ರಾಹುಲ್ ಗಾಂಧಿ ಬಿಜೆಪಿಗೆ ಬಂದರೆ ಅವರನ್ನೇ ಮದುವೆ ಆಗ್ತಾರಂತೆ ಕಂಗನಾ ; ವೈರಲ್ ಸುದ್ದಿಯ ಹಕೀಕತ್ತೇನು?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್‌ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್‌ನಲ್ಲಿಯೇ ಎಲ್ಲ ಸುದ್ದಿ ಕೆಲವೇ ಸೆಕೆಂಡ್‌ನಲ್ಲಿ ತಲುಪಿ ಬಿಡುತ್ತಾವೆ.
ಇನ್ನೂ ಸಾಮಾಜಿಕ ಜಾಲತಾಣವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಂಬಂಧ ಬಾಹುಗಳಿಂದ ಜನರನ್ನು ಆಕ್ರಮಿಸಿಕೊಂಡಿದೆ. ಆದರೆ, ಈ ಸೋಶಿಯಲ್ ಮೀಡಿಯಾದಲ್ಲಿ ಬಿತ್ತರವಾಗುವ ಸುದ್ದಿಗಳಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎನ್ನುವುದನ್ನು ಅರಿಯುವಷ್ಟರಲ್ಲಿ ಆ ಸುಳ್ಳು ಸುದ್ದಿ ಎಲ್ಲಿಂದ ಎಲ್ಲೆಲ್ಲಿಗೋ ತಲುಪಿ ಮತ್ಯಾವುದೋ ಪ್ರಮಾದವನ್ನು ಸೃಷ್ಟಿಸಿರುತ್ತೆ. ವೈರಲ್ ಆಗಿರುತ್ತೆ. ಉದಾಹರಣೆಗೆ ಕಂಗನಾ ರಣಾವತ್ ಮತ್ತು ರಾಹುಲ್ ಗಾಂಧಿ ಮದುವೆಯ ವಿಚಾರವನ್ನೇ ತೆಗೆದುಕೊಳ್ಳಿ.

ಹೌದು ಚಿತ್ರಕ್ಕೆ ಮತ್ತು ಪಾತ್ರಕ್ಕೆ ತನು-ಮನ ಅರ್ಪಿಸುವುದಲ್ಲದೇ ಪ್ರಬಲ ಶಕ್ತಿಗಳ ಮುಂದೆ ತನ್ನ ವ್ಯಕ್ತಿತ್ವಕ್ಕೆ ಮಸಿ ತಗುಲದಂತೆ ಬಾಲಿವುಡ್ ನಲ್ಲಿ ಸ್ಟಾರ್ ಪಟ್ಟವನ್ನು ಅಲಂಕರಿಸಿದವರು ಕಂಗನಾ ರಣಾವತ್. ಇನ್ನು ಕಂಗನಾ ರಣಾವತ್ ಈಗ ಕೇವಲ ನಾಯಕಿ ನಿರ್ದೇಶಕಿ ಮಾತ್ರ ಅಲ್ಲ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಸಂಸದೆಯೂ ಹೌದು.
ಇಂಥಾ ಕಂಗನಾ ರಣಾವತ್ ಕುರಿತ ಸುದ್ದಿಯೊಂದು ಎರಡ್ಮೂರು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಾಹುಲ್ ಗಾಂಧಿ ಬಿಜೆಪಿಗೆ ಬಂದರೆ ನಾನು ಅವರ ಜೊತೆ ಮದುವೆಯಾಗಲು ಸಿದ್ದ ಎನ್ನುವ ಸುದ್ದಿ ಅದು. ''ನಾಟಿವರ್ಲ್ಡ್'' ಎಂಬ ಇನ್‌ಸ್ಟಾಗ್ರಾಮ್ ಪೇಜ್ ಈ ಸುದ್ದಿಯನ್ನು ಹಂಚಿಕೊಂಡಿತ್ತು.
ಇನ್ನೂ ಕಂಗನಾ ಆಗಾಗ ಸುದ್ದಿಯಾಗುವುದು, ಚರ್ಚೆಗೆ ನಾಂದಿ ಹಾಡುವುದು ತಮ್ಮ ಹೇಳಿಕೆಗಳಿಂದಲೇ. ಈ ಹಿನ್ನೆಲೆ ಹಲವರು ಈ ಸುದ್ದಿಯನ್ನು ನಿಜಾ ಎಂದುಕೊಂಡಿದ್ದರು. ಸತ್ಯಾಸತ್ಯತೆಯನ್ನು ತಿಳಿಯುವ ಗೋಜಿಗೆ ಹೋಗದೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡುತ್ತಿದ್ದರು. ಕಂಗನಾ ರಣಾವತ್ ಮತ್ತು ರಾಹುಲ್ ಗಾಂಧಿ ಅವರನ್ನು ಈ ವಿಚಾರದಲ್ಲಿ ಹಲವರು ಗೇಲಿ ಕೂಡ ಮಾಡುತ್ತಿದ್ದರು.
ಸದ್ಯ ಕಂಗನಾ ರಣಾವತ್ ಇದೇ ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಕೆರಳಿ ಕೆಂಡ ಕಾರಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ ಇದು ರಾಜಕೀಯ ವ್ಯಕ್ತಿತ್ವದ ಮೇಲೆ ಮಾಡಲಾದ ದಾಳಿಯಲ್ಲ. ಬದಲಿಗೆ ಮಹಿಳೆಯ ವ್ಯಕ್ತಿಗತ ಗೌರವಕ್ಕೆ ಮಾಡಲಾದ ಅಪಮಾನ ಎಂದು ಹೇಳಿದ್ದಾರೆ. ರಾಜಕೀಯದಲ್ಲಿಯೂ ಮಹಿಳೆಯರಿಗೆ ಯಾವುದೇ ಘನತೆ ಇಲ್ಲ ಎಂದು ಹೇಳಿರುವ ಕಂಗನಾ ರಣಾವತ್ ಇಂತಹ ಸುಳ್ಳು ಸುದ್ದಿ ಹರಡುವವರಿಗೆ ನಾಚಿಕೆಯಾಗಬೇಕು ಎಂದು ಕಿಡಿ ಕಾರಿದ್ದಾರೆ.

