'ರಾಮಾಯಣ' ಚಿತ್ರದಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕನ್ನಡ ಮಾತನಾಡುವುದು ಹೇಗಿರುತ್ತೆ?
ನಿತೇಶ್ ತಿವಾರಿ ನಿರ್ದೇಶನದಲ್ಲಿ ಬಹಳ ಅದ್ಧೂರಿಯಾಗಿ 'ರಾಮಾಯಣ' ಸಿನಿಮಾ ನಿರ್ಮಾಣವಾಗ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ಬಿಡುಗಡೆ ಆಗುತ್ತಿದೆ.
ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ರಾಮಾಯಣ' ಸಿನಿಮಾ ನಿರ್ಮಾಣವಾಗ್ತಿದೆ. ಈಗಾಗಲೇ ಸಾಕಷ್ಟು ಬಾರಿ ಕೇಳಿರುವ ನೋಡಿರುವ ಕಥೆಯನ್ನು ಯಾವ ರೀತಿ ತೆರೆಗೆ ತರುತ್ತಾರೆ ಎನ್ನುವ ಕುತೂಹಲ ಮೂಡಿದೆ. ಅಂದಾಜು 4000 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ. ಎರಡು ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ವಿವಿಧ ಭಾಷೆಗಳಿಗೆ ಚಿತ್ರವನ್ನು ಡಬ್ ಮಾಡಲು ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗ್ತಿದೆ.

'AI' ತಂತ್ರಜ್ಞಾನದಲ್ಲಿ ಕಲಾವಿದರ ವಾಯ್ಸ್ ಅನ್ನು ಬೇರೆ ಬೇರೆ ಭಾಷೆಗಳಲ್ಲಿ ತಕ್ಕಂತೆ ಡಬ್ ಮಾಡುವ ಪ್ರಯತ್ನ ಶುರುವಾಗಿದೆ. ಈಗಾಗಲೇ ಕೆಲ ಸಿನಿಮಾಗಳಲ್ಲಿ ಅದನ್ನು ಬಳಸಿಕೊಳ್ಳುತ್ತಿದ್ದಾರೆ. 'ರಾಮಾಯಣ' ಚಿತ್ರದಲ್ಲಿ ಮತ್ತೊಂದು ಪ್ರಯೋಗ ಮಾಡಲಾಗುತ್ತಿದೆ. ಈಗಾಗಲೇ 'ಕೂಲಿ' ಚಿತ್ರದಲ್ಲಿ ಅದನ್ನು ಟ್ರೈ ಮಾಡಲಾಗಿದೆ. ಇದು ಮುಂದಿನ ದಿನಗಳಲ್ಲಿ ಹೊಸ ಕ್ರಾಂತಿ ಹುಟ್ಟುಹಾಕುವ ಸುಳಿವು ಸಿಗುತ್ತಿದೆ.
ಸಾಮಾನ್ಯವಾಗಿ ಒಂದು ಭಾಷೆಯಲ್ಲಿರುವ ಸಿನಿಮಾವನ್ನು ಬೇರೆ ಭಾಷೆಗೆ ಡಬ್ ಮಾಡಿದಾಗ ಲಿಪ್‌ಸಿಂಕ್ ಸಮಸ್ಯೆಯಾಗುತ್ತದೆ. ಅಂದರೆ ಭಾಷಾ ಬದಲಾದಂತೆ ತುಟಿ ಚಲನೆ ಬದಲಿಸಲು ಸಾಧ್ಯವಾಗುತ್ತಿರಲಿಲ್ಲ. ಡಬ್ಬಿಂಗ್ ಸಿನಿಮಾಗಳಲ್ಲಿ ಇದೊಂದು ದೊಡ್ಡ ಲೋಪವಾಗಿ ಇರುತ್ತಿತ್ತು. ಆದರೂ ಪ್ರೇಕ್ಷಕರು ಅದನ್ನು ಒಪ್ಪಿಕೊಂಡು ಸಿನಿಮಾ ನೋಡುತ್ತಿದ್ದರು. ಆದರೆ ಇನ್ನು ಮುಂದೆ ಅದಕ್ಕೆ ಪರಿಹಾರ ಸಿಕ್ಕಿದೆ. 'AI' ಮೂಲಕ ಸಿನಿಮಾ ಡಬ್ಬಿಂಗ್ ವೇಳೆ ಆಯಾ ಭಾಷೆಯಲ್ಲೇ ಕಲಾವಿದರು ಮಾತನಾಡಿದಂತೆ ಲಿಪ್‌ಸಿಂಕ್ ಮಾಡಲಾಗುತ್ತದೆ. ನಿಜವಾಗಿ ಅದೇ ಭಾಷೆಯಲ್ಲಿ ಸಿನಿಮಾ ಚಿತ್ರೀಕರಿಸಿದಂತೆ ಭಾಸವಾಗುತ್ತಿದೆ. 'ರಾಮಾಯಣ' ಚಿತ್ರದಲ್ಲಿ ಇದನ್ನು ಬಳಸಿಕೊಳ್ಳುತ್ತಿರುವುದಾಗಿ ಮೇಕರ್ಸ್ ಮಾಹಿತಿ ನೀಡಿದ್ದಾರೆ.
