ಕಾಸ್ಟಿಂಗ್ ಕೌಚ್: ನಿರ್ಮಾಪಕನ ವಿರುದ್ಧ 'ಪ್ರೇಮಂ' ನಟಿ ಗಂಭೀರ ಆರೋಪ
ಪಾತ್ರಕ್ಕಾಗಿ ಪಲ್ಲಂಗ ಎನ್ನುವ ಹೀನ ಸಂಸ್ಕೃತಿ ಚಿತ್ರರಂಗದಲ್ಲಿದೆ ಎನ್ನುವ ವಿಚಾರವನ್ನು ಸಾಕಷ್ಟು ನಟಿಯರು ಹೇಳಿದ್ದಾರೆ. ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. ಆದರೆ ಬಹುತೇಕ ನಟಿಯರು ತಮ್ಮ ಜೊತೆ ಕೆಟ್ಟದಾಗಿ ವರ್ತಿಸಿದವರ ಹೆಸರು ಹೇಳಲಿಲ್ಲ. ಕೆಲವರು ಮಾತ್ರ ಕಾಮುಕರ ಹೆಸರು ಹೇಳಿ ಶಾಸ್ತಿ ಮಾಡ್ತಿದ್ದಾರೆ.
ಇದೀಗ ಒಡಿಯಾ ಚಿತ್ರರಂಗಕ್ಕೆ ಸೇರಿದ ನಟಿ ಪ್ರಕೃತಿ ಮಿಶ್ರಾ ಈಗ ಕಾಸ್ಟಿಂಗ್ ಕೌಚ್ ಬಗ್ಗೆ ಬಾಂಬ್ ಸಿಡಿಸಿದ್ದಾರೆ. ಒಡಿಯಾ ಭಾಷೆಯಲ್ಲಿ 'ಪ್ರೇಮಂ' ಎನ್ನುವ ಚಿತ್ರದಲ್ಲಿ ನಟಿಸಿದ್ದ ನಟಿ ಈಗ ಒಬ್ಬ ನಿರ್ಮಾಪಕ ಕಾಸ್ಟಿಂಗ್ ಕೌಚ್ ಹೆಸರಿನಲ್ಲಿ ಕೆಟ್ಟದಾಗಿ ನಡೆದುಕೊಂಡಿದ್ದರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅವಕಾಶ ಕೊಡುವುದಾಗಿ ಹೇಳಿ ಎಷ್ಟು ಹೆಣ್ಣುಮಕ್ಕಳನ್ನು ಬಳಸಿಕೊಂಡಿದ್ದಾಗಿ ಆರೋಪಿಸಿದ್ದಾರೆ. ಸದ್ಯ ಈ ವಿಚಾರ ಒಡಿಯಾ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ.

"ತನ್ನ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ನಿರ್ಮಾಪಕ ಸಂಜಯ್ ನಾಯ್ಕ್ ಬಹಳ ಮಂದಿ ಯುವತಿಯರಿಗೆ ಮೋಸ ಮಾಡಿದ್ದಾನೆ. ಅವಸರ ತೀರಿದ ಮೇಲೆ ಆ ನಟಿಯ ಮುಖ ಕೂಡ ಆತ ನೋಡುವುದಿಲ್ಲ. ಆತ ಎಷ್ಟೊ ಜನರಿಗೆ ಮೋಸ ಮಾಡಿದ್ದಾನೆ. ನನಗೆ ಆತನಿಂದ ಇಂತಹ ಅನುಭವ ಆಗಿಲ್ಲ, ಆದರೆ ಆತ ಎಷ್ಟು ಹುಡುಗಿಯರನ್ನು ಟ್ರ್ಯಾಪ್ ಮಾಡಿದ್ದಾನೆ ಎನ್ನುವ ಮಾಹಿತಿ ಇದೆ. ಆತನ ಸ್ನೇಹಿತರು ಕೂಡ ಹೊಸದಾಗಿ ಇಂಡಸ್ಟ್ರಿಗೆ ಬರುವ ಹುಡುಗಿಯರ ಜೀವನ ನಾಶ ಮಾಡಿದ್ದಾರೆ" ಎಂದು ಪ್ರಕೃತಿ ಮಿಶ್ರಾ ಹೇಳಿದ್ದಾರೆ.
ಪ್ರಕೃತಿಗೆ ಮಿಶ್ರಾಗೆ ಜಾಸ್ಮಿನ್ ಬೆಂಬಲ
"ಇಂತಹವರ ಟಾರ್ಚರ್ ಕಾರಣಕ್ಕೆ ನಾನು ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿದ್ದೇನೆ. ಅದರ ಬದಲು ರಿಯಾಲಿಟಿ ಶೋ ಮಾಡುತ್ತ ನನ್ನನ್ನು ನಾನು ಸಾಬೀತು ಮಾಡಿಕೊಂಡಿದ್ದೇನೆ. ಈಗ ಈ ಮಟ್ಟಕ್ಕೆ ತಲುಪಿದ್ದೇನೆ ಎಂದು ಪ್ರಕೃತಿ ಮಿಶ್ರಾ ಹೇಳಿದ್ದಾರೆ. ಪ್ರಕೃತಿ ಮಾತು ನೂರಕ್ಕೆ ನೂರರಷ್ಟು ನಿಜ ಎಂದು ಮತ್ತೊಬ್ಬ ನಟಿ ಜಾಸ್ಮಿನ್ ರಥ್ ಬೆಂಬಲ ಸೂಚಿಸಿದ್ದಾರೆ. ನಾನು ಕೂಡ ಸಂಜಯ್ ನಾಯ್ಕ್‌ಗೆ ಬಲಿಪಶುವಾದೆ ಎಂದು ಆಕೆ ಹೇಳಿದ್ದಾರೆ.

