ನಿಧಿ 'ಅಜಬ್ ಗಜಬ್ ಲವ್' ಯಶಸ್ವಿಯಾಗುವುದೇ?
ಒಮ್ಮೆ ನಿಧಿ ಬಾಲಿವುಡ್ ನಲ್ಲಿ ಯಶಸ್ವಿಯಾದರೆ, ನಂತರ ಕನ್ನಡ ಚಿತ್ರಗಳಿಗೆ ಸಿಗುವುದು ದುಸ್ತರ ಎಂದೇ ಹೇಳಲಾಗುತ್ತಿದೆ. ಕಾರಣ, ನಿಧಿಗೆ ಕನ್ನಡದಲ್ಲಿ ಈ ಮೊದಲು ಅಂತಹ ಗಟ್ಟಿ ಪಾತ್ರಗಳನ್ನು ನೀಡಲಾಗಿರಲಿಲ್ಲ. ಯೋಗರಾಜ್ ಭಟ್ ಅವರನ್ನು ಬಿಟ್ಟರೆ ನಿಧಿ ಸುಬ್ಬಯ್ಯ ಅವರಿಗೆ ಯಾರೂ ಅಷ್ಟೊಂದು ಒಳ್ಳೆ ಪಾತ್ರ ನೀಡಿರಲಿಲ್ಲ. ಹೀಗಾಗಿ ನಿಧಿ ಯಾವತ್ತೋ ಹೇಳಿದಂತೆ ಸಿಕ್ಕ ಪಾತ್ರಗಳನ್ನು ಒಪ್ಪಿ ಕನ್ನಡ ಚಿತ್ರಗಳಲ್ಲಿ ನಟಿಸುತ್ತಾರೆಂಬುದು ಕನಸಿನ ಮಾತೇ ಸರಿ.
ತೀರಾ ಇತ್ತೀಚಿಗೊಮ್ಮೆ ಕನ್ನಡದ ಮಾಧ್ಯಮಗಳಿಗೆ ಸಿಕ್ಕಿದ್ದ ನಿಧಿ "ನಾನು ಕನ್ನಡ ಚಿತ್ರಗಳಲ್ಲಿ ಮುಂದೆಯೂ ನಟಿಸುವುದು ಖಂಡಿತ. ಆದರೆ ಸಿಕ್ಕ ಸಿಕ್ಕ ಆಫರ್ ಒಪ್ಪಿಕೊಳ್ಳುವುದಿಲ್ಲ. ಯೋಗರಾಜ್ ಭಟ್ ಅವರೇನಾದರೂ ಆಫರ್ ನೀಡಿದರೆ ಸ್ವಲ್ಪವೂ ಯೋಚಿಸದೇ ತಕ್ಷಣಕ್ಕೆ ಒಪ್ಪಿಕೊಂಡು ಬಿಡುತ್ತೇನೆ. ಅದು ಬಿಟ್ಟರೆ ಕಥೆ ನೋಡಿ ನಾನು ಕನ್ನಡ ಚಿತ್ರಗಳಲ್ಲಿ ನಟಿಸಲಿದ್ದೇನೆ ಅಷ್ಟೇ" ಎಂದಿದ್ದರು. ಅದು ಆಗಿನ ಮಾತು, ಈಗ ನಿಧಿ ಬದಲಾಗಿರಲೂಬಹುದು.
ಸದ್ಯಕ್ಕೆ ನಿಧಿ ಆ ನಿಟ್ಟಿನಲ್ಲಿ ತುಂಬಾ ಜಾಣೆಯಂತೆ ಮಾತನಾಡುತ್ತಾರೆ. "ನಾನು ಅಲ್ಲಿ ಯಶಸ್ವಿಯಾದರೂ ಕನ್ನಡವನ್ನು ಮರೆಯಲಾರೆ. ನನಗೆ ಸ್ಯಾಂಡಲ್ ವುಡ್ ಕೂಡ ಬಾಲಿವುಡ್ ಇದ್ದಂತೆ. ಅಲ್ಲಿ ಯಶಸ್ವಿಯಾದ ತಕ್ಷಣ ನನ್ನ ವೃತ್ತಿಜೀವನದ ಮೆಟ್ಟಿಲು ಕನ್ನಡ ಚಿತ್ರರಂಗವನ್ನು ಮರೆಯಲಾರೆ. ಇದೂ ಕೂಡ ನನ್ನ ಕಾರ್ಯಕ್ಷೇತ್ರಗಳಲ್ಲಿ ಒಂದಾಗಲಿದೆ. ಐ ಲವ್ ಸ್ಯಾಂಡಲ್ ವುಡ್ ಟೂ..." ಎಂದು ಅಲ್ಲಿನ ಟಿವಿ ಸಂದರ್ಶನಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ.
ಇನ್ನೇನು ಹೆಚ್ಚು ದಿನಗಳು ಕಾಯಬೇಕಾಗಿಲ್ಲ. ಬಾಲಿವುಡ್ ನಲ್ಲಿ ಈಗಾಗಲೇ ನಿಧಿ ನಟಿಸಿರುವ 'ಅಜಬ್ ಗಜಬ್ ಲವ್' ಚಿತ್ರದ ಟ್ರೇಲರ್ ಗಳು ಪ್ರಸಾರವಾಗುತ್ತಿವೆ. ಚಿತ್ರದ ಟ್ರೇಲರ್ ಗಳಲ್ಲಿನ ಹೊಸ ಮುಖ ನಿಧಿ ಬಗ್ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಹಾಗೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಹೀಗಾಗಿ ಒಮ್ಮೆ ನಿಧಿಯ ಈ ಚಿತ್ರ ಯಶಸ್ವಿಯಾದರೆ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ ಹಾಗೂ ದೀಪಿಕಾ ಪಡುಕೋಣೆ ಅವರಂತೆ ನಿಧಿಯೂ ಅಲ್ಲೇ ಸೆಟ್ಲ್ ಆದರೆ ಅಚ್ಚರಿಯೇನಿಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications











