₹30,000ಕೋಟಿ ಆಸ್ತಿ; ಕಳೆದ 2 ತಿಂಗಳಿಂದ ನನ್ನ ಮಗಳ ಕಾಲೇಜ್ ಫೀಸ್ ಕಟ್ಟಿಲ್ಲ, ದುಡ್ಡು ಕೊಡಿಸಿ ಪ್ಲೀಸ್ -ಕರಿಷ್ಮಾ ಕಪೂರ್
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಇಂತಹ ಕಾಲದಲ್ಲಿ ಹಣಕ್ಕೋಸ್ಕರ.. ಆಸ್ತಿಗೋಸ್ಕರ.. ಒಂದು ಅರ್ಧ ಸೈಟ್ ಗೋಸ್ಕರ.. ಮನೆಯಲ್ಲಿಯೇ ಬಿರುಕು ಮೂಡುತ್ತೆ. ವೈರತ್ವ ಬೆಳೆಯುತ್ತೆ. ತಂದೆ -ಮಗ ಇರಬಹುದು.. ಅತ್ತೆ-ಸೊಸೆ ಇರಬಹುದು.. ಗಂಡ-ಹೆಂಡತಿ ಇರಬಹುದು.. ಅಕ್ಕ-ತಮ್ಮ ಅಥವಾ ಅಣ್ಣ ತಂಗಿಯೇ ಆಗಿರಬಹುದು.
ಹಣದ ಮುಂದೆ ಸಂಬಂಧಗಳು ಕಳಚಿ ಬೀಳುತ್ತವೆ. ಹಣ ಮತ್ತು ಆಸ್ತಿಯ ಮೇಲಿನ ವ್ಯಾಮೋಹದಿಂದ ಸಂಬಂಧಗಳು ಮಣ್ಣು ಪಾಲಾಗುತ್ತವೆ. ಹೀಗಿರುವಾಗ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಕಟ್ಟಿದ್ದ 30,000 ಕೋಟಿಯ ಸಾಮ್ರಾಜ್ಯದಲ್ಲಿ ಕಂಪನವಾಗದಿರಲು ಹೇಗೆ ಸಾಧ್ಯ..?

ಹೌದು, ವೃತ್ತಿ ಬದುಕಿನಲ್ಲಿ ಖ್ಯಾತಿಯ ಶಿಖರಕ್ಕೇರಿದ ಕರಿಷ್ಮಾ ಕಪೂರ್ ತಮ್ಮ ವ್ಯೆಯಕ್ತಿಕ ಜೀವನದಲ್ಲಿ ಅನುಭವಿಸಿದ ನರಕಯಾತನೆ ಅಷ್ಟಿಷ್ಟಲ್ಲ. 2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಅವರನ್ನು ಮದುವೆಯಾಗಿದ್ದ ಕರಿಷ್ಮಾ ಕಪೂರ್ ಆ ನಂತರ ಅನುದಿನ - ಅನುಕ್ಷಣ .. 07 ವರ್ಷ ಕಣ್ಣೀರಿನಲ್ಲಿಯೇ ಕೈ ತೊಳೆದರು. 2010ರಲ್ಲಿ ಇನ್ನು ಜೊತೆಯಲ್ಲಿ ಬದುಕಲು ಸಾಧ್ಯ ಇಲ್ಲ ಎಂದುಕೊಂಡು ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮುಂಬೈಗೆ ಮರಳಿ ಬಂದರು. ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರು. 2016ರಲ್ಲಿ ವಿಚ್ಛೇದನವನ್ನು ಕೂಡ ಪಡೆದರು.
ಆದರೆ ಈಗ ಸಂಜಯ್ ಕಪೂರ್ ಇಲ್ಲ. ಕಳೆದ ಜೂನ್‌ನಲ್ಲಿ ಸಂಜಯ್ ಕಪೂರ್ ಹಠಾತ್ ನಿಧನರಾದರು. ಉದ್ಯಮಿಯಾಗಿ ಗುರುತಿಸಿಕೊಂಡಿದ್ದ, ಹೆಸರು ಮಾಡಿದ್ದ ಸಂಜಯ್ ಕಪೂರ್ ''ಸೋನಾ ಕಾಮ್ಸ್ಟಾರ್'' ಕಂಪನಿಗೆ ಅಧ್ಯಕ್ಷರಾಗಿದ್ದರು. 30,000 ಕೋಟಿಯ ಸಾಮ್ರಾಜ್ಯವನ್ನು ಕೂಡ ಸ್ಥಾಪಿಸಿದ್ದರು.
