ನನ್ನನ್ನೇ ಬ್ಯಾನ್ ಮಾಡ್ತೀರಾ ; 'ಡಾನ್' ವಿರುದ್ಧ ತಿರುಗಿ ಬಿದ್ದ 'ಧುರಂಧರ್', ಒಕ್ಕೂಟದ ವಿರುದ್ಧ ಕಾನೂನು ಸಮರ ಸಾರಿದ ರಣ್ವೀರ್
ಸೃಜನಶೀಲತೆ, ಸ್ಟಾರ್ ಡಂ ಮತ್ತು ಅಹಂಕಾರದ ಮೇಲೆ ನಿರ್ಮಾಣವಾದ ಸಾಮ್ರಾಜ್ಯ ಸಿನಿಮಾ.ಇಲ್ಲಿ ಒಂದು ಸಣ್ಣ ಮನಸ್ತಾಪ,ಕಿಡಿ ಹಚ್ಚಬಹುದು. ಕಿಡಿ ಕಾಡ್ಗಿಚ್ಚಿನಂತೆ ಹಬ್ಬಿ ಇಡೀ ಸಾಮ್ರಾಜ್ಯವನ್ನೇ ಭಸ್ಮ ಮಾಡಬಹುದು. ಇಲ್ಲಿ ಪ್ರತಿಯೊಬ್ಬರು ಅವರವರ ದೃಷ್ಟಿಕೋನದಲ್ಲಿ ಅವರವರೇ ಸುಪ್ರೀಂ. ಹೀಗಾಗಿಯೇ ಇಲ್ಲಿ ಸಂವಾದಕ್ಕಿಂತ ವಿವಾದ ಹೆಚ್ಚಾಗುತ್ತವೆ. ಈಗೋ ಕ್ಲ್ಯಾಶ್‌ಗಳಿಂದಾಗಿ ಸಂಬಂಧಗಳು ಮುರಿದು ಬೀಳುತ್ತಾವೆ.ಕಾನೂನು ಸಮರಗಳು ಕೂಡ ಶುರುವಾಗುತ್ತಾವೆ. ಉದಾಹರಣೆಗೆ ರಣ್ವೀರ್ ಸಿಂಗ್ ವಿಚಾರವನ್ನೇ ತೆಗೆದುಕೊಳ್ಳಿ.
ಹೌದು, ಫರ್ಹಾನ್ ಅಖ್ತರ್ ಮತ್ತು ರಣವೀರ್ ಸಿಂಗ್ ನಡುವೆ ಶುರುವಾದ ಸಮರ ಎಲ್ಲರಿಗೆ ಗೊತ್ತಿರುವಂತಹದ್ದೇ. ''ಧುರಂಧರ್'' ಚಿತ್ರದ ಪ್ರಚಂಡ ಗೆಲುವಿನ ನಂತರ ರಣ್ವೀರ್ ಸಿಂಗ್ ವರ್ತನೆಯಲ್ಲಿ ಬದಲಾವಣೆಗಳಾಗಿವೆ. ಏಕಾಏಕಿ ಹೇಳದೇ ಕೇಳದೇ ''ಡಾನ್ 3'' ಚಿತ್ರದಿಂದ ರಣ್ವೀರ್ ಹೊರ ನಡೆದಿದ್ದಾರೆ ಎನ್ನುವ ಆರೋಪವನ್ನು ಫರ್ಹಾನ್ ಅಖ್ತರ್ ಮಾಡಿದ್ದರು.

ಇಷ್ಟೇ ಅಲ್ಲ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಕ್ಕೆ ಈಗಾಗಲೇ ಕೋಟ್ಯಂತರ ರೂಪಾಯಿ ಹಣವನ್ನು ನೀರಿನಂತೆ ಖರ್ಚು ಮಾಡಲಾಗಿದ್ದು, 40 ಕೋಟಿ ಪರಿಹಾರ ಕೊಡಬೇಕೆಂದು ವಾದ ಮಂಡಿಸಿದ್ದರು. ಇಂಡಿಯನ್ ಫಿಲ್ಮ್ ಅಂಡ್ ಟೆಲಿವಿಷನ್ ಡೈರೆಕ್ಟರ್ಸ್ ಅಸೋಸಿಯೇಷನ್ (IFTDA) ಸದಸ್ಯರಾಗಿರುವ ಫರ್ಹಾನ್ ಅಖ್ತರ್ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ (FWICE) ನಲ್ಲಿ ದೂರು ಸಲ್ಲಿಸಿದ್ದರು.
ಫರ್ಹಾನ್ ಅಖ್ತರ್ ದೂರು ನೀಡಿದ ಬೆನ್ನಲ್ಲೇ, ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ (FWICE) ರಣ್ವೀರ್ ಸಿಂಗ್ ವಿರುದ್ಧ ಅಸಹಕಾರ ಚಳುವಳಿಯನ್ನು ಘೋಷಿಸಿತ್ತು. ಅಧಿಕೃತವಾಗಿ ಬ್ಯಾನ್ ಎಂಬ ಪದ ಉಪಯೋಗಿಸಿದೆ ರಣ್ವೀರ್ ಸಿಂಗ್ ಅವರನ್ನು ಚಿತ್ರರಂಗದಿಂದ ದೂರ ಇಡಬೇಕೆಂದು (non-cooperation directive) ಆದೇಶ ಹೊರಡಿಸಿತ್ತು.
