ಸುಶಾಂತ್ ಸಿಂಗ್ ಮತ್ತು ಸಿದ್ಧಾರ್ಥ್ ಶುಕ್ಲಾ ಹಳೆಯ ಫೋಟೋ ವೈರಲ್
ಬಾಲಿವುಡ್ ಕಿರುತೆರೆಯಲ್ಲಿ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದ ಯುವ ನಟ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ಗುರುವಾರ (ಸೆಪ್ಟೆಂಬರ್ 1) ಸಾವನ್ನಪ್ಪಿದರು. 40 ವರ್ಷದ ಸಿದ್ಧಾರ್ಥ್ ಸಾವಿಗೆ ಜನಸಾಮಾನ್ಯರು ಮರುಗಿದ್ದಾರೆ. ಬಾಳಿ ಬದುಕಬೇಕಾಗಿದ್ದ ವಯಸ್ಸಿನಲ್ಲಿ ಇಂತಹ ಸಾವು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಳೆದ ವರ್ಷ ಕೊನೆಯುಸಿರೆಳೆದಿದ್ದ ಸುಶಾಂತ್ ಸಿಂಗ್ ರಜಪೂತ್ ಸಾವನ್ನು ನೆನಪಿಸಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟೇ ಅಲ್ಲ ಸುಶಾಂತ್ ಸಿಂಗ್ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಒಟ್ಟಿಗೆ ಇದ್ದ ಫೋಟೋ ವೈರಲ್ ಮಾಡಿ ನಿಜವಾದ ಪ್ರತಿಭೆಗಳ ಬದುಕು ದುಂರತವಾಗಿ ಅಂತ್ಯ ಆಯ್ತು ಎಂದು ಬೇಜಾರಾಗಿದ್ದಾರೆ.
ಸುಶಾಂತ್ ಸಿಂಗ್ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಇಬ್ಬರು ಯಾವುದೇ ಗಾಡ್‌ಫಾದರ್ ಇಲ್ಲದೇ ಸ್ವಂತ ಪ್ರತಿಭೆ ಮೇಲೆ ಬೆಳೆದು ಬಂದವರು. ಇಬ್ಬರು ಕಿರುತೆರೆಯಲ್ಲಿ ಜರ್ನಿ ಆರಂಭಿಸಿ ಆ ನಂತರ ಬಾಲಿವುಡ್ ಪ್ರವೇಶಿಸಿದರು. ಈ ಇಬ್ಬರು ಈ ಹಿಂದೆಯೊಮ್ಮೆ ಭೇಟಿ ಮಾಡಿದಾಗ ಪರಸ್ಪರ ಮಾತನಾಡಿಕೊಳ್ಳುತ್ತಿರುವ ಫೋಟೋವೊಂದು ಕ್ಲಿಕ್ ಆಗಿತ್ತು. ಸಿದ್ಧಾರ್ಥ್ ಸಾವಿನ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ.

'ಸುಶಾಂತ್ ಸಾವಿನ ನಂತರ ಇಂಡಸ್ಟ್ರಿಗೆ ಮತ್ತೊಂದು ದೊಡ್ಡ ನಷ್ಟ' ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಲೆಜೆಂಡ್ ಏನೂ ಹೇಳದೆ ಹೋಗಿಬಿಡ್ತಾರೆ' ಎಂದು ಫೋಟೋಗೆ ಕಾಮೆಂಟ್ ಹಾಕಿದ್ದಾರೆ. 'ಇಬ್ಬರು ಸಿನಿಮಾ ಹಿನ್ನೆಲೆ ಇಲ್ಲದೇ ಬಂದವರು, ಇಬ್ಬರೂ ಪ್ರತಿಭಾನ್ವಿತರು, ಇಬ್ಬರು ಕಡಿಮೆ ವಯಸ್ಸಿನಲ್ಲಿ ಯಶಸ್ಸು ನೋಡಿದವರು' ಎಂದು ಕೆಲವು ಸಂತಾಪ ಸೂಚಿಸಿದ್ದಾರೆ.
ಇನ್ನು ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಇಬ್ಬರ ಪಾರ್ಥಿವ ಶರೀರ ಇಡಬೇಕಾಯಿತು ಎಂದು ಕೆಲವರು ಆಸ್ಪತ್ರೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಪರ್ ಆಸ್ಪತ್ರೆಗೆ ಏಕೆ ಹೋಗ್ತಾರೆ, ಕೂಪರ್ ಆಸ್ಪತ್ರೆಯೆ ಏಕೆ ಮೊದಲ ಆಯ್ಕೆಯಾಗುತ್ತದೆ ಎಂದು ಅಚ್ಚರಿ ಸಹ ಹೊರಹಾಕಿದ್ದಾರೆ.
ಜೂನ್ 14, 2020ರಲ್ಲಿ ಮುಂಬೈನ ಫ್ಲ್ಯಾಟ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಶವ ಪತ್ತೆಯಾಗಿತ್ತು. ಅನುಮಾನಾಸ್ಪದ ಸಾವು ಎಂಬ ಕಾರಣಕ್ಕೆ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಸ್ನೇಹಿತರು, ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದರು. ಬಳಿಕ, ಈ ಕೇಸ್ ಸಿಬಿಐಗೆ ವರ್ಗಾವಣೆ ಆಯಿತು. ಸಿಬಿಐ ಅಂತಿಮ ವರದಿ ಇನ್ನು ನೀಡಿಲ್ಲ. ಸುಶಾಂತ್ ಮೃತಪಟ್ಟಾಗ ಅವರ ವಯಸ್ಸು 34 ವರ್ಷ ಮಾತ್ರ.

ಇನ್ನು ಸಿದ್ಧಾರ್ಥ್ ಶುಕ್ಲಾ ಬಿಗ್ ಬಾಸ್ 13ನೇ ಆವೃತ್ತಿಯ ವಿನ್ನರ್ ಆಗಿದ್ದರು. 2014ರಲ್ಲಿ ತೆರೆಕಂಡಿದ್ದ 'ಹಂಪ್ಟಿ ಶರ್ಮಾ ಕೆ ದುಲ್ಹಾನಿಯಾ' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ಇದು ಇವರ ಚೊಚ್ಚಲ ಹಿಂದಿ ಸಿನಿಮಾ ಆಗಿತ್ತು. ಏಕ್ತಾ ಕಪೂರ್ ನಿರ್ಮಾಣದ 'ಬ್ರೋಕನ್ ಬಟ್ ಬ್ಯೂಟಿಫುಲ್ 3' ಶೋನಲ್ಲಿ ಸಿದ್ಧಾರ್ಥ್ ಶುಕ್ಲಾ ಕೊನೆಯದಾಗಿ ಕಾಣಿಸಿಕೊಂಡಿದ್ದರು.
'ಬಾಲಿಕಾ ವಧು', 'ದಿಲ್ ಸೆ ದಿಲ್ ತಕ್' ಧಾರಾವಾಹಿಗಳಲ್ಲಿ ಸಿದ್ಧಾರ್ಥ್ ಶುಕ್ಲಾ ನಟಿಸುತ್ತಿದ್ದು, ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು. 'ಜಲಕಾ ದಿಕ್ ಲಾಜಾ 6', 'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ' ಮತ್ತು 'ಬಿಗ್ ಬಾಸ್ 13' ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.


Click it and Unblock the Notifications