ಇನ್ನೂ ಆಗಲೇ ಹೇಳಿದಂತೆ ಸಂಬಂಧಗಳು ಹಣದ ಎದುರು ಕೊಚ್ಚಿಕೊಂಡು ಹೋಗುವಂತಹ ಕಾಲ ಇದು. ದುರಾಸೆಯಿಂದ ಅನೇಕರು ಸಂಬಂಧಗಳನ್ನು ಕಡಿದುಕೊಳ್ಳುತ್ತಿದ್ದಾರೆ.ಇದಕ್ಕೆ ಕೈಗನ್ನಡಿ ಎಂಬಂತೆ ಒಂದು ಕಡೆ ಸಂಜಯ್ ಕಪೂರ್ ಅವರ ತಾಯಿ ರಾಣಿ ಕಪೂರ್ ತಮ್ಮಿಂದ ಬಲವಂತವಾಗಿ ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಆಸ್ತಿ ಕಬಳಿಸಲು ಹಲವರು ಷಡ್ಯಂತ್ರ.. ಪಿತೂರಿ ಮಾಡುತ್ತಿದ್ಧಾರೆ ಎಂದು ಹೇಳಿದ್ದಾರೆ.
ಇನ್ನೊಂದು ಕಡೆ ಸಂಜಯ್ ಕಪೂರ್ ಅವರ ''ಮೂರನೇ ಪತ್ನಿ'' ಪ್ರಿಯಾ ಸಚ್‌ದೇವ್ ತಮ್ಮ ಮಾಜಿ ಪತಿ ಸಂಜಯ್ ಕಪೂರ್ ಅವರ ಸ್ಥಾನ ಅಲಂಕರಿಸಿ ವ್ಯಾಪಾರ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ 30,000 ಕೋಟಿಯ ಮೇಲೆ ಕಣ್ಣು ಹಾಕಿರುವ ಸಂಜಯ್ ಕಪೂರ್ ಅವರ ಎರಡನೇ ಹೆಂಡ್ತಿ ಕರಿಷ್ಮಾ ಕಪೂರ್ ಸದ್ಯ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ನನ್ನ ಮಗಳು ವಿದ್ಯಾಭ್ಯಾಸಕ್ಕೆ ಅಡ್ಡಿಯಾಗುತ್ತಿದೆ, ಕಳೆದ ಎರಡು ತಿಂಗಳಿಂದ ಆಕೆಯ ಶಾಲೆಯ ಫೀಸ್ ಕಟ್ಟಿಲ್ಲ ಎಂದು ಹೇಳಿದ್ದಾರೆ.

ಆದರೆ, ಕರಿಷ್ಮಾ ಕಪೂರ್ ಅವರ ಈ ಮಾತುಗಳಿಗೆ ಹೈಕೋರ್ಟ್ ಮಣೆ ಹಾಕಿಲ್ಲ. ಬದಲಿಗೆ ಇಷ್ಟೆಲ್ಲಾ ಮೆಲೋಡ್ರಾಮಾ ಬೇಡ ಎಂದು ಹೇಳಿದೆ. ಕರಿಷ್ಮಾ ಕಪೂರ್ ಅವರಿಗೆ ಖಡಕ್ ಎಚ್ಚರಿಕೆಯನ್ನು ಕೂಡ ನೀಡಿದೆ.
ಹೌದು, ಅಸಲಿಗೆ ಸಂಜಯ್ ಕಪೂರ್ ಅವರ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇದೇ ಸಮಯದಲ್ಲಿ ಕರಿಷ್ಮಾ ಕಪೂರ್ ಅವರ ಮಕ್ಕಳಾದ ಸಮೈರಾ ಕಪೂರ್ ಮತ್ತು ಕಿಯಾನ್ ರಾಜ್ ಕಪೂರ್ ಪರ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ವಾದ ಮಂಡಿಸಿದ್ಧಾರೆ. ಕರಿಷ್ಮಾ ಕಪೂರ್ ಅವರ ಮಗಳು ಸಮೈರಾ ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ. ಆದರೆ ಕಳೆದ ಎರಡು ತಿಂಗಳಿಂದ ಅವರ ಶುಲ್ಕ ಪಾವತಿ ಮಾಡಿಲ್ಲ ಎಂದು ಹೇಳಿದ್ದಾರೆ.
