ಬಾಲಿವುಡ್ VS ಸೌತ್ ; ಪ್ರಭಾಸ್‌ಗೆ ಮಣ್ಣು ಮುಕ್ಕಿಸಲು ಒಂದಾದ ರಣ್ವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ?
ಪ್ಯಾನ್ ಇಂಡಿಯಾ ಅಲೆಯಿಂದಾಗಿ ಬಾಲಿವುಡ್ ಬೆಚ್ಚಿ ಬಿದ್ದು ವರ್ಷಗಳೇ ಆಗಿವೆ. ಮೊದಲೆಲ್ಲ ದಕ್ಷಿಣ ಭಾರತೀಯ ಚಿತ್ರರಂಗವನ್ನು ಲೇವಡಿ ಮಾಡುತ್ತಿದ್ದ ಹಿಂದಿ ಉದ್ಯಮ ಈ ಪ್ಯಾನ್ ಇಂಡಿಯಾ ಗಾಳಿಯಿಂದ ಚಡಪಡಿಸುತ್ತಿದೆ. ಯಾಕೆಂದರೆ ಬದಲಾದ ಕಾಲದಲ್ಲಿ ಯಶ್.. ಅಲ್ಲು ಅರ್ಜುನ್.. ಪ್ರಭಾಸ್.. ಜ್ಯೂ.ಎನ್.ಟಿ.ಆರ್.. ಹೀಗೆ ಸೌತ್ ಇಂಡಿಯಾದ ಅನೇಕ ಸ್ಟಾರ್‌ಗಳು ಹಿಂದಿ ಮಾರುಕಟ್ಟೆಯನ್ನು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗವನ್ನು ಉತ್ತರ ಭಾರತದಲ್ಲಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಕ್ಷಿಣದ ಈ ಸ್ಟಾರ್‌ಗಳ ಹಾವಳಿಯನ್ನು ಕಂಡು ಅಲ್ಲಿನವರ ಬುಡಕ್ಕೆ ಬೆಂಕಿ ಬಿದ್ದಿದೆ. ಹೀಗಾಗಿಯೇ ಹೇಗಾದರು ಮಾಡಿ ಸೌತ್ ಸ್ಟಾರ್‌ಗಳನ್ನು ಮರಳಿ ಮನೆಗೆ ಕಳುಹಿಸಬೇಕೆಂದು ಶಪಥ ಮಾಡಿದಂತೆ ಇರುವ ಬಾಲಿವುಡ್‌ನ ಜನ ಇದೀಗ ಪ್ರಭಾಸ್ ವಿರುದ್ದ ಸಮರ ಸಾರುವ ನಿರ್ಧಾರಕ್ಕೆ ಬಂದಂತೆ ಇದೆ.

ಹೌದು..ಎಲ್ಲರಿಗೆ ಗೊತ್ತಿರುವಂತೆ ''ಬಾಹುಬಲಿ'' ಚಿತ್ರದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರೂಪಗೊಂಡವರು ಪ್ರಭಾಸ್. ಅದಕ್ಕೂ ಮುನ್ನ ತೆಲುಗು ಚಿತ್ರರಂಗದಲ್ಲಿಯೇ ಅಪಾರ ಯಶಸ್ಸನ್ನು ಕಂಡಿದ್ದ ಪ್ರಭಾಸ್‌ಗೆ ಈಗ ಭಾರತದೆಲ್ಲೆಡೆ ದೊಡ್ಡ ಲೆವಲ್‌ನಲ್ಲಿ ಪ್ಯಾನ್ ಬೇಸಿದೆ. ನಿಜಾ.. ''ಬಾಹುಬಲಿ'' ನಂತರ ತೆರೆಗೆ ಬಂದ ಪ್ರಭಾಸ್ ಅಭಿನಯದ ಚಿತ್ರಗಳು ಅಂದುಕೊಂಡಂತೆ ಗೆಲ್ಲಲಿಲ್ಲ. ಹಣದ ಹೊಳೆ ಹರಿಯಲಿಲ್ಲ.
ಆದರೆ.. ಗಮನಿಸಬೇಕಾದ ಅಂಶ ಎಂದರೆ ಪ್ರಭಾಸ್ ಅಭಿನಯದ ಚಿತ್ರಗಳು ನೆಗೆಟಿವ್ ಅಂಶಗಳಾಚೆ ಕೂಡ ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದವು. ಅಲ್ಲಿನ ಮಾರುಕಟ್ಟೆಯಲ್ಲಿ ಕಮಾಲ್ ಮಾಡಿದ್ದವು. ಹೀಗಾಗಿಯೇ ಪ್ರಭಾಸ್ ವಿಚಾರದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳದಿರಲು ತೀರ್ಮಾನ ಮಾಡಿದಂತೆ ಇರುವ ಬಾಲಿವುಡ್ ಸದ್ಯ ಪ್ರಭಾಸ್ ಎದುರು ತಮ್ಮ ಇಬ್ಬರು ಸ್ಟಾರ್‌ಗಳನ್ನು ಕಣಕ್ಕಿಳಿಸಲು ಮುಂದಾಗಿದೆ.
ಹೌದು. ಅಸಲಿಗೆ ಪ್ರಭಾಸ್ ಅಭಿನಯದ ''ರಾಜಾ ಸಾಬ್'' ಇದೇ ಡಿಸೆಂಬರ್ 5ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಸೇರಿ ಹಿಂದಿ ಭಾಷೆಗಳಲ್ಲಿ ಕೂಡ ಬಿಡುಗಡೆಯಾಗಲಿದೆ. ವಿಶೇಷ ಅಂದರೆ ಅವತ್ತೇ ದೀಪಿಕಾ ಪಡುಕೋಣೆಯ ಗಂಡ ರಣ್ವೀರ್ ಸಿಂಗ್ ಅಭಿನಯದ ''ಧುರಂಧರ್'' ಚಿತ್ರ ಕೂಡ ಬಿಡುಗಡೆಯಾಗಲಿದೆ.