ಅಂದ್ಹಾಗೇ ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಅವರನ್ನು ಕಂಗನಾ ಟಪೋರಿ ಎಂದು ಕರೆದಿದ್ದರು. ರಾಹುಲ್ ಗಾಂಧಿಯ ಸಂಸತ್ತಿನ ನಡುವಳಿಕೆಯ ಟೀಕೆ ಮಾಡಿದ್ದ ಕಂಗನಾ ಅವರನ್ನು ನೋಡಿದರೆ ಮಹಿಳೆಯರಿಗೆ ಇರುಸುಮುರುಸಾಗುತ್ತದೆ ಎಂದು ಹೇಳಿದ್ದರು.
ಯಾರೇ ಸಂದರ್ಶನ ನೀಡುತ್ತಿದ್ದರೂ ಕೂಡ ಮಧ್ಯೆ ಬಂದು ಬಾಯಿ ಹಾಕುತ್ತಾರೆ. ಅನವಶ್ಯಕವಾಗಿ ಏನನ್ನೋ ಮಾತನಾಡುತ್ತಾರೆ. ಇದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದ ಕಂಗನಾ, ರಾಹುಲ್ ಗಾಂಧಿಯವರು, ಅತ್ಯಂತ ಸೌಮ್ಯದಿಂದ ನಡೆದುಕೊಳ್ಳುವ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಯಿಂದ ಕಲಿಯುವುದು ತುಂಬಾ ಇದೆ ಎಂದು ಹೇಳಿದ್ದರು.
ಇನ್ನುಳಿದಂತೆ ಇತ್ತೀಚಿನ ದಿನಗಳಲ್ಲಿ ಕಂಗನಾ ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ''ಎಮರ್ಜೆನ್ಸಿ'' ಚಿತ್ರದ ಸೋಲಿನ ನಂತರ ಕಂಗನಾ ಸದ್ಯ ''ಭಾರತ ಭಾಗ್ಯ ವಿಧಾತಾ'' ಚಿತ್ರ ಮಾಡುತ್ತಿದ್ದಾರೆ. ''ಕ್ವೀನ್ 2'' ಕೂಡ ಶೀಘ್ರದಲ್ಲಿಯೇ ಶುರುವಾಗುವ ಸೂಚನೆ ಇದೆ.



Click it and Unblock the Notifications