ಆದರೆ, ಅಸಲಿಗೆ ಮನರಂಜನಾ ಪ್ರಪಂಚದಲ್ಲಿ ಯಾವುದೇ ಚಿತ್ರರಂಗದ ಒಕ್ಕೂಟ ಅಥವಾ ಫೆಡರೇಶನ್‌ಗೆ ಒಬ್ಬ ವ್ಯಕ್ತಿಯನ್ನು ಕೆಲಸ ಮಾಡದಂತೆ ಸಂಪೂರ್ಣವಾಗಿ 'ಬ್ಯಾನ್' ಮಾಡುವ ಹಕ್ಕು ಇಲ್ಲವೇ ಇಲ್ಲ. ಭಾರತದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಮುಕ್ತವಾಗಿ ಉದ್ಯೋಗ ಮಾಡುವ ಹಕ್ಕನ್ನು ನೀಡಿದೆ.
ಹೀಗಾಗಿ ಹಲವರು ''ಬ್ಯಾನ್'' ಪದ ಉಪಯೋಗ ಮಾಡದೇ ನಾನ್-ಕೋಆಪರೇಷನ್ ಡೈರೆಕ್ಟಿವ್ (ಅಸಹಕಾರ ನಿರ್ದೇಶನ) ಎಂಬ ಚಾಣಾಕ್ಷ ಅಸ್ತ್ರವನ್ನು ಬಳಸುತ್ತಾರೆ. ನಟನನ್ನು ಬ್ಯಾನ್ ಮಾಡುವ ಬದಲು, ತಮ್ಮ ಸಂಘಟನೆಯಲ್ಲಿರುವ ಸಾವಿರಾರು ತಂತ್ರಜ್ಞರು, ಲೈಟ್‌ಮ್ಯಾನ್, ಮೇಕಪ್ ಆರ್ಟಿಸ್ಟ್ ಮತ್ತು ದಿನಗೂಲಿ ಕಾರ್ಮಿಕರಿಗೆ ಆ ನಟನ ಜೊತೆ ಸಹಕರಿಸದಂತೆ ಆದೇಶ ನೀಡುತ್ತಾರೆ. ಈ ಮೂಲಕ ಮೂಲೆಗುಂಪು ಮಾಡುವ ಪ್ರಯತ್ನ ಮಾಡುತ್ತಾರೆ.

ರಣ್ವೀರ್ ಸಿಂಗ್ ವಿರುದ್ಧ ಕೂಡ ಇದೇ ಅಸ್ತ್ರವನ್ನು ಪ್ರಯೋಗ ಮಾಡಿ, ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ ತಂತ್ರಗಾರಿಕೆ ಹೆಣೆದಿತ್ತು. ಬಹುಶಃ ತಮ್ಮ ಈ ಅಸಹಕಾರ ಚಳುವಳಿಯಿಂದ ರಣವೀರ್ ಹೆದರಬಹುದು, ಕ್ಷಮೆ ಕೇಳಬಹುದು, ತೆರೆಮರೆಯಲ್ಲಿ ರಾಜಿ ಸಂಧಾನಕ್ಕೆ ಮುಂದಾಗಬಹುದು ಎಂಬ ಆಲೋಚನೆ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ ಮಾಡಿದ್ದರೂ ಮಾಡಿರಬಹುದು.
ಆದರೆ, ರಣ್ವೀರ್ ಸಿಂಗ್ ಸುಲಭವಾಗಿ ಸೋಲೋಪ್ಪುವ ನಾಯಕನಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ರಣ್ವೀರ್ ಸಿಂಗ್ ಸದ್ಯ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ (FWICE) ಕಾನೂನು ನೋಟಿಸ್ ಕಳಿಸಿದ್ದಾರೆ ಎಂದು ''ಹಿಂದೂಸ್ತಾನ್ ಟೈಮ್ಸ್'' ವರದಿ ಮಾಡಿದೆ.
ವೈಯಕ್ತಿಕ ಹಾಗೂ ನಿರ್ಮಾಪಕ ಮತ್ತು ಕಲಾವಿದರ ನಡುವಿನ ಒಪ್ಪಂದಗಳಲ್ಲಿ ಹಸ್ತಕ್ಷೇಪ ಮಾಡುವ ಯಾವ ಅರ್ಹತೆ ಕೂಡ ಒಕ್ಕೂಟಕ್ಕೆ ಇಲ್ಲ, ಯಾವುದೇ ಕಾನೂನು ಬದ್ದ ಅಧಿಕಾರವೂ ಇಲ್ಲ ಎಂದು ರಣ್ವೀರ್ ಸಿಂಗ್ ತಮ್ಮ ನೋಟಿಸ್‌ನಲ್ಲಿ ಉಲ್ಲೇಖ ಮಾಡಿದ್ದು ಒಕ್ಕೂಟ 'ಅಸಹಕಾರ' ಎಂಬ ಡ್ರಾಮಾ ಮಾಡುತ್ತಾ ಕಾನೂನುಬಾಹಿರವಾಗಿ ವ್ಯಕ್ತಿಯ ಉದ್ಯೋಗ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ರಣವೀರ್ ಪರ ವಕೀಲರು ತಿವಿದಿದ್ದಾರೆ.
ಇದರಿಂದ ರಣ್ವೀರ್ ಸಿಂಗ್ ಮತ್ತು ಫರ್ಹಾನ್ ಅಖ್ತರ್ ನಡುವಿನ ವಿವಾದದ ಚೆಂಡು ಮತ್ತೀಗ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ (FWICE)ಅಂಗಳ ತಲುಪಿದೆ. ಜಿದ್ದಿಗೆ ಬಿದ್ದು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ ನ್ಯಾಯಾಲಯದಲ್ಲಿ ಮುಖಭಂಗ ಅನುಭವಿಸುತ್ತಾ..? ಅಥವಾ ನಿಮ್ಮ ವಿವಾದ ನೀವೇ ಬಗೆಹರಿಸಿಕೊಳ್ಳಿ ಎಂದು ಕೈಚೆಲ್ಲುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications