್ಚೆಯ ವಿಷಯವಷ್ಟೇ. ಆದರೆ ವಿಕ್ರಾಂತ್ ಹೇಳಿದಂತೆ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡುವ ಕುತೂಹಲ ಎಲ್ಲರಿಗೂ ಇದೆ.



Click it and Unblock the Notifications