ಸಂಜಯ್ ನಾಯ್ಕ್ ತಿರುಗೇಟು
ನಿರ್ಮಾಪಕ ಸಂಜಯ್ ನಾಯ್ಕ್ ಮಾತ್ರ ನಟಿ ಪ್ರಕೃತಿ ಮಿಶ್ರಾ ಆರೋಪಗಳನ್ನು ಖಂಡಿಸಿದ್ದಾರೆ. ನಾನು ಎಂತಹ ವ್ಯಕ್ತಿ ಎನ್ನುವುದು ಇಂಡಸ್ಟ್ರಿಗೆ ಗೊತ್ತು. ನನ್ನ ವಿಡಿಯೋಗೆ ಜನ ಕಾಮೆಂಟ್ ಮಾಡಿರೋದು ನೋಡಿದೆ. ಜನ ನನ್ನ ಪರವಾಗಿ ಇದ್ದಾರೆ ಅನ್ನೋದು ಅದರಲ್ಲೇ ಗೊತ್ತಾಗುತ್ತದೆ. ಪ್ರಕೃತಿ, ಬಾಬುಶಾನ್ ನಡುವೆ ನಡೆಯುತ್ತಿರುವ ವಿವಾದದಲ್ಲಿ ತಾನು ಬಾಬುಶಾನ್‌ಗೆ ಬೆಂಬಲ ವ್ಯಕ್ತಪಡಿಸಿದೆ. ಅದಕ್ಕಾಗಿ ಆಕೆ ಈ ರೀತಿಯ ಸುಳ್ಳು ಆರೋಪ ಮಾಡುತ್ತಿದ್ದಾಳೆ.
ಆರೋಪಗಳು ನಿರಾಧಾರ
"ಈ ವಿಚಾರವಾಗಿ ನಾನು ನಮ್ಮ ವಕೀಲರ ಜೊತೆ ಮಾತನಾಡಿದ್ದೇನೆ. ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧವಾಗುತ್ತಿದ್ದೇನೆ" ಎಂದಿದ್ದಾರೆ. ಪ್ರಕೃತಿ ಮಾತ್ರವಲ್ಲ ಜಾಸ್ಮಿನ್ ವಿರುದ್ಧ ಕೂಡ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಸಂಜಯ್ ನಾಯ್ಕ್ ಹೇಳಿದ್ದಾರೆ. ಯಾವ ರೀತಿಯ ಆಧಾರಗಳಿಲ್ಲದೆ ತನ್ನ ಮೇಲೆ ಅವರು ಹೇಗೆ ಆರೋಪ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಯಾವುದೇ ಆಧಾರಗಳು ಇಲ್ಲದೇ ನನ್ನ ಮೇಲೆ ಅವರು ಹೇಗೆ ಆರೋಪ ಮಾಡುತ್ತಾರೆ" ಎಂದು ಪ್ರಶ್ನಿಸಿದ್ದಾರೆ.
ಪ್ರಕೃತಿ ದೂರು ದಾಖಲು
ಇನ್ನು ನಟಿ ಪ್ರಕೃತಿ ಇದೇ ವಿಚಾರವಾಗಿ ನಿರ್ಮಾಪಕ ಸಂಜಯ್ ನಾಯ್ಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಮುಂಬೈನ ದಾದಾ ಬಾಯಿ ನವರೊಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿಗಳ ಪ್ರಕಾರ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 500 (ಮಾನನಷ್ಟಕ್ಕೆ ಶಿಕ್ಷೆ), 504 (ಪ್ರಚೋದನೆಗಾಗಿ ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.


Click it and Unblock the Notifications