ರಣ್‌ಬೀರ್, ಸಾಯಿ ಪಲ್ಲವಿ, ಯಶ್ ಎಲ್ಲರೂ ಆಯಾ ಭಾಷೆಯಲ್ಲಿ ಮಾತನಾಡಿದರೆ ಹೇಗಿರುತ್ತದೆ ಎಂದು ಈ ಚಿತ್ರದಲ್ಲಿ ನೋಡಬಹುದು. ಹಿಂದಿ ಭಾಷೆಯಲ್ಲಿ 'ರಾಮಾಯಣ' ಚಿತ್ರ ನಿರ್ಮಾಣವಾಗುತ್ತದೆ. ಕನ್ನಡದಲ್ಲಿ ಸ್ವತಃ ಯಶ್ ಡಬ್ ಮಾಡಿದರೂ ಲಿಪ್‌ಸಿಂಕ್ ಮಿಸ್ ಆಗುತ್ತದೆ. ಆದರೆ 'Brahma AI' ಸಾಫ್ಟ್‌ವೇರ್ ಸಹಾಯದಿಂದ ಇದು ಬಹಳ ನ್ಯಾಚುಲರ್ ಆಗಿ ಯಶ್ ಕನ್ನಡ ಮಾತನಾಡಿದಂತೆ ತೋರಿಸಲಾಗುತ್ತದೆ. ಅದೇ ರೀತಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಕನ್ನಡ ಮಾತನಾಡುವುದನ್ನು ನೋಡಬಹುದು.
45 ಭಾಷೆಗಳಿಗೆ 'ರಾಮಾಯಣ' ಸಿನಿಮಾ ಡಬ್ ಮಾಡುವ ಪ್ರಯತ್ನ ನಡೀತಿದೆ. ಎಲ್ಲಾ ಭಾಷೆಗೂ ಇದೇ 'AI' ಟೂಲ್ ಬಳಸಿ ಡಬ್ ಮಾಡಲಾಗ್ತಿದೆ. ನಿರ್ಮಾಪಕ ನಿಮಿತ್ ಮಲ್ಹೋತ್ರಾ ಒಡೆತನದ DNEG ಸಂಸ್ಥೆ ಅದರ ಝಲಕ್ ಬಿಟ್ಟಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗ್ತಿದೆ. ಈಗಾಗಲೇ ಕಲಾವಿದರ ಭಾಷೆಯ ಶೈಲಿ, ಧ್ವನಿಯನ್ನು ಆಯಾ ಭಾಷೆಗೆ ಬೇಕಾದಂತೆ ರೀಕ್ರಿಯೇಟ್ ಮಾಡುವ ಕೆಲಸ ನಡೀತಿದೆ. 'ಜೇಮ್ಸ್' ಚಿತ್ರಕ್ಕೆ ಇದೇ ರೀತಿ ಪುನೀತ್ ರಾಜ್‌ಕುಮಾರ್ ಧ್ವನಿ ಬಳಸಿಕೊಳ್ಳಲಾಗಿತ್ತು.
'ರಾಮಾಯಣ' ತಂಡದ ಈ ಪ್ರಯತ್ನ ಯಶಸ್ವಿಯಾದರೆ ಮುಂದೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಈ ಲಿಪ್‌ಸಿಂಕ್ ಸಮಸ್ಯೆ ಇರುವುದಿಲ್ಲ. ಯಾವುದೇ ಭಾಷೆಗೆ ಯಾವುದೇ ಚಿತ್ರವನ್ನು ಬಹಳ ಪರಿಣಾಮಕಾರಿಯಾಗಿ ಡಬ್ ಮಾಡಬಹುದು. ಇದು ಡಬ್ಬಿಂಗ್ ಸಿನಿಮಾ ನೋಡುವ ಅನುಭವವನ್ನು ಮತ್ತಷ್ಟು ಚೆಂದಗಾಣಿಸುತ್ತದೆ. ರಣ್‌ಬೀರ್ ಕನ್ನಡ ಮಾತನಾಡುವುದು ಮಾತ್ರವಲ್ಲ ಯಶ್ ಖುದ್ದಾಗಿ ಹಿಂದಿ, ತೆಲುಗು, ತಮಿಳು, ಮ್ಯಾಂಡರಿನ್, ಸ್ಪ್ಯಾನಿಷ್ ಮಾತನಾಡಿದಂತೆ ತೋರಿಸಬಹುದು. ತುಟಿ ಚಲನೆ ಕೂಡ ಆಯಾ ಭಾಷೆಗೆ ತಕ್ಕಂತೆ ಇರಲಿದೆ.


Click it and Unblock the Notifications











