200 ಕೋಟಿ ವಂಚನೆ ಪ್ರಕರಣ: ಮತ್ತೆ ನಟಿ ನೋರಾ ಫತೇಹಿ ವಿಚಾರಣೆ
ವಂಚಕ ಸುಕೇಶ್ ಚಂದ್ರಶೇಖರ್ ಮುಖ್ಯ ಆರೋಪಿಯಾಗಿರುವ 200 ಕೋಟಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ನೋರಾ ಪತೇಹಿಯನ್ನು ಇಡಿ (ಜಾರಿ ನಿರ್ದೇಶನಾಲಯ) ಮತ್ತೆ ವಿಚಾರಣೆಗೆ ಒಳಪಡಿಸಿದೆ.
ಇದೇ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಿಚಾರಣೆಗೆ ಒಳಪಟ್ಟಿದ್ದು, ಸಾಕ್ಷಿಯಾಗಿದ್ದ ಜಾಕ್ವೆಲಿನ್ ಅನ್ನು ಆರೋಪಿಯನ್ನಾಗಿ ಚಾರ್ಜ್ ಶೀಟ್ ಸಲ್ಲಿಸಿದೆ ಇಡಿ. ಇದೀಗ ಇದೇ ಪ್ರಕರಣದಲ್ಲಿ ನಟಿ ನೋರಾ ಫತೇಹಿಯನ್ನು ಮತ್ತೊಮ್ಮೆ ವಿಚಾರಣೆಗೆ ಕರೆದಿದ್ದು, ನೋರಾ ಅನ್ನೂ ಆರೋಪಿಯನ್ನಾಗಿಸುತ್ತಾರಾ ಕಾದು ನೋಡಬೇಕಿದೆ.
200 ಕೋಟಿ ವಂಚನೆ ಪ್ರಕರಣದ ಮುಖ್ಯ ಆರೋಪಿ ಸುಕೇಶ್ ಚಂದ್ರಶೇಖರ್ ಇಂದ ಜಾಕ್ವೆಲಿನ್ ಫರ್ನಾಂಡೀಸ್ ಹಲವು ಉಡುಗೊರೆಗಳನ್ನು ಪಡೆದಿದ್ದರು, ಅಂತೆಯೇ ನಟಿ ನೋರಾ ಫತೇಹಿ ಸಹ ಸುಕೇಶ್‌ನಿಂದ ಉಡುಗೊರೆ ಪಡೆದಿದ್ದರು. ಅದೇ ಕಾರಣಕ್ಕೆ ಇಡಿ ಈಗ ಮತ್ತೊಮ್ಮೆ ನೋರಾ ಅನ್ನು ವಿಚಾರಣೆ ನಡೆಸುತ್ತಿದೆ.
ಸುಕೇಶ್‌ನಿಂದ ನೋರಾ ಫತೇಹಿ ಪಡೆದಿದ್ದ ಉಡುಗೊರೆಗಳ ಬಗ್ಗೆ ಇಡಿ ಪ್ರಶ್ನೆ ಮಾಡಿದ್ದು, ಉಡುಗೊರೆ ನೀಡಲು ಯಾರು ಸಂಪರ್ಕ ಮಾಡಿದರು. ನಡೆದ ಸಂಭಾಷಣೆ ಏನು? ಭೇಟಿ ಆಗಿದ್ದು ಎಲ್ಲಿ? ಎಂಬಿತ್ಯಾದಿ ವಿಷಯಗಳ ಬಗ್ಗೆ ನೋರಾ ಅನ್ನು ಇಡಿ ಪ್ರಶ್ನೆ ಮಾಡಿದೆ. ಅಲ್ಲದೆ ಸುಕೇಶ್‌ನ ಹಿನ್ನೆಲೆ ಬಗ್ಗೆ ನೋರಾಗೆ ಮೊದಲೇ ಮಾಹಿತಿ ಇತ್ತಾ ಎಂಬುದಾಗಿಯೂ ಇಡಿ ತನಿಖೆ ನಡೆಸುತ್ತಿದೆ.

ಇಡಿ ಜೊತೆ ಮಾಹಿತಿ ಹಂಚಿಕೊಂಡಿರುವ ನೋರಾ ಫತೇಹಿ
ಇಡಿ ಜೊತೆಗೆ ಮಾಹಿತಿ ಹಂಚಿಕೊಂಡಿರುವ ನೋರಾ ಫತೇಹಿ, ತಾನು ಸುಕೇಶ್ ಜೊತೆ ಬಹಳ ಕಡಿಮೆ ಮಾತನಾಡಿದ್ದಾಗಿಯೂ, ಸುಕೇಶ್‌ರ ಪತ್ನಿ ತಮಗೆ ಕರೆ ಮಾಡಿ ಉಗುರು ಬಣ್ಣದ ಕಲೆಯ ಇವೆಂಟ್ ಒಂದರ ಬಗ್ಗೆ ಮಾತನಾಡಿ ಆ ನಂತರ ಅದೇ ವಿಷಯವಾಗಿ ಆಗಾಗ್ಗೆ ಕರೆ ಮಾಡುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಸುಕೇಶ್, ತಮ್ಮ ಮ್ಯಾನೇಜರ್ ಜೊತೆ ಕೆಲವು ಬಾರಿ ಹಾಗೂ ನನ್ನೊಂದಿಗೆ ಬಹಳ ಕಡಿಮೆ ಮಾತನಾಡಿರುವುದಾಗಿಯೂ ಹೇಳಿದ್ದಾರೆ. ಸುಕೇಶ್‌ನ ಪತ್ನಿಯ ಮೂಲಕ ಬಿಎಂಡಬ್ಲು ಹಾಗೂ ಇತರೆ ಉಡುಗೊರೆಗಳನ್ನು ತಮಗೆ ತಲುಪಿಸಿದ್ದಾಗಿಯೂ ನೋರಾ ಇಡಿ ಬಳಿ ಹೇಳಿಕೊಂಡಿದ್ದಾರೆ.