ಮಹೇಶ್ ಜೇಠ್ಮಲಾನಿ ಅವರ ಈ ವಾದಕ್ಕೆ ಪ್ರತಿಯಾಗಿ ಪ್ರಿಯಾ ಕಪೂರ್ ( ಸಂಜಯ್ ಕಪೂರ್ ಮೂರನೇ ಪತ್ನಿ ) ಪರ ರಾಜೀವ್ ನಾಯರ್ ಪ್ರತಿವಾದ ಮಾಡಿದ್ದಾರೆ. ಆರೋಪ ತಳ್ಳಿ ಹಾಕಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ಖರ್ಚು ವೆಚ್ಚಗಳೆಲ್ಲವನ್ನು ಪ್ರಿಯಾ ಕಪೂರ್ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ ರಾಜೀವ್ ನಾಯರ್ ಮಾಧ್ಯಮಗಳಲ್ಲಿ ವರದಿಯಾಗಲಿ.. ಪತ್ರಿಕೆಗಳಲ್ಲಿ ಈ ವಿಷಯ ಬರಲಿ.. ಎಂಬ ಉದ್ದೇಶದಿಂದ ಈ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಸಮಯದಲ್ಲಿ ದೆಹಲಿ ಹೈಕೋರ್ಟ್ ಜಡ್ಜ್ ಜ್ಯೋತಿ ಸಿಂಗ್ ಇದೇ ಕೊನೆ ನಾನು ಈ ವಿಚಾರದ ಮೇಲೆ 30 ಸೆಕೆಂಡ್ ಕೂಡ ವ್ಯರ್ಥ ಮಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಈ ಪ್ರಶ್ನೆ ಮತ್ತೆ ನನ್ನ ನ್ಯಾಯಾಲಯಕ್ಕೆ ಬರಬಾರದು. ಈ ವಿಚಾರಣೆಯನ್ನು ನಾಟಕೀಯವಾಗುವುದನ್ನು ನಾನು ಬಯಸುವುದಿಲ್ಲ. ಈ ಜವಾಬ್ದಾರಿಯನ್ನು ನಾನು ನಿಮಗೆ (ಶೈಲ್ ತ್ರೆಹಾನ್- ಪ್ರಿಯಾ ಕಪೂರ್ ಅವರ ಮತ್ತೊಬ್ಬ ಲಾಯರ್ ) ನೀಡುತ್ತೇನೆ ಎಂದು ಹೇಳಿದ್ದಾರೆ.
ಒಟ್ನಲ್ಲಿ ಸಂಜಯ್ ಕಪೂರ್ ಅವರ 30,000 ಕೋಟಿ ಆಸ್ತಿ ಕಲಹ ಸದ್ಯ ನ್ಯಾಯಾಲಯದಲ್ಲಿದೆ. ಇದೇ ಸಮಯದಲ್ಲಿ ಮಕ್ಕಳ ವಿದ್ಯಾಭ್ಯಾಸದ ನೆಪವೊಡ್ಡಿ ಕರೀಷ್ಮಾ ಕಪೂರ್ ಪಗಡೆಯಾಟದ ದಾಳ ಉರುಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪ್ರಯತ್ನ ವಿಫಲವಾಗಿದೆ. ಮುಂದೆ ಈ ಆಸ್ತಿಯಲ್ಲಿ ಯಾರಿಗೆ ಎಷ್ಟು ಪಾಲು ಸಿಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
ಅಂದ್ಹಾಗೇ ಮಾಧ್ಯಮ ವರದಿಗಳ ಪ್ರಕಾರ ಸಂಜಯ್ ಕಪೂರ್ ಅವರಿಂದ 2016ರಲ್ಲಿ ಡಿವೋರ್ಸ್ ಪಡೆದ ಕರಿಷ್ಮಾ ಕಪೂರ್ ಆ ನಂತರ ಮುಂಬೈನ ಖಾರ್‌ನಲ್ಲಿರುವ ಸಂಜಯ್ ಕಪೂರ್ ಅವರ ಮನೆಯನ್ನು ತಮ್ಮದಾಗಿಸಿಕೊಂಡರು. ಇಷ್ಟೇ ಅಲ್ಲ ತಮ್ಮ ಇಬ್ಬರು ಮಕ್ಕಳ ಹೆಸರಿನಲ್ಲಿ 14 ಕೋಟಿ ಮೌಲ್ಯದ ಬಾಂಡ್‌ಗಳನ್ನು ಕೂಡ ಖರೀದಿ ಮಾಡಿದರು. ಈ ಬಾಂಡ್‌ಗಳಿಂದ ಪ್ರತಿ ತಿಂಗಳು ಸುಮಾರು ಹತ್ತು ಲಕ್ಷ ಬಡ್ಡಿ ಕರಿಷ್ಮಾ ಕಪೂರ್‌ಗೆ ಬರುತ್ತೆ.


Click it and Unblock the Notifications











