Nitin Desai Death: ಮುಂದಿನ ವಾರ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಕಲಾ ನಿರ್ದೇಶಕ ನಿತಿನ್ ದೇಸಾಯಿ ನೇಣಿಗೆ ಶರಣು
Nitin Desai Death: ಬಾಲಿವುಡ್ ಖ್ಯಾತ ಆರ್ಟ್ ಡೈರೆಕ್ಟರ್ ನಿತಿನ್ ದೇಸಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸೆಟ್‌ಗಳನ್ನು ನಿರ್ಮಿಸಿದ್ದ ನಿತಿನ್ ದೇಸಾಯಿ ಪ್ರೊಡಕ್ಷನ್ ಡಿಸೈನರ್ ಆಗಿಯೂ ಗುರ್ತಿಸಿಕೊಂಡಿದ್ದರು. ಹಿಂದಿ, ಮರಾಠಿ ಕಿರುತೆರೆಯಲ್ಲೂ ಕೆಲಸ ಮಾಡಿದ್ದರು. ಒಂದೆರಡು ಸಿನಿಮಾಗಳನ್ನು ನಿರ್ದೇಶಿಸಿದ್ದ ಅವರು ಕೆಲ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿಭಾಯಿಸಿದ್ದರು.
ಸಂಜಯ್ ಲೀಲಾ ಬನ್ಸಾಲಿ, ಅಶುತೋಷ್ ಗೋವಾರಿಕ್, ವಿದ್ಯು ವಿನೋದ್ ಚೋಪ್ರಾ, ರಾಜ್‌ಕುಮಾರ್ ಹಿರಾನಿ ರೀತಿಯ ಖ್ಯಾತ ನಿರ್ದೇಶಕರ ಸಿನಿಮಾಗಳಲ್ಲಿ ನಿತಿನ್ ಕೆಲಸ ಮಾಡಿದ್ದರು. ಕಲಾ ನಿರ್ದೇಶನಕ್ಕಾಗಿ 4 ಬಾರಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಆಗಸ್ಟ್ 9ಕ್ಕೆ 58ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ನಿತಿನ್, ಕರ್ಜತ್‌ನ ಎನ್‌ಡಿ ಸ್ಟುಡಿಯೋದಲ್ಲಿ ನೇಣಿಗೆ ಶರಣಾಗಿದ್ದಾರೆ.

ಲಗಾನ್, ದೇವದಾಸ್, ಜೋದಾ ಅಕ್ಬರ್, ಹಮ್ ದಿಲ್ ದೆ ಜುಕೆ ಸನಂ, ಪ್ರೇಮ್ ರತನ್ ದನ್ ಪಾಯೋ ರೀತಿಯ ಹಿಟ್ ಸಿನಿಮಾಗಳಿಗೆ ಸೆಟ್‌ಗಳನ್ನು ನಿರ್ಮಿಸಿ ನಿತಿನ್ ದೇಸಾಯಿ ಗಮನ ಸೆಳೆದಿದ್ದರು.ಮಹಾರಾಷ್ಟ್ರದ ದಾಪೋಲಿಯಲ್ಲಿ ಜನಿಸಿದ ನಿತಿನ್ ಚಂದ್ರಕಾಂತ್ ದೇಸಾಯಿ ಫೋಟೊಗ್ರಫಿ ಪದವಿ ಪಡೆದಿದ್ದರು. 1987ರಲ್ಲಿ ಮುಂಬೈನ ಫಿಲ್ಮ್ ಸಿಟಿ ಸ್ಡುಡಿಯೋ ಬಂದ ಅವರು 2ಡಿ, 3ಡಿ ಸ್ಟಿಲ್ ಫೋಟೊಗ್ರಫಿ ಕಲಿತರು. 'ತಮಸ್' ಕಿರುತೆರೆ ಧಾರಾವಾಹಿಗಾಗಿ ಖ್ಯಾತ ಕಲಾ ನಿರ್ದೇಶಕ ನಿತಿನ್ ರಾಯ್ ಬಳಿ ಸಹಾಯಕರಾಗಿ ಸೇರಿದ್ದರು. ಮುಂದೆ 'ಕಬೀರ್' ಮತ್ತು 'ಚಾಣಕ್ಯ' ಧಾರಾವಾಹಿಗಳಿಗೆ ಕಲಾ ನಿರ್ದೇಶಕರಾಗಿ ದುಡಿದರು.
1993ರಲ್ಲಿ ಬಂದ 'ಭೂಕಂಪ್' ಚಿತ್ರಕ್ಕೆ ಕಲಾ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. '1942: ಎ ಲವ್ ಸ್ಟೋರಿ' ಸಿನಿಮಾ ಒಳ್ಳೆ ಹೆಸರು ತಂದು ಕೊಟ್ಟಿತ್ತು. 'ಪರಿಂದಾ', 'ಖಾಮೋಶಿ', 'ಮಾಚೀಸ್', 'ಬಾದ್‌ಶಾಹ್', 'ಡಾ. ಬಾಬಾ ಸಾಹೇಬ್ ಅಂಬೇಡ್ಕರ್' ಮತ್ತು 'ರಾಜು ಚಾಚಾ' ಹೀಗೆ ಹಲವು ಸಿನಿಮಾಗಳಿಗೆ ಕೆಲಸ ಮಾಡಿದರು. 'ಸಲಾಂ ಬಾಂಬೆ, 'ಅಮೋಕ್', 'ಜಂಗಲ್ ಬುಕ್', 'ಕಾಮಸೂತ್ರ', 'ಹೋಲಿ ಸ್ಮೋಕ್', 'ಸ್ಲಮ್ ಡಾಗ್ ಮಿಲೇನಿಯರ್' ಸೇರಿದಂತೆ ಹಲವು ಅಂತರಾಷ್ಟ್ರೀಯ ಪ್ರಾಜೆಕ್ಟ್‌ಗಳಿಗೆ ಕಲಾ ನಿರ್ದೇಶಕರಾಗಿ ಶ್ರಮಿಸಿದ್ದರು.
ಐತಿಹಾಸಿಕ ಸಿನಿಮಾಗಳಿಗೆ ಕಲಾ ನಿರ್ದೇಶಕ ಮಾಡುವುದರಲ್ಲಿ ನಿತಿನ್ ದೇಸಾಯಿ ಸಿದ್ಧಹಸ್ತರಾಗಿದ್ದರು. ಅವರಿಗೆ 4 ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿದ್ದು ಕೂಡ ಕಾಸ್ಟ್ಯೂಮ್ ಡ್ರಾಮಾಗಳೇ. ಇನ್ನು '1942: ಎ ಲವ್ ಸ್ಟೋರಿ', 'ಕಾಮೋಶಿ', 'ದೇವದಾಸ್' ಸಿನಿಮಾಗಳಿಗೆ ಫಿಲ್ಮ್ ಫೇರ್ ಪ್ರಶಸ್ತಿ ಧಕ್ಕಿತ್ತು. ನಿತಿನ್ ನಿಧನ ಬಾಲಿವುಡ್‌ಗೆ ದಿಗ್ಭ್ರಮೆ ಮೂಡಿಸಿದ್ದು ಅವರ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ಇನ್ನಷ್ಟೆ ತಿಳಿಯಬೇಕಿದೆ.


Click it and Unblock the Notifications