ಕೇವಲ ಇಷ್ಟೇ ಅಲ್ಲ ''ಬಾಲಿವುಡ್ ಹಂಗಾಮಾ'' ವರದಿಯ ಪ್ರಕಾರ ಅದೇ ದಿನ ಶಾಹಿದ್ ಕಪೂರ್ ಮತ್ತು ವಿಶಾಲ್ ಭಾರದ್ವಾಜ್ ಜೋಡಿಯ ರೋಮಿಯೋ ಚಿತ್ರ ಕೂಡ ತೆರೆಗೆ ಬರಲಿದೆ. ಈ ಮೂಲಕ ಎರಡು ಬಾಲಿವುಡ್ ಚಿತ್ರಗಳ ವಿರುದ್ಧ ಈಗ ಪ್ರಭಾಸ್ ಅಭಿನಯದ ''ದಿ ರಾಜಾ ಸಾಬ್'' ಸೆಣಸಾಡಬೇಕಾದ ಪರಿಸ್ಥಿತಿ ನಿರ್ಮಾಣವಾದಂತೆ ಆಗಿದೆ.
ಈ ಮೊದಲು ಶಾಹಿದ್ ಕಪೂರ್ ಅಭಿನಯದ ಚಿತ್ರ ಮುಂದೂಡಲಾಗುತ್ತೆ ಎನ್ನುವ ಸುದ್ದಿ ಇತ್ತಾದರೂ ಈ ಸುದ್ದಿಯನ್ನು ಚಿತ್ರದ ನಿರ್ಮಾಪಕ ಸಾಜಿದ್ ನಾಡಿಯಾವಾಲಾ ತಳ್ಳಿ ಹಾಕಿದ್ದು ಡಿಸೆಂಬರ್ 5ರಂದೇ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದು ಇದೇ ಬಾಲಿವುಡ್ ಹಂಗಾಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಟ್ನಲ್ಲಿ ಸದ್ಯ ಈ ಡಿಸೆಂಬರ್ 5ರಂದು ಭಾರತದ ಮೂರು ದೊಡ್ಡ ಸ್ಟಾರ್‌ಗಳು ಬಾಕ್ಸಾಫೀಸ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಡಿಸೆಂಬರ್ 5ರಂದು ತೆರೆಗೆ ಬಂದ ಚಿತ್ರಗಳು ಬ್ಲಾಕ್‌ಬಸ್ಟರ್ ಆಗಿವೆ. ಇದೇ ದಿನದಂದು ಬಿಡುಗಡೆಯಾಗಿದ್ದ ''ಅನಿಮಲ್'' ಹೊಸ ಇತಿಹಾಸ ಬರೆದಿತ್ತು. ಆ ನಂತರ ಬಂದು ''ಪುಷ್ಪ 2'' ಹೊಸ ದಾಖಲೆಯನ್ನು ಬರೆದಿತ್ತು. ಹೀಗಾಗಿ ಈ ಡಿಸೆಂಬರ್ 5ರಂದು ನಡೆಯುವ ಈ ಸ್ಟಾರ್ ಗಳ ಬಾಕ್ಸಾಫೀಸ್ ಸಮರ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದೆ. ಬಾಲಿವುಡ್‌ನ ಈ ಎರಡು ಸ್ಟಾರ್‌ಗಳಿಗೆ ಪ್ರಭಾಸ್ ಸೆಡ್ಡು ಹೊಡೆಯುತ್ತಾರಾ ಎನ್ನುವ ಪ್ರಶ್ನೆ ಕೂಡ ಈಗ ದಕ್ಷಿಣ ಭಾರತೀಯ ಚಿತ್ರರಂಗದ ಚಿತ್ರಪ್ರೇಮಿಗಳನ್ನು ಕಾಡುತ್ತಿದೆ.


Click it and Unblock the Notifications