ಸುಕೇಶ್‌ನ ಅಪರಾಧಿಕ ಹಿನ್ನೆಲೆ ಬಗ್ಗೆ ಮಾಹಿತಿ ಇಲ್ಲ: ನೋರಾ
ಆದರೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಗೂ ಸುಕೇಶ್‌ಗೂ ಸಂಪರ್ಕ ಇರುವ ವಿಷಯ ತಮಗೆ ತಿಳಿದಿರಲಿಲ್ಲವೆಂದು ಹಾಗೂ ಸುಕೇಶ್‌ನ ಅಪರಾಧಿಕ ಹಿನ್ನೆಲೆಯ ಬಗ್ಗೆಯೂ ತಮಗೆ ಮಾಹಿತಿ ಇರಲಿಲ್ಲವೆಂದು ನೋರಾ ಫತೇಹಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ನೋರಾ ಫತೇಹಿಯನ್ನು ಸಾಕ್ಷಿಯನ್ನಾಗಿ ಇಡಿ ಪರಿಗಣಿಸಿದೆ. ಇವರಿಬ್ಬರು ಮಾತ್ರವೇ ಅಲ್ಲದೆ ಸಾರಾ ಅಲಿ ಖಾನ್ ಹಾಗೂ ಇತರೆ ಕೆಲವು ನಟಿಯರನ್ನು ಸಹ ಸುಕೇಶ್ ಸಂಪರ್ಕ ಮಾಡಲು, ಉಡುಗೊರೆ ನೀಡಲು ಪ್ರಯತ್ನ ನಡೆಸಿದ್ದ.

ಅಸಮಾಧಾನ ವ್ಯಕ್ತಪಡಿಸಿದ್ದ ಜಾಕ್ವೆಲಿನ್
ಆದರೆ ನೋರಾ ಫತೇಹಿಯನ್ನು ಸಾಕ್ಷಿಯನ್ನಾಗಿ ಪರಿಗಣಿಸಿ ತಮ್ಮನ್ನು ಆರೋಪಿಯನ್ನಾಗಿ ಪರಿಗಣಿಸಿರುವ ಬಗ್ಗೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು. ''ತನಿಖಾ ಸಂಸ್ಥೆಯು ನನ್ನೊಂದಿಗೆ ಪಕ್ಷಪಾತ ಮಾಡಿದೆ. ನೋರಾ ಅನ್ನು ಸಾಕ್ಷಿಯನ್ನಾಗಿ ಪರಿಗಣಿಸಿ, ಸಾಕ್ಷಿಯಾಗಿದ್ದ ನನ್ನನ್ನು ಆರೋಪಿಯನ್ನಾಗಿ ಮಾಡಲಾಗಿದೆ. ನಾನು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣವನ್ನು ಸಹ ಇಡಿ ಮುಟ್ಟುಗೋಲು ಹಾಕಿಕೊಂಡಿದೆ'' ಎಂದು ಜಾಕ್ವೆಲಿನ್ ಹೇಳಿದ್ದರು.

ಮಹಾನ್ ವಂಚಕ ಸುಕೇಶ್ ಚಂದ್ರಶೇಖರ್
ಸುಕೇಶ್ ಚಂದ್ರಶೇಖರ್ ಮಹಾನ್ ವಂಚಕನಾಗಿದ್ದು ತಿಹಾರ್ ಜೈಲಿನಲ್ಲಿದ್ದುಕೊಂಡೆ ಖ್ಯಾತ ಉದ್ಯಮಿಯ ಪತ್ನಿಯಿಂದ 200 ಕೋಟಿ ವಸೂಲಿ ಮಾಡಿದ್ದ. ಅದೇ ಹಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ನೋರಾ ಫತೇಹಿಗೆ ಭಾರಿ ದುಬಾರಿ ಉಡುಗೊರೆಗಳನ್ನು ನೀಡಿದ್ದ. ಜೈಲಿನಲ್ಲೂ ಹಲವು ಅಧಿಕಾರಿಗಳಿಗೆ ಕೋಟ್ಯಂತರ ಹಣ ನೀಡಿದ್ದ. 200 ಕೋಟಿ ಮಾತ್ರವೇ ಅಲ್ಲದೆ ಈ ಮುಂಚೆ ಸಹ ಹಲವು ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಕೋಟ್ಯಂತರ ರುಪಾಯಿ ಹಣ ವಂಚನೆ ಮಾಡಿದ್ದ. ಈತನ ಪ್ರಕರಣವನ್ನು ಪ್ರಸ್ತುತ ತನಿಖಾ ಸಂಸ್ಥೆ ಇಡಿ ತನಿಖೆ ನಡೆಸುತ್ತಿದೆ.


Click it and Unblock the Notifications











